Sunday, November 25, 2012

೧೦೫. ಅವಿನಾಭಾವ ಭಾವನೆ

ಅವಿನಾಭಾವ ಭಾವನೆ

   ಸ್ವಯಂಸೇವಕರಲ್ಲಿ ವಿಚಾರದ ಬಗ್ಗೆ ರಾಜಿ ಇಲ್ಲ. ಸಂಘದ ಒಬ್ಬ ಸ್ವಯಂಸೇವಕ ಶಾಖೆಯಲ್ಲೋ, ವರ್ಗದಲ್ಲೋ ಆಟವಾಡುತ್ತಿರುವಾಗ ಬಿದ್ದು ಕಾಲು ಮುರಿಯಿತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವನನ್ನು ನೋಡಲು ಅನೇಕರು ಬಂದಿದ್ದರು. ಅವನ ತಾಯಿ ಅವನ ಪಕ್ಕದಲ್ಲೇ ನಿಂತಿದ್ದರು. ಅವರು ಅಳುತ್ತಾ ’ಏನೋ, ನೀನು ಸಂಘಕ್ಕೆ ಹೋಗಿದ್ದರಿಂದ ಹೀಗಾಯಿತು’ ಎಂದು ಸಂಘದ ಬಗ್ಗೆ ಸ್ವಲ್ಪ ಹಗುರವಾಗಿ ಹೇಳಿದರು. ಅದೂ ಮಗನ ಮೇಲಿನ ಪ್ರೀತಿಯಿಂದಾಗಿ. ಆ ೮-೧೦ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ, ಆ ಸಂದರ್ಭದಲ್ಲೂ ’ನೋಡಮ್ಮ, ನೀನು ನನಗೆ ಬೇಕಾದರೆ ಬೈಯ್ಯಿ. ಆದರೆ ಸಂಘಕ್ಕೆ ಮಾತ್ರ ಬೈಯ್ಯಬೇಡ’ ಎಂದ.

    ಇದು ೮-೧೦ನೇ ತರಗತಿಯ ಒಬ್ಬ ಹುಡುಗನಿಗೆ ಸಂಘದ ಬಗ್ಗೆ ಇರುವಂತಹ ಅವಿನಾಭಾವವಾದ ಭಾವನೆ.

Labels: Injury, Inseparable, Sangha Story, Swayamsevak, ಅವಿನಾಭಾವ ಭಾವನೆ, ಗಾಯ, ಬಾಲಕ, ಸಂಘಕ್ಕೇನೂ ಅನ್ನದಿರು, ಸಂಘದ ಕಥೆ

೧೦೪. ಸಿದ್ಧಾಂತದಲ್ಲಿ ನಂಬಿಕೆ

ಸಿದ್ಧಾಂತದಲ್ಲಿ ನಂಬಿಕೆ

   ಸ್ವಯಂಸೇವಕರು ಜಾತಿ ಇತ್ಯಾದಿಗಳಿಂದ ಪ್ರಭಾವಿತರಾಗುವುದಿಲ್ಲ ಎನ್ನುವುದಕ್ಕೆ ದೀನದಯಾಳರ ಉದಾಹರಣೆ. ಎಲ್ಲರೂ ಬಹಳ ಆಗ್ರಹ ಪಡಿಸಿದ್ದರಿಂದ ದೀನದಯಾಳರು ಚುನಾವಣೆಗೆ ನಿಂತರು. ಚುನಾವಣೆಯಲ್ಲಿ ಬೇರೆ ಎಲ್ಲರೂ ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿದರು. ಕೆಲವರು ಒಂದು ರಾತ್ರಿ ಬೈಠಕ್‍ನಲ್ಲಿ ಕುಳಿತಾಗ ದೀನದಯಾಳರಲ್ಲಿ ಹೇಳಿದರು ’ನಾವು ನಿಮ್ಮ ಜಾತಿಯ ವಿಷಯವಾಗಿ ಹೇಳಿದರೆ ನಮಗೆ ಚುನಾವಣೆಯಲ್ಲಿ ಅನುಕೂಲವಾಗಬಹುದು’ ಎಂದು. ಆಗ ದೀನದಯಾಳರು ಜಾತಿಯ ವಿಷಯವನ್ನು ತಂದರೆ ತಾವು ಚುನಾವಣೆಯಿಂದ ಹೊರಬರುವುದಾಗಿ ಹೇಳಿದರು. ’ನಾನು ಸಂಘದ ಸ್ವಯಂಸೇವಕ. ಜಾತಿಯ ಹೆಸರಿನಲ್ಲಿ ಪ್ರಚಾರ ಮಾಡುವುದಾದರೆ, ನನಗೆ ಈ ಚುನಾವಣೆ ಬೇಡ’ ಎಂದರು.

