ಅಂತಿಮ ಭಾಷಣ
ಹಿಂದಿನ ಎಲ್ಲ ವರ್ಷಗಳಿಗಿಂತಲೂ ಆ ವರ್ಷ ವರ್ಗದಲ್ಲಿ ಶಿಕ್ಷಾರ್ಥಿಗಳ ಸಂಖ್ಯೆ ಹೆಚ್ಚು. ಎಲ್ಲಾ ಪ್ರಾಂತಗಳೂ ಆ ವರ್ಷ ಪ್ರತಿನಿಧಿಸಲ್ಪಟ್ಟದ್ದು ಮತ್ತೊಂದು ವಿಶೇಷ. ಬೇರೆ ಬೇರೆ ಜಾತಿ, ಉದ್ಯೋಗಗಳ ವಿವಿಧ ವಯೋಮಾನಗಳ ಸ್ವಯಂಸೇವಕರು ಅಲ್ಲಿದ್ದರು. ಒಂದು ರೀತಿ ಸಮಗ್ರ ಭಾರತವೇ ಅಲ್ಲಿ ಸಂಕ್ಷಿಪ್ತ ರೂಪ ತಳೆದು ಬಂದಂತೆ ಭಾಸವಾಗುತ್ತಿತ್ತು.
ಅಂದು ೧೯೪೦ ಜೂನ್ ೯, ವರ್ಗದ ಖಾಸಗಿ ಸಮಾರೋಪ. ಡಾಕ್ಟರ್‌ಜಿಯವರ ಇಚ್ಛೆಯನ್ನು ಗೌರವಿಸಿ ತುಂಬ ಕಾಳಜಿಯಿಂದ ಅವರನ್ನು ಸಂಘ ಶಿಕ್ಷಾ ವರ್ಗಕ್ಕೆ ಕರೆದೊಯ್ಯಲಾಯಿತು. ಸರ್ವಾಧಿಕಾರಿಗಳೊಡನೆ ಡಾಕ್ಟರ್‌ಜಿ ಬೌದ್ಧಿಕ ಮಂಟಪ ಪ್ರವೇಶಿಸಿದರು. ವೇದಿಕೆಯ ಮೇಲೆ ದಿಂಬು ಹಾಸಿದ ಖುರ್ಚಿಯಲ್ಲಿ ಡಾಕ್ಟರ್‌ಜಿ ಕುಳಿತರು. ಅವರ ಅನುಕೂಲತೆಗಾಗಿ ಅಂದು ವಿಶೇಷವಾಗಿ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ವೈಯಕ್ತಿಕ ಗೀತೆ ಹಾಡಲಾಯಿತು. ಅಮೃತವಚನ ಓದಿದರು. ನಂತರ ಡಾಕ್ಟರ್‌ಜಿ ತಮ್ಮ ಶಾಂತ ಗಂಭೀರ ಧ್ವನಿಯಲ್ಲಿ ಮಾತು ಆರಂಭಿಸಿದರು.
"ಮಾನನೀಯ ಸರ್ವಾಧಿಕಾರಿಜೀ, ಪ್ರಾಂತಸಂಘಚಾಲಕಜೀ, ಅನ್ಯ ಅಧಿಕಾರಿ ವರ್ಗ ಹಾಗೂ ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ -
ನಾನಿಂದು ನನ್ನ ಅನಾರೋಗ್ಯದ ಕಾರಣ ನಿಮ್ಮ ಮುಂದೆ ನಾಲ್ಕಾರು ಶಬ್ದಗಳನ್ನಾದರೂ ಸರಿಯಾಗಿ ಆಡಬಲ್ಲೆನೆಂದು ನನಗನಿಸುವುದಿಲ್ಲ. ಕಳೆದ ಇಪ್ಪತ್ನಾಲ್ಕು ದಿನಗಳಿಂದಲೂ ಹಾಸಿಗೆ ಹಿಡಿದು ನಾನು ಮಲಗಿರುವುದು ನಿಮಗೆಲ್ಲ ತಿಳಿದೇ ಇದೆ. ಸಂಘದ ದೃಷ್ಟಿಯಿಂದ ಈ ವರ್ಷ ಅತ್ಯಂತ ಸೌಭಾಗ್ಯಪೂರ್ಣವಾದುದು. ಕಾರಣ, ನಾನಿಂದು ನನ್ನೆದುರಲ್ಲಿ ಹಿಂದು ರಾಷ್ಟ್ರದ ಚಿಕ್ಕ ಪ್ರತಿಮೆಯೊಂದನ್ನು ಕಾಣುತ್ತಿದ್ದೇನೆ. ನೀವೆಲ್ಲರೂ ತುಂಬ ದೂರ ದೂರದ ಸ್ಥಳಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ನನ್ನ ಅನಾರೋಗ್ಯದ ಕಾರಣದಿಂದಾಗಿ ಇಷ್ಟು ದಿನಗಳು ನಾಗಪುರದಲ್ಲಿ ಇದ್ದರೂ ನಿಮ್ಮೆಲ್ಲರನ್ನು ಕಂಡು ಪರಿಚಯ ಮಾಡಿಕೊಳ್ಳುವ ಇಚ್ಛೆ ನನಗೆ ಪೂರೈಸಲಾಗಲಿಲ್ಲ. ಪುಣೆಯ ಅಧಿಕಾರಿ ಶಿಕ್ಷಣ ಶಿಬಿರದಲ್ಲಿ ಹದಿನೈದು ದಿನಗಳ ಕಾಲ ಇದ್ದೆ. ಅಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಪರಿಚಯ ಮಾಡಿಕೊಂಡೆ. ಅದೇ ರೀತಿ ನಾಗಪುರದಲ್ಲೂ ಮಾಡಬಲ್ಲೆನೆಂದು ಆಶಿಸಿದ್ದೆ. ಆದರೆ ನಾನು ತಮ್ಮ ಸೇವೆಯನ್ನು ಕಿಂಚಿತ್ತೂ ಮಾಡಲಾರೆನಾದೆ. ನಾನಿಂದು ನಿಮ್ಮೆಲ್ಲರ ದರ್ಶನ ಮಾಡಲು ಬಂದಿರುವೆ. ಸಾಧ್ಯವೆನಿಸಿದಲ್ಲಿ ನಾಲ್ಕಾರು ಮಾತುಗಳನ್ನು ಆಡಬೇಕೆನ್ನುವುದಷ್ಟೇ ನನ್ನ ಇಚ್ಛೆ.
ನನ್ನ ಮತ್ತು ನಿಮ್ಮೆಲರ ನಡುವೆ ಈ ಹಿಂದಿನ ಪರಿಚಯ ಸ್ವಲ್ಪವೂ ಇಲ್ಲ. ಆದರೂ ನನ್ನ ಅಂತಃಕರಣವನ್ನು ನಿಮ್ಮೆಡೆಗೂ ನಿಮ್ಮೆಲ್ಲರ ಅಂತಃಕರಣಗಳನ್ನು ನನ್ನೆಡೆಗೂ ಸೆಳೆಯುವಂತಹ ಸಂಗತಿ ಯಾವುದು? ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯ ಪುಣ್ಯ ಪ್ರಭಾವವೇ ಅದು. ಸ್ವಯಂಸೇವಕರಲ್ಲಿ ಎಳ್ಳಷ್ಟೂ ಪರಸ್ಪರ ಪರಿಚಯ ಇರದಿದ್ದರೂ ಪ್ರಥಮ ಭೇಟಿಗೆ ಅವರಲ್ಲಿ ಪರಸ್ಪರ ಪ್ರೇಮ ನೆಲೆಸುತ್ತದೆ. ಮಾತುಕತೆ ಆಗಿರಲಿ, ಆಗದಿರಲಿ ಅವರ ಪರಸ್ಪರ ಮಿತ್ರರಾಗುತ್ತಾರೆ. ಮುಖದಲ್ಲಿನ ಮುಗುಳು ನಗೆಯಿಂದಲೇ ಒಬ್ಬರು ಇನ್ನೊಬ್ಬರನ್ನು ಗುರುತಿಸುತ್ತಾರೆ. ಕೆಲವು ದಿನಗಳ ಹಿಂದೆ ಪುಣೆಯಲ್ಲಿದ್ದಾಗ ಒಮ್ಮೆ ನಾನು ಮತ್ತು ಸಾಂಗಲಿಯ ಶ್ರೀ ಕಾಶಿನಾಥ ಪಂತ ಲಿಮಯೆ ಲಕಡೀಪುಲ್ ಮೇಲೆ ಹೋಗುತ್ತಿದ್ದೆವು. ಅದೇ ಸಮಯದಲ್ಲಿ ನಮಗೆದುರಾಗಿ ಸುಮಾರು ಎಂಟು ಹತ್ತು ವರ್ಷದ ಬಾಲಕರಿಬ್ಬರು ಬರುತ್ತಿದ್ದರು. ನಮ್ಮ ಬಳಿ ಬಂದಾಗ ಸ್ವಲ್ಪ ಮುಗುಳ್ನಕ್ಕು ಅವರು ಮುಂದೆ ಹೋದರು. ಆಗ ನಾನು ಕಾಶಿನಾಥರಾಯರಿಗೆ "ಈ ಹುಡುಗರು ಸಂಘದ ಸ್ವಯಂಸೇವಕರು" ಎಂದೆ. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾದರು. ಮುಂಚಿತವಾಗಿ ಯಾವ ಗುರುತು ಪರಿಚಯ ಇಲ್ಲದೆಯೇ ನಾನು ನಿಸ್ಸಂದಿಗ್ಧವಾಗಿ ಅವರಿಬ್ಬರೂ ಸ್ವಯಂಸೇವಕರೆಂದು ಹೇಗೆ ಹೇಳಿದೆ ಎಂಬುದು ಅವರಿಗೊಂದು ಒಗಟೇ ಆಯಿತು. "ಇವರು ನಮ್ಮ ಸ್ವಯಂಸೇವಕರೆಂದು ಹೇಗೆ ಹೇಳುವಿರಿ?" ಎಂದು ಅವರು ನನ್ನನ್ನು ಪ್ರಶ್ನಿಸಿದರು. ಏಕೆಂದರೆ ಅವರಿಬ್ಬರ ವೇಷಭೂಷಣಗಳಲ್ಲಿ ಸ್ವಯಂಸೇವಕತ್ವದ ಯಾವ ಬಾಹ್ಯ ಚಿಹ್ನೆಯೂ ಇರಲಿಲ್ಲ. "ನಾನು ಹೇಳುತ್ತಿರುವುದೇ ಅದಕ್ಕೆ ಸಾಕ್ಷಿ. ನೀವು ಈ ಮಾತಿನ ಸತ್ಯತೆಯನ್ನು ಬೇಕಾದರೆ ಪರೀಕ್ಷಿಸಿ" ಎಂದು ಹೇಳಿ, ಸ್ವಲ್ಪ ಮುಂದೆ ಹೋಗಿದ್ದ ಆ ಬಾಲಕರನ್ನು ಕರೆದೆ "ಹೌದು, ಎರಡು ವರ್ಷಗಳ ಹಿಂದು ತಾವು ನಮ್ಮ ಬಾಲಶಾಖೆಗೆ ಬಂದಿದ್ದಿರಿ. ನೀವು ನಮ್ಮ ಸರಸಂಘಚಾಲಕ ಡಾಕ್ಟರ್ ಹೆಡಗೆವಾರ್‌ಜಿ ಮತ್ತು ನಿಮ್ಮೊಡನೆ ಇರುವವರು ಸಾಂಗಲಿಯ ಶ್ರೀ ಕಾಶಿನಾಥ ಲಿಮಯೇ ಅವರು" ಎಂದರು. ಇದು ಸಂಘದ ತಪಶ್ಚರ್ಯದ ಫಲ. ಇಲ್ಲೇ ಕೆಲದಿನಗಳ ಹಿಂದೆ ಭಾಷಣ ಮಾಡಿದ ಮದ್ರಾಸಿನ ಶ್ರೀ ಸಂಜೀವ ಕಾಮತರು ಇಲ್ಲಿ ಓರ್ವ ಅಪರಿಚಿತ ವ್ಯಕ್ತಿಯಂತೆ ಬಂದರು. ನಾಲ್ಕು ದಿನಗಳ ಕಾಲ ನಮ್ಮೊಂದಿಗೆ ಇದ್ದು ಈಗ ನಮ್ಮ ಸೋದರರಾಗಿ ವಾಪಸಾಗುತ್ತಿದ್ದಾರೆ. ಇದರ ಶ್ರೇಯಸ್ಸು ಯಾವೊಬ್ಬ ವ್ಯಕ್ತಿಯದೂ ಅಲ್ಲ. ಸಂಘದ್ದೇ ಆಗಿದೆ. ನಡೆನುಡಿಗಳಲ್ಲಿ ಭಿನ್ನತೆ ಇದ್ದರೂ ಪಂಜಾಬ್, ಬಂಗಾಲ, ಮದರಾಸ್, ಮುಂಬಯಿ, ಸಿಂಧ್ ಇತ್ಯಾದಿ ಪ್ರಾಂತಗಳ ಸ್ವಯಂಸೇವಕರು ಇಷ್ಟೊಂದು ಪ್ರೀತಿಸುವಂತೆ ಹೇಗಾದರು? ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕರಾಗಿದ್ದಾರೆಂಬುದೇ ಕಾರಣ. ನಮ್ಮ ಸಂಘದ ಪ್ರತಿಯೊಬ್ಬ ಸ್ವಯಂಸೇವಕನೂ ಇನ್ನೊಬ್ಬ ಸ್ವಯಂಸೇವಕನನ್ನು ಸೋದರಿನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ. ಒಡಹುಟ್ಟಿದ ಸೋದರರಾದರೂ ಒಮ್ಮೊಮ್ಮೆ ಮನೆ ಮಾರುಗಳಿಗಾಗಿ ತಮ್ಮ ತಮ್ಮೊಳಗೆ ಜಗಳ ಕಾಯುವುದುಂಟು. ಆದರೆ ಸ್ವಯಂಸೇವಕರಲ್ಲಿ ಎಂದಿಗೂ ಆಗದು. ನಾನು ಇಪ್ಪತ್ತನಾಲ್ಕು ದಿನಗಳಿಂದಲೂ ಮನೆಯಲ್ಲೇ ಮಲಗಿದ್ದೆ. ಆದರೆ ನನ್ನ ಹೃದಯ ಮಾತ್ರ ಇಲ್ಲೇ ತಮ್ಮೆಲ್ಲರ ನಡುವೆಯೇ ಇತ್ತು. ನನ್ನ ದೇಹವೇನೋ ಮನೆಯಲ್ಲಿತ್ತು. ಆದರೆ ಮನಸ್ಸೆಲ್ಲಾ ತಮ್ಮೆಲ್ಲರ ಜೊತೆಯಲ್ಲೇ ಸುಳಿದಾಡುತ್ತಿತ್ತು. ನಿನ್ನೆ ಸಂಜೆಯ ಕಾರ್ಯಕ್ರಮದಲ್ಲಿ ಕಡೆಯ ಪಕ್ಷ ಐದು ನಿಮಿಷಗಳ ಮಟ್ಟಿಗಾದರೂ, ಕೇವಲ ಪ್ರಾರ್ಥನೆಗಾದರೂ, ಬರಲು ನನ್ನ ಜೀವ ಒಂದೇ ಸಮನೆ ತಳಮಳಿಸಿತು. ಆದರೆ ವೈದ್ಯರ ಕಟ್ಟಪ್ಪಣೆಯಿಂದಾಗಿ ನಾನು ಸುಮ್ಮನಿರಬೇಕಾಯಿತು.
