Sunday, November 25, 2012

೯೮. ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

   ಡಾಕ್ಟರ್‌ಜಿಯವರು ನಾಗಪುರದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಆಗಿನ್ನೂ ಸಂಘ ಸ್ಥಾಪನೆಯಾಗಿರಲಿಲ್ಲ. ಸಂಘ ಸ್ಥಾಪನೆಯಾದ ನಂತರ ಡಾಕ್ಟರ್‌ಜಿಯವರು ರಾಜಕೀಯಕ್ಕೆ, ಚುನಾವಣೆ ಕ್ಷೇತ್ರಕ್ಕೆ ಹೋಗಲಿಲ್ಲ, ಸ್ವಾತಂತ್ರ್ಯ ಹೋರಾಟ ಬಿಟ್ಟು. ಡಾ|| ಮೂಂಜೆ ಎನ್ನುವವರು ಅವರ ಮಿತ್ರರು, ಆತ್ಮೀಯರು, ಹಿರಿಯರು. ಅವರು ಚುನಾವಣೆಗೆ ನಿಂತರು. ಡಾ|| ಮೂಂಜೆ ಅವರ ಪರವಾಗಿ ಪ್ರಚಾರ ಮಾಡಲು ಡಾಕ್ಟರ್‌ಜಿ ಹೋಗಿದ್ದರು. ಡಾ|| ಮೂಂಜೆಯವರ ವಿರುದ್ಧವಾಗಿ ಅಭ್ಯಂಕರ್ ಎನ್ನುವವರು ನಿಂತಿದ್ದರು. ಅಭ್ಯಂಕರರು ಒಬ್ಬ ವಕೀಲರು. ಅವರು ತಮ್ಮ ಭಾಷಣದಲ್ಲಿ ತಮ್ಮ ಎದುರಾಳಿಗಳ ಜನ್ಮ ಜಾಲಾಡುತ್ತಿದ್ದರು. ತಮ್ಮ ಎದುರಾಳಿಗಳ ಬಗ್ಗೆ ಹಾಗೆ, ಹೀಗೆ ಎಂದು ಹೀಗೆಳೆದು ಜನರನ್ನು ಮನರಂಜಿಸುತ್ತಾ ಭಾಷಣ ಮಾಡುವುದರಲ್ಲಿ ಅವರದು ಎತ್ತಿದ ಕೈ.

    ಅಂತಹ ಅಭ್ಯಂಕರರು ಡಾ|| ಮೂಂಜೆಯವರ ಬಗ್ಗೆ ಸಾಕಷ್ಟು ಹೇಳಿದರು. ಡಾ|| ಮೂಂಜೆಯವರ ಸಮರ್ಥನೆಗಾಗಿ ನಿಂತಿದ್ದ ಡಾಕ್ಟರ್‌ಜಿಯವರ ವಿಷಯ ಬಂದಿತು. ತಮ್ಮ ಭಾಷಣದ ವಾಗ್ದಾಳಿಯಲ್ಲಿ ಅವರು ’ಡಾ|| ಹೆಡಗೆವಾರ್..’ ಎಂದರು, ಅಷ್ಟೇ. ಅವರಿಗೆ ಮುಂದೆ ಮಾತು ಹೊರಡಲಿಲ್ಲ. ’ನಾನು ಅವರ ಬಗ್ಗೆ ಹೇಳೋದು ಏನಿದೆ? ಅವರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಹೇಳಿ ಸುಮ್ಮನಾದರು. ಅಭ್ಯಂಕರರ ಮಾತಿನಲ್ಲಿ ಡಾಕ್ಟರ್‌ಜಿಯವರ ಬಗ್ಗೆ ಒಂದೇ ಒಂದು ನಕಾರಾತ್ಮ ಮಾತೂ ಹೊರಡಲಿಲ್ಲ. ಏಕೆಂದರೆ ಡಾಕ್ಟರ್‌ಜಿಯವರ ಚಾರಿತ್ರ್ಯ, ಅವರ ಸಾರ್ವಜನಿಕ ಜೀವನದ ಶುದ್ಧತೆ, ಅವರ ವ್ಯಕ್ತಿ ಜೀವನದ ಶುದ್ಧತೆ ಇವು ಕಣ್ಣಿಗೆ ಕಟ್ಟುವ ಹಾಗಿದ್ದವು.