    ನಂತರ ಚುನಾವಣೆಯಲ್ಲಿ ಅವರು ಸೋತರು. ಅದರಿಂದ ದೀನದಯಾಳರಿಗಾಗಲೀ, ಬೇರೆಯವರಿಗಾಗಲೀ ಎನೂ ಪ್ರಭಾವವಾಗಲಿಲ್ಲ. ಏಕೆಂದರೆ ’ನಾವು ಸಿದ್ಧಾಂತಕ್ಕಾಗಿ ನಿಂತಿರುವಂತಹವರು. ಸಿದ್ಧಾಂತದಲ್ಲಿ ಒಪ್ಪಂದ ಮಾಡಿಕೊಂಡು ಗೆಲ್ಲುವುದನ್ನು ನಾವು ಬಯಸಬೇಕಿಲ್ಲ’ ಎಂದು ಎಲ್ಲರೂ ತಿಳಿದಿದ್ದರು.

Labels: Deendayal Upadhyaya, Election, Loss, Principles, Sangha Story, ಚುನಾವಣೆ, ದೀನದಯಾಳ ಉಪಾಧ್ಯಾಯ, ಸಂಘದ ಕಥೆ, ಸಿದ್ಧಾಂತ, ಸೋಲು

೧೦೩. ಬಂದೂಕಿನ ಗುಂಡಿಗೆ ಉತ್ತರ

ಬಂದೂಕಿನ ಗುಂಡಿಗೆ ಉತ್ತರ

   ಮೊಗ ಎನ್ನುವುದೊಂದು ಪಂಜಾಬಿನ ಜಿಲ್ಲಾ ಕೇಂದ್ರ. ಖಾಲಿಸ್ಥಾನದ ಬೇಡಿಕೆಯನ್ನಿಟ್ಟುಕೊಂಡು ಭಯೋತ್ಪಾದಕತೆ ಮುಗಿಲು ಮುಟ್ಟಿದಂತಹ ದಿನಗಳು. ಆಗ, ಮೋಗದ ಒಂದು ಶಾಖೆಯ ಮೇಲೆ ಖಾಲಿಸ್ಥಾನೀ ಭಯೋತ್ಪಾದಕರು ಬಂದೂಕಿನಿಂದ ದಾಳಿ ಮಾಡಿದರು. ಸುಮಾರು ೧೦-೧೨ ಸ್ವಯಂಸೇವಕರು ಸಂಘಸ್ಥಾನದಲ್ಲೇ ಉರುಳಿಬಿದ್ದರು. ಇನ್ನೊಂದಷ್ಟು ಜನ ಗಾಯಗೊಂಡರು. ಈ ರೀತಿ ಸಾವಿಗೀಡಾದವರನ್ನು ಮರಣೋತ್ತರ ಪರೀಕ್ಷೆಗೆ, ಗಾಯಗೊಂಡವರ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವು ತಕ್ಷಣ ನಡೆಯಿತು. ಇಡೀ ನಗರದ ಸ್ವಯಂಸೇವಕರು, ಜನರೂ, ಪೊಲೀಸರು ಬಂದು ವ್ಯವಸ್ಥೆಗಳನ್ನು ಮಾಡಿದರು.

