Wednesday, April 4, 2012

೧೫. ನಿರ್ಭಯತೆ

ನಿರ್ಭಯತೆ

   ಒಮ್ಮೆ ಬೇಸಿಗೆ ರಜೆಯಲ್ಲಿ ಕೇಶವರಾಯರು ನಾಗಪುರಕ್ಕೆ ಬಂದರು. ಅಲ್ಲಿಂದ ಯವತಮಾಳಕ್ಕೂ ಹೋದರು. ಆ ದಿನಗಳಲ್ಲಿ ಆಂಗ್ಲ ಕಲೆಕ್ಟರ್‌ನೊಬ್ಬ ಅಲ್ಲಿರುತ್ತಿದ್ದ. ತಾನು ಹೊರಗೆ ಓಡಾಡುವಾಗಲೆಲ್ಲ ಜನರು ದಾರಿ ಬಿಟ್ಟು ಕೈ ಮುಗಿದು ನಿಲ್ಲಬೇಕೆಂದು ಆತ ಬಯಸುತ್ತಿದ್ದ.

    ಒಂದು ಸಂಜೆ. ಕೇಶವರಾಯರು ತಮ್ಮ ಗೆಳೆಯರೊಡನೆ ತಿರುಗಾಡಲು ಹೊರಟಿದ್ದರು. ಕಲೆಕ್ಟರ್ ಸಾಹೇಬ ಅವರೆದುರು ಬರುತ್ತಿದ್ದ. ಆತ ಹತ್ತಿರ ಬರುತ್ತಿದ್ದಂತೆಯೇ ಯವತಮಾಳದ ಅವರ ಮಿತ್ರ ಹೇಳಿದ - "ಇವನಿಗೆ ನಮಸ್ಕರಿಸು, ಇದು ಇಲ್ಲಿನ ಪದ್ಧತಿ."

    ಕೇಶವರಾಯರು ಕೇಳಿದರು - "ಇದೆಂಥ ಪದ್ಧತಿ ? ಒತ್ತಾಯದಿಂದ ನಮಸ್ಕಾರ ಮಾಡಿಸುವುದೇ?"

    ಅವರು ನಮಸ್ಕಾರ ಮಾಡದೇ ಮುಂದುವರೆದರು. ಕಲೆಕ್ಟರನ ಜೊತೆಗಿದ್ದ ಇತರ ಅಧಿಕಾರಿಗಳು ಕೇಶವರಾಯರನ್ನು ಹತ್ತಿರ ಕರೆಸಿದರು. "ನಮಸ್ಕಾರ ಮಾಡು. ದೊಡ್ಡವರಿಗೆ ನಮಸ್ಕಾರ ಮಾಡಲೇಬೇಕು. ಅದರಲ್ಲಿ ನಷ್ಟವೇನು?" ಎಂದರು.

    ಆಗ ಕೇಶವರಾಯರು ಗಡಸು ಧ್ವನಿಯಲ್ಲಿ ಹೇಳಿದರು " "ನೋಡಿ, ನಮಸ್ಕರಿಸುವುದು ಪರಿಚಯಸ್ಥರಿಗೆ. ನನಗೆ ಈತನ ಪರಿಚಯವಿಲ್ಲ. ಈತ ನಮ್ಮ ದೇಶ ಧರ್ಮದವನೂ ಅಲ್ಲ. ವ್ಯಕ್ತಿತ್ವವೂ ಒಳ್ಳೆಯದಿಲ್ಲದಿರುವಾಗ ಗೌರವಿಸುವುದಾದರೂ ಎಂತು? ಒಂದು ವಿಷಯ ನಿಮಗೆ ತಿಳಿದಿರಲಿ - ನಮಸ್ಕರಿಸುವುದು ಗೌರವವಿರುವಲ್ಲಿ ಮಾತ್ರ. ಅದರ ಭಿಕ್ಷೆ ಬೇಡುವುದು ಸಲ್ಲದು. ಆದರ ಎನ್ನುವುದು ಒತ್ತಾಯ, ಬೆದರಿಕೆಯಿಂದ ಹುಟ್ಟದು. ತನ್ನಿಂತಾನೇ ಅದು ಹುಟ್ಟಬೇಕು. ಸ್ವಂತ ಕರ್ತೃತ್ವದಿಂದ ಅದು ಸಾಧ್ಯ. ಅಪಾತ್ರರಿಗೆ ಆದರ್ರ ತೋರಿಸುವುದೂ ಪಾಪ."

    ಅವರಿಗೆ ಉಪದೇಶಿಸಬಂದವರೆಲ್ಲ ತಣ್ಣಗಾದರು. ಕಲೆಕ್ಟರ್ ಸಾಹೇಬರಿಗೂ ಸಾಕೆನಿಸಿತು. "......ಈತ ಬೇರೆ ಊರಿನವನೆಂದು ತೋರುತ್ತದೆ. ಅವನನ್ನು ಬಿಟ್ಟುಬಿಡಿ" ಎಂದರು.

    ಆ ವಿಷಯ ಅಲ್ಲಿಗೇ ಮುಕ್ತಾಯವಾಯಿತು. ಇಂಗ್ಲೀಷ್ ಅಧಿಕಾರಿಗಳೆದುರು ನಿಲ್ಲಲೂ ಸಹ ಭಾರತೀಯರು ಹೆದರುತ್ತಿದ್ದ ದಿನಗಳು ಅವು. ಕೇಶವರಾಯರ ನಿರ್ಭಯತೆ ಯವತಮಾಳದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿತು.

No comments:

Post a Comment