Labels: Abhyankar, Doctorji, Dr. Munje, Election, Sangha Story, ಅಭ್ಯಂಕರ್, ಚಾರಿತ್ರ್ಯ, ಡಾ|| ಮೂಂಜೆ, ಡಾಕ್ಟರ್‌ಜಿ, ಸಂಘದ ಕಥೆ,

Saturday, November 24, 2012

೯೭. ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

Labels: Duty, Emergency, Sacrifice, Sangha Story, ಕರ್ತವ್ಯ, ತುರ್ತು ಪರಿಸ್ಥಿತಿ, ತ್ಯಾಗ, ಸಂಘದ ಕಥೆ

೯೬. ದೇಶವೂ ನಮ್ಮದೇ, ಸರಕಾರವೂ ನಮ್ಮದೇ

ದೇಶವೂ ನಮ್ಮದೇ, ಸರಕಾರವೂ ನಮ್ಮದೇ

   ಗಾಂಧಿ ಹತ್ಯೆಯ ನಂತರ ಶ್ರೀ ಗುರೂಜಿಯವರನ್ನು ಜೈಲಿನಲ್ಲಿಟ್ಟರು. ಗಾಂಧೀ ಹತ್ಯೆಯ ಆರೋಪವನ್ನು ಅವರ ಮೇಲೆ ಮಾಡಲಾಯಿತು. ೫-೬ ತಿಂಗಳ ನಂತರ ಶ್ರೀ ಗುರೂಜಿಯವರು ಸರಕಾರಕ್ಕೆ ಒಂದು ಪತ್ರವನ್ನು ಬರೆದರು. ’ನಾನೇನಾದರು ಗಾಂಧಿ ಹತ್ಯೆಯಂತಹ ಗಂಭೀರ ತಪ್ಪು ಮಾಡಿದ್ದರೆ ನನ್ನ ಮೇಲೆ ಮೊಕದ್ದಮೆ ಹಾಕಿ. ಕೋರ್ಟಿನಲ್ಲಿ ವಿಚಾರಣೆ ಮಾಡಿ. ಆದರೆ ಕೋರ್ಟಿನಲ್ಲಿ ಮೊಕದ್ದಮೆ ಹೂಡದೆ, ವಿಚಾರಣೆ ಮಾಡದೆ ನನ್ನನ್ನು ಜೈಲಿನಲ್ಲಿಟ್ಟಿರುತ್ತೀರಿ. ಇದು ಸರಿಯಲ್ಲ’ ಎಂದರು.

    ಎಂಟು ತಿಂಗಳ ನಂತರವೂ ಯಾವುದೇ ಮೊಕದ್ದಮೆ ಹಾಕದಿದ್ದ ಮೇಲೆ, ಶ್ರೀ ಗುರೂಜಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಆ ಸತ್ಯಾಗ್ರಹದಲ್ಲಿ ತೋರಿದ ಸಂಘದ ಶಕ್ತಿಯನ್ನು ನೋಡಿ ಸಂಘದ ಮೇಲಿದ್ದಂತಹ ನಿರ್ಬಂಧ ತೆಗೆದು ಹಾಕಲಾಯಿತು. ೯೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು - ೧೮೫೭ ರಿಂದ ೧೯೪೭ ವರೆಗೆ. ಆ ತೊಂಭತ್ತು ವರ್ಷಗಳಲ್ಲಿ ಸುಮಾರು ೩೫ ಸಾವಿರ ಜನ ಜೈಲಿಗೆ ಹೋಗಿದ್ದರು. ಆದರೆ ಸಂಘದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಡೆಸಿದ ಸತ್ಯಾಗ್ರಹದಲ್ಲಿ ೭೬ ಸಾವಿರ ಜನ ಜೈಲಿಗೆ ಹೋಗಿದ್ದರು. ಸ್ವಯಂಸೇವಕರು ಸಂಘಟನೆಯ ಶಕ್ತಿಯನ್ನು ತೋರಿಸಿದ್ದರು.