ಇಂದು ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳುವವರಿದ್ದೀರಿ. ನಾನು ಪ್ರೇಮಪೂರ್ವಕವಾಗಿ ನಿಮ್ಮನ್ನು ಬೀಳ್ಕೊಡುತ್ತೇನೆ. ಇದು ವಿರಹದ ಸಂದರ್ಭವಾದರೂ ದುಃಖದ್ದೇನೂ ಅಲ್ಲ. ಯಾವ ಕಾರ್ಯವನ್ನು ಬೆಳೆಸುವ ನಿಶ್ಚಯದಿಂದ ನೀವಿಲ್ಲಿಗೆ ಬಂದಿರೋ ಅದರ ಪೂರ್ತಿಗಾಗಿಯೇ ನೀವು ಈಗ ನಿಮ್ಮ ನಿಮ್ಮ ಸ್ಥಾನಗಳಿಗೆ ವಾಪಸಾಗುತ್ತಿದ್ದೀರಿ. ದೇಹದಲ್ಲಿ ಪ್ರಾಣ ಇರುವವರೆಗೂ ಸಂಘವನ್ನು ಮರೆಯೆನೆಂಬ ಪ್ರತಿಜ್ಞೆ ಮಾಡಿ. ಯಾವುದೇ ಮೋಹದಿಂದಲೂ ವಿಚಲಿತರಾಗದಿರಿ. "ಐದು ವರ್ಷಗಳ ಹಿಂದೆ ನಾನು ಸಂಘದ ಸ್ವಯಂಸೇವಕನಾಗಿದ್ದೆ" ಎಂದು ಹೇಳಿಕೊಳ್ಳುವ ಕೆಟ್ಟ ಗಳಿಗೆ ನಿಮ್ಮ ಜೀವನದಲ್ಲಿ ಎಂದೂ ಬರಗೊಡದಿರಿ. ಜೀವವಿರುವವರೆಗೂ ನಾವು ಸ್ವಯಂಸೇವಕರಾಗಿಯೇ ಇರೋಣ. ತನು, ಮನ, ಧನಗಳಿಂದ ಸಂಘ ಕಾರ್ಯ ಮಾಡುವ ನಮ್ಮ ದೃಢನಿಶ್ಚಯವನ್ನು ಅವಿರತವಾಗಿ ಜಾಗೃತವಾಗಿಡೋಣ. ನಿತ್ಯವೂ ಮಲಗುವ ಮುನ್ನ, "ಇಂದು ನಾನೆಷ್ಟು ಸಂಘ ಕಾರ್ಯ ಮಾಡಿದೆ" ಎಂದು ಚಿಂತಿಸಿರಿ. ಕೇವಲ ಸಂಘದ ಕಾರ್ಯಕ್ರಮಗಳನ್ನು ಸರಿಯಾಗಿ ನಡೆಸಿದ ಮಾತ್ರಕ್ಕೆ ಅಥವಾ ನಿತ್ಯವೂ ನಿಯಮಿತವಾಗಿ ಸಂಘಸ್ಥಾನದಲ್ಲಿ ಉಪಸ್ಥಿತರಾದ ಮಾತ್ರಕ್ಕೆ ಸಂಘಕಾರ್ಯ ಪೂರ್ಣವಾಗದು. ಅಸೇತು ಹಿಮಾಚಲ ಹಬ್ಬಿರುವ ಈ ವಿರಾಟ ಹಿಂದು ಸಮಾಜವನ್ನು ನಾವು ಸಂಘಟಿಸಬೇಕಾಗಿದೆ. ನಿಜಕ್ಕೂ ನಮ್ಮ ಮಹತ್ವಪೂರ್ಣವಾದ ಕಾರ್ಯಕ್ಷೇತ್ರವೆಂದರೆ ಸಂಘ ಹೊರಗಿನ ಹಿಂದು ಜಗತ್ತೇ ಆಗಿದೆ.
