Saturday, November 10, 2012

೨೮. ಸೆರೆಮನೆಯಲ್ಲಿ

ಸೆರೆಮನೆಯಲ್ಲಿ

    ಸೆರೆಮನೆಯೊಳಗೆ ದೊಡ್ಡ ದೊಡ್ಡ ನಾಯಕರೂ ಹೆದರಿಹೋಗುವುದಿದೆ. ಹೊರಗಿರುವಾಗ ಸಹನಶೀಲತೆ ಹಾಗೂ ದೃಢತೆಯ ಕುರಿತು ಬಹು ದೊಡ್ಡ ಮಾತನಾಡುವ ಅವರು ಒಳಗೆ ಬಂದಾಗ ಒಮ್ಮೆಲೇ ಬಹು ಸೂಕ್ಷ್ಮರಾಗುವರು. ಕೆಲವರು ಬಹು ಭಾವನಾಜೀವಿಗಳಾಗುವರು. ಕೆಲವರು ಸಣ್ಣ ಪುಟ್ಟ ವಿಷಯಗಳಿಗೂ ಸಿಟ್ಟಾಗುವರು. ಕೆಲವರಿಗಂತೂ ನಿತ್ಯ ಮನೆಯದೇ ನೆನಪು. ಹೊರಗಡೆ ಪರೋಪಕಾರ, ತ್ಯಾಗ ಇತ್ಯಾದಿ ಉಪದೇಶ ಮಾಡುವವರು ಅಲ್ಲಿ ಸ್ವಾರ್ಥಿಗಳಾಗಿ ಬಿಡುವರು.

    ಡಾಕ್ಟರ್‌ಜಿ ಈ ಮೊದಲು ಸೆರೆಮನೆಗೆ ಹೋದವರಲ್ಲ. ಸೆರೆಮನೆಗಳ ಕುರಿತು ಕೇಳಿ, ಹಾಗೂ ಓದಿ ಮಾತ್ರ ತಿಳಿದವರು ಅವರು. ಅಲ್ಲಿನ ಕಷ್ಟಮಯ ಜೀವನಕ್ಕೆ ಅವರ ಮನಸ್ಸು ಪೂರ್ತಿ ಸಿದ್ಧವಾಗಿತ್ತು. ಸ್ವಭಾವತಃ ಧೈರ್ಯಶಾಲಿ, ಶಾಂತ ಹಾಗೂ ವಿಚಾರಶೀಲರಾಗಿದ್ದ ಅವರು ಸೆರೆಮನೆಯ ಜೀವನದಲ್ಲಿ ಎಂದೂ ಹೆದರಲಿಲ್ಲ. ಸಿಟ್ಟಾಗಲೂ ಇಲ್ಲ. ಮನದ ಸ್ಥಿಮಿತ ಎಂದೂ ಕಳೆದುಕೊಳ್ಳದೆ ನಿತ್ಯಪ್ರಸನ್ನರಾಗಿರುತ್ತಿದ್ದರು ಅವರು.

    ತಮ್ಮ ಸಹ ಕಾರ್ಯಕರ್ತರಿಗೆ ಡಾಕ್ಟರ್‌ಜಿ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದರು. ಓರ್ವರು ಕೋಪಿಷ್ಠರು. ಮತ್ತೊಬ್ಬರು ಸದಾ ನಿರಾಶಾವಾದಿ. ಅವರಿಗೆಲ್ಲಾ ಧೈರ್ಯ ಹೇಳಿ, ಡಾಕ್ಟರ್‌ಜಿ ಅಂತಹವರನ್ನೂ ರಮಿಸುತ್ತಿದ್ದರು. ಅಲ್ಲೊಬ್ಬ ಮುಸಲಮಾನ ಕಾರ್ಯಕರ್ತನಿದ್ದ. ಅವನೊಮ್ಮೆ ಹಿಂದುಗಳ ಗೋಪೂಜೆ ಕುರಿತು ಹೀನಾಯವಾಗಿ ಮಾತನಾಡಿದ. ಆಗ ಅಲ್ಲಿದ್ದ ಬಿಸಿರಕ್ತದ ಹಿಂದು ತರುಣನೊಬ್ಬ ಅವನ ಮೇಲೆ ಬಿದ್ದು ಹೊಡೆಯತೊಡಗಿದ. ಡಾಕ್ಟರ್‌ಜಿ ತಟ್ಟನೆ ಅವರ ನಡುವೆ ಪ್ರತ್ಯಕ್ಷರಾಗಿ ಅವರಿಬ್ಬರನ್ನೂ ಸಮಾಧಾನಗೊಳಿಸಿದರು.

