Wednesday, April 4, 2012

೧೬. ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಲೆ

ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಲೆ

    ಆಗ ಬಂಗಾಳದಲ್ಲೆಲ್ಲಾ ಕ್ರಾಂತಿಕಾರಿ ಸಂಸ್ಥೆಗಳು ಗುಪ್ತ ಚಟುವಟಿಗೆಯಲ್ಲಿ ತೊಡಗಿದ್ದವು. ತೇಜಸ್ವೀ ನವ ಯುವಕರು ಜಗನ್ಮಾತೆಯೆದುರು ಪ್ರತಿಜ್ಞೆ ತೆಗೆದುಕೊಳ್ಳುತ್ತಿದ್ದರು. "ನಾವು ನಮ್ಮ ಪ್ರಾಣವನ್ನೇ ಪಣವನ್ನಾಗಿರಿಸಿ ಈ ದೇಶವನ್ನು ಸ್ವತಂತ್ರಗೊಳಿಸುವೆವು. ರಹಸ್ಯ ಯೋಜನೆಗಳಿಂದ ಆಂಗ್ಲ ಅಧಿಕಾರಿಗಳನ್ನು ಮುಗಿಸುವೆವು. ನಮ್ಮ ಸಂಸ್ಥೆಯ ರಹಸ್ಯವನ್ನು ಕಾಪಾಡುವೆವು. ನಮ್ಮ ಸಂಸ್ಥೆಗೆ ವಿಶ್ವಾಸದ್ರೋಹ ಗೈದವರಿಗೆ ಪ್ರಾಣದಂಡನೆಯೇ ಶಿಕ್ಷೆ. ನಾವೆಂದೂ ವೈಯಕ್ತಿಕ ಸುಖ ಬಯಸೆವು. ಸರ್ವಸ್ವವನ್ನೂ ತಾಯಿ ಭಾರತಿಯ ಪಾದಕಮಲಗಳಲ್ಲಿ ಸಮರ್ಪಿಸುವೆವು."

    ಈ ಪ್ರತಿಜ್ಞೆ ಪೂರೈಸಲು ಅವರು ಬಾಂಬು ತಯಾರಿಸುವ ಶಿಕ್ಷಣ ಪಡೆಯುತ್ತಿದ್ದರು. ಕಗ್ಗಾಡಿನ ನಡುವೆ ಆಗಾಗ ಬಂದೂಕು ಗುರಿ ಅಭ್ಯಾಸ ಸಹ ಮಾಡುತ್ತಿದ್ದರು.

    ಕೇಶವರಾಯರೂ ಇಂಥ ಒಂದು ಗುಪ್ತ ಸಂಸ್ಥೆಯ ಅಧ್ಯಕ್ಷರು. ಒಮ್ಮೆ ಆ ಸಂಸ್ಥೆಯ ನಾಲ್ಕಾರು ಗೆಳೆಯರೊಂದಿಗೆ ಅವರು ಓರ್ವ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮನೆಗೆ ಹೋಗಿದ್ದರು. ನಡುರಾತ್ರಿಯ ನಂತರವೂ ಅಲ್ಲಿ ಅವರ ಅಧ್ಯಯನ ನಡೆಯುತ್ತಿತ್ತು. ಒಂದು ಪ್ರಯೋಗ ನಡೆದಿತ್ತು. ಅದನ್ನು ಪೂರೈಸಿ ಗೆಳೆಯರೆಲ್ಲ ಹೊರ ಹೊರಟರು. ಮನೆ ಬಾಗಿಲ ಬಳಿ ಓರ್ವ ಮಲಗಿದ್ದುದು ಅವರಿಗೆ ಕಾಣಿಸಿತು. ಅವನೊಬ್ಬ ಗುಪ್ತಚರ. ಇವರು ಬರುವ ಶಬ್ದ ಕೇಳಿ ಆತ ಗಾಬರಿಯಿಂದ ಮೇಲೆದ್ದು ಓಡತೊಡಗಿದ.

    ಕೇಶವರಾಯರ ಗೆಳೆಯರೂ ಅವನ ಹಿಂದೆ ಓಡಿದರು. ಹಿಡಿದು ಚೆನ್ನಾಗಿ ನಾಲ್ಕು ಬಡಿದರು. ಆತ ಬಡಬಡಿಸತೊಡಗಿದ - "ಅಣ್ಣಾ, ನಾನೊಬ್ಬ ಬಡ ನೌಕರ. ಹೊಟ್ಟೆಪಾಡಿಗಾಗಿ ಹೀಗೆಲ್ಲ ಮಾಡಬೇಕಾಗಿದೆ."

    ಆಗ ಕೇಶವರಾಯರು - "ಹೊಡೆಯಬೇಡಿ, ಬಿಟ್ಟು ಬಿಡಿ ಅವನನ್ನು. ನಮ್ಮ ಕುರಿತು ಯೋಚಿಸುವ ಗೆಳೆಯ ಅವನು. ಅವನಿರುವುದರಿಂದ ನಮ್ಮ ವಿಷಯವೆಲ್ಲಾ ಮೇಲಧಿಕಾರಿಗಳಿಗೆ ಆತ ತಿಳಿಸುವುದಿಲ್ಲ. ಆದ್ದರಿಂದ ಅವನನ್ನು ನಮ್ಮವನನ್ನಾಗಿ ಮಾಡಿಕೊಳ್ಳುವುದೇ ಲಾಭದಾಯಕ" ಎಂದರು.

    ಆ ಗುಪ್ತಚರನನ್ನು ಮಿಠಾಯಿ ಅಂಗಡಿಗೆ ಕರೆತಂದರು. ಎಲ್ಲರೂ ಕೂಡಿ ಮಿಠಾಯಿ ತಿಂದರು. ಹಣ ಆತನೇ ಕೊಟ್ಟ. ನಂತರವೇ ಎಲ್ಲರೂ ಹಾಸ್ಯ ವಿನೋದ ಮಾಡುತ್ತಾ ತಂತಮ್ಮ ಮನೆಗಳಿಗೆ ಹೊರಟರು. ಆತ ಕೇಶವರಾಯರ ಕಾಲು ಹಿಡಿದು "ನೀವಿಂದು ನನ್ನನ್ನಿ ಬದುಕಿಸಿದಿರಿ. ನನ್ನನ್ನು ನಿಮ್ಮ ದಾಸನೆಂದೇ ತಿಳಿಯಿರಿ" ಎಂದ.

    ಆ ದಿನಗಳಲ್ಲಿ ಕೇಶವರಾಯರ ಚಟುವಟಿಕೆ ತಿಳಿಯಲು ಅನೇಕ ಗುಪ್ತಚರರು ಅವರ ಬೆನ್ನು ಹತ್ತಿದ್ದರು. ಆದರೆ ಕೇಶವರಾಯರು ಹೇಗೋ ಅವರ ಗುರುತು ಹಿಡಿಯುತ್ತಿದ್ದರು. ಅವರು ಯಾರನ್ನೂ ತಿರಸ್ಕರಿಸುತ್ತಿರಲಿಲ್ಲ. ಬದಲಾಗಿ ತಮ್ಮ ಚತುರತೆಯಿಂದ ಅವರನ್ನೂ ತಮ್ಮವರನ್ನಾಗಿಸಿಕೊಳ್ಳುತ್ತಿದ್ದರು. ವ್ಯಕ್ತಿಗಳ ಪರೀಕ್ಷೆಯಲ್ಲಿ ಕೇಶವರಾಯರು ಎತ್ತಿದಕೈ.

No comments:

Post a Comment