    ಶ್ರೀ ಗುರೂಜಿಯವರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೆಲ್ಲೂ ಪೂರ್ವಪ್ರಕಟವಾದಂತಹ ಕಾರ್ಯಕ್ರಮಗಳು ನಡೆದವು. ಅಲ್ಲಿ ಮಾತನಾಡಿದ ಭಾಷಣದಲ್ಲಿ ಒಂದು ಶಬ್ದವೂ ಸರಕಾರದ ವಿರುದ್ಧ ಇರಲಿಲ್ಲ. ಆಗ ಸ್ವಯಂಸೇವಕರು ಶ್ರೀ ಗುರೂಜಿಯವರನ್ನು ಅದನ್ನು ಪ್ರಶ್ನಿಸುತ್ತಾರೆ. ಶ್ರೀ ಗುರೂಜಿಯವರು ’ಈ ಸರಕಾರವೂ ನಮ್ಮದು, ದೇಶವೂ ನಮ್ಮದು. ನಾವು ಹಿಂದು ಸಮಾಜದ ಒಳಗಡೆ ಸಂಘಟನೆ ಕಟ್ಟುತ್ತಿಲ್ಲ. ಹಿಂದು ಸಮಾಜದ ಸಂಘಟನೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಊಟ ಮಾಡುವಾಗ ನಾಲಗೆಯನ್ನು ಹಲ್ಲು ಕಚ್ಚುತ್ತದೆ. ಆಗ ಹಲ್ಲನ್ನು ಕಲ್ಲಿನಿಂದ ಜಜ್ಜಿ ಕಿತ್ತು ಹಾಕುವುದಿಲ್ಲ. ಹಲ್ಲೂ ನಮ್ಮದೆ, ನಾಲಗೆಯನ್ನು ಕಚ್ಚಿದೆ, ಇನ್ನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ ಅಷ್ಟೇ. ಈಗ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ದ್ವೇಷ ಬೇಡ’ ಎಂದರು.

Labels: Ban in 1948, Jail, Sri Guruji, Tongue and Teeth, ಜೈಲು, ನಾಲಗೆ, ಶ್ರೀ ಗುರೂಜಿ, ಸಂಘದ ಕಥೆ, ಹಲ್ಲು, ೧೯೪೮ರ ನಿರ್ಬಂಧ

೯೫. ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಚಿಂತನೆ

   ೨೦೧೨ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ನಡೆಯಿತು. ಅದಾದ ೧೫ ದಿನಗಳ ನಂತರ ಹುಬ್ಬಳ್ಳಿಯಿಂದ ಆ ಕಾರ್ಯಕ್ರಮಕ್ಕೆ ಹೋದವರ ಒಂದು ಬೈಠಕ್ ನಡೆಯಿತು. ವಿಶ್ವ ಹಿಂದೂ ಪರಿಷತ್ತಿನ ಅಲ್ಲಿನ ಪ್ರಾಂತ ಕಾರ್ಯದರ್ಶಿಗಳು ಒಂದು ಅನುಭವವನ್ನು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ಕರಡಿಗುಡ್ಡ ಎನ್ನುವ ಒಂದು ಹಳ್ಳಿಯಿದೆ. ಅಲ್ಲಿಯ ೩೨ ಹರಿಜನ ಕುಟುಂಬದವರು ತಾವು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತೇವೆ ಎಂದು ಹೇಳಿದ್ದರು. ಯಾವುದೋ ಒಂದು ನಿಶ್ಚಿತ ದಿನ ಮತಾಂತರದ ಕಾರ್ಯಕ್ರಮವಿತ್ತು. ಚರ್ಚಿನವರು ಬಹಳ ಉತ್ಸುಕತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

    ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

    ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.

Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ

೯೪. ಜಾತಿ

ಜಾತಿ

    ವ್ಯಕ್ತಿಯನ್ನು ಜೋಡಿಸಬೇಕಾದರೆ ಏನೇನು ಕಷ್ಟಗಳನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಒಂದು ಉದಾಹರಣೆ. ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಕಪ್ಪಗಿದ್ದರು. ಅವರ ಜೊತೆಯಲ್ಲಿ ರಮಾನಾಥ ರೈ ಎನ್ನುವ ಇನ್ನೊಬ್ಬ ಪ್ರಚಾರಕರು. ಅವರು ಬೆಳ್ಳಗಿದ್ದರು. ಎಲ್ಲರಿಗೂ ರಮಾನಾಥರು ಬ್ರಾಹ್ಮಣ ಎನ್ನುವ ಕಲ್ಪನೆ, ಕೃಷ್ಣಪ್ಪನವರು ಬ್ರಾಹ್ಮಣರಲ್ಲ ಎನ್ನುವ ಅನಿಸಿಕೆ. ಕೃಷ್ಣಪ್ಪನವರಿಗೆ ಯಾವಾಗಲೂ ಮನೆಯ ಹೊರಗಡೆ ಊಟ. ರಮಾನಾಥ ರೈ ಅವರಿಗೆ ಮನೆ ಒಳಗಡೆ ಊಟ. ಎಂದೂ ರಮಾನಾಥ ರೈಗಳು ತಾವು ಬ್ರಾಹ್ಮಣ ಅಲ್ಲ ಎಂದು ಹೇಳಿಕೊಳ್ಳಲಿಲ್ಲ ಅಥವಾ ಕೃಷ್ಣಪ್ಪನವರು ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲಿಲ್ಲ.

