Saturday, March 24, 2012

೧. ಮಂಗಲ ದಿನ

ಮಂಗಲ ದಿನ

     ಅಂದು ಯುಗಾದಿ, ವಿರೋಧಿ ಸಂವತ್ಸರ. ಇಸವಿ ೧೮೮೯ರ ಎಪ್ರಿಲ್ ಮೊದಲ ದಿನ. ಎಲ್ಲೆಡೆ ಉತ್ಸಾಹದಿಂದ ಹೊಸ ವರ್ಷದ ಸ್ವಾಗತ.

     ಮುಂಜಾನೆಯ ಸೂರ್ಯ ಅದೇ ತಾನೇ ಮೂಡುತ್ತಿದ್ದ. ಪ್ರತಿಯೊಂದು ಮನೆಯ ಅಂಗಳದಲ್ಲೂ ರಂಗವಲ್ಲಿಯ ಸಿಂಗಾರ. ಬಾಗಿಲುಗಳಲ್ಲಿ ಮಾವಿನ ಚಿಗುರೆಲೆಗಳ ಹಸಿರು ತೋರಣ. ಮಾವು, ಬೇವಿನೆಲೆ ತರಲು ತೋರಣ ಕಟ್ಟಲು, ಹೂವು ತರಲು ಮಕ್ಕಳೆಲ್ಲರೂ ಓಡಾಡುತ್ತಿದ್ದರು. ದೊಡ್ಡವರೊಂದಿಗೆ ತಾವೂ ಸಡಗರದಿಂದ ಕೆಲಸ ಮಾಡುತ್ತಿದ್ದರು.

     ಮಹಾರಾಷ್ಟ್ರದಲ್ಲಿ "ಯುಗಾದಿ"ಯನ್ನು "ಗುಡಿಪಡವಾ" ಎನ್ನವರು. ಗುಡಿ ಎಂದರೆ ಧ್ವಜ. ಅಂದು ಮನೆ ಮನೆಯಲ್ಲಿ ಎತ್ತರದ ಪತಾಕೆ ಹಾರಿಸುವರು. ಪೂಜೆ ಮಾಡುವರು.

     ಮಕ್ಕಳು ಇದಕ್ಕೆ ಬೇಕಾದ ಸಾಮಗ್ರಿ ಜೋಡಿಸತೊಡಗಿದ್ದರು, ಉತ್ಸಾಹದಿಂದ. "ನಮ್ಮ ಮನೆ ಪತಾಕೆ ಎತ್ತರವಾಗಿರಬೇಕು, ಚೆನ್ನಾಗಿರಬೇಕು" ಎಂದು ಪರಸ್ಪರರಲ್ಲಿ ಸ್ಪರ್ಧೆ. ಬಣ್ಣದ ಪತಾಕೆ ಮೇಲೇರುವಾಗ, ಪಟಪಟನೆ ಹಾರಾಡುವಾಗ ಮಕ್ಕಳೆಲ್ಲ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಕುಣಿಯುವರು. ಎಲ್ಲರೂ ಅಂದು ಹೊಸ ಬಟ್ಟೆ ತೊಡುವರು. ಹಬ್ಬದಡಿಗೆ ಉಣ್ಣುವರು. ಎಲ್ಲೆಡೆ ಆನಂದ ಉತ್ಸಾಹಗಳ ಅಲೆ ತಾನೇ ತಾನಾಗಿ ಇರುವ ದಿನ ಅದು.

     ಅಂದು ನಾಗಪುರದ ಪಂಡಿತ ಬಲಿರಾಮಪಂತ ಹೆಡಗೆವಾರರ ಮನೆಯಲ್ಲಿ ಈ ಆನಂದ ಇನ್ನೂ ಹೆಚ್ಚು. ಆ ದಿನ ಮಂಗಲೋತ್ಸವ. ಪೌರಾಣಿಕ ಹಾಗೂ ಐತಿಹಾಸಿಕವಾಗಿಯೂ ಬಹು ಮಹತ್ವಪೂರ್ಣ ವಿಜಯದ ದಿನ ಎನಿಸಿದ ಅಂದು ಅವರ ಮನೆಯಲೊಬ್ಬ ಹುಡುಗ ಹುಟ್ಟಿದ. ಈ ಶುಭಯೋಗ ಎಲ್ಲರಿಗೂ ಆನಂದ ತಂದಿತ್ತು.

     ’ಎಷ್ಟು ಒಳ್ಳೆಯ ಮುಹೂರ್ತದಲ್ಲಿ ಈ ಹುಡುಗ ಹುಟ್ಟಿದ್ದಾನೆ. ಮುಂದೆ ನಿಜವಾಗಿಯೂ ಯಾವುದೋ ಪರಾಕ್ರಮ ಸಾಧಿಸುವನು’ ಒಬ್ಬ ಹೇಳುತ್ತಿದ್ದ.

     ’ಯುಗಾದಿ ವಿಜಯದ ಹಬ್ಬ. ಶತ ಶತಮಾನಗಳ ಮೊದಲು ಪರಾಕ್ರಮಿ ಶಾಲಿವಾಹನ ಆಕ್ರಮಕ ಶಕರನ್ನು ಹೊಡೆದೋಡಿಸಿದ ದಿನ ಇದು. ಅದರ ನೆನಪಿಗಾಗಿ ನಾವಿಂದೂ ಪತಾಕೆ ಹಾರಿಸುತ್ತೇವೆ. ಅವನ ಹತ್ತಿರ ಸಂಪತ್ತು, ಸೈನ್ಯ ಯಾವುದೂ ಇರಲಿಲ್ಲ. ಆದರೂ ಈ ನಾಡಿನ ದುರ್ದೆಸೆ ಕಂಡು ದುಃಖಿತನಾಗಿದ್ದ - ಶಿವಶಕ್ತಿಯಿಂದ ಪ್ರೇರಿತನಾಗಿದ್ದ. ಮಣ್ಣಿನ ಕುದುರೆ ಸವಾರರ ಗೊಂಬೆ ಮಾಡಿ ಪ್ರಾಣ ತುಂಬಿದ. ಆ ಸೈನ್ಯದಿಂದಲೇ ಪರಕೀಯರನ್ನು ಓಡಿಸಿದ. ದಾಸ್ಯ ತೊಲಗಿಸಿದ. ಈ ಹುಡುಗನೂ ಅಂಥದೇ ಒಂದಲ್ಲೊಂದು ಅಸಾಧಾರಾಣ ಕೆಲಸ ಮಾಡಿ ತೋರಿಸುತ್ತಾನೆ ಎಂದು ನನಗನಿಸುತ್ತದೆ’ ಮತ್ತೊಬ್ಬನ ಅಂಬೋಣ.

     ಇನ್ನೊಬ್ಬ ಹೇಳುತ್ತಿದ್ದ - ’ಈತ ಹೆಡಗೆವಾರರ ಕುಲದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸುವನು. ದೇಶದ ತುಂಬ ತಮ್ಮ ವಂಶದ ಹೆಸರು ಹಬ್ಬಿಸುವನು.

    ಹುಡುಗ ಹುಟ್ಟುತ್ತಿದ್ದಂತೆಯೇ ಹರಿದ ಭಾವನೆಗಳ ಪ್ರವಾಹ ಇದು. ಹನ್ನೆರಡನೆಯ ದಿನ ನಾಮಕರಣ ಮಹೋತ್ಸವ. ಕೇಶವ ಎಂದು ಹೆಸರಿಟ್ಟರು.

No comments:

Post a Comment