Monday, March 26, 2012

೧೨. ವೈದ್ಯನಾಗುವ ನಿಶ್ಚಯ

ವೈದ್ಯನಾಗುವ ನಿಶ್ಚಯ

    ಪರೀಕ್ಷೆಯ ನಂತರ ಕೇಶವ ನಾಗಪುರಕ್ಕೆ ಬಂದ. ಈಗ ಆತ ಎಲ್ಲರಿಗೂ ಆಕರ್ಷಣೆಯ ಕೇಂದ್ರ. ಅವನ ದೃಡ ಶರೀರ, ತೇಜಃಪುಂಜವಾದ ಮುಖಮುದ್ರೆ, ದೇಶಭಕ್ತಿಭರಿತ ವಿಚಾರಗಳು ಸಹಜವಾಗಿ ಜನರನ್ನು ಅವನತ್ತ ಸೆಳೆಯುತ್ತಿದ್ದವು. ಹೋದ ಹೋದಲೆಲ್ಲಾ ದೊಡ್ಡವರೂ ಅವನನ್ನು ಗೌರವಿಸತೊಡಗಿದರು. ಅವನೀಗ ಎಲ್ಲರ ನೆಚ್ಚಿನ ಕೇಶವರಾವ್ ಆಗಿದ್ದ.

    ಕೇಶವರಾಯರದು ಕಡು ಬಡ ಮನೆತನ. ಅವರಿಗೆ ಮುಂದೆ ಓದುವ ಇಚ್ಛೆ ಬಹಳವಿತ್ತು. ಆದರೆ ಹಣದ ಅಭಾವದಿಂದ ಅದು ಈಡೇರುವ ಸಂಭವ ಇರಲಿಲ್ಲ. ನಿತ್ಯ ಊಟಕ್ಕಾಗಿಯೇ ತಹತಹಿಸುವ ಮನೆಯಲ್ಲಿ ಓದಿಗೆಲ್ಲಿ ಹಣ ಬಂದೀತು?

    ಆದರೆ ಇಚ್ಛೆ ತೀವ್ರವಾಗಿದ್ದಲ್ಲಿ ದಾರಿ ತನ್ನಿಂತಾನೇ ದೊರೆಯುತ್ತದೆ. ಮಹಾಪುರುಷರು ಮನದಿಂದಲೇ ಎಲ್ಲವನ್ನೂ ಗೆಲ್ಲುತ್ತಾರೆ. ಧ್ಯೇಯ ಹಾಗೂ ದೃಢತೆ ಇರುವ ವ್ಯಕ್ತಿ ಸಿಕ್ಕಿರುವುದನ್ನಷ್ಟೇ ತಿಂದು ತೃಪ್ತನಾಗಿ ಆನಂದದಿಂದ ತನ್ನ ಮಾರ್ಗದಲ್ಲಿ ಮುನ್ನಡೆಯಬಲ್ಲ. ಒಂದು ಮುಷ್ಟಿ ಕಡಲೆ, ಒಂದು ಲೋಟ ನೀರು ಅಷ್ಟೇ ಅವನಿಗೆ ಸಾಕು. ಆ ದಿನಗಳಲ್ಲಿ ಕೇಶವರಾಯರ ಸ್ಥಿತಿಯಂತೂ ಹೀಗೆಯೇ ಇತ್ತು.

    ನಾಗಪುರದ ಶಾಲೆಯೊಂದರಲ್ಲಿ ಅವರು ಅಧ್ಯಾಪಕರಾಗಿ ಸೇರಿದರು. ಬೇರೆ ಸಮಯದಲ್ಲಿ ಅವರು ಪಾಠ ಹೇಳುತ್ತಿದ್ದರು. ಇವರೆಡರಿಂದ ಬರುವ ಹಣ ಅವರ ಕುಟುಂಬಕ್ಕೆ ತುಸು ಆಧಾರವಾಯಿತು. ಅದರಲ್ಲೂ ಸ್ವಲ್ಪ ಭಾಗ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಳಿಸತೊಡಗಿದರು.

    ಹೊಟ್ಟೆಪಾಡಿಗಾಗಿ ದುಡಿಯುವುದಷ್ಟೇ ಆಗ ಅವರ ಧ್ಯೇಯವಾಗಿರಲಿಲ್ಲ. ಅವರ ಮನಸ್ಸಿನಲ್ಲಿ ತಮ್ಮ ಜೀವನಧ್ಯೇಯ ಆಕಾರ ತಳೆಯತೊಡಗಿತ್ತು. ಅವರು ದೇಶದ ಪರಿಸ್ಥಿತಿ ಕುರಿತು ಚಿಂತಿಸುತ್ತಿದ್ದರು.

    ಅವರು ವಾಸವಾಗಿದ್ದುದು ನಾಗಪುರದ ಚಿಕ್ಕ ಮನೆಯೊಂದರಲ್ಲಿ. ಅವರ ಓಡಾಟವಿದ್ದುದು ನಾಗಪುರದ ಹಳೆಯ ಇಕ್ಕಟ್ಟಾದ ಬೀದಿಗಳಲ್ಲಿ. ಆದರೂ ಅವರ ಮನಸ್ಸು ಅವನ್ನೆಲ್ಲಾ ದಾಟಿ ಮೇಲೇರತೊಡಗಿತ್ತು. ಅವರನ್ನು ಕಾಡುತ್ತಿದ್ದ ದುಃಖ ತಮ್ಮ ಮನೆಯ ಬಡತನದ್ದಲ್ಲ. ಬದಲಾಗಿ ದೇಶದ ದಾರಿದ್ರ್ಯದ್ದು. ನವತರುಣ ಕೇಶವರಾವ್ ಸ್ವತಂತ್ರ ಭಾರತದ ಕನಸುಕಾಣುತ್ತಿದ್ದರು. ಭಾರತದ ಬಿಡುಗಡೆಗೆ ಹೇಗೆ ಮಾಡುವುದೆನ್ನುವುದೇ ಸದಾ ಅವರಿಗಿದ್ದ ಚಿಂತೆ. ನಾಲ್ಕು ಗೋಡೆಗಳ ನಡುವೆ ಇದ್ದು ಕಲಿಸುವುದಲ್ಲ. ಬದಲಾಗಿ ಇಡೀ ದೇಶಕ್ಕೆ ಅವರು ಕಲಿಸಬೇಕಿತ್ತು.

    ಲೋಕಮಾನ್ಯ ತಿಲಕರ ಅನುಯಾಯಿ ಡಾ|| ಬಾಲಕೃಷ್ಣ ಶಿವರಾಮ ಮೂಂಜೆ ಅವರು ಕೇಶವರಾಯರಿಗೆ ನಾನಾ ವಿಧದ ಸಹಾಯ ನೀಡಿದರು. ಅವರಿಂದ ಮಾರ್ಗದರ್ಶನ ಸಹ ದೊರೆಯಿತು. ಆಂಗ್ಲ ವೈದ್ಯಕೀಯ ಶಿಕ್ಷಣ ಪಡೆಯಲು ನಿರ್ಧರಿಸಿದ ಕೇಶವರಾಯರು ಡಾ|| ಮೂಂಜೆ ಅವರಿಂದ ಪರಿಚಯ ಪತ್ರ ಪಡೆದು ಕೆಲವೇ ದಿನಗಳಲ್ಲಿ ಕಲ್ಕತ್ತೆಗೆ ಹೋದರು.

No comments:

Post a Comment