    ಮರುದಿನ ಅದೇ ಸಮಯಕ್ಕೆ ಅದೇ ಸಂಘಸ್ಥಾನದಲ್ಲಿ ಸುಮಾರು ೨೦೦ ಸ್ವಯಂಸೇವಕರು ಒಂದು ಗಂಟೆ ಶಾಖೆ ನಡೆಸಿದರು. ಅವರೇನು ಬಂದೂಕು ತರಲಿಲ್ಲ. ಪೊಲೀಸರ ಬಳಿ ತಮ್ಮ ರಕ್ಷಣೆಗಾಗಿ ಕೇಳಲಿಲ್ಲ. ಸ್ವಯಂಸೇವಕರು ಮೌನವಾಗಿ ಬಂದರು, ಧ್ವಜ ಹಾಕಿದರು, ಅಲ್ಲಿ ಶಾಖೆ ನಡೆಸಿದರು, ಪ್ರಾರ್ಥನೆ ಮಾಡಿ ’ಭಾರತಮಾತಾ ಕಿ ಜಯ್’ ಎಂದು ಮುಗಿಸಿ ಹೋದರು. ಸಮಾಜ ಇದನ್ನು ನೋಡಿತು. ಭಯೋತ್ಪಾದಕರೂ ಇದನ್ನು ಬಹುಶಃ ನೋಡಿರಬೇಕು. ಸಂಘದ ಸ್ವಯಂಸೇವಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ. ಅವರು ಮೌನವಾಗಿ ಒಂದು ಉತ್ತರ ಕೊಟ್ಟರು ’ನಿಮ್ಮ ಬಂದೂಕಿನಿಂದ ನೀವು ನಮ್ಮ ಸಂಘದ ಶಾಖೆಯನ್ನು ಸಮಾಪ್ತ ಮಾಡಲಾರಿರಿ. ನಾವು ನಿಮ್ಮ ಭಯೋತ್ಪಾದಕತೆಗೆ ಹೆದರಿ ಬಾಲ ಮುದುರಿಕೊಂಡು ಹೋಗುವಂತಹ ಹಿಂದು ವೀರರಲ್ಲ. ನಾವು ನಿಮ್ಮ ಎದುರು ನಿಲ್ಲಬಲ್ಲೆವು. ನಿಮ್ಮ ಬಂದೂಕಿಗೆ ಉತ್ತರ ಕೊಡಬಲ್ಲೆವು’ ಎಂದು. ಅಲ್ಲಿ ಇನ್ನೊಮ್ಮೆ ದಾಳಿಯಾಗಲಿಲ್ಲ.

Labels: Moga, Punjab, Sacrifice, Shakha, Terrorist Attack, ಪಂಜಾಬ್, ಬಲಿ, ಭಯೋತ್ಪಾದಕರ ಗುಂಡು, ಮೊಗ, ಶಾಖೆ

