Saturday, March 24, 2012

೬. ಆಂಗ್ಲರ ಆಡಳಿತ ವೈಖರಿ

ಆಂಗ್ಲರ ಆಡಳಿತ ವೈಖರಿ

    ಒಡಕು ಹುಟ್ಟಿಸುವುದೇ ಆಂಗ್ಲರ ನೀತಿ. ಪರಸ್ಪರ ಜಗಳ ಹುಟ್ಟಿಸಿ ತಾವು ಲಾಭ ಪಡೆಯುವುದು ಅವರ ರೀತಿ. ಈ ಕೆಟ್ಟ ಗುರಿ ಇರಿಸಿಕೊಂಡೇ ೧೯೦೫ರಲ್ಲಿ ಅವರು ಬಂಗಾಲ ಪ್ರಾಂತವನ್ನು ಎರಡಾಗಿ ಒಡೆಯುವ ನಿಶ್ಚಯ ಮಾಡಿದರು. ಇದರ ವಿರುದ್ಧ ಬಂಗಾಲದ ನಾಯಕರು ಜನಸಾಧಾರಣರನ್ನು ಬಡಿದೆಬ್ಬಿಸಿದರು. ಜನರೆಲ್ಲ ರೊಚ್ಚಿಗೆದ್ದರು. ಸಭೆ, ಮೆರವಣಿಗೆಗಳು ನಡೆಯತೊಡಗಿದವು. ’ಬಂಗಾಲ ತುಂಡರಿಸಲು ಬಿಡೆವು’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬಂಕಿಮಚಂದ್ರರ ವಂದೇ ಮಾತರಂ ಹಾಡು ರಾಷ್ಟ್ರಗೀತೆಯಾಯಿತು. ಆ ರಣಮಂತ್ರದ ಉಚ್ಛಾರ ಮಾತ್ರದಿಂದ ಎಲ್ಲೆಡೆ ನವಚೈತನ್ಯ ಸಂಚರಿಸತೊಡಗಿತು.

    ಈ ಆಂದೋಲನ ಕೇವಲ ಬಂಗಾಲದ್ದಾಗಿ ಉಳಿಯಲಿಲ್ಲ. ಭಾರತದ ಮೂಲೆ ಮೂಲೆಗಳಲ್ಲಿ ’ವಂದೇ ಮಾತರಂ’ ಪ್ರತಿಧ್ವನಿಸಿತು. ’ಬಂಗಾಲ ತುಂಡರಿಸಲು ಬಿಡೆವು. ಇದು ಕೇವಲ ಬಂಗಾಲದ ಪ್ರಶ್ನೆಯಲ್ಲ. ಇಡೀ ದೇಶದ್ದು. ’ವಂದೇ ಮಾತರಂ’, ’ಭಾರತ ಮಾತಾಕೀ ಜಯ್’ ಎಂದು ಜನರ ಧ್ವನಿ ಗುಡುಗತೊಡಗಿತು.

    ಘೋಷಣೆ ಕೇಳಿ ಆಂಗ್ಲ ಅಧಿಕಾರಿಗಳು ಹೌಹಾರಿದರು. ಆಂದೋಲನ ಬಗ್ಗು ಬಡಿಯಲು ದಮನ ಮಾರ್ಗ ಹಿಡಿದರು. "ಭಾರತ ಮಾತಾಕೀ ಜಯ್" - "ವಂದೇ ಮಾತರಂ" ಎಂದವರಿಗೆ ಕಠಿಣ ಶಿಕ್ಷೆ ಎಂಬ ಆದೇಶ ಹೊರಡಿಸಿದರು.

    ಆದರೆ ದೇಶಭಕ್ತಿಯ ಹೆದ್ದೆರೆಯನ್ನು ಅವರಿಂದ ತಡೆಯಲಾಗಲಿಲ್ಲ. ದೂರ ದೂರದ ಗ್ರಾಮಗಳನ್ನೂ ಅದು ತಲುಪಿತು. ಭಾವನಾಶೀಲ ಕೇಶವ ಇದರಿಂದ ಪ್ರಭಾವಿತನಾದ.

No comments:

Post a Comment