Sunday, March 25, 2012

೧೧. ಯವತಮಾಳದ ಶಾಲೆಯಲ್ಲಿ

ಯವತಮಾಳದ ಶಾಲೆಯಲ್ಲಿ

    ವಿದರ್ಭ ಪ್ರಾಂತದ ಯವತಮಾಳ ಆ ದಿನಗಳಲ್ಲಿ ಕ್ರಾಂತಿಕಾರಿಗಳ ಕೇಂದ್ರ. ಲೋಕನಾಯಕ ಆಣೆ (ಬಾಪೂಜಿ ಆಣೆ) ಅಲ್ಲಿಯೇ ಇದ್ದರು. ಕೇಶವ ನೇರ ಅವರ ಬಳಿ ಬಂದ. ಅವರ ಮನೆಯಲ್ಲಿಯೇ ವಾಸ. ಅಲ್ಲಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಆರಂಭವಾಯಿತು.

    ಬಾಬಾಸಾಹೇಬ ಪರಾಂಜಪೆ ಯವತಮಾಳ ರಾಷ್ಟ್ರೀಯ ವಿದ್ಯಾಲಯದ ಸಂಚಾಲಕರು. ಅವರ ತ್ಯಾಗಮಯ ಜೀವನ ಕಂಡ ಜನರು ಅವರನ್ನು ತಪಸ್ವಿಗಳೆನ್ನುತ್ತಿದ್ದರು. ಅವರು ಹಳ್ಳಿ ಹಳ್ಳಿ, ಮನೆ ಮನೆ ತಿರುಗಿ ಚಂದಾ ಕೂಡಿಸಿ ಕಟ್ಟಿಸಿದ ಶಾಲೆ ಅದು. ಅನೇಕ ರೈತರು ಸುಗ್ಗಿಯಲ್ಲಿ ಧಾನ್ಯ ಕೊಡುತ್ತಿದ್ದರು. ರಾಷ್ಟ್ರಸೇವೆಯ ಹಂಬಲ ಹೊತ್ತ ಕೆಲ ಯುವಕರು-ವಿದ್ಯಾವಂತರು - ಅವರೊಡನೆ ಸೇರಿದರು. ಉಚಿತ ಪಾಠ ಪ್ರವಚನ ಆರಂಭಿಸಿದರು. ವಿದ್ಯಾರ್ಥಿಗಳಿಗೆ ಮಾನವತೆಯ ಪಾಠ ಸಿಗತೊಡಗಿತು. ಶೀಲ ತುಂಬಿ ಮಾನವ ಜೀವನವನ್ನು ಸಾರ್ಥಕಗೊಳಿಸುವ ಧರ್ಮವನ್ನು ಅಲ್ಲಿ ಕಲಿಸತೊಡಗಿದರು. ’ವಿದ್ಯಾಗೃಹ’ ಅದರ ಹೆಸರಾಯಿತು. ಕೇಶವ ಅಲ್ಲಿ ಸೇರಿದ.

    ಹನ್ನೊಂದರಿಂದ ಐದರವರೆಗೆ ಶಾಲೆ. ಬಾಪೂಜಿ ಆಣೆಯವರ ಮನೆಯ ಮಧ್ಯಾಹ್ನದ ಊಟ ತಡವಾಗುತ್ತಿತ್ತು. ಹೀಗಾಗಿ ಎಷ್ಟೋ ದಿನ ಕೇಶವ ಮಧ್ಯಾಹ್ನದ ಊಟವಿಲ್ಲದೇ ಶಾಲೆಗೆ ಹೋಗಬೇಕಾಗುತ್ತಿತ್ತು. ಆದರೆ ಆತ ಸದಾ ಹಸನ್ಮುಖಿ. ಅಧ್ಯಯನಕ್ಕೆ ಹಸಿವು ಎಂದೂ ಅಡ್ಡಿ ಬರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅಭ್ಯಾಸ ತಪ್ಪಿತ್ತು. ಅದಕ್ಕಾಗಿ ಹೆಚ್ಚು ಓದಬೇಕಿತ್ತು. ರಾತ್ರಿ ಬಹು ಹೊತ್ತು ಓದುತ್ತಿದ್ದ. ಆದರೂ ಬೆಳಿಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದ. ರಾಷ್ಟ್ರೀಯ ವಿಚಾರವುಳ್ಳ ಪತ್ರಿಕೆಗಳನ್ನು ತಪ್ಪದೆ ನಿತ್ಯ ಓದುತ್ತಿದ್ದ.