೧೦೨. ಗುಣಗ್ರಾಹ್ಯತೆ

ಗುಣಗ್ರಾಹ್ಯತೆ

   ತಮಿಳುನಾಡಿನಲ್ಲಿ ಶಿವರಾಮ ಜೋಗಳೇಕರ್ ಎನ್ನುವ ಒಬ್ಬ ಪ್ರಚಾರಕರಿದ್ದರು. ಎಂ.ಎಸ್.ಸಿ.ಯಲ್ಲಿ ಚಿನ್ನದ ಪದಕ ತೆಗೆದುಕೊಂಡು ಪುಣೆಯಿಂದ ತಮಿಳುನಾಡಿಗೆ ಹೋದರು. ಮರಾಠಿಯವರಾದ ಅವರು ತಮಿಳುನಾಡಿಗೆ ಹೋಗಿ, ಜೀವನ ಪರ್ಯಂತ ಅಲ್ಲಿಯೇ ಪ್ರಚಾರಕರಾಗಿ ಇದ್ದು ಅಲ್ಲಿಯೇ ತೀರಿಕೊಂಡರು. ತಮಿಳು ಕಲಿತರು, ತಮಿಳರ ರೀತಿಯಲ್ಲಿ ವೇಷ ಧರಿಸಿದರು. ಅವರು ತಮಿಳರು ಅಲ್ಲ ಯಾರಿಗೂ ಅನ್ನಿಸಲೇ ಇಲ್ಲ. ಅಷ್ಟರ ಮಟ್ಟಿಗೆ ಅವರು ತಮಿಳರಾಗಿ ಹೋದರು. ಅವರು ಚೆನ್ನೈನಲ್ಲಿ ವಿಶೇಷವಾಗಿ ಎಷ್ಟು ಜನ ಸಜ್ಜನರಿದ್ದಾರೆ ಎಂದು ಹುಡುಕುತ್ತಾ ಹೋದರು. ಸಜ್ಜನರು ಬೇಕಾದಷ್ಟು ಜನ ಸಮಾಜದಲ್ಲಿದ್ದಾರೆ. ’ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸ ಮಾಡುವವರು ಯಾರು? ಯಾರು ಬಂದಿರುವಂತಹವರಿಗೆ ಆತ್ಮೀಯತೆಯಿಂದ ಕರೆದು ಕೆಲಸ ಮಾಡಿಕೊಡುತ್ತಾರೆ? ಈ ರೀತಿಯಿರುವವರನ್ನು ಹುಡುಕಿದರು’

    ಪತ್ರಿಕೆಗಳಲ್ಲಿ ಸಂಪಾದಕರಿಗೆ ಪತ್ರ ಬರೆದು ಸಮಾಜದ ಬಗ್ಗೆ ಕಳಕಳಿಯನ್ನು ತೋರಿಸುವವರ ಮನೆಗೆ ಅವರನ್ನು ಹುಡುಕಿಕೊಂಡು ಹೋದರು. ಅವರ ಮನೆ ಬಾಗಿಲು ತಟ್ಟಿದರು. ’ನೀವು ಪತ್ರಿಕೆಯಲ್ಲಿ ಈ ಪತ್ರ ಬರೆದಿರುವಿರಲ್ಲಾ?’ ಎಂದು ಕೇಳಿದರು. ’ಹೌದು, ಬರೆದಿದ್ದೇನೆ’ ಎಂದು ಉತ್ತರ ಬರುತ್ತಿತ್ತು. ಶಿವರಾಮರು ಅವರಿಗೆ ಧನ್ಯವಾದವನ್ನು ಹೇಳುತ್ತಿದ್ದರು. ಪತ್ರ ಬರೆದವರು ಆಶ್ಚರ್ಯದಿಂದ ಏಕೆ ಧನ್ಯವಾದ ಹೇಳುತ್ತಿದ್ದೀರೆಂದು ಕೇಳುತ್ತಿದ್ದರು. ಇವರು ’ನಿಮಗೆ ಸಮಾಜದ ಬಗ್ಗೆ ಕಳಕಳಿ ಇದೆ. ಅದಕ್ಕಾಗಿ ಐದು ರೂಪಾಯಿ ಖರ್ಚು ಮಾಡಿ ಪತ್ರ ಬರೆದಿದ್ದೀರಲ್ಲ, ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಹೇಳಲು ಬಂದೆ’ ಎಂದು ಉತ್ತರಿಸುತ್ತಿದ್ದರು. ಹೀಗೆ ಇನ್ನೊಬ್ಬರ ಗುಣವನ್ನು ಕಂಡುಹಿಡಿದು ಅವರನ್ನು ಜೋಡಿಸುವ ಕೆಲಸವನ್ನು ಶಿವರಾಮ ಜೋಗಳೇಕರ್ ಮಾಡಿದರು.

