Showing posts with label Sri Guruji. Show all posts
Showing posts with label Sri Guruji. Show all posts

Saturday, November 24, 2012

೯೬. ದೇಶವೂ ನಮ್ಮದೇ, ಸರಕಾರವೂ ನಮ್ಮದೇ

ದೇಶವೂ ನಮ್ಮದೇ, ಸರಕಾರವೂ ನಮ್ಮದೇ

   ಗಾಂಧಿ ಹತ್ಯೆಯ ನಂತರ ಶ್ರೀ ಗುರೂಜಿಯವರನ್ನು ಜೈಲಿನಲ್ಲಿಟ್ಟರು. ಗಾಂಧೀ ಹತ್ಯೆಯ ಆರೋಪವನ್ನು ಅವರ ಮೇಲೆ ಮಾಡಲಾಯಿತು. ೫-೬ ತಿಂಗಳ ನಂತರ ಶ್ರೀ ಗುರೂಜಿಯವರು ಸರಕಾರಕ್ಕೆ ಒಂದು ಪತ್ರವನ್ನು ಬರೆದರು. ’ನಾನೇನಾದರು ಗಾಂಧಿ ಹತ್ಯೆಯಂತಹ ಗಂಭೀರ ತಪ್ಪು ಮಾಡಿದ್ದರೆ ನನ್ನ ಮೇಲೆ ಮೊಕದ್ದಮೆ ಹಾಕಿ. ಕೋರ್ಟಿನಲ್ಲಿ ವಿಚಾರಣೆ ಮಾಡಿ. ಆದರೆ ಕೋರ್ಟಿನಲ್ಲಿ ಮೊಕದ್ದಮೆ ಹೂಡದೆ, ವಿಚಾರಣೆ ಮಾಡದೆ ನನ್ನನ್ನು ಜೈಲಿನಲ್ಲಿಟ್ಟಿರುತ್ತೀರಿ. ಇದು ಸರಿಯಲ್ಲ’ ಎಂದರು.

    ಎಂಟು ತಿಂಗಳ ನಂತರವೂ ಯಾವುದೇ ಮೊಕದ್ದಮೆ ಹಾಕದಿದ್ದ ಮೇಲೆ, ಶ್ರೀ ಗುರೂಜಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಆ ಸತ್ಯಾಗ್ರಹದಲ್ಲಿ ತೋರಿದ ಸಂಘದ ಶಕ್ತಿಯನ್ನು ನೋಡಿ ಸಂಘದ ಮೇಲಿದ್ದಂತಹ ನಿರ್ಬಂಧ ತೆಗೆದು ಹಾಕಲಾಯಿತು. ೯೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು - ೧೮೫೭ ರಿಂದ ೧೯೪೭ ವರೆಗೆ. ಆ ತೊಂಭತ್ತು ವರ್ಷಗಳಲ್ಲಿ ಸುಮಾರು ೩೫ ಸಾವಿರ ಜನ ಜೈಲಿಗೆ ಹೋಗಿದ್ದರು. ಆದರೆ ಸಂಘದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಡೆಸಿದ ಸತ್ಯಾಗ್ರಹದಲ್ಲಿ ೭೬ ಸಾವಿರ ಜನ ಜೈಲಿಗೆ ಹೋಗಿದ್ದರು. ಸ್ವಯಂಸೇವಕರು ಸಂಘಟನೆಯ ಶಕ್ತಿಯನ್ನು ತೋರಿಸಿದ್ದರು.

