Sunday, November 11, 2012

೩೨. ನಾನೊಬ್ಬ ಏನು ಮಾಡಲಿ?

ನಾನೊಬ್ಬ ಏನು ಮಾಡಲಿ?

    ಸಂಘದ ಆರಂಭದ ನಂತರ ಡಾಕ್ಟರ್‌ಜಿ ದಿನವೆಲ್ಲಾ ಸಂಘ ಕಾರ್ಯದಲ್ಲಿ ಮಗ್ನರು. ತಮ್ಮ ಸುತ್ತು ನಡೆಯುವ ಎಲ್ಲಾ ಸಂಗತಿಗಳನ್ನೂ ಅವರು ಸೂಕ್ಷ್ಮವಾಗಿ ಗಮನಿಸುವರು. ಸರಿಯಾದ ದೃಷ್ಟಿಕೋನ ನೀಡುವರು. ಸಾಮಾಜಿಕ, ರಾಜಕೀಯದ ಹತ್ತು ಹಲವು ಕಾರ್ಯಗಳಲ್ಲಿ ಅವರ ಮಾರ್ಗದರ್ಶನ ಸದಾ ಸಿದ್ಧ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಾಯ ಸಹ ಮಾಡುತ್ತಿದ್ದರು.

    ಡಾಕ್ಟರ್‌ಜಿ ಒಮ್ಮೆ ಸಂಘಕಾರ್ಯಕ್ಕಾಗಿ ಪರ ಊರಿಗೆ ಹೋಗಿದ್ದರು. ಆಗ ನಾಗಪುರದಲ್ಲಿ ಒಂದು ಸಾರ್ವಜನಿಕ ಸಭೆ. ಅಲ್ಲಿ ಮಹತ್ವಪೂರ್ಣ ವಿಷಯಗಳ ಮಂಡನೆ. ಭಾಷಣಕಾರರೂ ಸಹ ಖ್ಯಾತನಾಮರೇ. ಸಹಸ್ರಾರು ಜನ ನೆರೆದಿದ್ದರು. ಮೊದಲ ಭಾಷಣ ಮುಗಿದು ಎರಡನೆಯದು ಆರಂಭವಾಗಿತ್ತಷ್ಟೇ.

    ಕೆಲವರು ಆ ಸಭೆ ನಡೆಯಗೊಡಬಾರದೆಂದೇ ಅಲ್ಲಿ ಬಂದಿದ್ದರು. ಅವರಲ್ಲೊಬ್ಬ ಜನರ ಮೇಲೆ ಕಪ್ಪೆಯೊಂದನ್ನೆಸದ. ಮತ್ತೊಬ್ಬ ಕೂಗಿದ. "ಹಾವು, ಹಾವು" ಇದ್ದಕ್ಕಿದ್ದಂತೆ "ಹಾವು, ಹಾವು" ಎಂದು ಕೂಗುತ್ತಾ ಹತ್ತಾರು ಜನ ಓಡಿದರು. ಒಬ್ಬರನ್ನು ಕಂಡು ಮತ್ತೊಬ್ಬರು. ಮತ್ತೊಬ್ಬರನ್ನು ನೋಡಿ ಮಗದೊಬ್ಬರು ಓಡತೊಡಗಿದರು. ನಿಜ ಸಂಗತಿ ಯಾರಿಗೂ ತಿಳಿಯದು. ಎಲ್ಲರೂ ಓಡುವವರೇ. ಕೆಲವರು ಬಿದ್ದರು. ಕೆಲವರು ಬಿದ್ದವರನ್ನೇ ತುಳಿದರು. ಕೈ ಕಾಲು ಪೆಟ್ಟು ಮಾಡಿಕೊಂಡವರು ಕೆಲವರು. ಪ್ರಾಣ ಭಯ ಕೆಲವರಿಗೆ. ಹತ್ತು ಹದಿನೈದು ನಿಮಿಷಗಳಲ್ಲಿ ಇಡೀ ಸಭೆ ಕರಗಿತು.

    ಮೂರು ದಿನ ಕಳೆಯಿತು. ಡಾಕ್ಟರ್‌ಜಿ ಊರಿಗೆ ಬಂದರು. ಅವರಿಗೆ ಈ ಸುದ್ದಿ ತಿಳಿಯಿತು. ಬಹು ವ್ಯಥೆಪಟ್ಟರು. ಆ ಸಭೆಯಲ್ಲಿದ್ದ ಅನೇಕರ ಮನೆಗಳಿಗೆ ಅವರು ಹೋದರು. ಇದರ ಕುರಿತು ಮಾತುಕತೆ ನಡೆಯಿತು.

    ’ನೀವೂ ಆ ಸಭೆಯಲ್ಲಿದ್ದವರಲ್ಲವೇ?’ ಡಾಕ್ಟರ್‌ಜಿಯವರ ಪ್ರಶ್ನೆ.

    ’ಹೂಂ. ನಾನೂ ಸಂಯೋಜಕರಲ್ಲೊಬ್ಬ’.

    ’ಮತ್ತೆ ಆ ಸಭೆ ಏಕೆ ಪೂರ್ತಿ ನಡೆಯಲಿಲ್ಲ?’

    ’ಅಯ್ಯೋ, ಏನು ಹೇಳೋಣ? ಕೆಲವು ಗೂಂಡಾಗಳ ಕೆಲಸ ಇದು. ಅಲ್ಲಿಯೇ ಅವರಿಗೆ ತಕ್ಕ ಶಾಸ್ತಿ ಮಾಡುವ ಇಷ್ಟವೇನೋ ನನಗಿತ್ತು. ಆದರೆ ನಾನೊಬ್ಬ ಏನು ಮಾಡಲಿ?’ ಎಂದು ಉದ್ಗರಿಸಿದರು ಆ ಮಹನೀಯರು. ಡಾಕ್ಟರ್‌ಜಿ ಅನೇಕರನ್ನು ಭೇಟಿ ಮಾಡಿದರು. ಅವರೆಲ್ಲರ ಉತ್ತರವೂ ಒಂದೇ. ’ನನಗಂತೂ ಇಷ್ಟವಿತ್ತು. ಆದರೆ ನಾನೊಬ್ಬನೇ ಏನು ಮಾಡಲಿ?’

    ಡಾಕ್ಟರ್‌ಜಿ ಈ ವಿಷಯ ಸ್ವಯಂಸೇವಕರೆದುರು ಹೇಳಿದರು. ’ನಾನೊಬ್ಬನೇ ನನ್ನೊಂದಿಗೆ ಯಾರೂ ಇಲ್ಲ ಎನ್ನುವುದೇ ಹಿಂದು ಸಮಾಜದ ಬಹು ದೊಡ್ಡ ರೋಗ. ನಾವಿದನ್ನು ದೂರ ಮಾಡಬೇಕು. ಯಾವುದೇ ಸತ್ಕಾರ್ಯಕ್ಕೂ ಕರೆಯದೇ ಜನ ಸೇರುವಂತಾಗಬೇಕು. ದುಷ್ಟರು ಕೆಲವೇ ಮಂದಿ. ಆದರೂ ಅವರೇ ಒಟ್ಟಾಗುವರು. ಸಜ್ಜನರು ದೂರವೇ ಉಳಿಯುವರು. ಒಳ್ಳೆಯ ಕೆಲಸ ಮಾಡಲೂ ಹೆದರುವರು. ಕೇಳಿದರೆ ’ನಾನೊಬ್ಬನೇ ಏನು ಮಾಡಲಿ?’ ಎನ್ನುವರು. ನಾವು ಈ ಸ್ಥಿತಿ ಬದಲಿಸಬೇಕಾಗಿದೆ. ಪ್ರತಿ ಹಿಂದುವಿನ ಮನದಲ್ಲೂ ನಾನು ಒಂಟಿ ಅಲ್ಲ. ನನ್ನ ಬೆನ್ನ ಹಿಂದೆ ಇಡೀ ಸಮಾಜವಿದೆ. ವಿಶಾಲ ಹಿಂದು ರಾಷ್ಟ್ರದ ಘಟಕ ನಾನು. ಹಿಂದು ರಾಷ್ಟ್ರದ ಬಲವೆಲ್ಲಾ ನನ್ನೊಡನಿದೆ. ನನ್ನ ಕಾರ್ಯ ಈಶ್ವರೀ ಕಾರ್ಯ. ಆತನೇ ರಕ್ಷಕ. ಹಿಂದು ಸಮಜಮಾನಸದಲ್ಲಿ ಈ ಭಾವನೆ ಹುಟ್ಟಿಸಿದರೆ ನಮ್ಮ ನಾಡು ಜಗದ್ವಂದ್ಯವಾಗುವುದು. ಸಂಘ ಇದೇ ಕಾರ್ಯ ಮಾಡಬೇಕಾಗಿದೆ’ ಎಂದರು.

    ದಿನವೂ ಇಂಥದೇ ಮಾರ್ಗದರ್ಶನ ಡಾಕ್ಟರ್‌ಜಿಯವರಿಂದ. ಪ್ರತಿಯೊಬ್ಬ ಸ್ವಯಂಸೇವಕನೂ ಶಾರೀರಿಕವಾಗಿ ಬೌದ್ದಿಕವಾಗಿ ಬೆಳೆದು ಉತ್ತಮ ನಾಗರಿಕನಾಗಬೇಕೆಂಬುದೇ ಅವರ ಚಿಂತನೆ. ರಾತ್ರಿ ಹಗಲೂ ಇದೇ ವಿಚಾರ. ನಾಗಪುರದಲ್ಲಿ ಸಂಘದ ಸಸಿ ಚಿಗುರತೊಡಗಿತು. ಅನೇಕ ಉಪಶಾಖೆಗಳಾದವು.

No comments:

Post a Comment