Sunday, November 25, 2012

೧೦೨. ಗುಣಗ್ರಾಹ್ಯತೆ

ಗುಣಗ್ರಾಹ್ಯತೆ

   ತಮಿಳುನಾಡಿನಲ್ಲಿ ಶಿವರಾಮ ಜೋಗಳೇಕರ್ ಎನ್ನುವ ಒಬ್ಬ ಪ್ರಚಾರಕರಿದ್ದರು. ಎಂ.ಎಸ್.ಸಿ.ಯಲ್ಲಿ ಚಿನ್ನದ ಪದಕ ತೆಗೆದುಕೊಂಡು ಪುಣೆಯಿಂದ ತಮಿಳುನಾಡಿಗೆ ಹೋದರು. ಮರಾಠಿಯವರಾದ ಅವರು ತಮಿಳುನಾಡಿಗೆ ಹೋಗಿ, ಜೀವನ ಪರ್ಯಂತ ಅಲ್ಲಿಯೇ ಪ್ರಚಾರಕರಾಗಿ ಇದ್ದು ಅಲ್ಲಿಯೇ ತೀರಿಕೊಂಡರು. ತಮಿಳು ಕಲಿತರು, ತಮಿಳರ ರೀತಿಯಲ್ಲಿ ವೇಷ ಧರಿಸಿದರು. ಅವರು ತಮಿಳರು ಅಲ್ಲ ಯಾರಿಗೂ ಅನ್ನಿಸಲೇ ಇಲ್ಲ. ಅಷ್ಟರ ಮಟ್ಟಿಗೆ ಅವರು ತಮಿಳರಾಗಿ ಹೋದರು. ಅವರು ಚೆನ್ನೈನಲ್ಲಿ ವಿಶೇಷವಾಗಿ ಎಷ್ಟು ಜನ ಸಜ್ಜನರಿದ್ದಾರೆ ಎಂದು ಹುಡುಕುತ್ತಾ ಹೋದರು. ಸಜ್ಜನರು ಬೇಕಾದಷ್ಟು ಜನ ಸಮಾಜದಲ್ಲಿದ್ದಾರೆ. ’ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವವರು ಯಾರು? ಯಾರು ಬಂದಿರುವಂತಹವರಿಗೆ ಆತ್ಮೀಯತೆಯಿಂದ ಕರೆದು ಕೆಲಸ ಮಾಡಿಕೊಡುತ್ತಾರೆ? ಈ ರೀತಿಯಿರುವವರನ್ನು ಹುಡುಕಿದರು’

    ಪತ್ರಿಕೆಗಳಲ್ಲಿ ಸಂಪಾದಕರಿಗೆ ಪತ್ರ ಬರೆದು ಸಮಾಜದ ಬಗ್ಗೆ ಕಳಕಳಿಯನ್ನು ತೋರಿಸುವವರ ಮನೆಗೆ ಅವರನ್ನು ಹುಡುಕಿಕೊಂಡು ಹೋದರು. ಅವರ ಮನೆ ಬಾಗಿಲು ತಟ್ಟಿದರು. ’ನೀವು ಪತ್ರಿಕೆಯಲ್ಲಿ ಈ ಪತ್ರ ಬರೆದಿರುವಿರಲ್ಲಾ?’ ಎಂದು ಕೇಳಿದರು. ’ಹೌದು, ಬರೆದಿದ್ದೇನೆ’ ಎಂದು ಉತ್ತರ ಬರುತ್ತಿತ್ತು. ಶಿವರಾಮರು ಅವರಿಗೆ ಧನ್ಯವಾದವನ್ನು ಹೇಳುತ್ತಿದ್ದರು. ಪತ್ರ ಬರೆದವರು ಆಶ್ಚರ್ಯದಿಂದ ಏಕೆ ಧನ್ಯವಾದ ಹೇಳುತ್ತಿದ್ದೀರೆಂದು ಕೇಳುತ್ತಿದ್ದರು. ಇವರು ’ನಿಮಗೆ ಸಮಾಜದ ಬಗ್ಗೆ ಕಳಕಳಿ ಇದೆ. ಅದಕ್ಕಾಗಿ ಐದು ರೂಪಾಯಿ ಖರ್ಚು ಮಾಡಿ ಪತ್ರ ಬರೆದಿದ್ದೀರಲ್ಲ, ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಹೇಳಲು ಬಂದೆ’ ಎಂದು ಉತ್ತರಿಸುತ್ತಿದ್ದರು. ಹೀಗೆ ಇನ್ನೊಬ್ಬರ ಗುಣವನ್ನು ಕಂಡುಹಿಡಿದು ಅವರನ್ನು ಜೋಡಿಸುವ ಕೆಲಸವನ್ನು ಶಿವರಾಮ ಜೋಗಳೇಕರ್ ಮಾಡಿದರು.

    ಒಬ್ಬ ಸ್ವಯಂಸೇವಕ ಮಾಡುವ ಕೆಲಸವೆಂದರೆ ಇದೇ. ಸಮಾಜದಲ್ಲಿ ಇರುವಂತಹವರ ಬಗ್ಗೆ ಹೊಟ್ಟೆಕಿಚ್ಚು ಪಡುವಂತಹುದಲ್ಲ - ’ಅಂತಹವರನ್ನು ಹೇಗಾದರೂ ಹಿಂದಕ್ಕೆ ತಳ್ಳಿ ನಾನು ಮುಂದಕ್ಕೆ ಹೋಗಬೇಕು’ ಎನ್ನುವುದಲ್ಲ. ಅಂತಹ ಸಜ್ಜನರನ್ನು ಶಾಖೆಗೆ ತರದೆಯೇ, ಶಿವರಾಮರು ಅಂತಹವರ ಒಂದು ವೇದಿಕೆ ಪ್ರಾರಂಭ ಮಾಡಿದರು. ನಂತರ ಎಲ್ಲರಿಗೂ ಗೊತ್ತಾಯಿತು, ಇದು ಸಂಘದ ಕೆಲಸ ಎಂದು. ಶಿವರಾಮರು ಮೊದಲನೇ ದಿನವೇ ತಾವು ಆರ್.ಎಸ್.ಎಸ್.ನವರು ಎಂದು ಹೇಳಲಿಲ್ಲ, ಅಥವಾ ಆರ್.ಎಸ್.ಎಸ್.ಗೆ ಬನ್ನಿ ಎಂದೂ ಹೇಳಲಿಲ್ಲ. ಹೀಗೆ ಗುಣಗ್ರಾಹ್ಯತೆ - ಇನ್ನೊಬ್ಬರಲ್ಲಿರುವಂತಹ ಸದ್ಗುಣವನ್ನು, ಒಳ್ಳೆಯ ನಡತೆಯನ್ನು ಗುರುತಿಸಿ ಅದನು ಮುಂದೆ ತರುವಂತಹುದು. ಸಮಾಜಕ್ಕೆ ಅಂತಹ ಗುಣವಿರುವವರು ಬೇಕು. ಸ್ವಯಂಸೇವಕ ಈ ರೀತಿ ಸಮಾಜದಲ್ಲಿರುವ ಸಜ್ಜನರನ್ನು ಗುರುತಿಸುವಂತಹವನು. 

Labels: Sangha Story, Shivaram Jogalekar, ಗುಣಗ್ರಾಹ್ಯತೆ, ಶಿವರಾಮ ಜೋಗಳೇಕರ್, ಸಂಘದ ಕಥೆ, ಸಜ್ಜನರ ಜೋಡಣೆ

No comments:

Post a Comment