Saturday, March 24, 2012

೭. ಸೀಮೋಲ್ಲಂಘನ

ಸೀಮೋಲ್ಲಂಘನ

    ಅಕ್ಟೋಬರ್ ೧೯೦೭ರ ಒಂದು ಪ್ರಸಂಗ. ಲೋಕಮಾನ್ಯ ತಿಲಕರ ಸಿಂಹವಾಣಿ ಆಗ ಎಲ್ಲೆಡೆ ಮೊಳಗುತ್ತಿತ್ತು. ಸ್ವದೇಶ ಭಕ್ತಿಯದೇ ಗಾಳಿ ಬೀಸುತ್ತಿತ್ತು. ವಿಜಯದಶಮಿ ಹಬ್ಬಕ್ಕಾಗಿ ಕೇಶವ ರ್ವಿಜಯದಶಮಿ ಹಬ್ಬಕ್ಕಾಗಿ ಕೇಶವ ರಾಮಪಾಯಲಿಗೆ ಹೋಗಿದ್ದ. ಅವನ ಚಿಕ್ಕಪ್ಪ ಶ್ರೀ ಆಬಾಜಿ ಹೆಡಗೆವಾರ ವಾಸಿಸುತ್ತಿದ್ದ ಊರು ಅದು.

    ಹೋದಲ್ಲೆಲ್ಲ ತನ್ನ ಸಮವಯಸ್ಕರ ಮೇಲೆ ಪ್ರಭಾವ ಬೀರುವುದು ಕೇಶವನ ವಿಶೇಷತೆ. ಸ್ವಲ್ಪ ಸಮಯದಲ್ಲೇ ಅವರೆಲ್ಲ ಅವನ ಗೆಳೆಯರು ಅನುಯಾಯಿಗಳಾಗಿ ಬಿಡುತ್ತಿದ್ದರು. ರಾಮಪಾಯಲಿಯಲ್ಲಿಯೂ ಹೀಗೇ ಆಯಿತು. ಅಲ್ಲಿ ಅನೇಕ ಮಿತ್ರರು ಜೊತೆಗೂಡಿದರು. ಅವರೆಲ್ಲರೊಡನೆ ಮಾತುಕತೆ ನಡೆಸಿ ದಸರಾ ಉತ್ಸವದ ಯೋಜನೆ ತಯಾರಿಸಿದ.

    ಮಹಾರಾಷ್ಟ್ರದಲ್ಲಿ ದಸರಾ ಉತ್ಸವ ವಿಶೇಷ ಉತ್ಸಾಹದಿಂದ ಆಚರಿಸುತ್ತಾರೆ. ಅಂದು ಜನರೆಲ್ಲ ಹೊಸಬಟ್ಟೆ ತೊಟ್ಟು ಗ್ರಾಮದ ಗಡಿ ದಾಟಿ ಹೋಗಿ "ಸೀಮೋಲ್ಲಂಘನ" ಮಾಡುವರು. ಅಲ್ಲಿ ಶಮೀಪೂಜೆ ಆಗುತ್ತದೆ. ರಾವಣನ ವಿಗ್ರಹದ ದಹನ ನಡೆಯುತ್ತದೆ. ಶಮೀ ಮತ್ತು ವೃಕ್ಷರಾಜದ ಎಲೆಗಳನ್ನು ಅಂದು ’ಸೋನಾ’ (ಬಂಗಾರ) ಎನ್ನುವರು. ರಾವಣನನ್ನು ಕೊಂದು ಲಂಕೆಯಿಂದ ಬಂಗಾರವನ್ನು ಲೂಟಿ ಮಾಡಿ ತಂದಿರುವರೋ ಎಂಬಷ್ಟು ಉತ್ಸಾಹದಿಂದ ಜನರೆಲ್ಲ ಊರಿನಲ್ಲಿಲ ಮನೆಮನೆಗಳಿಗೆ ಹೋಗುವರು, ಹಿರಿಯರಿಗೆ ನಮಸ್ಕರಿಸಿ, ಆ ’ಬಂಗಾರ’ ನೀದಿ, ಮಿಠಾಯಿ ತಿಂದು ಹಬ್ಬ ಆಚರಿಸುವರು.