ಸಂಘವು ಕೇವಲ ಸ್ವಯಂಸೇವಕರಿಗಷ್ಟೇ ಅಲ್ಲ. ಅದು ಸಂಘದ ಹೊರಗಡೆ ಇರುವ ಹಿಂದು ಜನರಿಗಾಗಿಯೇ ಇದೆ. ಆ ಜನರಿಗೆ ನಾವು ರಾಷ್ಟ್ರೋದ್ಧಾರದ ಸತ್ಯಮಾರ್ಗವನ್ನು ಮನಗಾಣಿಸುವುದೇ ನಮ್ಮ ಮುಖ್ಯ ಕರ್ತವ್ಯ. ಸಂಘಟನೆಯೇ ಆ ಸತ್ಯವಾದ ಮಾರ್ಗ. ಹಿಂದು ಜನಾಂಗದ ಅಂತಿಮ ಕಲ್ಯಾಣವು ಈ ಸಂಘಟನೆಯಿಂದಾಗಿಯೇ ಸಾಧ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಇನ್ನಾವುದೇ ಕಾರ್ಯವನ್ನು ಮಾಡಲು ಇಚ್ಛಿಸದು. ಸಂಘವು ಮುಂದೆ ಏನು ಮಾಡಲಿದೆ ಎಂಬ ಪ್ರಶ್ನೆ ಅರ್ಥವಿಲ್ಲದ್ದು. ಸಂಘ ಇದೇ ಸಂಘಟನೆಯ ಕಾರ್ಯವನ್ನು ಇನ್ನೂ ಅನೇಕ ಪಟ್ಟು ವೇಗದಿಂದ ಬೆಳೆಸುತ್ತದೆ. ಹಾಗೆಯೇ ಬೆಳೆಯುತ್ತಾ ಹೋದಾಗ ಒಂದು ದಿನ ಇಡೀ ಭಾರತವರ್ಷವು ಒಂದಾಗಿ ಎದ್ದು ನಿಂತಿರುವ ದೃಶ್ಯ ಕಾಣುವ ಸ್ವರ್ಣ ದಿನ ಅಗತ್ಯವಾಗಿ ಬಂದೀತು. ಅಂದಿಗೆ ಹಿಂದು ಜನಾಂಗದತ್ತ ವಕ್ರದೃಷ್ಟಿಯಿಂದ ನೋಡುವ ಸಾಹಸ ವಿಶ್ವದ ಯಾವ ಶಕ್ತಿಗೂ ಆಗಲಾರದು. ನಾವು ಯಾರ ಮೇಲೂ ಆಕ್ರಮಣ ನಡೆಸಲು ಹೊರಟಿಲ್ಲ. ಆದರೆ ನಮ್ಮ ಮೇಲೂ ಇನ್ನಾರ ಆಕ್ರಮಣವು ನಡೆಯಲಾಗದಂತೆ ನಾವು ಸದಾ ಸಚೇತರಾಗಬೇಕು. ನಾನು ನಿಮಗೆ ಇಂದು ಒಂದು ಹೊಸ ವಿಚಾರವನ್ನೇನೂ ಹೇಳುತ್ತಿಲ್ಲ. ನಮ್ಮ ಪ್ರತಿಯೊಬ್ಬ ಸ್ವಯಂಸೇವಕನೂ ಸಂಘ ಕಾರ್ಯವನ್ನೇ ತನ್ನ ಜೀವನದ ಪ್ರಧಾನ ಕಾರ್ಯವಾಗಿ ಭಾವಿಸಬೇಕಾಗಿದೆ. ಸಂಘ ಕಾರ್ಯವೊಂದೇ ನನ್ನ ಜೀವನದ ಕಾರ್ಯ ಎಂಬ ಮಂತ್ರವನ್ನು ನೀವು ನಿಮ್ಮ ಹೃದಯದಲ್ಲಿ ಆಳವಾಗಿ ಅಂಕಿತಗೊಳಿಸಿಕೊಂಡು ಇಲ್ಲಿಂದ ತೆರಳುವಿರೆಂಬ ದೃಢ ವಿಶ್ವಾಸದೊಂದಿಗೆ ನಾನಿಂದು ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ".
ಡಾಕ್ಟರ್‌ಜಿಯವರ ಆ ಚಿಕ್ಕ ಭಾಷಣ ತುಂಬ ಪ್ರಭಾವಶಾಲಿಯಾಗಿತ್ತು. ಸ್ವಯಂಸೇವಕರು ಮೈಯೆಲ್ಲಾ ಕಿವಿಯಾಗಿ ಆ ಭಾಷಣ ಕೇಳುತ್ತಿದ್ದರು. ಮಾತಿನ ಮಧ್ಯೆ ಒಂದೆರಡು ನಿಮಿಷಗಳ ಕಾಲ ಮೌನ. ಡಾಕ್ಟರ್‌ಜಿ ಬಳಲಿದ್ದರು. ಭಾವಗದ್ಗದಿತರಾಗಿದ್ದರು. ಭವಿಷ್ಯದ ಸುಂದರ ಚಿತ್ರ ಅವರ ಕಣ್ಮುಂದೆ ತೇಲಿಬರುತ್ತಿತ್ತು.
