Sunday, March 25, 2012

೧೦. ದಿಗಿಲೋ ದಿಗಿಲು

ದಿಗಿಲೋ ದಿಗಿಲು

    ಅಂದು ರಾಮಪಾಯಲಿಯಲ್ಲಿ ಭಾರೀ ದೊಡ್ಡ ಗಲಾಟೆ. ರಾತ್ರಿ ಒಂಭತ್ತು ಹೊಡೆದಿರಬಹುದು. ಸ್ಟೇಷನ್‍ನಲ್ಲಿ ಪೊಲೀಸರು ಯಾವುದೋ ಹರಟೆ ಕೊಚ್ಚುತ್ತಿದ್ದರು. ಇದ್ದಕ್ಕಿದ್ದಂತೆ ದೊಡ್ಡದೊಂದು ಶಬ್ದ. ಎಲ್ಲ ಬೆಚ್ಚಿದರು.

    ಪೊಲೀಸರಿಗೆ ದಿಗಿಲು. ಏನು, ಏಕೆ, ಹೇಗೆ, ಯಾವುದೂ ತಿಳಿಯದು. ಠಾಣೆಯ ಹೊರಬಾಗಿಲಿನಲ್ಲಿ ಒಂದು ರಂಧ್ರ ಬಿದ್ದಿತ್ತು. ಹತ್ತಿರದಲ್ಲೇ ಕೆಳಗೆ ಕರಟ. ತಾಮ್ರ, ಉಕ್ಕಿನ ಚೂರುಗಳು, ಸುಟ್ಟ ವಾಸನೆ ಬಡಿಯುತ್ತಿತ್ತು. ಅಕ್ಕಪಕ್ಕದ ಮನೆಮಂದಿಯೆಲ್ಲ ಭಯಭೀತರಾಗಿ ಹಣಕತೊಡಗಿದರು. ಪೊಲೀಸು ಅಧಿಕಾರಿಗಳು ಬಂದರು. ಬಿರುಸಿನ ಓಡಾಟ ಆರಂಭವಾಯಿತು.

    ಈ ಸುದ್ದಿ ಬಹು ಬೇಗನೆ ಹರಡಿತು. ಎಲ್ಲೆಡೆ ಬಹಿರಂಗ ಚರ್ಚೆ. ಗುಸುಗುಸು.

    "ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಏನು ಶಬ್ದ? ಯಾರಾದರೂ ಶಿಕಾರಿಗೆ ಬಂದಿದ್ದರೇನೆ?" ಒಬ್ಬನ ಪ್ರಶ್ನೆ.

    ನಿಂಗೊತ್ತಿಲ್ವಾ? ನಿನ್ನೆ ರಾತ್ರಿ ಯಾರೋ ಠಾಣೆಯ ಮೇಲೆ ಬಾಂಬೆಸೆದರು. ಎಷ್ಟು ಹುಡುಕಿದರೂ ಯಾರೆಂದು ತಿಳಿದಿಲ್ಲ" ಇನ್ನೊಬ್ಬನ ಉತ್ತರ.

    ’ರಾಮಪಾಯಲಿಗೆ ಯಾರಾದರೂ ಕ್ರಾಂತಿಕಾರಿ ಬಂದಿರಬಹುದೇ?’

    ’ನಿಧಾನ ಮಾತನಾಡಪ್ಪಾ, ಯಾರಾದರೂ ಕೇಳಿದರೆ ಸುಮ್ಮನೇ ಕಷ್ಟಕ್ಕೆ ಸಿಲುಕುವೆ.’

    ಎಲ್ಲರಿಗೂ ಭಯ. ಜನರಲ್ಲಿ ಪರಸ್ಪರ ಭೇಟಿ, ಮಾತುಕತೆ ಎಲ್ಲ ನಿಂತು ಹೋಯಿತು. ಕೆಲವರನ್ನು ಪೊಲೀಸರು ಹಿಡಿದರು, ಹೊಡೆದರು, ಬಡಿದರು. ಆದರೆ ಗುಟ್ಟು ಮಾತ್ರ ಬಯಲಾಗಲಿಲ್ಲ.

    ಯಾರೂ ಹೇಳದೇ ಇದ್ದರೂ ಆಬಾಜಿ ಹೆಡಗೆವಾರರಿಗೆ ಇದು ಕೇಶವನದೇ ಕೆಲಸ ಎಂದು ಖಾತ್ರಿಯಾಯಿತು. ಪೊಲೀಸರಿಗೆ ಅನುಮಾನ ಮೂಡುವುದರೊಳಗೇ ಅವನನ್ನು ನಾಗಪುರಕ್ಕೆ ವಾಪಸ್ ಕಳಿಸಿದರು. ಕೇಶವ ಸ್ವಲ್ಪ ದಿನಗಳಲ್ಲಿಯೇ ನಾಗಪುರವನ್ನೂ ಬಿಟ್ಟ. ಡಾ|| ಮೂಂಜೆಯವರ ಪರಿಚಯಪತ್ರದೊಡನೆ ಯವತಮಾಳ ಸೇರಿದ.

No comments:

Post a Comment