Showing posts with label Sacrifice. Show all posts
Showing posts with label Sacrifice. Show all posts

Sunday, November 25, 2012

೧೦೩. ಬಂದೂಕಿನ ಗುಂಡಿಗೆ ಉತ್ತರ

ಬಂದೂಕಿನ ಗುಂಡಿಗೆ ಉತ್ತರ

   ಮೊಗ ಎನ್ನುವುದೊಂದು ಪಂಜಾಬಿನ ಜಿಲ್ಲಾ ಕೇಂದ್ರ. ಖಾಲಿಸ್ಥಾನದ ಬೇಡಿಕೆಯನ್ನಿಟ್ಟುಕೊಂಡು ಭಯೋತ್ಪಾದಕತೆ ಮುಗಿಲು ಮುಟ್ಟಿದಂತಹ ದಿನಗಳು. ಆಗ, ಮೋಗದ ಒಂದು ಶಾಖೆಯ ಮೇಲೆ ಖಾಲಿಸ್ಥಾನೀ ಭಯೋತ್ಪಾದಕರು ಬಂದೂಕಿನಿಂದ ದಾಳಿ ಮಾಡಿದರು. ಸುಮಾರು ೧೦-೧೨ ಸ್ವಯಂಸೇವಕರು ಸಂಘಸ್ಥಾನದಲ್ಲೇ ಉರುಳಿಬಿದ್ದರು. ಇನ್ನೊಂದಷ್ಟು ಜನ ಗಾಯಗೊಂಡರು. ಈ ರೀತಿ ಸಾವಿಗೀಡಾದವರನ್ನು ಮರಣೋತ್ತರ ಪರೀಕ್ಷೆಗೆ, ಗಾಯಗೊಂಡವರ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವು ತಕ್ಷಣ ನಡೆಯಿತು. ಇಡೀ ನಗರದ ಸ್ವಯಂಸೇವಕರು, ಜನರೂ, ಪೊಲೀಸರು ಬಂದು ವ್ಯವಸ್ಥೆಗಳನ್ನು ಮಾಡಿದರು.

    ಮರುದಿನ ಅದೇ ಸಮಯಕ್ಕೆ ಅದೇ ಸಂಘಸ್ಥಾನದಲ್ಲಿ ಸುಮಾರು ೨೦೦ ಸ್ವಯಂಸೇವಕರು ಒಂದು ಗಂಟೆ ಶಾಖೆ ನಡೆಸಿದರು. ಅವರೇನು ಬಂದೂಕು ತರಲಿಲ್ಲ. ಪೊಲೀಸರ ಬಳಿ ತಮ್ಮ ರಕ್ಷಣೆಗಾಗಿ ಕೇಳಲಿಲ್ಲ. ಸ್ವಯಂಸೇವಕರು ಮೌನವಾಗಿ ಬಂದರು, ಧ್ವಜ ಹಾಕಿದರು, ಅಲ್ಲಿ ಶಾಖೆ ನಡೆಸಿದರು, ಪ್ರಾರ್ಥನೆ ಮಾಡಿ ’ಭಾರತಮಾತಾ ಕಿ ಜಯ್’ ಎಂದು ಮುಗಿಸಿ ಹೋದರು. ಸಮಾಜ ಇದನ್ನು ನೋಡಿತು. ಭಯೋತ್ಪಾದಕರೂ ಇದನ್ನು ಬಹುಶಃ ನೋಡಿರಬೇಕು. ಸಂಘದ ಸ್ವಯಂಸೇವಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ. ಅವರು ಮೌನವಾಗಿ ಒಂದು ಉತ್ತರ ಕೊಟ್ಟರು ’ನಿಮ್ಮ ಬಂದೂಕಿನಿಂದ ನೀವು ನಮ್ಮ ಸಂಘದ ಶಾಖೆಯನ್ನು ಸಮಾಪ್ತ ಮಾಡಲಾರಿರಿ. ನಾವು ನಿಮ್ಮ ಭಯೋತ್ಪಾದಕತೆಗೆ ಹೆದರಿ ಬಾಲ ಮುದುರಿಕೊಂಡು ಹೋಗುವಂತಹ ಹಿಂದು ವೀರರಲ್ಲ. ನಾವು ನಿಮ್ಮ ಎದುರು ನಿಲ್ಲಬಲ್ಲೆವು. ನಿಮ್ಮ ಬಂದೂಕಿಗೆ ಉತ್ತರ ಕೊಡಬಲ್ಲೆವು’ ಎಂದು. ಅಲ್ಲಿ ಇನ್ನೊಮ್ಮೆ ದಾಳಿಯಾಗಲಿಲ್ಲ.