    ಒಬ್ಬ ಸ್ವಯಂಸೇವಕ ಮಾಡುವ ಕೆಲಸವೆಂದರೆ ಇದೇ. ಸಮಾಜದಲ್ಲಿ ಇರುವಂತಹವರ ಬಗ್ಗೆ ಹೊಟ್ಟೆಕಿಚ್ಚು ಪಡುವಂತಹುದಲ್ಲ - ’ಅಂತಹವರನ್ನು ಹೇಗಾದರೂ ಹಿಂದಕ್ಕೆ ತಳ್ಳಿ ನಾನು ಮುಂದಕ್ಕೆ ಹೋಗಬೇಕು’ ಎನ್ನುವುದಲ್ಲ. ಅಂತಹ ಸಜ್ಜನರನ್ನು ಶಾಖೆಗೆ ತರದೆಯೇ, ಶಿವರಾಮರು ಅಂತಹವರ ಒಂದು ವೇದಿಕೆ ಪ್ರಾರಂಭ ಮಾಡಿದರು. ನಂತರ ಎಲ್ಲರಿಗೂ ಗೊತ್ತಾಯಿತು, ಇದು ಸಂಘದ ಕೆಲಸ ಎಂದು. ಶಿವರಾಮರು ಮೊದಲನೇ ದಿನವೇ ತಾವು ಆರ್.ಎಸ್.ಎಸ್.ನವರು ಎಂದು ಹೇಳಲಿಲ್ಲ, ಅಥವಾ ಆರ್.ಎಸ್.ಎಸ್.ಗೆ ಬನ್ನಿ ಎಂದೂ ಹೇಳಲಿಲ್ಲ. ಹೀಗೆ ಗುಣಗ್ರಾಹ್ಯತೆ - ಇನ್ನೊಬ್ಬರಲ್ಲಿರುವಂತಹ ಸದ್ಗುಣವನ್ನು, ಒಳ್ಳೆಯ ನಡತೆಯನ್ನು ಗುರುತಿಸಿ ಅದನು ಮುಂದೆ ತರುವಂತಹುದು. ಸಮಾಜಕ್ಕೆ ಅಂತಹ ಗುಣವಿರುವವರು ಬೇಕು. ಸ್ವಯಂಸೇವಕ ಈ ರೀತಿ ಸಮಾಜದಲ್ಲಿರುವ ಸಜ್ಜನರನ್ನು ಗುರುತಿಸುವಂತಹವನು. 

Labels: Sangha Story, Shivaram Jogalekar, ಗುಣಗ್ರಾಹ್ಯತೆ, ಶಿವರಾಮ ಜೋಗಳೇಕರ್, ಸಂಘದ ಕಥೆ, ಸಜ್ಜನರ ಜೋಡಣೆ

೧೦೧. ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ

   ಒಮ್ಮೆ ಜವಹರಲಾಲ ನೆಹರುರವರು ಪ್ರಧಾನಮಂತ್ರಿಯಾಗಿದ್ದಾಗ,  ಒಬ್ಬ ಸ್ವಯಂಸೇವಕ ಐ.ಎ.ಎಸ್. ಅಧಿಕಾರಿಯಾಗಲು ಪರೀಕ್ಷೆ ಬರೆದ. ಅದರಲ್ಲಿ ಪಾಸಾದ. ಆ ಪರೀಕ್ಷೆಯ ಕೊನೆಯಲ್ಲಿ ಸಂದರ್ಶನವಿರುತ್ತದೆ. ಆ ಸಂದರ್ಶನದಲ್ಲಿ ಅವನು ಅರ್.ಎಸ್.ಎಸ್ ಸ್ವಯಂಸೇವಕ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆ ಸಮಯದಲ್ಲಿ ಅರ್.ಎಸ್.ಎಸ್.ನವರು ಗಾಂಧಿ ಹತ್ಯೆ ಮಾಡಿದವರು ಎನ್ನುವ ಆರೋಪವಿತ್ತು. ಆ ಕಾರಣದಿಂದ ಅವನ್ನು ಐ.ಎ.ಎಸ್.ಗೆ ಆಯ್ಕೆ ಮಾಡಲಿಲ್ಲ. ಈ ಸ್ವಯಂಸೇವಕನ ದೂರದ ಸಂಬಂಧಿಯೊಬ್ಬರು ಕಾಂಗ್ರೆಸ್‍ನಲ್ಲಿದ್ದರು. ಅವರು ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ಸ್ವಯಂಸೇವಕನನ್ನು ಕರೆದು ವಿಚಾರಿಸಿದರು. ಹೀಗಾಗಿರುವುದು ಸರಿಯಲ್ಲ ಎಂದು ಭಾವಿಸಿ ಅವರು ಅವನಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಲಹೆಕೊಟ್ಟರು.

    ಆ ಕಾಲದಲ್ಲಿ ಈಗಿನ ರೀತಿ ಅಷ್ಟು ಸೆಕ್ಯೂರಿಟಿಯ ಕಷ್ಟವಿರಲಿಲ್ಲ. ಎಷ್ಟಾದರೂ ಲೋಕಸಭಾ ಉಪಾಧ್ಯಕ್ಷರು ಹೇಳಿಕಳಿಸಿದ್ದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೆಹರುರವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಈ ಸ್ವಯಂಸೇವಕ ನೆಹರುರವರನ್ನು ಹೋಗಿ ಭೇಟಿ ಮಾಡಿದ. ಅವನ ಸಂಬಂಧಿಯಾದ ಲೋಕಸಭಾ ಉಪಾಧ್ಯಕ್ಷರೂ ನೆಹರುರವರ ಜೊತೆಯಲ್ಲಿ ಕುಳಿತಿದ್ದರು. ಆಗ ನೆಹರುರವರು ಕೇಳಿದರು ’ಈಗ ನಾನು ನಿನ್ನನ್ನು ಐ.ಎ.ಎಸ್.ಗೆ ಆಯ್ಕೆ ಮಾಡದೇ ಇದ್ದರೆ ಏನಾಗುತ್ತದೆ?’ ಎಂದು ಕೇಳಿದರು. ಆಗ ಈ ಸ್ವಯಂಸೇವಕ ಹೇಳಿದ 'The Government of India will lose an honest officer(ಸರ್ಕಾರವು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತ್ತದೆ)'. ಒಬ್ಬ ೨೨ ವರ್ಷದ ಯುವಕ ದೇಶದ ಪ್ರಧಾನಮಂತ್ರಿಯ ಎದುರು ಎಷ್ಟು ಧೈರ್ಯದಿಂದ ಹೇಳಿದ! ಅವನಿಗೆ ಎಂಥ ನಂಬಿಕೆ! ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ, ಎರಡೂ ಅವನಲ್ಲಿತ್ತು. ನೆಹರುರವರು ಅವನ ಮಾತನ್ನು ಕೇಳಿ ಅವನನ್ನು ಐ.ಎ.ಎಸ್. ಅಧಿಕಾರಿಯಾಗಿ ನೇಮಿಸಿದರು ಮತ್ತು ಐ. ಮಹಾದೇವನ್ ಎನ್ನುವ ಈ ಸ್ವಯಂಸೇವಕರು ಐ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದರು.

Labels: Confidence, Honesty, I.A.S, Nehru, Sangha Story, ಆತ್ಮವಿಶ್ವಾಸ, ಐ.ಎ.ಎಸ್, ನೆಹರು, ಪ್ರಾಮಾಣಿಕತೆ, ಸಂಘದ ಕಥೆ