    ರಾಮಪಾಯಲಿಯಲ್ಲೂ ಸೀಮೋಲ್ಲಂಘನಕ್ಕಾಗಿ ಜನರೆಲ್ಲ ದಸರೆಯ ದಿನ ಹೊರಟರು. ಕೇಶವ ಹಾಗೂ ಅವನ ಮಿತ್ರರೂ ಮೆರವಣಿಗೆಯಲ್ಲಿದ್ದರು. ಪದ್ದತಿಯಂತೆ ಶಮೀ ಪೂಜೆಯಾಯಿತು. ಜನರೆಲ್ಲ ರಾವಣನ ಪ್ರತಿಮೆಯತ್ತ ಹೊರಟರು. ಕೇಶವನ ಕಂಚಿನ ಕಂಠದಿಂದ "ವಂದೇ ಮಾತರಂ" ಮೊಳಗಿತು. ತಕ್ಷಣವೇ ಅವನ ಮಿತ್ರರ ನೂರಾರು ಕಂಠಗಳೂ "ವಂದೇ ಮಾತರಂ"ಗೆ ದನಿಗೂಡಿಸಿದವು. ಒಮ್ಮಿಂದೊಮ್ಮೆಗೆ ಅಲ್ಲಿನ ವಾತಾವರಣವೇ ಬದಲಾಯಿತು. ಎಲ್ಲರೂ ತಮ್ಮ ಅಂತಃಕರಣದಲ್ಲಿ ಒಂದು ಹೊಸ ಹುಮ್ಮಸ್ಸಿನ ಅನುಭವ ಪಡೆದರು. ಮುಂದೆ ಇದ್ದ ಚಿಕ್ಕ ದಿನ್ನೆಯ ಮೇಲೆ ಏರಿ ನಿಂತ ಕೇಶವ ಆವೇಶದಿಂದ ಮಾತನಾಡತೊಡಗಿದ.

    ’ನಾವಿಂದು ಅನೇಕ ರೀತಿಯ ಗಡಿಗಳೊಳಗೆ ಬಂಧಿಸಲ್ಪಟ್ಟಿದ್ದೇವೆ. ಅವನ್ನೆಲ್ಲ ದಾಟಿ ಹೋಗುವುದು ನಮ್ಮ ಕರ್ತವ್ಯವಾಗಿದೆ. ಪಾರತಂತ್ರ್ಯ, ಹೇಡಿತನ, ಅಜ್ಞಾನ ಹಾಗೂ ಸ್ವಾರ್ಥ ಇತ್ಯಾದಿ ನಮ್ಮನ್ನು ಮುತ್ತಿವೆ. ನಾವದನ್ನು ತೊಡೆಯಬೇಕಾಗಿದೆ. ರಾವಣ ಅನ್ಯಾಯ, ದಬ್ಬಾಳಿಕೆ, ಕ್ರೂರ ಸಾಮ್ರಾಜ್ಯವಾದ ಹಾಗೂ ಕುಟಿಲ ರಾಜಕಾರಣಿಗಳ ಪ್ರತಿನಿಧಿ. ಅವನನ್ನು ನಾವಿಂದು ಸುಡಬೇಕಾಗಿದೆ. ಇದು ಪವಿತ್ರವಾದ ದೇಶಕಾರ್ಯ, ದೇವ ಕಾರ್ಯ. ಎಲ್ಲರು ಒಂದಾಗಿ ಹೇಳಿ "ವಂದೇ ಮಾತರಂ" "ಭಾರತ ಮಾತಾಕೀ ಜಯ್."
    ಜನರೆಲ್ಲ ಆವೇಶಭರಿತರಾದರು. ಕೇಶವ ಮತ್ತು ಅವನ ಅನುಯಾಯಿಗಳು ರಾವಣನನ್ನು ತುಂಡರಿಸಿ ಬೆಂಕಿ ಹಚ್ಚಿದರು. ಬೆಂಕಿ ಧಗಧಗಿಸಿತು.

    ಪ್ರಭು ಶ್ರೀರಾಮಚಂದ್ರ ಹಾಗೂ ಭಾರತಮಾತೆಯ ಜಯ ಜಯಕಾರ ಮಾಡುತ್ತ ಜನರೆಲ್ಲ ಮನೆಗೆ ತೆರಳಿದರು.

    ಆ ವರ್ಷ ರಾಮಪಾಲಿಯ ಜನರಿಗೆ ಸಿಕ್ಕಿದ್ದು ಕೇವಲ ಮರೆದೆಲೆಗಳ ಬಂಗಾರವಲ್ಲ. ಬದಲಾಗಿ ಹೊಸ ವಿಚಾರಗಳ ಬಂಗಾರ. ಅಲ್ಲಿಯ ಜನ ನಿಜಕ್ಕೂ ಆ ವರ್ಷ ಸೀಮೋಲ್ಲಂಘನ ಮಾಡಿದ್ದರು.

No comments:

Post a Comment