Labels: Caste, Na. Krishnappa, Ramanatha Rai, Sangha Story, ಊಟ, ಜಾತಿ, ನ. ಕೃಷ್ಣಪ್ಪ, ರಮಾನಾಥ ರೈ, ಸಂಘದ ಕಥೆ

೯೩. ಖಾರದ ಊಟ

ಖಾರದ ಊಟ

   ಹಿಂದೆ ಸರಕಾರ್ಯವಾಹರಾಗಿದ್ದಂತಹ ಹೂ.ವೆ. ಶೇಷಾದ್ರಿಯವರು ತೀರಿಕೊಂಡ ನಂತರ ಅವರ ಬಗ್ಗೆ ಒಂದು ಸಣ್ಣ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಅವರ ಬಗ್ಗೆ ನ. ಕೃಷ್ಣಪ್ಪನವರು ಬರೆದಿದ್ದಾರೆ.

    ಆಗ ೫೦ರ ದಶಕ. ಆಗ ಪ್ರಾಂತ ಪ್ರಚಾರಕರಾಗಿದ್ದ ಶೇಷಾದ್ರಿಯವರಿಗೆ ಅಲ್ಸರ್ ಖಾಯಿಲೆ ಇತ್ತು. ಆಗ ಮನೆಗಳಲ್ಲಿ ಉಳಿದುಕೊಳ್ಳುವ ಅವಕಾಶವು ಕಡಿಮೆ. ಒಂದು ಮನೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು. ಊಟಕ್ಕೆ ವಿಪರೀತ ಖಾರ ಹಾಕಿದ್ದರು. ಆದರೂ ಶೇಷಾದ್ರಿಯವರು ಆ ಊಟವನ್ನೇ ತಿಂದರು.

    ನಂತರ ಅವರಿಗೆ ಭೇದಿ ಶುರುವಾಯಿತು. ಇವರಿಬ್ಬರೂ ಉಳಿದುಕೊಂಡಿದ್ದು ಮಹಡಿಯ ಮೇಲೆ. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಕೆಳಗಿಳಿದು ಬರಬೇಕು. ೨-೩ ಮೂರು ಬಾರಿ ಭೇದಿಯಾದ ಮೇಲೆ ಶೇಷಾದ್ರಿಯವರು ಕೃಷ್ಣಪ್ಪನವರ ಬಳಿ ’ಈ ಮನೆಯವರಿಗೆ ತೊಂದರೆ ಕೊಡುವುದು ಬೇಡ. ಊರ ಹೊರಗಿರುವ ಕೆರೆಯ ಪಕ್ಕದಲ್ಲೇ ಮಲಗೋಣ’ ಎಂದು ಹೇಳಿ, ಮನೆಯವರಿಗೆ ಗೊತ್ತಾಗದ ಹಾಗೆ ಹೊರಗೆ ಬಂದರು. ಬೆಳಿಗ್ಗೆ ಹೊತ್ತಿಗೆ ೧೫-೨೦ ಬಾರಿ ಭೇದಿಯಾಗಿದೆ. ಕೆರೆಯಲ್ಲೇ ಸ್ನಾನ ಮಾಡಿ ಮನೆಗೆ ಬಂದರು. ಮನೆಯವರಿಗೆ ಯಾವ ವಿಷಯವನ್ನೂ ಹೇಳಲಿಲ್ಲ. ಎಲ್ಲಾ ವ್ಯವಸ್ಥೆಗಳನ್ನೂ ಹೊಗಳಿ ಹೊರಟರು. ಅಂಥಾ ತೀವ್ರವಾದ ಅನಾರೋಗ್ಯವಿದ್ದಾಗಲೂ, ಖಾರದ ಊಟ ಮಾಡಿ ಆರೋಗ್ಯ ಹಾಳಾದರೂ ಯಾವುದೇ ಮಾತಾಡದೆ ಸಹಿಸಿಕೊಂಡರು.