Labels: Moga, Punjab, Sacrifice, Shakha, Terrorist Attack, ಪಂಜಾಬ್, ಬಲಿ, ಭಯೋತ್ಪಾದಕರ ಗುಂಡು, ಮೊಗ, ಶಾಖೆ

Saturday, November 24, 2012

೯೭. ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ

   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

Labels: Duty, Emergency, Sacrifice, Sangha Story, ಕರ್ತವ್ಯ, ತುರ್ತು ಪರಿಸ್ಥಿತಿ, ತ್ಯಾಗ, ಸಂಘದ ಕಥೆ

Thursday, November 22, 2012

೭೫. ಕೊನೆಯ ಹಿಂದುವನ್ನೂ ರಕ್ಷಿಸಿ

ಕೊನೆಯ ಹಿಂದುವನ್ನೂ ರಕ್ಷಿಸಿ

   ೧೯೪೭ರ ದೇಶ ವಿಭಜನೆ ಸಂಘದ ಸ್ವಯಂಸೇವಕರಿಗೆ ಮತ್ತು ಇತರ ದೇಶ ಪ್ರೇಮಿಗಳಿಗೆ ಅತ್ಯಂತ ದುಃಖದ ವಿಷಯ.

    ವಿಭಜನೆಯ ಸ್ವಲ್ಪ ಸಮಯದ ಮುಂಚೆ ಒಂದು ಸಂಘ ಶಿಕ್ಷಾ ವರ್ಗ ಈಗಿನ ಪಾಕಿಸ್ಥಾನದ ಭಾಗದಲ್ಲಿ ನಡೆಯುತ್ತಿತ್ತು. ಸುಮಾರು ೨೦೦ ಸ್ವಯಂಸೇವಕರು ಭಾಗವಹಿಸಿದ್ದರು. ಮುಂದಿನ ಸಂಘರ್ಷದ ಸಮಯದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಮೊದಲೇ ಕಲ್ಪನೆಯಿದ್ದ ಶ್ರೀ ಗುರೂಜಿ ಎಲ್ಲ ಶಿಕ್ಷಾರ್ಥಿಗಳನ್ನು ಕುರಿತು "ಈ ಕಡೆಯಿಂದ ಲಕ್ಷಾಂತರ ಜನ ವಲಸೆ ಹೋಗಲಿದ್ದಾರೆ. ಅವರ ಮೇಲೆ ನಾನಾ ರೀತಿಯ ಅತ್ಯಾಚಾರಗಳು ನಡೆಯುವ ಸಂಭವವಿದೆ. ಪ್ರತಿಯೊಬ್ಬ ಹಿಂದುವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಕಟ್ಟಕಡೆಯ ಹಿಂದು ಸುರಕ್ಷಿತವಾಗಿ ಭಾರತವನ್ನು ತಲುಪದ ತನಕ ನೀವು ಇಲ್ಲಿಂದ ಹೊರಡಬಾರದು" ಎಂದು ನುಡಿದರು.

