Saturday, March 24, 2012

೮. ವಂದೇ ಮಾತರಂ

ವಂದೇ ಮಾತರಂ

    ದೇಶದ ತುಂಬ ತರತರದ ಅನ್ಯಾಯದ ಕಾನೂನುಗಳು. ಆಗ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸಹ ಇಂತಹ ಕಾನೂನುಗಳಿಂದ ಹೊರತುಪಟ್ಟವರಾಗಿರಲಿಲ್ಲ. ಲೋಕಮಾನ್ಯ ತಿಲಕರಂಥ ಮಹಾಪುರುಷರ ಭಾಷಣ ಕೇಳಲೂ ಸಹ ಅವರಿಗೆ ಅವಕಾಶವಿರಲಿಲ್ಲ. ದೇಶಭಕ್ತಿ ಪ್ರಸಾರ ಮಾಡುವ ಪತ್ರಿಕೆಗಳನ್ನೂ ಓದುವಂತಿರಲಿಲ್ಲ. ಇನ್ನು ಪೂರ್ತಿ ರಾಷ್ಟ್ರಗೀತೆ ಹಾಡುವುದಂತೂ ದೂರದ ಮಾತು. ’ವಂದೇ ಮಾತರಂ’ ಉಚ್ಛಾರ ಕೂಡ ಭಾರಿ ಅಪರಾಧವೆನಿಸಿತ್ತು. ಇದನ್ನೆಲ್ಲ ಮುರಿಯಹೊರಟರೆ ಬೆತ್ತದೇಟು ಅಲ್ಲದೇ ಇನ್ನೂ ಬೇರೆ ರೀತಿಯ ಶಿಕ್ಷೆಗಳೂ ಆಗುತ್ತಿದ್ದವು.

    ಆಗ ಕೇಶವನ ವಯಸ್ಸು ಕೇವಲ ೧೮ ವರ್ಷ. ಆತ ನಾಗಪುರದ ನೀಲ ಸಿಟಿ ಹೈಸ್ಕೂಲು ವಿದ್ಯಾರ್ಥಿ. ಆಂಗ್ಲ ಅಧಿಕಾರಿಗಳ ದಬ್ಬಾಳಿಕೆಯನ್ನು ಪ್ರತಿದಿನ ಕಾಣುತ್ತಿದ್ದ. ಅವನ ಹೃದಯದಲ್ಲಿ ಬಂಡಾಯದ ಬಿರುಗಾಳಿ ಏಳುತ್ತಿತ್ತು. ತನ್ನ ಗೆಳಯರೊಡನೆ ಕೂಡಿ ಯೋಜನೆಯೊಂದನ್ನು ತಯಾರಿಸಿದ. ಸದ್ದಿಲ್ಲದೇ ಎಲ್ಲ ತರಗತಿಗಳಿಗೂ ಈ ಸುದ್ದಿ ತಲುಪಿತು. "ಹೌದು, ಹಾಗೆಯೇ ಮಾಡಬೇಕು" ಎಂದು ಎಲ್ಲ ವಿದ್ಯಾರ್ಥಿಗಳೂ ನಿಶ್ಚಯಿಸಿದರು.

    ವಿದ್ಯಾಧಿಕಾರಿಗಳು ಶಾಲೆಯ ತಪಾಸಣೆಗೆ ಬರುವವರಿದ್ದರು. ಮೊದಲಿಗೇ ಕೇಶವನ ಕೊಠಡಿಗೆ ಬಂದರು. ಅವರು ಬಾಗಿಲಿನಲ್ಲಿ ಹೆಜ್ಜೆ ಇಡುತ್ತಿದ್ದಂತೆಯೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಒಂದೇ ಸ್ವರದಲ್ಲಿ ಕೂಗಿದರು, "ವಂದೇ ಮಾತರಂ". ಅದನ್ನು ಅನುಸರಿಸಿ ಮತ್ತೊಂದು ಕೋಣೆಯಿಂದಲೂ ಪ್ರತಿಧ್ವನಿ ಬಂತು. "ವಂದೇ ಮಾತರಂ". ಹೀಗೆ ಎಲ್ಲ ಕೋಣೆಗಳೂ "ವಂದೇ ಮಾತರಂ" ರಣಗರ್ಜನೆಯಿಂದ ತುಂಬಿ ಹೋದವು.

