Saturday, March 24, 2012

೪. ಆ ಮಿಠಾಯಿ ತಿನ್ನುವುದು ಪಾಪ

ಆ ಮಿಠಾಯಿ ತಿನ್ನುವುದು ಪಾಪ

    ಸಿಹಿ ಎಂದರೆ ಮಕ್ಕಳಿಗೆ ಬಲು ಇಷ್ಟ. ಅನೇಕ ಹುಡುಗರು ಮಿಠಾಯಿಗಾಗಿ ಅತ್ತು, ಹಠ ಹಿಡಿಯುವರು. ಆದರೆ ಅಂದು ತನಗೆ ಸಿಕ್ಕಿದ ಮಿಠಾಯಿಯನ್ನು ಕೇಶವ ಚರಂಡಿಗೆ ಎಸೆದುದೇ ಒಂದು ಆಶ್ಚರ್ಯ.

    ಆಗ ನಮ್ಮ ದೇಶವನ್ನು ಆಳುತಿದ್ದವರು ಆಂಗ್ಲರು. ವಿಕ್ಟೋರಿಯಾ ಅವರ ರಾಣಿ. ಆಕೆಯ ಆಡಳಿತದ ಅರವತ್ತನೆಯ ವರ್ಷ ಬಹಳ ವಿಜೃಂಬಣೆಯಿಂದ ಅವರು ಆಚರಿಸುತ್ತಿದ್ದರು. ಹಿಂದುಸ್ಥಾನದಲ್ಲಿಯೂ ಸಹ  ಬಹಳ ವೈಭವದಿಂದ ಈ ಉತ್ಸವ ನಡೆಸುತ್ತಿದ್ದರು. ಎಲ್ಲೆಡೆ ಸಭೆ, ಸಮಾರಂಭ, ಔತಣ ಕೂಟಗಳು, ಬೀದಿ ಬೀದಿಗಳಲ್ಲಿ ತಳಿರು ತೋರಣಗಳ ಸಿಂಗಾರ, ರಾಣಿಯ ಭಾವಚಿತ್ರದ ಮೆರವಣಿಗೆ, ಶಾಲೆಗಳಲ್ಲೂ ಹುಡುಗರಿಗೆ ಸಿಹಿ ಹಂಚಲಾಯಿತು. ಕೇಶವನ ಶಾಲೆಯಲ್ಲಿಯೂ ಮಿಠಾಯಿ ಹಂಚಿದರು. ಎಳೆಯ ಕೇಶವನಿಗೂ ಸಿಕ್ಕಿತು. ಅದನ್ನು ಮುಟ್ಟುತ್ತಿದ್ದಂತೆಯೇ ಅವನಿಗೆ ಚೇಳು ಕುಟುಕಿದ ಅನುಭವ. ಅವನ ಎಳೆ ಮಿದುಳಿನಲ್ಲಿ ಭಾವನೆಗಳ ತಾಕಲಾಟ.

    ’ಆಂಗ್ಲರು ನಮ್ಮ ದೇಶವದರಲ್ಲ. ಧರ್ಮದವರಲ್ಲ. ಎಷ್ಟೋ ದೂರದಿಂದ ಬಂದವರು. ನಮ್ಮ ಮೇಲೆ ಆಡಳಿತ ನಡೆಸುತ್ತಿದ್ದಾರೆ. ನಮ್ಮನ್ನವರು ಗುಲಾಮರನ್ನಾಗಿಸಿದ್ದಾರೆ. ನಮ್ಮ ಶತ್ರುಗಳವರು. ಅವರ ರಾಣಿ ರಾಜ್ಯವಾಳುತ್ತಾ ಅರವತ್ತು ವರ್ಷವಾದರೆ ನಾವೇಕೆ ಉತ್ಸವ ಮಾಡಬೇಕು? ಮಿಠಾಯಿ ಏಕೆ ತಿನ್ನಬೇಕು? ಛಿಃ ಛಿಃ ಈ ಮಿಠಾಯಿ ತಿನ್ನುವುದೆಂದರೆ ಅವರ ದಾಸ್ಯ ಒಪ್ಪಿಕೊಂಡಂತೆ. ಅವರ ಗುಲಾಮತನದಲ್ಲಿಯೇ ಸಂತೋಷ ಕಂಡಂತೆ. ಈ ಸಿಹಿ ತಿನ್ನುವುದು ಪಾಪ. ಹಾಗೆ ಮಾಡುವುದು ನಮ್ಮ ದೇಶಕ್ಕೆ ದ್ರೋಹ ಬಗೆದಂತೆ. ಇಲ್ಲ, ನಾನೆಂದೂ ಅದನ್ನು ತಿನ್ನುವುದಿಲ್ಲ’