    ಶ್ರೀ ಗುರೂಜಿಯವರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೆಲ್ಲೂ ಪೂರ್ವಪ್ರಕಟವಾದಂತಹ ಕಾರ್ಯಕ್ರಮಗಳು ನಡೆದವು. ಅಲ್ಲಿ ಮಾತನಾಡಿದ ಭಾಷಣದಲ್ಲಿ ಒಂದು ಶಬ್ದವೂ ಸರಕಾರದ ವಿರುದ್ಧ ಇರಲಿಲ್ಲ. ಆಗ ಸ್ವಯಂಸೇವಕರು ಶ್ರೀ ಗುರೂಜಿಯವರನ್ನು ಅದನ್ನು ಪ್ರಶ್ನಿಸುತ್ತಾರೆ. ಶ್ರೀ ಗುರೂಜಿಯವರು ’ಈ ಸರಕಾರವೂ ನಮ್ಮದು, ದೇಶವೂ ನಮ್ಮದು. ನಾವು ಹಿಂದು ಸಮಾಜದ ಒಳಗಡೆ ಸಂಘಟನೆ ಕಟ್ಟುತ್ತಿಲ್ಲ. ಹಿಂದು ಸಮಾಜದ ಸಂಘಟನೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಊಟ ಮಾಡುವಾಗ ನಾಲಗೆಯನ್ನು ಹಲ್ಲು ಕಚ್ಚುತ್ತದೆ. ಆಗ ಹಲ್ಲನ್ನು ಕಲ್ಲಿನಿಂದ ಜಜ್ಜಿ ಕಿತ್ತು ಹಾಕುವುದಿಲ್ಲ. ಹಲ್ಲೂ ನಮ್ಮದೆ, ನಾಲಗೆಯನ್ನು ಕಚ್ಚಿದೆ, ಇನ್ನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ ಅಷ್ಟೇ. ಈಗ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ದ್ವೇಷ ಬೇಡ’ ಎಂದರು.

Labels: Ban in 1948, Jail, Sri Guruji, Tongue and Teeth, ಜೈಲು, ನಾಲಗೆ, ಶ್ರೀ ಗುರೂಜಿ, ಸಂಘದ ಕಥೆ, ಹಲ್ಲು, ೧೯೪೮ರ ನಿರ್ಬಂಧ

Thursday, November 22, 2012

೭೬. ಗುರೂಜಿ ಹೇಗೆ ಊಟ ಮಾಡುತ್ತಾರೆ?

ಗುರೂಜಿ ಹೇಗೆ ಊಟ ಮಾಡುತ್ತಾರೆ?

    ಶ್ರೀ ಗುರೂಜಿ ಒಮ್ಮೆ ಕೇರಳದ ಪ್ರವಾಸದಲ್ಲಿದ್ದರು. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನಲ್ಲಿ ಹೊರಟಿದ್ದರು. ಮಧ್ಯ ಮಾರ್ಗದಲ್ಲಿ ಒಂದು ಊರಿನಲ್ಲಿ ಅವರಿಗೆ ಭೋಜನವನ್ನು ತಲುಪಿಸುವ ಏರ್ಪಾಡಾಗಿತ್ತು.

    ಅವರಿಗೆ ಭೋಜನವನ್ನು ತಲುಪಿಸಲು ಅಲ್ಲಿನ ಒಬ್ಬ ಸ್ವಯಂಸೇವಕರನ್ನು ನೇಮಿಸಲಾಗಿತ್ತು. ಅವರು ತಮ್ಮ ಮಗಳ ಸಮೇತ ರೈಲು ನಿಲ್ದಾಣಕ್ಕೆ ಬಂದಿದ್ದರು. ರೈಲು ಬಂತು. ಊಟದ ಡಬ್ಬವನ್ನು ಕೊಟ್ಟು ಆ ಸ್ವಯಂಸೇವಕರು ಶ್ರೀ ಗುರೂಜಿಯವರೊಡನೆ ಮಾತನಾಡುತ್ತಿದ್ದರು. ಜೊತೆಯಲ್ಲಿ ಬಂದಿದ್ದ ಅವರ ಮಗಳು ತಂದೆಯ ಬಟ್ಟೆಯನ್ನು ಜಗ್ಗುತ್ತಾ ಏನೋ ಕೇಳುತ್ತಿದ್ದಳು. ಆ ಸ್ವಯಂಸೇವಕರು ಅವಳನ್ನು ಸಮಾಧನಪಡಿಸುತ್ತಲೇ ಮಾತು ಮುಂದುವರೆಸಿದ್ದರು.

    ಹುಡುಗಿಯು ಏನೋ ಕೇಳುತ್ತಿದ್ದುದನ್ನು ಗಮನಿಸಿದ ಶ್ರೀ ಗುರೂಜಿಯವರು ಆ ಸ್ವಯಂಸೇವಕರನ್ನು ವಿಚಾರಿಸಿದರು. ಮುಜುಗರಪಡುತ್ತಲೇ ಅವರು ಹೇಳಿದರು "ಹುಡುಗಿ ಕೇಳುತ್ತಿದ್ದಾಳೆ, ’ಗುರೂಜಿಯವರ ಮುಖದ ತುಂಬಾ ಕೂದಲೇ ಇದೆಯಲ್ಲಾ, ಅವರು ಊಟ ಹೇಗೆ ತಿನ್ನುತ್ತಾರೆ?’".

    ಆ ಮಾತನ್ನು ಕೇಳುತ್ತಲೇ ಶ್ರೀ ಗುರೂಜಿಯವರು ಹೊಟ್ಟೆ ತುಂಬಾ ನಕ್ಕು ಆನಂದಪಟ್ಟರು.

    ಅನೇಕ ವರ್ಷಗಳು ಕಳೆದವು. ಶ್ರೀ ಗುರೂಜಿಯವರು ಕೇರಳದ ಸಂಘಚಾಲಕರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಮದುವೆ ಕಾರ್ಯಕ್ರಮದ ನಂತರ ಎಲ್ಲರೂ ಊಟಕ್ಕೆ ಕುಳಿತರು. ತಮ್ಮ ಎಲೆಯ ಬಳಿ ಬಡಿಸಲು ಬಂದ ಸಂಘಚಾಲಕರ ಸೊಸೆಯನ್ನು ನೋಡಿ ಶ್ರೀ ಗುರೂಜಿ ನಗುತ್ತಾ ಕೇಳಿದರು "ಈಗ ಗೊತ್ತಾಯಿತೇ ನಾನು ಹೇಗೆ ಊಟ ಮಾಡುತ್ತೇನೆ ಎಂದು?"

    ಶ್ರೀ ಗುರೂಜಿ ಏಕೆ ಆ ರೀತಿ ಹೇಳಿದರೆಂದು ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಆಶ್ಚರ್ಯವಾಯಿತು.

    ಆಗ ಶ್ರೀ ಗುರೂಜಿ ಎಲ್ಲರಿಗೂ ಹಿಂದೆ ನಡೆದ ರೈಲಿನ ಘಟನೆ ಹೇಳಿ, ತಮಗೆ ಅಡಿಗೆ ಬಡಿಸುತ್ತಿದ್ದ ಸಂಘಚಾಲಕರ ಸೊಸೆಯೇ ಆ ಹುಡುಗಿ ಎಂದು ಹೇಳಿದರು. ಆಷ್ಟು ವರ್ಷ ನಂತರವೂ ಆ ಹುಡುಗಿಯನ್ನು ಗುರುತಿಸಬಲ್ಲರಾದ ಶ್ರೀ ಗುರೂಜಿಯವರ ನೆನಪಿನ ಶಕ್ತಿಯು ಎಲ್ಲರನ್ನು ವಿಸ್ಮಯಗೊಳಿಸಿತ್ತು.

