Thursday, April 5, 2012

೨೦. ನಾಯಕನ ನಿಂದೆ ಸಹ್ಯವಲ್ಲ

ನಾಯಕನ ನಿಂದೆ ಸಹ್ಯವಲ್ಲ

   ಆಗ ಮೌಲವಿ ಲಿಯಾಖತ್ ಹುಸೇನರು ಕಲ್ಕತ್ತೆಯ ಜನನಾಯಕರಲ್ಲಿ ಒಬ್ಬರು. ಸುಮಾರು ೬೦ ವರ್ಷ ವಯಸ್ಸು. ಆದರೂ ಉತ್ಸಾಹಿ. ಸದಾ ಚಟುವಟಿಕೆಯಿಂದಿರುತ್ತಿದ್ದವರು. ತರುಣರಂತೆ ಎಲ್ಲದರಲ್ಲೂ ಮುಂದು. ಲೋಕಮಾನ್ಯ ತಿಲಕರ ಪರಮಭಕ್ತರವರು. ಕೇಶವರಾಯರ ತೇಜಸ್ಸು, ಧೈರ್ಯ ಅವರನ್ನು ಆಕರ್ಷಿಸಿತ್ತು. ಒಂದು ಘಟನೆಯಿಂದ ಅವರೀರ್ವರೂ ಬಹು ಆತ್ಮೀಯರಾದರು.

    ಒಮ್ಮೆ ಯಾವುದೇ ಒಂದು ಸಭೆ ನಡೆಯುತ್ತಿತ್ತು. ಕೇಶವರಾಯರು ಅಲ್ಲಿದ್ದರು. ಒಬ್ಬ ವಕ್ತಾರ ತುಂಬ ಜಂಭದಿಂದ ಬಾಯಿಗೆ ಬಂದಂತೆಲ್ಲಾ ಭಾಷಣ ಬಿಗಿಯುತ್ತಿದ್ದ. ಆತ ಲೋಕಮಾನ್ಯ್ ತಿಲಕರನ್ನೂ ಭಾಷಣದಲ್ಲಿ ಹೀಗೆಳೆದ. ಎಲ್ಲರಿಗೂ ಅದು ತೀರಾ ಕೆಟ್ಟದೆನಿಸಿತು. ಓರ್ವ ನಿಧಾನವಾಗಿ ’ಹೀಗೆನ್ನಬಾರದು’ ಎಂದರೆ ಮತ್ತೋರ್ವ ತಲೆ ಕೆಳಗೆ ಹಾಕಿದ. ಕೇಶವರಾಯರು ಧಿಗ್ಗನೆದ್ದರು. ವೇದಿಕೆ ಹತ್ತಿದರು. ಭಾಷಣಕಾರನ ಕೆನ್ನೆಗೆರಡು ಬಿಗಿದರು. ಎಲ್ಲೆಡೆ ಗಲಭೆ. ಆತನ ಜೊತೆಯವರು ಕೆಲವರು ಕೇಶವರಾಯರ ಮೇಲೇರಿ ಬಂದರು. ಆದರೆ ಕೇಶವರಾಯರ ಶಕ್ತಿಯ ಯಾರೂ ನಿಲ್ಲದಾದರು.

    ಮೌಲವಿಯವರೂ ಅಲ್ಲಿದರು. ಕೇಶವರಾಯರ ಕೆಲಸ ಅವರಿಗೆ ತುಂಬಾ ಹಿಡಿಸಿತು. ಅವರ ಬೆನ್ನು ಚಪ್ಪರಿಸುತ್ತಾ ’ನವ ಯುವಕರೆಂದರೆ ಹೀಗಿರಬೇಕು. ತುಂಬಾ ಒಳ್ಳೆಯ ಕೆಲಸ ಮಾಡಿದಿರಿ. ನಾನೂ ಲೋಕಮಾನ್ಯರ ಭಕ್ತ. ನಾವೀರ್ವರೂ ಜೊತೆಗೂಡಿ ಕೆಲಸ ಮಾಡೋಣ’ ಎಂದರು.

    ಕಲ್ಕತ್ತೆಯಲ್ಲಿರುವವರೆಗೂ ಅವರೀರ್ವರೂ ಸದಾ ಜೊತೆಗೇ ಇರುತ್ತಿದ್ದರು. ಮೌಲವಿಯವರು ಏರ್ಪಡಿಸಿದ ಸಭೆಗಳಲ್ಲೆಲ್ಲಾ ಕೇಶವರಾಯರ ಭಾಷಣ ಇದ್ದೇ ಇರುತ್ತಿತ್ತು. ಎಲ್ಲ ಮೆರವಣಿಗೆಗಳಲ್ಲೂ ಅವರು ತಮ್ಮ ಗೆಳೆಯರೊಂದಿಗೆ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಭಗವಾಧ್ವಜ ಹಿಡಿದು ಎಲ್ಲರಿಗಿಂತ ಮುಂದಿರುತ್ತಿದ್ದರು.

    ಈ ಎಲ್ಲಾ ಕೆಲಸಗಳಂತೆ ಓದಿನಲ್ಲೂ ಅವರು ಸದಾ ಮುಂದೆ. ೭೦-೮೦ ಶೇಕಡಾ ಅಂಕ ಪಡೆಯುತ್ತಿದ್ದರು. ಹಗಲಿಡೀ ಬೇರೆ ಬೇರೆ ಕೆಲಸ. ರಾತ್ರಿಯೆಲ್ಲಾ ಪ್ರಶಾಂತ ವಾತಾವರಣದಲ್ಲಿ ಓದಿನಲ್ಲಿ ಮಗ್ನ. ಸ್ವಂತ ಪುಸ್ತಕವಿರಲಿಲ್ಲ. ಬೇರೆಯವರ ಎರವಲು ಪುಸ್ತಕ. ಒಮ್ಮೆ ಓದಿದರೆ ಸಾಕು, ಮತ್ತೆಂದೂ ನೆನಪಿನಿಂದ ಮಾಶುತ್ತಿರಲಿಲ್ಲ ಆ ವಿಷಯ. ಅವರ ಅಲೌಕಿಕ ಬುದ್ಧಿವಂತಿಕೆ, ಕರ್ತೃತ್ವಶಕ್ತಿ ಕಂಡು ಗೆಳೆಯರೆಲ್ಲಾ ಅಚ್ಚರಿಪಡುತ್ತಿದ್ದರು. ಕೇಶವರಾಯರು ವೈದ್ಯಕೀಯ ಪದವಿಯನ್ನು ಉತ್ತಮ ದರ್ಜೆಯಲ್ಲಿಯೇ ಪಡೆದರು.

No comments:

Post a Comment