    ಮುಂದಿನ ದಿನಗಳಲ್ಲಿ ಶ್ರೀ ಗುರೂಜಿಯವರು ನುಡಿದಿದ್ದ ರೀತಿಯಲ್ಲೇ, ವಲಸೆ ಹೊರಟಿದ್ದ ಲಕ್ಷಾಂತರ ಹಿಂದುಗಳನ್ನು ಕೊಲ್ಲಲಾಯಿತು. ಹಿಂದು ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೊಳಿಸಿ ಮತಾಂತರಗೊಳಿಸಲಾಯಿತು. ಆದರೆ ಆ ಶಿಕ್ಷಾವರ್ಗದಲ್ಲಿದ್ದ ಎಲ್ಲ ೨೦೦ ಸ್ವಯಂಸೇವಸೇವಕರೂ ಅಂತಹ ಹಿಂದುಗಳ ರಕ್ಷಣೆಗೆ ನಿಂತರು. ಸಾವಿರಾರು ಹಿಂದುಗಳನ್ನು ಕಾಪಾಡಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು.

    ಆದರೆ ಆ ೨೦೦ ಸ್ವಯಂಸೇವಕರ ಬಲಿಯಾಯಿತು.

Labels: Partition, Sacrifice, Sangha Story, Sri Guruji, ದೇಶ ವಿಭಜನೆ, ಪ್ರಾಣಾರ್ಪಣೆ, ಶ್ರೀ ಗುರೂಜಿ, ಸಂಘದ ಕಥೆ, ಸ್ವಾತಂತ್ರ್ಯ

೭೨. ಇದ್ದಲಿನ ಅಂಗಡಿ ತೆರೆಯೋಣ

ಇದ್ದಲಿನ ಅಂಗಡಿ ತೆರೆಯೋಣ

   ೧೯೪೮ರ ಗಾಂಧೀಜಿ ಹತ್ಯೆಯ ನಂತರ ಸಂಘದ ಮೇಲೆ ನಿರ್ಬಂಧ ಹಾಕಲಾಯಿತು. ದೇಶಾದಾದ್ಯಂತ ಸ್ವಯಂಸೇವಕರ ಮೇಲೆ ಹಲ್ಲೆ ನಡೆಯಿತು. ಸ್ವಯಂಸೇವಕರ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಲಾಯಿತು. ಅನೇಕರು ವಿಧವಿಧವಾದ ಕಷ್ಟಕ್ಕೊಳಪಟ್ಟರು.

    ಆ ಸಮಯದಲ್ಲಿ ಕೊಲ್ಹಾಪುರದ ಸಂಘಚಾಲಕರಾಗಿದ್ದವರು ಮಾ. ಪೆಂಡಾರ್ಕರ್‌ಜಿ. ಒಂದು ಸಿನಿಮಾ ಸ್ಟುಡಿಯೋದ ಮಾಲಿಕರು. ಡಾಕ್ಟರ್‌ಜಿಯವರ ಏಕೈಕ ಚಲನಚಿತ್ರವನ್ನು ಚಿತ್ರೀಕರಿಸಿದವರು ಅವರೇ.

    ಗಾಂಧೀಜಿ ಹತ್ಯೆಯ ಕೋಪಕ್ಕೆ ಪೆಂಡಾರ್ಕರ್‌ರವರ ಸ್ಟುಡಿಯೋ ಬಲಿಯಾಯಿತು. ಸುದ್ದಿ ತಿಳಿದು ಪೆಂಡಾರ್ಕರ್ ಮತ್ತು ಅವರ ಹೆಂಡತಿ ಸ್ಟುಡಿಯೋಗೆ ಬಂದು ನೋಡಿದರೆ ದುರುಳರು ಅದಕ್ಕೆ ಬೆಂಕಿ ಹಚ್ಚಿ ಬೂದಿಗೊಳಿಸಿದ್ದರು. ಆ ದೃಶ್ಯವನ್ನು ನೋಡಿದ ಪೆಂಡಾರ್ಕರ್‌ರವರ ಹೆಂಡತಿ ಅಳತೊಡಗಿದರು. ಆದರೆ ಪೆಂಡಾರ್ಕರ್‌ರವರು ಮಾತ್ರ ಸುಮ್ಮನೆ ಉರಿಯುತ್ತಿದ್ದ ಸ್ಟುಡಿಯೋ ಕಡೆ ನೋಡುತ್ತಾ ನಿಂತಿದ್ದರು.

