Sunday, March 25, 2012

೯. ಅಂಧ ಕಾನೂನನ್ನು ಕಿತ್ತೆಸೆಯಿರಿ

ಅಂಧ ಕಾನೂನನ್ನು ಕಿತ್ತೆಸೆಯಿರಿ

    ಈ ಘಟನೆಯ ನಂತರ ಕೇಶವ ಕೆಲವು ದಿನ ನಾಗಪುರದಲ್ಲಿಯೇ ಇದ್ದ. ಅಕ್ಕಪಕ್ಕದವರು, ನೆಂಟರಿಷ್ಟರು ಪುನಃ ಶಾಲೆಗೆ ಹೋಗುವಂತೆ ಉಪದೇಶಿಸ ತೊಡಗಿದರು. "ಅದರಲ್ಲೇನು ಮಹಾ. ಕ್ಷಮೆ ಕೇಳು, ಶಾಲೆಗೆ ಹೋಗು" ಓರ್ವನೆಂದ.

    "ಏಕೆ? ನಾನೇನು ತಪ್ಪು ಮಾಡಿದೆನೆಂದು ಕ್ಷಮೆ ಕೇಳಲಿ?" ಕೇಶವನೆಂದ.

    "ವಂದೇ ಮಾತರಂ ಹೇಳಲಿಲ್ಲವೇ? ಬೇರೆಯವರಿಗೆ ಹೇಳಲು ಕಲಿಸಲಿಲ್ಲವೇ? ಅದು ಅಪರಾಧವಲ್ಲವೇ?"

    "ನಮ್ಮ ತಾಯಿಗೆ ವಂದಿಸುವುದೂ ಅಪರಾಧವೇ?" ಕೇಶವನ ಪ್ರಶ್ನೆ ಈಗ ಒಂದು ಕೆಂಡಮಂಡಲದಂತೆ.

    "ಹೌದು, ಕಾನೂನಿನಂತೆ ಅದು ಅಪರಾಧ’. ಕೇಶವ ಧೃಡಸ್ವರದಲ್ಲಿ ಮಾರುತ್ತರ ಕೊಟ್ಟಾ "ನಾನು ಅಂಥ ಕಾನೂನನ್ನು ಒಪ್ಪುವುದಿಲ್ಲ. ಅಂಥ ಅನ್ಯಾಯದ ಕಾನೂನುಗಳನು ಕಿತ್ತೆಸೆಯಬೇಕು ನಾವು."

    ಕೇಶವನ ತೇಜಸ್ವಿ ಶಬ್ದಗಳನ್ನು ಕೇಳಿದ ಅವರೆಲ್ಲರಿಗೆ ದಂಗುಬಡಿದಂತಾಯಿತು.

    "ಅಯ್ಯಾ, ಇಂಥ ಹುಡುಗರೊಡನೆ ಮಾತನಾಡದಿರುವುದೇ ವಾಸಿ. ನಿಮಗೂ ಬಾಯಿಗೆ ಬಂದಂತೆ ಮಾತನಾಡುವವರು ಇವರು’ ಅವರಲ್ಲಿ ಒಬ್ಬನೆಂದ.

    "ಅಯ್ಯೋ, ಈಗಿ ಹುಡುಗರು ಎಲ್ಲಿಂದಲೋ ಏನೋ ಕಲಿತು ಬಾಯಿಗೆ ಬಂದಂತೆ ಮಾತನಾಡುವರು" ಮತ್ತೊಬ್ಬ ತನ್ನ ನಿರ್ಣಯವಿತ್ತ.

    ಕೇಶವನಿಗೆ ಎಲ್ಲರಿಂದಲೂ ಇದೇ ಉಪದೇಶ. ಅವನ ಉತ್ತರ ಅಷ್ಟೇ ಸ್ಪಷ್ಟ.

    ಕೇಶವನನ್ನು ಕೆಲದಿನಗಳಿಗೆ ರಾಮಪಾಯಲಿಗೆ ಕಳಿಸಿದರು. ಅಲ್ಲಿ ಅವನ ಚಿಕ್ಕಪ್ಪನ ಸ್ನೇಹಿತರು "ಕೇಶವ, ನೀನಿನ್ನೂ ಚಿಕ್ಕವ. ಈ ವಯಸ್ಸಿನಲ್ಲಿ ಕಲಿಯುವ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ದೇಶಭಕ್ತಿಯ ಉದ್ಯೋಗವನ್ನೇಕೆ ಕೈಗೊಂಡಿರುವೆ" ಎನ್ನತೊಡಗಿದರು.

    ಕೇಶವ ಚುರುಕಾಗಿಯೇ ಉತ್ತರಿಸಿದ - "ನಿಮ್ಮಂಥವರು ಅದನ್ನು ನನಗೆ ಕಲಿಸಲಿಲ್ಲ. ನಾನೇ ಮಾಡಬೇಕಾಯಿತು. ವಿದ್ಯೆ ಕಲಿತ ಮೇಲೆ ಎಷ್ಟು ಜನ ದೇಶಹಿತ ಗಮನಿಸುವರು? ನಿಮಗೀಗ ವಯಸ್ಸಾಗಿದೆಯಲ್ಲಾ. ನೀವೇಕೆ ದೇಶಸೇವೆಯ ವ್ರತ ಕೈಗೊಂಡಿಲ್ಲ? ನೀವೇ ಈ ಕೆಲಸ ಮಾಡಿ. ಆಗ ನಾನು ಶಾಲೆಗೆ ಹೋಗಿ ಕಲಿಯುತ್ತೇನೆ."

    ಈಗ ಅವರೆಲ್ಲ ನಿರುತ್ತರ. ಈ ಹುಡುಗ ಅಸಾಮಾನ್ಯ ಎಂದು ಅವರಿಗೆ ತಿಳಿಯಿತು. ಎಷ್ಟು ಹೇಳಿದರೂ ಅವನ ಕೇಳನೆಂಬುದು ಖಾತ್ರಿಯಾಯಿತು.

No comments:

Post a Comment