Saturday, March 24, 2012

೫. ಕೋಟೆ ಗೆಲ್ಲುವ ಇಚ್ಛೆ

ಕೋಟೆ ಗೆಲ್ಲುವ ಇಚ್ಛೆ

    ಛತ್ರಪತಿ ಶಿವಾಜಿ ಮಹಾರಾಜರ ಕಥೆ ಕೇಳಿದಾಗಲೆಲ್ಲ ಕೇಶವ ಅವರ ಸೈನಿಕರಲ್ಲಿಯೇ ಒಬ್ಬನಾಗುತ್ತಿದ್ದ. ಕುದುರೆಯೇರಿ ವೇಗವಾಗಿ ಹೋಗುತ್ತಿದ್ದ. ಆಗಾಗ ಯಾವುದೋ ಗಡವನ್ನು ಆಕ್ರಮಿಸುತ್ತಿದ್ದ. ರಹಸ್ಯ ಮಾರ್ಗದಲ್ಲಿ ಹೋಗಿ ಕೋಟೆ ಗೆಲ್ಲುತ್ತಿದ್ದ. ಹೀಗೆಲ್ಲ ಮನದಲ್ಲೆ ಯೋಚಿಸುತ್ತಿದ್ದ ಅವನಿಗೆ ತಾನೂ ಪ್ರತ್ಯಕ್ಷ ಅಂಥದೇ ಪ್ರಯತ್ನ ಮಾಡಬೇಕೆನಿಸುತ್ತಿತ್ತು.

    ನಾಗಪುರದ ಮಧ್ಯದಲ್ಲಿ ಒಂದು ಚಿಕ್ಕ ಕೋಟೆ. ಅದೇ ’ಸೀತಾಬರ್ಡಿ.’ ಆಗ ಆ ಕೋಟೆಯ ಮೇಲೆ ಹಾರುತ್ತಿದ್ದುದು ಆಂಗ್ಲರ ಯೂನಿಯನ್ ಜಾಕ್. ಅದನ್ನು ನೋದಿ ಕೇಶವನಿಗೆ ತಡೆಯಲಾರದಷ್ಟು ನೋವು. ’ಈ ಧ್ವಜವನ್ನು ಹೇಗಾದರೂ ಮಾಡಿ ತೆಗೆದೆಸೆದು ಅಲ್ಲಿ ಭಗವಾ ಹಾರಾಡಿಸಬೇಕು. ಕೋಟೆ ಗೆಲ್ಲಬೇಕು’ ಎಂದು ತನ್ನ ಗೆಳೆಯರ ಬಳಿ ಹೇಳುತ್ತಿದ್ದ.

    ’ನಾವು ಕೋಟೆಯೊಳಗೆ ಹೋದರೆ ಅಲ್ಲಿರುವ ಆಂಗ್ಲರನು ಸೋಲಿಸಿ ಕೋಟೆ ಗೆಲ್ಲಬಹುದು’ ಒಬ್ಬನೆಂದ.

    ’ಆದರೆ ನಾವು ಅಲ್ಲಿ ಹೋಗುವುದಾದರೂ ಹೇಗೆ’ ಮತ್ತೊಬ್ಬನ ಪ್ರಶ್ನೆ.

    ಮೂರನೆಯವ ಉಪಾಯ ಸೂಚಿಸಿದ. ’ನಾವೇಕೆ ಸುರಂಗ ತೋಡಬಾರದು? ಒಳಗೊಳಗೇ ಹೋಗಿ ಕೋಟೆ ಸೇರಲು ದಾರಿಯಾಗುತ್ತದಲ್ಲ?’

    ’ನಡೆಯಿರಿ, ನಾವೀಗಲೇ ಕೆಲಸ ಆರಂಭಿಸೋಣ. ಒಳ್ಳೆಯ ಕೆಲಸಕ್ಕೆ ತಡವಾಗಬಾರದು.’

    ಈ ಹುಡುಗರು ಆಟವಾಡುತ್ತಿದ್ದುದು ವಝೆಮಾಸ್ತರ ಮನೆ ಸಮೀಪ. ಅದರ ಆವಾರ ವಿಶಾಲವಾಗಿತ್ತು. ಸುತ್ತ ಎತ್ತರದ ಗೋಡೆಗಳು. ಮನೆಯವರೆಲ್ಲ ಪಕ್ಕದೂರಿಗೆ ಹೋಗಿದ್ದರು. ಮಾಸ್ತರರು ಶಾಲೆಗೆ ಹೋದಾಗ ಬೇರಾರೂ ಅಲ್ಲಿರುತ್ತಿರಲಿಲ್ಲ.

    ಅದೇ ಜಾಗ ತಮ್ಮ ಕೆಲಸಕ್ಕೆ ಸರಿಯಾದುದೆಂದು ಈ ಹುಡುಗರು ಆರಿಸಿದರು. ತಂತಮ್ಮ ಮನೆಗಳಿಂದ ಅಗೆಯುವ ಸಲಕರಣೆ ತಂದರು. ಗುದ್ದಲಿ, ಪಿಕಾಸಿ, ಹಾರೆಗೋಲು ಇತ್ಯಾದಿ.

    ಬಾಲಕರ ಕೆಲಸ ಸದ್ದಿಲ್ಲದೇ ಸಾಗಿತು. ವಝೆ ಮಾಸ್ತರರ ಮನೆಯಂಗಳದಲ್ಲಿ ದೊಡ್ಡದೊಂದು ಹೊಂಡು ನಿರ್ಮಾಣವಾಯಿತು. ಸಂಜೆ ಮನೆಗೆ ಬಂದ ಮಾಸ್ತರರಿಗೆ ಈ ಹುಡುಗರ ಸಾಹಸ ನೋಡಿ ಭಾರೀ ಅಚ್ಚರಿ. ಆವರು ಒಬ್ಬಿಬ್ಬರನ್ನು ಪ್ರತ್ಯೇಕ ಕರೆದು ಇದೇನೆಂದು ವಿಚಾರಿಸಿದರು. ಆ ಹುಡುಗರು ಸರಳವಾಗಿ ತಮ್ಮ ಯೋಜನೆ ವಿವರಿಸಿದರು. ಆ ಚಿಕ್ಕ ಬಾಲಕರ ಮುಗ್ಧ ಕಲ್ಪನೆ ಕೇಳಿ ಅವರಿಗೆ ತಡೆಯಲಾರದಷ್ಟು ನಗು. ಜೊತೆಗೆ ಅವರ ಉಜ್ವಲ ಯೋಜನೆ ನೋಡಿ ಸಂತೋಷವೂ  ಸಹ. ಎಲ್ಲ ಹುಡುಗರನ್ನೂ ಕರೆದು ಹತ್ತಿರ ಕೂರಿಸಿ ಮೈದಡವಿದರು. ಸರಿಯಾಗಿ ತಿಳಿ ಹೇಳಿದರು. ಕೇಶವನೇ ಆ ತಂಡದ ನಾಯಕನೆಂದು ಅವರಿಗೆ ತಿಳಿಯಿತು. ವಿಶೇಷವಾಗಿ ಅವನನ್ನು ಸಮಾಧಾನಪಡಿಸಿದರು. ’ನೀನು ಮುಂದೆ ಒಳ್ಳೆಯ ದೇಶಸೇವೆ ಮಾಡುವೆ’ ಎಂದು ಹರಸಿದರು.

No comments:

Post a Comment