    ಅವರ ಹೆಂಡತಿಯು "ನಿಮಗೇನೂ ಅನ್ನಿಸುತ್ತಲೇ ಇಲ್ಲವೇನು? ನಮ್ಮ ಸ್ಟುಡಿಯೋವನ್ನು ಸುಟ್ಟು ಹಾಕಿದ್ದರೂ ನಿಮಗೆ ದುಃಖ, ಕೋಪ ಬರುತ್ತಿಲ್ಲವೇ?" ಎಂದು ಕೇಳಿದರು.

    ಪೆಂಡಾರ್ಕರ್‌ರವರು ಶಾಂತವಾಗಿ "ಹೋಗಲಿ ಬಿಡು, ಸ್ಟುಡಿಯೋ ಸುಟ್ಟು ಆರಿದ ನಂತರ ಇದ್ದಲಿನ ಅಂಗಡಿಯನ್ನು ತೆರೆದರಾಯಿತು" ಎಂದರು.

Labels: Gandhiji, Pendarkar, Sacrifice, Sangha Story, Studio burns, ಗಾಂಧೀಜಿ ಹತ್ಯೆ, ಪೆಂಡಾರ್ಕರ್, ಸಮರ್ಪಣೆ, ಸ್ಟುಡಿಯೋಗೆ ಬೆಂಕಿ

Wednesday, November 21, 2012

೬೯. ಸಂಘ ಕಲಿಸಿದ ತ್ಯಾಗ

ಸಂಘ ಕಲಿಸಿದ ತ್ಯಾಗ

   ಹರಿಯಾಣದ ಒಂದು ಚಿಕ್ಕ ಊರು. ಅಲ್ಲಿನ ನಗರ ಕಾರ್ಯವಾಹ ಒಂದು ದಿನ ತನ್ನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಸ್ವಲ್ಪ ದೂರದ ನಂತರ ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿ ಹೊಗೆಯನ್ನು ಕಂಡ. ವ್ಯಾಕುಲಗೊಂಡು ಸೈಕಲ್ಲನ್ನು ಜೋರಾಗಿ ತುಳಿದುಕೊಂಡು ಹತ್ತಿರ ಹೋಗಿ ನೋಡುತ್ತಾನೆ.

    ಅದು ಒಂದು ಶಾಲೆ. ಅಂದು ಆ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ. ಹಾಕಿದ್ದ ಪೆಂಡಾಲಿಗೆ ಅಕಸ್ಮಾತ್ ಬೆಂಕಿ ಬಿದ್ದು ಉರಿಯತೊಡಗಿತ್ತು.

    ನೋಡ ನೋಡುತ್ತಿದ್ದಂತೇ ಬೆಂಕಿ ಇಡೀ ಸಭಾಂಗಣವನ್ನೇ ಮುತ್ತಿತು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಹೊರಗೆ ಓಡತೊಡಗಿದರು. ಕೆಲವು ಮಕ್ಕಳು ಇತರರ ಕಾಲ್ತುಳಿತಕ್ಕೆ ಸಿಲುಕಿ ಬಿದ್ದರು. ಬೆಂಕಿ ಇನ್ನೂ ಹೆಚ್ಚಾಗತೊಡಗಿತ್ತು. ಹೊರಗೆ ಓಡಿದ್ದ ಎಲ್ಲರೂ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳ ಬಗ್ಗೆ ಕೂಗಿಕೊಳ್ಳತೊಡಗಿದರು.