Labels: H.S. Sheshadri, Loose Motion, Na. Krishnappa, Sangha Story, Ulcer, ಅಲ್ಸರ್, ನ. ಕೃಷ್ಣಪ್ಪ, ಭೇದಿ, ಸಂಘದ ಕಥೆ, ಹೂ.ವೆ. ಶೇಷಾದ್ರಿ

೯೨. ಸಂಘ ಮತ್ತು ಕಮ್ಯೂನಿಸಂ

ಸಂಘ ಮತ್ತು ಕಮ್ಯೂನಿಸಂ

   ಎಪ್ಪತ್ತರ ದಶಕದಲ್ಲಿ ಸಂಘದ ಮೂರನೆಯ ಸರಸಂಘಚಾಲರಾಗಿದ್ದ ಬಾಳಾಸಾಹೇಬ ದೇವರಸ್‍ರವರು ’ಆರ್.ಎಸ್.ಎಸ್ ಕೆಟ್ಟದ್ದು, ಅದು ಹೇಳುವ ಹಿಂದುತ್ವ ಕೆಟ್ಟದ್ದು ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಆರ್.ಎಸ್.ಎಸ್. ಸ್ವಯಂಸೇವಕರು ತುಂಬಾ ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಕಮ್ಯೂನಿಸಂ ಒಳ್ಳೆಯದು ಆದರೆ ಕಮ್ಯೂನಿಸ್ಟರು ಕೆಟ್ಟವರು ಎನ್ನುವ ಅಭಿಪ್ರಾಯವೂ ಅದೇ ರೀತಿ ಜನರಲ್ಲಿದೆ. ಕಮ್ಯೂನಿಸಂ ಎಂದರೆ ಇಡೀ ಜಗತ್ತನೇ ಒಂದು ಮಾಡಲು ಹೊರಟಿದೆ, ಆದರೆ ಈ ಹಿಂದುತ್ವವೆಂದರೆ ಸಂಕುಚಿತ ಎನ್ನುವ ಅಭಿಪ್ರಾಯವೂ ಇದೆ. ಯಾವಾಗ ಅದೇ ಜನ ನಮ್ಮ ಸ್ವಯಂಸೇವಕರನ್ನು ಒಪ್ಪಿಕೊಳ್ಳುತ್ತಾರೋ ಆಗ ನಮ್ಮ ಕಾರ್ಯಪದ್ಧತಿಯನ್ನೂ ಮತ್ತು ನಮ್ಮ ಕಾರ್ಯವು ಸರಿಯಿದೇ ಎನ್ನುವುದನ್ನೂ ಒಪ್ಪಿಕೊಳ್ಳಬೇಕು’.

    ’ಸ್ವಯಂಸೇವಕನು ಚೆನ್ನಾಗಿದ್ದಾನೆ ಎಂದರೆ ಅದನ್ನು ತಯಾರು ಮಾಡುವ ಶಾಖೆಯೂ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಶಾಖೆಯನ್ನು ಶುರು ಮಾಡಿದ ಸಂಘದ ವಿಚಾರವೂ ಸರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕಮ್ಯೂನಿಸ್ಟರು ಕೆಟ್ಟವರಾದ್ದರಿಂದ, ಕಮ್ಯೂನಿಸಂ ಕೂಡ ಕೆಟ್ಟದೆಂದು ಅವರು ತಿಳಿಯಬೇಕು. ಮತ್ತು ಕಮ್ಯೂನಿಸ್ಟ್ ಸಿದ್ಧಾಂತವೂ ಸರಿಯಿಲ್ಲವೆಂದು ಒಪ್ಪಿಕೊಳ್ಳಬೇಕು. ವಿಚಾರ ಮತ್ತು ಕಾರ್ಯಪದ್ಧತಿಗಳಿಂದ ತಯಾರಾಗುವವನೇ ಕಾರ್ಯಕರ್ತ. ಸಂಘದ ಕಾರ್ಯಕರ್ತನನ್ನು ಮೆಚ್ಚಿಕೊಂಡಿದ್ದರಿಂದ ಸಂಘದ ಕಾರ್ಯಪದ್ಧತಿಯೂ ಸರಿಯಿದೆ, ಸಂಘದ ವಿಚಾರವೂ ಸರಿಯಿದೆ ಎನ್ನುವುದು ಸಾಬೀತಾಗುತ್ತದೆ’ ಎಂದು ಹೇಳುತ್ತಿದ್ದರು.

Labels: Balasaheb Devaras, Communism, Sangha Story, ಕಮ್ಯೂನಿಸಂ, ಬಾಳಾಸಾಹೇಬ ದೇವರಸ್, ಸಂಘದ ಕಥೆ