Saturday, March 24, 2012

೨. ವಂಶ

ವಂಶ

     ಕುಂದಕುರ್ತಿ ಗ್ರಾಮ ಆಂಧ್ರಪ್ರದೇಶದ ಬೋಧನ ತಾಲ್ಲೂಕಿನಲ್ಲಿದೆ. ಅದು ನಿಜಾಮಾಬಾದ್ ಜಿಲ್ಲೆಗೆ ಸೇರಿದೆ. ಗೋದಾವರಿ, ಹರಿದ್ರಾ ಹಾಗೂ ಮಂಜೀರಾ ಈ ಮೂರು ನದಿಗಳ ಸಂಗಮಸ್ಥಾನ ಅದು. ಹೆಡಗೆವಾರರ ಪೂರ್ವಿಕರು ವಾಸವಾಗಿದ್ದದ್ದು ಇಲ್ಲಿಯೇ. ಈ ವಂಶ ಅಧ್ಯಯನ ಹಾಗೂ ಪಾಂಡಿತ್ಯಕ್ಕೆ ಹೆಸರುವಾಸಿ. ೧೮೦೦ರ ನಂತರ ಈ ವಂಶದ ಒಂದು ಕವಲು ನಾಗಪುರಕ್ಕೆ ಬಂತು. ಇದರಲ್ಲಿಯೇ ಕೇಶವ ಹುಟ್ಟಿದ್ದು.

     ಕೇಶವನ ತಂದೆ ಬಲಿರಾಮ್‍ಪಂತ್. ತಾಯಿ ರೇವತಿಬಾಯಿ. ಇಬ್ಬರು ಸೋದರರು, ಮೂವರು ಸೋದರಿಯರು. ಅವನಿಗೆ ದೊಡ್ಡಣ್ಣ ಮಹಾದೇವ, ಮಧ್ಯದವ ಸೀತಾರಾಮ, ಕೇಶವ ಎಲ್ಲರಿಗಿಂತ ಚಿಕ್ಕವ.

     ಪಂಡಿತ ಬಲಿರಾಮಪಂತರು ವಿದ್ವಾಂಸರು, ಅಗ್ನಿಹೋತ್ರಿಗಳು ವೇದಾಧ್ಯಯನ, ಅಧ್ಯಾಪನ ಮಾಡುತ್ತಿದ್ದರು. ಪೌರೋಹಿತ್ಯದಿಂದ ಅವರ ಕುಟುಂಬ ಬದುಕುತ್ತಿತ್ತು.

     ಹಿರಿಯ ಮಗ ಮಹಾದೇವಶಾಸ್ತ್ರಿ. ವಿದ್ವತ್ತು ಹಾಗೂ ಭುಜಬಲ ಎರಡರಲ್ಲೂ ಪ್ರಸಿದ್ಧರು. ಪ್ರತಿದಿನ ಅವರು ಗರಡಿ ಮನೆಗೆ ಹೋಗುತ್ತಿದ್ದರು. ಸಾವಿರ ಸಾವಿರ ದಂಡ, ಬೈಠಕ್ ಹೊಡೆಯುತ್ತಿದ್ದರು. ಮಲ್ಲಯುದ್ಧ (ಕುಸ್ತಿ) ಪ್ರವೀಣರು. ಮಲ್ಲಖಂಬದಲ್ಲಿ ಅವರಿಗೆ ಬಲು ಪ್ರೀತಿ. ತಮ್ಮ ಮೊಹಲ್ಲೆಯ ಹುಡುಗರನ್ನು ಗರಡಿ ಮನೆಗೆ ಒತ್ತಾಯದಿಂದಲೂ ಕರೆದೊಯ್ಯುತ್ತಿದ್ದರು. ಕುಸ್ತಿ, ಮಲ್ಲಖಂಬ ಕಲಿಸುತ್ತಿದ್ದರು.