    ಆ ದೃಶ್ಯ ನೋಡಿದ ಆ ಕಾರ್ಯವಾಹ ತನ್ನ ಸೈಕಲ್ಲನ್ನು ಅಲ್ಲಿಯೇ ಎಸೆದು ಎಲ್ಲರೂ ನೋಡುತ್ತಿದ್ದಂತೆಯೇ ಆ ಪೆಂಡಾಲಿನ ಒಳಗೆ ನುಗ್ಗಿದ. ಒಳಗೆ ಬೆಂಕಿಯ ಮಧ್ಯದಲ್ಲಿ ಸಿಕ್ಕಿಕೊಂಡಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ತಂದು ಬಿಡತೊಡಗಿದ. ಬೆಂಕಿ ಇನ್ನೂ ಜೋರಾಗತೊಡಗಿತು.

    ಒಳಗಿದ್ದ ೧೩ ಮಕ್ಕಳನ್ನು ಉಳಿಸಿ ಮತ್ತೆ ಒಳಗೆ ಹೋದವನು ಮತ್ತೆ ಹೊರ ಬರಲಾಗದೆ ಒಳಗೆ ಬೆಂಕಿಯಲ್ಲಿ ಸಿಕ್ಕಿ ಸಾವಿಗೀಡಾಗುತ್ತಾನೆ.

    ಆ ಸಮಯದಲ್ಲಿ ಅವನ ಹೆಂಡತಿ ತುಂಬು ಗರ್ಭಿಣಿ. ಯಾರೋ ಹೇಳಿದ ವಾರ್ತೆ ಕೇಳಿ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. ಪೂರ್ತಿ ಬೆಂದು ಹೋದ ಅವನ ದೇಹವನ್ನು ಗುರುತಿಸಲು ಅವಳಿಗೆ ಸಾಧ್ಯವಾಗಿದ್ದು ಅವನು ಹಾಕಿಕೊಂಡಿದ್ದ ಉಂಗುರದ ಸಹಾಯದಿಂದ.

Labels: Haryana, Karyavaha, Sacrifice, Sangha Story, School Fire, ಉಂಗುರ, ಕಾರ್ಯವಾಹ, ಪ್ರಾಣಾರ್ಪಣೆ, ಶಾಲೆಗೆ ಬೆಂಕಿ, ಹರಿಯಾಣ

೬೮. ಧರ್ಮವು ಪ್ರಾಣಕ್ಕಿಂತ ಮಿಗಿಲು

ಧರ್ಮವು ಪ್ರಾಣಕ್ಕಿಂತ ಮಿಗಿಲು

   ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಜರು, ಸಾಮಂತರು, ಸಂಸ್ಥಾನಗಳು ಪಾಲ್ಗೊಂಡಿದ್ದವು. ವೀರ ಸೈನಿಕರು, ಸೇನಾಪತಿಗಳು, ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದರು. ದುರದೃಷ್ಟವಶಾತ್ ಕೆಲವೇ ಕೆಲವರ ಮೋಸದಿಂದಾಗಿ, ಭಾರತದಿಂದ ಸೈನ್ಯ ಸೋತು ಬ್ರಿಟಿಷರನ್ನು ಓಡಸಬಹುದಾಗಿದ್ದ ಅವಕಾಶ ತಪ್ಪಿಹೋಯಿತು.

    ಯುದ್ಧ ಮುಗಿದ ನಂತರ ಬ್ರಿಟಿಷರು ತಮ್ಮ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಿಡಿದು ಸೆರೆಮನೆಯಲ್ಲಿ ಹಾಕಿಯೋ ಅಥವಾ ಮರಣದಂಡನೆ ನೀಡಿಯೋ ತಮ್ಮ ಸೇಡನ್ನು ತೀರಿಸಿಕೊಳ್ಳತೊಡಗಿದರು. ಮುಂದೆಂದೂ ಬ್ರಿಟಿಷರ ವಿರುದ್ಧ ಆ ರೀತಿಯ ಸಂಗ್ರಾಮ ನಡೆಯಬಾರದೆಂಬ ಉದ್ದೇಶದಿಂದ ತಮ್ಮ ವಿರೋಧಿಗಳೆಲ್ಲರನ್ನೂ ಸದೆ ಬಡಿಯಲು ಆರಂಭಿಸಿದರು.

