Monday, November 19, 2012

೬೦. ಉಪಯೋಗಕ್ಕೆ ಬಾರದ್ದು ಯಾವುದೂ ಇಲ್ಲ

ಉಪಯೋಗಕ್ಕೆ ಬಾರದ್ದು ಯಾವುದೂ ಇಲ್ಲ

    ಒಮ್ಮೆ ಈಶ್ವರಚಂದ್ರ ವಿದ್ಯಾಸಾಗರರನ್ನು ಕಾಣಲು ಅವರ ಗೆಳೆಯರೊಬ್ಬರು ಬಂದರು. ಕ್ಷೇಮ ಸಮಾಚಾರಗಳನ್ನು ಕೇಳಿದ ಬಳಿಕ ಈಶ್ವರಚಂದ್ರರು ಕಿತ್ತಳೆ ಹಣ್ಣನ್ನು ತಿನ್ನಲು ನೀಡಿದರು. ಇಬ್ಬರೂ ಕಿತ್ತಳೆ ಹಣ್ನನ್ನು ತಿನ್ನತೊಡಗಿದರು. ಈಶ್ವರಚಂದ್ರರು ಚರಟವನ್ನೆಲ್ಲ ಒಂದು ತಟ್ಟೆಯಲ್ಲಿಡುತ್ತಿದ್ದರು. ಆದರೆ ಅವರ ಗೆಳೆಯರು ಮಾತ್ರ ಅವನ್ನೆಲ್ಲ ದೂರ ಎಸೆಯುತ್ತಿದ್ದರು. ಅದನ್ನು ಕಂಡ ವಿದ್ಯಾಸಾಗರರು ’ಹಾಗೇಕೆ ಅವನ್ನು ಕಸ ಎಸೆದಂತೆ ಎಸೆಯುವಿರಿ? ಹಾಗೆಯೇ ಇಟ್ಟರೆ ಯಾರಿಗಾದರೂ ಉಪಯೋಗಕ್ಕೆ ಬಂದೀತು’ ಎಂದರು.

    ’ರಸವೆಲ್ಲ ಹೀರಿದ ಕಿತ್ತಳೆ ತೊಳೆಗಳಲ್ಲವೇ ಇವು? ಇದ್ಯಾರ ಉಪಯೋಗಕ್ಕೆ ಬಂದೀತು?’ ಎಂದು ಪ್ರಶ್ನಿಸಿದರು ಗೆಳೆಯರು.

    ’ಹೊರಗಿರುವ ಕಟ್ಟೆಯ ಮೇಲಿಟ್ಟು ನೋಡಿ, ಆಗ ತಿಳಿಯುತ್ತೆ’ ಎಂದು ನಗುತ್ತಲೇ ಉತ್ತರಿಸಿದರು ಈಶ್ವರಚಂದ್ರರು.

    ಕಟ್ಟೆಯ ಮೇಲೆ ಜಗಿದ ಕಿತ್ತಳೆ ತೊಳೆಗಳ ಚರಟ ಇಟ್ಟ ಕೂಡಲೇ ಕಾಗೆಗಳ ಹಿಂಡು ಹಾರಿಬಂತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಕಿತ್ತಳೆ ಚರಟವನ್ನೆಲ್ಲ ಕಚ್ಚಿಕೊಂಡು ಕಾಗೆಗಳು ಹಾರಿಹೋದವು.

    ’ನೋದಿದಿರಾ, ಈ ಕೆಲಸಕ್ಕೆ ಬಾರದ ಕಿತ್ತಳೆ ಚರಟಗಳು ಆ ಕಾಗೆಗಳ ಉಪಯೋಗಕ್ಕೆ ಬಂದ ಪರಿ? ಯಾವ ವಸ್ತುವೂ ಅನುಪಯೋಗಿ ಅಲ್ಲ. ನಾವು ಅನುಪಯೋಗಿ ಎಂದು ಎಸೆದದ್ದು ಬೇರಾರೊ ವ್ಯಕ್ತಿ, ಪ್ರಾಣಿ, ಪಕ್ಷಿಗಳ ಉಪಯೋಗಕ್ಕೆ ಬಂದೇ ಬರುತ್ತದೆ’ ಎಂದು ಗಂಭೀರವಾಗಿ ನುಡಿದರು ಈಶ್ವರಚಂದ್ರ ವಿದ್ಯಾಸಾಗರರು.

Labels: Boudhik Story, Crow, Ishvarachandra Vidyasagar, Orange, ಈಶ್ವರಚಂದ್ರ ವಿದ್ಯಾಸಾಗರರು, ಕಾಗೆ, ಕಿತ್ತಳೆ ಹಣ್ಣು, ಬೋಧ ಕಥೆ

No comments:

Post a Comment