Saturday, March 24, 2012

೩. ಚುರುಕು ಬುದ್ಧಿಯ ಬಾಲಕ

ಚುರುಕು ಬುದ್ಧಿಯ ಬಾಲಕ

    ಕೇಶವ ಬಹಳ ಬುದ್ಧಿವಂತ. ಅವನ ನೆನಪಿನ ಶಕ್ತಿ ಅಸಾಧಾರಣವಾದುದು. ರಾಮರಕ್ಷಾ ಸ್ತೋತ್ರ ಹಾಗೂ ಸಮರ್ಥ ರಾಮದಾಸರ ಮನೋಬೋಧದ ಶ್ಲೋಕಗಳನ್ನು ಬಹಳ ಬೇಗ ಕಲಿತ. ಅವನು ಗೀತೆಯ ಶ್ಲೋಕಗಳನ್ನು ತನ್ನ ಮಧುರ ಕಂಠದಿಂದ ಶುದ್ಧವಾಗಿ ಹೇಳುವುದನ್ನು ಕೇಳಿ ದೊಡ್ಡವರೂ ತಲೆದೂಗುತ್ತಿದ್ದರು. ತನ್ನ ಅಣ್ಣಂದಿರೊಡನೆ ಅವನು ರಾಮಾಯಣ, ಭಾರತ ಕೇಳಲು ಹೋಗುತ್ತಿದ್ದ. ಗಮನವಿಟ್ಟು ಕೇಳುತ್ತಿದ್ದ. ಪ್ರತಿ ಕಥೆಗಳ ನೀತಿ ಆಗಲೇ ಗ್ರಹಿಸುತ್ತಿದ್ದ. ಛತ್ರಪತಿ ಶಿವಾಜಿ ಮಹಾರಾಜರ ಕಥೆಗಳನ್ನು ಕೇಳುವುದರಲ್ಲಿ ಬಹಳ ಆಸಕ್ತಿ ಅವನಿಗೆ. ಅವನ್ನು ಕೇಳುತ್ತಾ ಕೇಳುತ್ತಾ ತನ್ಮಯನಾಗುತ್ತಿದ್ದ.

    ಒಮ್ಮೆ ಕೇಶವನ ನೆಂಟರೊಬ್ಬರು ಬಂದರು. ಅವರು ಕಥೆ ಹೇಳುವುದರಲ್ಲಿ ನಿಸ್ಸೀಮರು. ಶಿವಾಜಿಯ ಬಾಲ್ಯದ ಕಥೆಯನ್ನು ಹೇಳುತ್ತಿದ್ದರು. ಕೇಶವ ಕಥೆ ಕೇಳುತ್ತಾ ಅದರಲ್ಲಿಯೇ ಮೈಮರೆತ. ಕಥೆ ಮುಗಿಯಿತು. ಕೇಳುತ್ತಾ ಕುಳಿತಿದ್ದ ಉಳಿದ ಹುಡುಗರು ಅತ್ತಿತ್ತ ಹೊರಟರು. ಆದರೆ ಕೇಶವ ಮಾತ್ರ ಮೇಲೇಳಲಿಲ್ಲ. ಅವನು ಶಿವಾಜಿಯ ಕಾಲ ತಲುಪಿದ್ದ. ಕಥೆ ಅವನ ಕಣ್ಣ ಮುಂದೆ ಜೀವ ತಳೆದಿತ್ತು. ಶಿವಾಜಿಯ ತಂದೆ ಶಹಾಜಿ ಬಾಲಕ ಶಿವಬಾನನ್ನು ಬಿಜಾಪುರದ ದರಬಾರಿಗೆ ಕರೆದೊಯ್ದರು. ’ಮಗೂ, ಬಾದಷಹರಿಗೆ ನಮಸ್ಕರಿಸು’ ಎಂದು ಶಹಜಿ ಹೇಳಿದರು. ಶಿವಬಾ ಚುತುಮ್ಮನೆ ಉತ್ತರಿಸಿದ - ’ಇಲ್ಲ. ಎಂದೂ ಸಾಧ್ಯವಿಲ್ಲ. ಈತ ನಮ್ಮ ದೇಶ, ನಮ್ಮ ಧರ್ಮದವನಲ್ಲ. ಇವನಿಗೆ ನಾನೆಂದೂ ತಲೆಬಾಗಿಸೆನು.’

    ಇದೇ ವೇಳೆ ಯಾರೋ ಕೇಶವನನ್ನು ಕರೆದರು. ಅವನಿಂದ ಉತ್ತರಿಸಲು ಸಾಧ್ಯವಾಗಲಿಲ್ಲ. ಕೇಶವ ಇತಿಹಾಸ ಕಾಲದಿಂದ ವರ್ತಮಾನಕ್ಕೆ ಬಂದುದು ಅವರು ಹತ್ತಿರ ಬಂದು ಭುಜ ಅಲುಗಿಸಿದಾಗಲೇ. ಆ ಎಳೆಯ ವಯಸ್ಸಿನಲ್ಲಿಯೇ ಕೇಶವನ ಮನಸ್ಸಿನಲ್ಲಿ ದೇಶದ ಕುರಿತು ಭಾವನಾಂತರಗಳೇಳುತ್ತಿದ್ದವು.

No comments:

Post a Comment