    ಭಾವನೆಗಳೆದ್ದು ಕೇಶವ ಉದ್ವಿಗ್ನನಾದ. ಕೈಯಲ್ಲಿದ್ದ ಮಿಠಾಯಿಯನ್ನು ಚರಂಡಿಗೆಸೆದ. ಜೊತೆಯವರಿಗೂ ತನ್ನ ವಿಚಾರ ತಿಳಿಸಿದ. ಆದರೆ ಅವರಿಗೆ ಅವನ ಮಾತಿನ ಅರ್ಥ ತಿಳಿಯಲಿಲ್ಲ.

    ಕೇಶವ ಮನೆಗೆ ಬಂದ. ಮುಖ ಉಗ್ರವಾಗಿತ್ತು. ’ಯಾಕೋ ಕೇಶವಾ ಸಿಟ್ಟಾಗಿದ್ದೀಯಾ? ಶಾಲೆಯಲ್ಲಿ ಮಿಠಾಯಿ ಹಂಚಿದರೆಂದು ಕೇಳಿದೆ. ನಿನಗೆ ಸಿಗಲಿಲ್ಲವೇ?’ ದೊಡ್ಡಣ್ಣ ಕೇಳಿದರು.

    ’ಸಿಗದೇ ಏನು? ನಾನದನ್ನು ಚರಂಡಿಗೆಸೆದೆ’ ಕೇಶವನೆಂದ.

    ಪಕ್ಕದಲ್ಲಿದ್ದ ನೆಂಟನೊಬ್ಬ ಕೇಳಿದ ’ಇದೇನು ಮಾತು? ಮಿಠಾಯಿಯನ್ನು ಎಲ್ಲಾದರೂ ಚರಂಡಿಗೆಸೆಯುವರೇ?’

    ಕೇಶವ ಚುಟುಮ್ಮನೆ ಉತ್ತರಿಸಿದ ’ಇದು ಮಿಠಾಯಿಯಲ್ಲಿ ವಿಷದ ತುಂಡು. ನಮ್ಮನ್ನು ಗುಲಾಮರನ್ನಾಗಿಸಿದವರ ರಾಣಿಯ ಉತ್ಸವದಲ್ಲಿ ನಾವು ಪಾಲ್ಗೊಳ್ಳುವುದೇ? ಇಂಥದೇ ಮಿಠಾಯಿ ಕೊಟ್ಟು ಕೊಟ್ಟು ಆಂಗ್ಲರು ನಮ್ಮನ್ನು ಸದಾ ಗುಲಾಮರನ್ನಾಗಿಡಲು ಬಯಸುವರು.’

    ಕೇಶವನ ಆವೇಶ ನೋಡಿ ಉಳಿದವರು ತೆಪ್ಪಗಾದರು. ಒಬ್ಬ ಹೇಳಿಯೇ ಬಿಟ್ಟ ’ಈ ಹುಡುಗ ಎಲ್ಲರಂತಲ್ಲ. ಇವನ ರಕ್ತವೇ ಬೇರೆ.’

No comments:

Post a Comment