    ಇಂಥ ಅನೇಕ ಘಟನೆಗಳು ಅಲ್ಲಿ ನಡೆಯುತ್ತಿದ್ದುದು ಸರ್ವೇಸಾಮಾನ್ಯ. ಡಾಕ್ಟರ್‌ಜಿ ಅವನ್ನೆಲ್ಲ ಅಲ್ಲಲ್ಲೆ ಸರಿಪಡಿಸುತ್ತಿದ್ದರು. ಎಲ್ಲ ರೀತಿಯ ಸ್ವಭಾವ, ವಯಸ್ಸಿನವರೂ ಅಲ್ಲಿದ್ದರು. ಕೆಲವರ ಬೆನ್ನು ಚಪ್ಪರಿಸಿ, ಇನ್ನು ಕೆಲವರ ಬಳಿ ಚರ್ಚಿಸಿ, ಹೀಗೆ ವಿವಿಧ ರೀತಿಯಲ್ಲಿ ಅವರನ್ನೆಲ್ಲಾ ನಿಭಾಯಿಸುತ್ತಿದ್ದವರು ಡಾಕ್ಟರ್‌ಜಿ ಅವರೇ. ಅವರ ಪ್ರಭಾವ ಎಲ್ಲರ ಮೇಲೂ ಇತ್ತು. ಬೇರೆಯವರೊಂದಿಗೆ ಉದ್ಧಟರಾಗಿದ್ದವರೂ ಸಹ ಡಾಕ್ಟರ್‌ಜಿಯವರೆದುರು ನಮ್ರರಾಗುತ್ತಿದ್ದರು. ಜೇಲು ಅಧಿಕಾರಿಗಳಿಗೂ ಅವರ ಬಗ್ಗೆ ತುಂಬ ಗೌರವ. ಡಾಕ್ಟರ್‌ಜಿಯವರ ಕಣ್ಣಿನ ಕಾಂತಿ, ಮಾತುಗಳಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರೀತಿ ಹಾಗೂ ಅವರ ದಷ್ಟಪುಷ್ಟ ಆಕೃತಿ ಎಂಥವರನ್ನೂ ವಶಪಡಿಸಿಕೊಳ್ಳುವಂತಹದಾಗಿತ್ತು.

ಸದಾ ಪ್ರಸನ್ನರಾಗಿರುತ್ತದವರು ಅವರು. ಕಥೆ, ಕವನ, ಚುಟುಕಗಳಿಗಂತೂ ಅವರು ಅಕ್ಷಯ ಭಂಡಾರ. ಮಾತಿನ ಶೈಲಿಯೂ ತುಂಬ ಆಕರ್ಷಕ. ಅವರೆಲ್ಲಿ ಕುಳಿತರೂ ಆ ವಾತಾವರಣವೆಲ್ಲ ಉತ್ಸಾಹಮಯ.

    ಸೆರೆಯಿಂದ ಹೊರ ಬರುವಾಗ ಕೆಲವರು ಕೃಶರಾಗಿದ್ದರು. ಇನ್ನು ಕೆಲವರು ರೋಗಗ್ರಸ್ತರಾಗಿದ್ದರು. ಆದರೆ ೧೯೨೨ ಜುಲೈ ೧೨ರಂದು ಡಾಕ್ಟರ್‌ಜಿ ಬಿಡುಗಡೆಯಾಗಿ ಹೊರ ಬಂದಾಗ ಅವರ ಹಳೆಯ ಬಟ್ಟೆಗಳೆಲ್ಲ ಅವರಿಗೆ ಬಿಗಿಯಾಗಿದ್ದವು.

    "ಡಾಕ್ಟರ್‌ಜಿ, ನೀವು ದಪ್ಪವಾಗಿದ್ದೀರಲ್ಲ..... ಈಗ ನಿಮ್ಮ ತೂಪ ಎಷ್ಟಿದೆ?" ಓರ್ವನೆಂದ.

    ಅವರ ತೂಕ ಮೊದಲಿಗಿಂತ ೨೫ ಪೌಂಡು ಹೆಚ್ಚಿತ್ತು.

    "ಆಶ್ಚರ್ಯ, ಇದು ಹೇಗೆ ಸಾಧ್ಯ?" ಮತ್ತೊಬ್ಬ ಕುತೂಹಲದಿಂದ ಪ್ರಶ್ನಿಸಿದ.

    ಡಾಕ್ಟರ್‌ಜಿಯವರ ಉತ್ತರ ಸಿದ್ಧ. "ನನ್ನ ಹೊಟ್ಟೆಗೆ ಎಲ್ಲವನ್ನು ಭಸ್ಮ ಮಾಡುವ ಶಕ್ತಿ ಇದೆ. ಜೀರ್ಣಶಕ್ತಿ ಕಡಿಮೆ ಇದ್ದವರು ಮಾತ್ರ ತೆಳ್ಳಗಾದರು. ನಾನಾದರೋ ದಪ್ಪನಾದೆ.

    ತಮ್ಮ ಸೆರೆಮನೆಯ ಅನುಭವಗಳನ್ನು ಮಿತ್ರರಿಗೆ ಬಹು ರೋಚಕವಾಗಿ ವರ್ಣಿಸುತ್ತಿದ್ದರು ಡಾಕ್ಟರ್‌ಜಿ.

No comments:

Post a Comment