    ಸ್ಕೂಲ್ ಇನ್ಸ್‍ಪೆಕ್ಟರ್ ಕ್ರೋಧದಿಂದ ಕಿಡಿಕಿಡಿಯಾದ. ’ಈ ಕಾರಸ್ಥಾನದ ಮೂಲ ಯಾರು? ಹುಡುಕಿ’ ಎಂದು ಅಬ್ಬರಿಸಿದ. ಶಾಲೆಯ ಸಂಚಾಲಕರು ಗರಬಡಿದವರಂತೆ ನಿಂತುಬಿಟ್ಟರು. ಏನು ಮಾಡಬೇಕೆಂದು ಯಾರಿಗೂ ತಿಳಿಯದು. ಬಂದ ಅಧಿಕಾರಿ ಮುಖ್ಯೋಪಾಧ್ಯಾಯರಿಗೆ ’ಈ ಕಾರಸ್ಥಾನ ಮೂಲ ಯಾರು? ಹುಡುಕಿ. ಇದನ್ನೆಂದೂ ಸಹಿಸುವುದು ಸಾಧ್ಯವಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು’ ಇನ್ನೊಮ್ಮೆ ಆಜ್ಞಾಪಿಸಿದರು. ಅವರು ಸಹ‍ಅಧ್ಯಾಪಕರಿಗೆ ಅದೇ ಆಜ್ಞೆ ಮಾಡಿದರು.

    ಕಣ್ಣುಗಳಲ್ಲಿ ಕೆಂಡ ಕಾರುತ್ತಾ ಇನ್ಸ್‍ಪೆಕ್ಟರ್ ಹಿಂದಿರುಗಿದ. ಹೆಡ್ಮಾಸ್ಟರ್ ಬೆತ್ತ ತಿರುಗಿಸುತ್ತಾ ಕೋಣೆ ಕೋಣೆ ತಿರುಗಿದರು. ಎಲ್ಲ ಉಪಾಧ್ಯಾಯರೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕೇಳತೊಡಗಿದರು. "ಸತ್ಯ ಹೇಳಿ, ಈ ಘಟನೆಯ ಹಿಂದೆ ಯಾರ ಕೈವಾಡವಿದೆ?"

    ಎಲ್ಲ ರೀತಿಯ ಪ್ರಯತ್ನವಾಯಿತು. ಹೆದರಿಸಿದರು, ಪುಸಲಾಯಿಸಿದರು, ಕೂಗಾಡಿದರು, ಹೊಡೆದರು, ಬಡಿದರು, ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಯಾರೂ ತಮ್ಮ ನಾಯಕನಾರೆಂದು ಬಾಯಿ ಬಿಡಲಿಲ್ಲ. ಅಧ್ಯಾಪಕರೆಲ್ಲ ಹತಾಶರಾದರು. ಮುಖ್ಯೋಪಾಧ್ಯಾಯರೂ ಗುಡುಕಿದರು. ’ಎಲ್ಲ ವಿದ್ಯಾರ್ಥಿಗಳನ್ನೂ ಶಾಲೆಯಿಂದ ಹೊರಹಾಕುತ್ತೇನೆ.’ ವಿದ್ಯಾರ್ಥಿಗಳೆಲ್ಲ "ವಂದೇ ಮಾತರಂ" ಎನ್ನುತ್ತಾ ಹೊರನಡೆದರು. ಹಲವು ದಿನಗಳವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರಲೇ ಇಲ್ಲ.

    ಆದರೆ ವಿದ್ಯಾರ್ಥಿಗಳ ಆ ನಿರ್ಧಾರ ಬಹುಕಾಲ ಉಳಿಯಲಿಲ್ಲ. ದೇಶದ ಅಂದಿನ ಪರಿಸ್ಥಿತಿಯೇ ಹಾಗಿತ್ತು. ಮಕ್ಕಳ ತಂದೆ, ತಾಯಿ, ಪೋಷಕರ ಮೇಲೆ ಒತ್ತಡ ಬರತೊಡಗಿತು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲು ಅಧಿಕಾರಿಗಳು ತಮ್ಮೆಲ್ಲ ನಿಪುಣತೆ ಪ್ರಯೋಗಿಸಿದರು. ಸುಮಾರು ಒಂದೂವರೆ ತಿಂಗಳ ನಂತರ ವಿದ್ಯಾರ್ಥಿಗಳು ಪುನಃ ಶಾಲೆಗೆ ಬರತೊಡಗಿದರು. ಆದರೆ ಕೇಶವ ಮಾತ್ರ ಮತ್ತೆ ಆ ಶಾಲೆಗೆ ಹೆಜ್ಜೆಯಿಡಲಿಲ್ಲ.

No comments:

Post a Comment