Wednesday, April 4, 2012

೧೪. ಊಟದ ವ್ಯವಸ್ಥೆ

ಊಟದ ವ್ಯವಸ್ಥೆ

    ಕಲ್ಕತ್ತೆಯ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಕೇಶವರಾವ್ ಪ್ಫ಼ವೇಶ ಪಡೆದರು. ವಿದರ್ಭ ಪ್ರಾಂತದ ಹಲವು ತರುಣರು ಅಲ್ಲಿಯೇ ಓದುತ್ತಿದ್ದರು. ಅವರೆಲ್ಲ ಶ್ರೀಮಂತರು. ಕೆಲವರು ಸೇರಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಕೇಶವರಾಯರ ಮೃದು ಮಧುರ ಸ್ವಭಾವ ಅವರೆನ್ನೆಲ್ಲ ಆಕರ್ಷಿಸಿತು. ಪುಕ್ಕಟೆ ವಸತಿ ವ್ಯವಸ್ಥೆ ಅವರಿಗಾಯಿತು.

    ಊಟಕ್ಕಾಗಿ ಭೋಜನಾಲಯಕ್ಕೆ ಹೋಗಬೇಕಾಗಿತ್ತು. ಎರಡು ಮೂರು ತಿಂಗಳಂತೂ ಹೇಗಾದರೂ ಹಣ ಕೊಡಬಹುದು. ಮುಂದೇನು ಎನ್ನುವುದು ಕೇಶವರಾಯರಿಗಿದ್ದ ಸವಾಲು. ಅವರಿಗೊಂದು ಯೋಚನೆ ಹೊಳೆಯಿತು. ನಿತ್ಯದ ಊಟಕ್ಕಿಂತ ೨-೩ ಪಟ್ಟು ಹೆಚ್ಚು ಉಣ್ಣತೊಡಗಿದರು. ಹೋಟೆಲ್ ಮಾಲಿಕ ಉತ್ತರಪ್ರದೇಶದವ. ಕೇಶವರಾಯರ ಕಟ್ಟುಮಸ್ತಾದ ಶರೀರ, ಧೀರ ನಿಲುವಿನ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದ. ಬಹು ಪ್ರೀತಿಯಿಂದ ಒತ್ತಾಯ ಮಾಡಿ ಬಡಿಸುತ್ತಿದ್ದ. ಕೆಲವು ದಿನ ಕಳೆದವು. ಕೇಶವರಾಯರೇ ಅವನನ್ನು ಕೇಳಿದರು. "ಇಲ್ಲಿ ಊಟಕ್ಕೆ ಬಂದು ಹೋಗಲು ಬಹು ಸಮಯವೇ ಬೇಕು. ಓದಲು ತೊಂದರೆ, ನಮ್ಮ ಮನೆಗೆ ನೀವೇ ಊಟ ಕಳುಹಿಸಿದರೆ ಓಳಿತು."

    ಹೋಟೆಲ್ ಮಾಲಿಕ ಹೇಳಿದ "ಏಕಿಲ್ಲ? ಅವಶ್ಯವಾಗಿ ಕಳಿಸುವೆ. ನಾನೇ ಈ ಸಲಹೆ ಕೊಡಬೇಕೆಂದಿದ್ದೆ. ನೀವು ಊಟ ಮಾಡುವಾಗ ಸುತ್ತಲಿರುವವರು ನಿಮ್ಮನ್ನೇ ನೋಡುತ್ತಿರುತ್ತಾರೆ. ಅವರ ದೃಷ್ಟಿ ಎಲ್ಲಿ ನಿಮಗೆ ತಗಲುವುದೋ ಎಂದು ನನಗೆ ಹೆದರಿಕೆ. ನಿತ್ಯದ ಹಣಕ್ಕೆ ನಿಮಗೆ ನೀವು ಉಣ್ಣುವಷ್ಟು ಊಟ ಕಳಿಸುವೆ. ನೀವು ವ್ಯಾಯಾಮ ಮಾಡುತ್ತೀರಿ. ನಿಮ್ಮಂತಹ ಬಲೋಪಾಸಕ ಯುವಕರು ನನಗೆ ಬಹು ಪ್ರಿಯ. ನಾನೂ ತರುಣನಾಗಿದ್ದಾಗ ವ್ಯಾಯಾಮ ಮಾಡುತ್ತಿದ್ದೆ."

    ಮುಂದೆ ಕೇಶವರಾಯರಿರುವ ಮನೆಗೇ ಊಟದ ಡಬ್ಬಿ ಬರತೊಡಗಿತು. ಅವರು ತಮ್ಮೊಬ್ಬ ಗೆಳೆಯನೊಡನೆ ಅಲ್ಲಿಯೇ ಊಟ ಮಾಡಲಾರಂಭಿಸಿದರು. ಆತ ಊಟದ ಹಣ ತಾನೇ ಕೊಡುತ್ತಿದ್ದ. ಕಲ್ಕತ್ತೆಯಲ್ಲಿ ಅವರಿರುವ ತನಕವೂ ಇದೇ ವ್ಯವಸ್ಥೆ ಮುಂದುವರೆಯಿತು.

No comments:

Post a Comment