Wednesday, April 4, 2012

೧೩. ವಂಗಭೂಮಿ

ವಂಗಭೂಮಿ

    ಬಂಗಾಲ ಬಹು ಪವಿತ್ರ ಭೂಮಿ. ಚೈತನ್ಯ ಮಹಾಪ್ರಭುಗಳ ನಾಡು. ಗಂಗೆಯ ಪವಿತ್ರ ಜಲದಿಂದ ಅಲ್ಲಿನ ಕಣ ಕಣ ಪುನೀತವಾಗಿದೆ. "ಹರಿನಾಮ"ದ ಗುಂಜಾರವ ಅಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿರುತ್ತದೆ. ಅಲ್ಲಿನ ಪ್ರತಿ ಮಗುವೂ ಕಾಳಿಯ ಆಶೀರ್ವಾದ ಪಡೆದಿದೆ. ಭಗವಾನ್ ರಾಮಕೃಷ್ನರು ಈಶ್ವರ ಭಕ್ತಿಯ ಅಡಿಗಲ್ಲನಿಟ್ಟುದು ಇಲ್ಲಿಯೇ. ಸ್ವಾಮಿ ವಿವೇಕಾನಂದರು ಅದರ ಮೇಲೇ ವಿಶ್ವವಿಜಯಿ ಹಿಂದು ಧರ್ಮದ ಮಂದಿರ ನಿರ್ಮಿಸಿದರು. ಅದ್ಭುತ ಮಂತ್ರಶಕ್ತಿಯ "ವಂದೇ ಮಾತರಂ" ಕರ್ತೃ ಬಂಕಿಮಬಾಬು ಇದೇ ಮಣ್ಣಿನಲ್ಲಿ ಜನ್ಮತಾಳಿದರು. ಅಪ್ರತಿಮ ನಾಟಕಕಾರ ದ್ವಿಜೇಂದ್ರಲಾಲರಾಯ್, ಈಶ್ವರಚಂದ್ರ ವಿದ್ಯಾಸಾಗರ, ರಾಜಾರಾಮ ಮೋಹನರಾಯ್, ವಿಪಿನ್‍ಚಂದ್ರಪಾಲ, ಸುರೇಂದ್ರನಾಥ ಬ್ಯಾನರ್ಜಿ, ಕೇಶವಚಂದ್ರಸೇನ, ಅರವಿಂದಘೋಷ್, ರವೀಂದ್ರನಾಥ್ ಠಾಕೂರ್‌ರಂತಹ ವಿದ್ವಾಂಸರು, ಸೇವಾವ್ರತಿಗಳಿಗೆ ಇದೇ ಮಣ್ಣು ಪ್ರೇರಣೆ ನೀಡಿದೆ.

    ಕೇಶವರಾವ್ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಬಂಗಾಲಕ್ಕೆ ಹೋಗುವಾಗ ಈ ಗೌರವಭಾವನೆಗಳ ಸಹಿತವೇ ಹೋದರು. ಕೇವಲ ಮಾನವ ದೇಹದ ರೋಗ ವಾಸಿ ಮಾಡುವ ವಿಚಾರ ಅವರದಾಗಿರಲಿಲ್ಲ. ಬದಲಾಗಿ ಅವರ ಮನದಲ್ಲಿದ್ದ ಭಾವನೆಗಳೇ ಬೇರೆ. ಈ ನಾಡಿನ ಪ್ರಾಚೀನ ಅರಸರು ತಮ್ಮ ಅಧಿಕಾರ ಕಳೆದುಕೊಂಡುದೇಕೆ? ಅವರೇಕೆ ದುರ್ಬಲರಾಗಿದ್ದರು? ಅದೆಷ್ಟೋ ದುರ್ಗುಣಗಳೂ ಮನೆ ಮಾಡಿವೆಯಲ್ಲಾ ಇಲ್ಲಿ - ಇವನ್ನೆಲ್ಲಾ ದೂರಗೊಳಿಸುವುದೆಂತು? ಪುನಃ ಹಿಂದುಗಳಲ್ಲಿ ಸದ್ಗುಣ ಜಾಗೃತಿ ಮಾಡುವುದೆಂತು? ಇದಕ್ಕೇನು ಉಪಾಯ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಂಗಾಲದಲ್ಲಿ ದೊರೆತೇ ದೊರೆಯುತ್ತದೆ ಎಂಬುದು ಕೇಶವರಾಯರಿಗಿದ್ದ ನಂಬಿಕೆ. ಸುಜಲಾಂ, ಸುಫಲಾಂ ಆದ ನಿಸರ್ಗ ರಮಣೀಯ ಬಂಗಾಲದತ್ತ ಅವರು ಇದಕ್ಕಾಗಿಯೇ ಹೋದರು ಎಂದರೂ ತಪ್ಪಾಗದು.

    ಕಲ್ಕತ್ತೆಯ ಮೂಲೆ ಮೂಲೆ ಸುತ್ತಿದರು. ಬಂಗಾಲದ ತೀರ್ಥಕ್ಷೇತ್ರಗಳನ್ನೆಲ್ಲ ಯಾತ್ರೆ ಮಾಡಿದರು. ಅನೇಕ ಮಹಾಪುರುಷರ ದರ್ಶನ ಮಾಡಿದರು. ಬಾಂಬು ತಯಾರಿಸುವ ಕ್ರಾಂತಿಕಾರಿಗಳ ಬಳಿಯೂ ಹೋದರು. ಆತ್ಮಶಾಂತಿಯ ಬೋಧನೆ ಮಾಡುವ ಸಾಧುಸಂತರ ಸಾಮೀಪ್ಯಕ್ಕೂ ಹೋದರು. ಹಲವಾರು ಪತ್ರಿಕೆಗಗಳ ಸಂಪಾದಕರೊಡನೆ ಆತ್ಮೀಯ ಸಂಬಂಧ ಹೊಂದಿದ್ದರು. ಅಲ್ಲಿನ ಅನೇಕ ಸಾಮಾಜಿಕ ಮುಖಂಡರೊಡನೆ ಅವರ ನಿತ್ಯ ಚರ್ಚೆ ನಡೆಯುತ್ತಿತ್ತು. ಬೇರೆ ಬೇರೆ ರೀತಿಯ ಸಭೆಗಳಲ್ಲಿ ಪಾಲ್ಗೊಂಡು ಭಾಷಣ ಕೇಳುತ್ತಿದ್ದರು. ಸಣ್ಣ ದೊಡ್ಡ ನೂರಾರು ಮೆರವಣಿಗೆಗಳಲ್ಲಿ ಅಂತೂ ಅವರದೇ ಪ್ರಮುಖ ಪಾತ್ರ. ಬಹು ಬೇಗ ಕೇಶವರಾಯರು ವಂಗಭೂಮಿಯಲ್ಲಿ ಒಂದಾಗಿ ಹೋದರು. ಬಂಗಾಲ ಭಾವನೆಗಳನ್ನು ಗೌರವಿಸಿ ಸಮರಸರಾದರು. ಅವರು ಬಂಗಾಳ ಭಾಷೆಯನ್ನು ಪ್ರೀತಿಸಿ ಅದರಲ್ಲೂ ಸಹಜವಾಗಿ ಮಾತನಾಡುವ, ಬರೆಯುವ ಕಲೆಯನ್ನೂ ರೂಢಿಸಿಕೊಂಡರು.

No comments:

Post a Comment