     ಸ್ವಭಾವದಲ್ಲಿ ಅವರು ತುಂಬ ಉಗ್ರ. ಒಮ್ಮೆ ತಮ್ಮ ಮನೆಯ ಬಿಸಿಲು ಮಚ್ಚಿನಲ್ಲಿ ನಿಂತಿದ್ದರು. ಕೆಳಗೆ ರಸ್ತೆಯಲ್ಲಿ ಕೆಲವರು ಗೂಂಡಾಗಳಿದ್ದರು. ದಾರಿಯಲ್ಲಿ ಹೋಗುವ ಹೆಂಗಸೊಬ್ಬಳನ್ನು ಒಬ್ಬ ಚುಡಾಯಿಸಿದ. ಇದನ್ನು ಕಂಡ ಮಹಾದೇವಶಾಸ್ತ್ರಿಗಳು ಕೆರಳಿ ಕೆಂಡವಾದರು. ಅಲ್ಲಿಂದಲೇ ಕೂಗಿ ಕೆಳಗೆ ಜಿಗಿದರು. ಒಬ್ಬರೇ ಗೂಂಡಾಗಳೊಡನೆ ಹೋರಾಡಿದರು. ಅವರ ಪೆಟ್ಟಿನ ರುಚಿ ನೋಡಿದ ಗೂಂಡಾಗಳು ಕಾಲಿಗೆ ಬುದ್ಧಿ ಹೇಳಿದರು. ಮುಂದೆ ಆ ಮೊಹಲ್ಲೆಯಲ್ಲಿಯೇ ಅಂತಹ ಕೆಲಸಕ್ಕೆ ಯಾರೂ ಕೈಯಿಕ್ಕಲಿಲ್ಲ - ಇದು ಅವರ ಉಗ್ರ ಸ್ವಭಾವಕ್ಕ್ಕೆ ಒಂದು ಉದಾಹರಣೆ ಮಾತ್ರ. ನಗರದ ಆ ಭಾಗದಲ್ಲಿ ಅವರ ಹೆಸರಿಗೆ ಅಂತಹ ಪ್ರಭಾವ.

     ಕೇಶವನನ್ನು ಕಂಡರ ಮಹಾದೇವಶಾಸ್ತ್ರಿಗಳಿಗೆ ಬಹಳ ಪ್ರೀತಿ. ಅವನನ್ನು ತಮ್ಮೊದಿಗೆ ಪ್ರತಿದಿನ ಗರಡಿ ಮನೆಗೆ ಕರೆದೊಯ್ಯುತ್ತಿದ್ದರು. ದಂಡ, ಬೈಠಕ್, ಕುಸ್ತಿ ಮೊದಲಾದುದನ್ನು ಕಲಿಸುತ್ತಿದ್ದರು.

     ತಂದೆ ತಾಯಿಗಳ ಆಶ್ರಯ ಕೇಶವನ ಭಾಗ್ಯದಲ್ಲಿ ಬಹಳ ಕಾಲ ಇರಲಿಲ್ಲ. ೧೯೦೨ರಲ್ಲಿ ನಾಗಪುರದಲ್ಲಿ ಪ್ಲೇಗ್ ಹಬ್ಬಿತು. ಕಷ್ಟದಲ್ಲಿದ್ದವರಿಗೆ ಸಹಾಯ ನೀಡುವುದು ಪಂಡಿತ ಬಲಿರಾಮ ಪಂತರಿಗೆ ಹುಟ್ಟಿನಿಂದ ಅಂಟಿದ ಸ್ವಭಾವ. ಕೊನೆಗೊಮ್ಮೆ ಅವರೇ ಆ ಮಾರಿಗೆ ತುತ್ತಾದರು. ಪತ್ನಿ ರೇವತಿಬಾಯಿ ಸಹ ಬದುಕಿ ಉಳಿಯಲಿಲ್ಲ. ಒಂದೇ ದಿನದಲ್ಲಿ ಆ ದಂಪತಿಗಳನ್ನು ಪ್ಲೇಗ್ ಆಹುತಿ ಪಡೆಯಿತು. ಆಗ ಕೇಶವನ ವಯಸ್ಸು ಕೇವಲ ಹನ್ನೆರಡು ವರ್ಷ.

No comments:

Post a Comment