೧೦೦. ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

ಚುನಾವಣೆಯಲ್ಲಿ ಜನಸಂಘಕ್ಕೆ ಸೋಲು

   ’ಶಂಕ‌ರ್ಸ್ ವೀಕ್ಲಿ’ ಎನ್ನುವ ಒಂದು ಇಂಗ್ಲೀಷ್ ಪತ್ರಿಕೆ ದೆಹಲಿಯಿಂದ ಹಿಂದೆ ಬರುತ್ತಿತ್ತು. ಲೇಖನಕ್ಕಿಂತ ಹೆಚ್ಚಾಗಿ ಮುಖ್ಯವಾಗಿ ವ್ಯಂಗ್ಯಚಿತ್ರಗಳದ್ದೇ ಪತ್ರಿಕೆ ಅದು. ಅದನ್ನು ಶಂಕರನ್ ನಾಯರ್ ಎನ್ನುವವರು ನಡೆಸುತ್ತಿದ್ದರು. ಆ ಪತ್ರಿಕೆ ಈಗಿಲ್ಲ. ೧೯೭೨ರ ಚುನಾವಣೆಯ ಸಂದರ್ಭ. ಜನಸಂಘವೂ ಆ ಚುನವಾಣೆಯಲ್ಲಿ ಭಾಗವಿಹಿಸಿತ್ತು. ಜನಸಂಘದ ಜನ ಸಂಘದ ಸ್ವಯಂಸೇವಕರೂ ಎನ್ನುವ ನಂಬಿಕೆ ಜನರಿಗೆ. ಆ ಕಾಲದಲ್ಲಿ ಆ ರೀತಿ ಇದ್ದದ್ದೂ ಹೌದು. ಅನೇಕ ಪಕ್ಷಗಳೂ ಇದ್ದವು. ಕಾಂಗ್ರೆಸ್ ಆ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ಉಳಿದ ಪಕ್ಷಗಳೆಲ್ಲಾ ತತ್ತರಿಸಿ ಹೋಗಿದ್ದವು. ಬಹುಶಃ ಮಹಾಮೈತ್ರಿಯ ೧೯೭೨ರ ಚುನಾವಣೆ ಅಂತ ಕಾಣಿಸುತ್ತೆ.

    ಮರುವಾರದ ಶಂಕ‌ರ್ಸ್ ವೀಕ್ಲಿ ಪತ್ರಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರ ಬಂದಿತು. ಅದೇನೆಂದರೆ, ಬೇರೆ ಬೇರೆ ಪಕ್ಷಗಳವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜನಸಂಘದವರು ಮಾತ್ರ ಗಣವೇಶ ಹಾಕಿಕೊಂಡು ಸಂಚಲನಕ್ಕೆ ಹೊರಟಿದ್ದಾರೆ. ಅವರಿಗೆ ಈಡೀ ದೇಶದಲ್ಲಿ ಎಲ್ಲ ಕಡೆಯೂ ಠೇವಣಿಯೇ ಹೋಗಿದೆ. ಆದರೂ ಅವರು ಏನೂ ತಿಳಿದುಕೊಳ್ಳಲಿಲ್ಲ. ಇದು ಆ ವ್ಯಂಗ್ಯಚಿತ್ರದಲ್ಲಿದ್ದದ್ದು. ಈ ವ್ಯಂಗ್ಯಚಿತ್ರ ಏನನ್ನು ಹೇಳುತ್ತದೆ. ಸೋಲು, ಗೆಲವುಗಳಿಂದ ಒಬ್ಬ ಸ್ವಯಂಸೇವಕ ನೆಲಕಚ್ಚೋದಿಲ್ಲ ಅಥವಾ ಮುಗಿಲಿಗೆ ಹಾರೋದಿಲ್ಲ. ಇದನ್ನು ಆ ವ್ಯಂಗ್ಯಚಿತ್ರ ಮಾರ್ಮಿಕವಾಗಿ ತೋರಿಸಿತು. ಸೋತಿರುವುದು ನಿಜ, ಆದರೆ ಸ್ವಯಂಸೇವಕರಿಗೆ ಇದರಿಂದ ಏನೂ ಅನ್ನಿಸಿಲ್ಲ. ಹೀಗೆ ಸಂಘದ ಸ್ವಯಂಸೇವಕರು ಯಶಸ್ಸು ಅಪಯಶಸ್ಸಿಗಾಗಿ ತಮ್ಮ ಮನಸ್ಸನ್ನು ಮುದುಡಿಕೊಳ್ಳುವುದಿಲ್ಲ.