ಡಾಕ್ಟರ್‌ಜಿ ಎರಡು ನಿಮಿಷ ಕಣ್ಮುಚ್ಚಿ ಕುಳಿತರು. ಮುಂದೆ ಕುಳಿತಿದ್ದ ಸ್ವಯಂಸೇವಕರೂ ಅದೇ ರೀತಿ ಶಾಂತ ಮೌನ. ಎಲ್ಲರೂ ಎವೆಯಿಕ್ಕದೇ ಡಾಕ್ಟರ್‌ಜಿಯವರನ್ನು ನೋಡುತ್ತಿದ್ದರು. ಉಸಿರಾಟವೂ ನಿಂತಿತೋ ಎನಿಸುವಂತಹ ಗಂಭೀರ ನೀರವತೆ, ಕೆಲವರು ರೋಮಾಂಚಿತರಾದರು. ಕೆಲವರ ಕಣ್ಣುಗಳು ತುಂಬಿ ಬಂದಿದ್ದವು. ಹೃದಯದಲ್ಲಿ ಹೊಸ ಶಕ್ತಿಯೊಂದು ಸಂಚಾರವಾದಂತೆ ಅನಿಸುತ್ತಿತ್ತು. ಕೆಲವರಿಗೆ ಆ ಎರಡು ನಿಮಿಷಗಳ ದಿವ್ಯ ಮೌನ ಮಾತಿಗೆ ನಿಲುಕದ ಒಂದು ಅಲೌಕಿಕ ಸಂದೇಶವೇ ಆಗಿತ್ತು.
ಭಾಷಣ ಮುಗಿಯಿತು. ತಮ್ಮ ದಿವ್ಯವಾಣಿಯ ಮೂಲಕ ತಮ್ಮೊಳಗಿನ ಎಲ್ಲ ಶಕ್ತಿಯನ್ನೂ ಅವರು ಸ್ವಯಂಸೇವಕರಿಗೆ ಬಸಿದು ಹಂಚಿದಂತೆ ಅನಿಸುತ್ತಿತ್ತು. ಡಾಕ್ಟರ್‌ಜಿ ಇನ್ನಷ್ಟು ಬಳಲಿದ್ದರು. ಕಾರ್ಯಾಲಯದಲ್ಲಿ ತುಸು ಹೊತ್ತು ಮಲಗಿದ್ದು ಸುಧಾರಿಸಿದ ನಂತರ ಅವರನ್ನು ಮನೆಗೆ ಕರೆತಂದರು.
ವರ್ಗ ಮುಗಿಯಿತು. ಸ್ವಯಂಸೇವಕರು ಡಾಕ್ಟರ್‌ಜಿಯವರ ಸಂದರ್ಶನಕ್ಕಾಗಿ ಬರತೊಡಗಿದರು. ಆದರೂ ಅದೆಂತಹ ಭೇಟಿ? ಕೇವಲ ಮುಖದರ್ಶನ ಮಾತ್ರ. ಡಾಕ್ಟರ್‌ಜಿ ಅವರಿಗೆ ತೀರ ಪ್ರಯಾಸವೆನಿಸುತ್ತಿತ್ತು. ಆದರೂ ಕೆಲವೊಮ್ಮೆ ಅವರು ಒಂದೆರಡು ಮಾತನಾಡುತ್ತಿದ್ದರು. "ಮುಂದೇನು ಮಾಡುವಿ? ಮತ್ತೆಂದು ಭೇಟಿ?" ಎಂದು ಪ್ರಶ್ನಿಸುತ್ತಿದ್ದರು. ಅಲ್ಲಲ್ಲಿನ ಪರಿಚಿತ ಕಾರ್ಯಕರ್ತರಿಗೆ ನಮಸ್ಕಾರ ತಿಳಿಸಲು ಕೆಲವರಿಗೆ ಹೇಳಿದರೆ, ಮತ್ತೆ ಕೆಲವರಿಗೆ ಕಾರ್ಯಕ್ಕಾಗಿ ಸಮರ್ಪಿಸಿಕೊಳ್ಳಲು ಚತುರತೆಯಿಂದ ಹೇಳುತ್ತಿದ್ದರು.
ಡಾಕ್ಟರ್‌ಜಿ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದಲೇ ಬೀಳ್ಕೊಂಡರು.
Labels: Doctorji, Last Speech, Sangha Story, ಅಂತಿಮ ಭಾಷಣ, ಡಾಕ್ಟರ್‌ಜಿ, ಸಂಘದ ಕಥೆ

No comments:
Post a Comment