    ಬಾಬಾಸಾಹೇಬ ಪರಾಂಜಪೆ ಅವರ ವ್ಯಕ್ತಿತ್ವ ತುಂಬ ಉನ್ನತ. ಅವರ ಸಹವಾಸದಿಂದ ಕೇಶವನ ಹೃದಯದಲ್ಲಿ ಸದ್ಗುಣಗಳ ಸುಂದರ ಹೂವುಗಳು ಅರಳಿ ಘಮಘಮಿಸತೊಡಗಿದವು. ಅಧ್ಯಾಪಕರು ಮನಸ್ಸಿಟ್ಟು ಕಲಿಸುತ್ತಿದ್ದರು. ವಿದ್ಯಾರ್ಥಿಗಳೂ ಗಮನವಿಟ್ಟು ಕಲಿಯುತ್ತಿದ್ದರು. ಆ ವಿದ್ಯಾಲಯದ ಕೀರ್ತಿ ಎಲ್ಲೆಡೆ ಹರಡಿತು. ಹಳ್ಳಿ ಹಳ್ಳಿಗಳಿಂದ ಜನ ಅದಕ್ಕೆ ಸಹಾಯ ನೀಡಲು ಮುಂದಾದರು. ಧನ, ಧಾನ್ಯ ಇತ್ಯಾದಿ ಎಲ್ಲ ರೀತಿಯ ನೆರವು ಹರಿದುಬರತೊಡಗಿತು. ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಲಾರಂಭಿಸಿತು. ಆ ಶಾಲೆ ರಾಷ್ಟ್ರೀಯ ಜಾಗರಣದ ಕೇಂದ್ರವಾಯಿತು. ಅನೇಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಬಿಡಿಸಿ ರಾಷ್ಟ್ರೀಯ ವಿದ್ಯಾಲಯಕ್ಕೆ ಸೇರಿಸತೊಡಗಿದರು.

    ಈ ವಿದ್ಯಾಲಯದ ಪ್ರಗತಿ ಆಂಗ್ಲ ಅಧಿಕಾರಿಗಳ ಕಣ್ಣು ಕುಕ್ಕಿತು. ಅವರ ದಮನಚಕ್ರ ಅದರತ್ತ ತಿರುಗಿತು. ಆ ಶಾಲೆಯ ಮಕ್ಕಳ ತಂದೆ ತಾಯಿಗಳನ್ನು ವಿನಾಕಾರಣ ಸತಾಯಿಸತೊಡಗಿದರು. ಬಾಬಾಸಾಹೇಬ ಪರಾಂಜಪೆಯವರಿಗೆ ಎಲ್ಲ ರೀತಿಯ ದಿಗ್ಬಂಧನ ಹಾಕಲಾಯಿತು. ಅವರು ಭಾಷಣ ಮಾಡುವುದು ಅಪರಾಧವೆನಿಸಿತು. ಬೇರೆ ಅಧ್ಯಾಪಕರನ್ನೂ ಹೆದರಿಸತೊಡಗಿದರು. ತಪಸ್ವಿ ಪರಾಂಜಪೆ ಮತ್ತು ಅವರ ಸಹಕಾರಿಗಳು ಅನೇಕ ದಿನಗಳವರೆಗೆ ಈ ರೀತಿಯ ಕಷ್ಟ ಪರಂಪರೆಗಳನ್ನು ಸಹಿಸಿದರು. ಕೊನೆಗೆ ೧೯೦೯ರಲ್ಲಿ ಆ ಶಾಲೆಯೇ ಮುಚ್ಚಲ್ಪಟ್ಟಿತು. ಆಗ ಕೇಶವ ಅನಿವಾರ್ಯವಾಗಿ ಯವತಮಾಳ ಬಿಡಬೇಕಾಯಿತು. ಆದರೆ ಆತ ಧೈರ್ಯಗೆಡಲಿಲ್ಲ. ನೇರವಾಗಿ ಪುಣೆ ತಲುಪಿದ. ಅಲ್ಲಿ ತನ್ನ ಶಿಕ್ಷಣ ಪೂರೈಸುವ ನಿಶ್ಚಯ ಮಾಡಿದ. ಎರಡು ತಿಂಗಳು ಶಂಕರಮಠ ಅವನ ತಾಣವಾಯಿತು. ಹಗಲುರಾತ್ರಿ ಎಡಬಿಡದೆ ಓದಿದ. ಪರೀಕ್ಷೆಗಾಗಿ ಅಮರಾವತಿಗೆ ಹೋದ. ಆ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಆತ ಪಾಸಾದ.

No comments:

Post a Comment