Labels: Election, Jana Sangha, Sangha Story, Shankar's Weekly, ಚುನಾವಣೆ, ಜನಸಂಘ, ಶಂಕ‌ರ್ಸ್ ವೀಕ್ಲಿ, ಸಂಘದ ಕಥೆ, ಸೋಲು

೯೯. ಪರಿಪೂರ್ಣ ಸ್ವಯಂಸೇವಕ

ಪರಿಪೂರ್ಣ ಸ್ವಯಂಸೇವಕ

   ಡಾಕ್ಟರ್‌ಜಿಯವರು ಗಾಂಧೀಜಿಯವರನ್ನು ಭೇಟಿ ಮಾಡಿದರು. ವರ್ಧಾ ಶಿಬಿರಕ್ಕೆ ಗಾಂಧೀಜಿಯವರು ಬಂದಿದ್ದರು. ಡಾಕ್ಟರ್‌ಜಿಯವರು ಶಿಬಿರಕ್ಕೆ ಬರುವ ಹಿಂದಿನ ದಿನವೇ ಗಾಂಧೀಜಿಯವರು ಶಿಬಿರವನ್ನು ನೋಡಿಕೊಂಡು ಬಂದಿದ್ದರು. ಸ್ಥಾಪಕ ಯಾರೆಂದು ಅವರಿಗೆ ಗೊತ್ತಾಯಿತು. ಡಾ|| ಹೆಡಗೆವಾರರ ಹೆಸರನ್ನು ಕೇಳಿದ್ದರು, ಮೊದಲೂ ಭೇಟಿ ಮಾಡಿದ್ದರು. ೧೯೨೦ರ ಕಾಂಗ್ರೆಸ್ ಅಧಿವೇಶನದಲ್ಲೇ ಡಾಕ್ಟರ್‌ಜಿಯವರನ್ನು ಗಾಂಧೀಜಿಯವರು ನೋಡಿದ್ದರು. ಡಾ|| ಹೆಡಗೆವಾರರೆನ್ನುವವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ, ಅವರನ್ನು ನಾನು ಭೇಟಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಗಾಂಧೀಜಿಯವರು, ಡಾಕ್ಟರ್‌ಜಿಯವರು ಮರುದಿನ ಬಂದ ನಂತರ ಮತ್ತೆ ಶಿಬಿರಕ್ಕೆ ಹೋದರು. ಅವರ ಜೊತೆ ಇನ್ನೂ ಇಬ್ಬರಿದ್ದರು.

    ಮಾತುಕತೆಯಲ್ಲಿ ಗಾಂಧೀಜಿಯವರು ಡಾಕ್ಟರ್‌ಜಿಯವರನ್ನು ಕೇಳಿದರು ’ಈ ಸ್ವಯಂಸೇವಕ ಎನ್ನುವ ಕಲ್ಪನೆ ಏನು?’ ಎಂದು. ಆಗ ಡಾಕ್ಟರ್‌ಜಿಯವರು ಹೇಳಿದ ಒಂದು ವಾಕ್ಯ ಇದೆ. ’ದೇಶದ ಸರ್ವಾಂಗೀಣ ಉನ್ನತಿಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಣೆಯನ್ನು ಮಾಡುವುದಕ್ಕೆ ಸಿದ್ಧನಾಗಿರುವಂತಹ ಕಾರ್ಯಕರ್ತನನ್ನು ನಾವು ಸ್ವಯಂಸೇವಕನೆಂದು ಕರೆಯುತ್ತೇವೆ’ ಎಂದು ಡಾಕ್ಟರ್‌ಜಿಯವರು ಹೇಳಿದರು.

Labels: Doctorji, Gandhiji, Perfect Swayamsevak, Sangha Story, ಗಾಂಧೀಜಿ, ಡಾಕ್ಟರ್‌ಜಿ, ಪರಿಪೂರ್ಣ ಸ್ವಯಂಸೇವಕ, ಸಂಘದ ಕಥೆ