    ಹಾಗೆ ಸೆರೆಸಿಕ್ಕವರಲ್ಲಿ ಒಂದು ಚಿಕ್ಕ ಸಂಸ್ಥಾನದ ಒಬ್ಬ ಸೈನಿಕ. ಇನ್ನೂ ೧೭-೧೮ರ ವಯಸ್ಸು. ಸೆರೆಯಾದರೂ ಯಾವುದೇ ಭಯವಿಲ್ಲದೇ ಧೈರ್ಯದಿಂದಲೇ ಇದ್ದ. ಬ್ರಿಟಿಷ ಅಧಿಕಾರಿಯೊಬ್ಬ ಸೋಗಿನ ವಿಚಾರಣೆ ನಡೆಸಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಮರಣ ದಂಡನೆಯ ದಿನ ಅವನನ್ನು ಒಂದು ಮೈದಾನಕ್ಕೆ ಕರೆದುಕೊಂಡು ಬರಲಾಯಿತು.

    ಬೇಡಿಯ ಸಹಿತ ಬಂದ ಅವನನ್ನು ಕುರಿತು ಬ್ರಿಟಿಷ್ ಅಧಿಕಾರಿಯು ಹೇಳಿದ "ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ನಿನಗೋ ಇನ್ನೂ ಎಳೆ ವಯಸ್ಸು. ಆದ್ದರಿಂದ ನಿನಗೆ ಬದುಕಲು ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಹಿಂದು ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಮತಾಂತರಗೊಂಡರೆ, ನಿನಗೆ ಪ್ರಾಣ ಭಿಕ್ಷೆ ಕೊಟ್ಟು ನಿನ್ನನ್ನು ಬ್ರಿಟಿಷ್ ಸೈನ್ಯದಲ್ಲೂ ಸೇರಿಸಿಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಇಂದೇ ತೋಪಿಗೆ ಕಟ್ಟಿ ಉಡಾಯಿಸಲಾಗುವುದು".

    ಅವನ ಮಾತನ್ನು ಕೇಳಿ ಆ ಹುಡುಗ ನಕ್ಕು "ನನಗೆ ನನ್ನ ಜೀವಕ್ಕಿಂತ ನನ್ನ ರಾಷ್ಟ್ರ ಮತ್ತು ನನ್ನ ಹಿಂದು ಧರ್ಮವೇ ಮೇಲು. ನಿಮ್ಮ ಪಾಡಿಗೆ ನಿಮ್ಮ ತೋಪಿಗೆ ಕೆಲಸ ಕೊಡಿ" ಎಂದ.

    ಅವನ ಮಾತಿನ್ನು ಕೇಳಿ ಆ ಬ್ರಿಟಿಷ್ ಅಧಿಕಾರಿಯು ತನ್ನ ಆಮಿಷವು ಕೆಲಸ ಮಾಡದೆಂದು ತಿಳಿದು ಅವನನ್ನು ತೋಪಿಗೆ ಕಟ್ಟಲು ಹೇಳಿದ. ಆ ಹುಡುಗನು ನಗುನಗುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ.

Labels: 1857 1st War of Independence, Boudhik Story, Conversion, Sacrifice, ಪ್ರಾಣಾರ್ಪಣೆ, ಮತಾಂತರ, ಯೋಧ, ಹಿಂದು ಧರ್ಮ, ೧೮೫೭ರ ಸಂಗ್ರಾಮ