Labels: Sangha Story, Sri Guruji, Sri Guruji's Memory, ಊಟ ಹೇಗೆ ಮಾಡುತ್ತಾರೆ, ಕೇರಳ, ನೆನಪಿನ ಶಕ್ತಿ, ಶ್ರೀ ಗುರೂಜಿ, ಸಂಘದ ಕಥೆ,

೭೫. ಕೊನೆಯ ಹಿಂದುವನ್ನೂ ರಕ್ಷಿಸಿ

ಕೊನೆಯ ಹಿಂದುವನ್ನೂ ರಕ್ಷಿಸಿ

   ೧೯೪೭ರ ದೇಶ ವಿಭಜನೆ ಸಂಘದ ಸ್ವಯಂಸೇವಕರಿಗೆ ಮತ್ತು ಇತರ ದೇಶ ಪ್ರೇಮಿಗಳಿಗೆ ಅತ್ಯಂತ ದುಃಖದ ವಿಷಯ.

    ವಿಭಜನೆಯ ಸ್ವಲ್ಪ ಸಮಯದ ಮುಂಚೆ ಒಂದು ಸಂಘ ಶಿಕ್ಷಾ ವರ್ಗ ಈಗಿನ ಪಾಕಿಸ್ಥಾನದ ಭಾಗದಲ್ಲಿ ನಡೆಯುತ್ತಿತ್ತು. ಸುಮಾರು ೨೦೦ ಸ್ವಯಂಸೇವಕರು ಭಾಗವಹಿಸಿದ್ದರು. ಮುಂದಿನ ಸಂಘರ್ಷದ ಸಮಯದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಮೊದಲೇ ಕಲ್ಪನೆಯಿದ್ದ ಶ್ರೀ ಗುರೂಜಿ ಎಲ್ಲ ಶಿಕ್ಷಾರ್ಥಿಗಳನ್ನು ಕುರಿತು "ಈ ಕಡೆಯಿಂದ ಲಕ್ಷಾಂತರ ಜನ ವಲಸೆ ಹೋಗಲಿದ್ದಾರೆ. ಅವರ ಮೇಲೆ ನಾನಾ ರೀತಿಯ ಅತ್ಯಾಚಾರಗಳು ನಡೆಯುವ ಸಂಭವವಿದೆ. ಪ್ರತಿಯೊಬ್ಬ ಹಿಂದುವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಕಟ್ಟಕಡೆಯ ಹಿಂದು ಸುರಕ್ಷಿತವಾಗಿ ಭಾರತವನ್ನು ತಲುಪದ ತನಕ ನೀವು ಇಲ್ಲಿಂದ ಹೊರಡಬಾರದು" ಎಂದು ನುಡಿದರು.

    ಮುಂದಿನ ದಿನಗಳಲ್ಲಿ ಶ್ರೀ ಗುರೂಜಿಯವರು ನುಡಿದಿದ್ದ ರೀತಿಯಲ್ಲೇ, ವಲಸೆ ಹೊರಟಿದ್ದ ಲಕ್ಷಾಂತರ ಹಿಂದುಗಳನ್ನು ಕೊಲ್ಲಲಾಯಿತು. ಹಿಂದು ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೊಳಿಸಿ ಮತಾಂತರಗೊಳಿಸಲಾಯಿತು. ಆದರೆ ಆ ಶಿಕ್ಷಾವರ್ಗದಲ್ಲಿದ್ದ ಎಲ್ಲ ೨೦೦ ಸ್ವಯಂಸೇವಸೇವಕರೂ ಅಂತಹ ಹಿಂದುಗಳ ರಕ್ಷಣೆಗೆ ನಿಂತರು. ಸಾವಿರಾರು ಹಿಂದುಗಳನ್ನು ಕಾಪಾಡಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು.

    ಆದರೆ ಆ ೨೦೦ ಸ್ವಯಂಸೇವಕರ ಬಲಿಯಾಯಿತು.

Labels: Partition, Sacrifice, Sangha Story, Sri Guruji, ದೇಶ ವಿಭಜನೆ, ಪ್ರಾಣಾರ್ಪಣೆ, ಶ್ರೀ ಗುರೂಜಿ, ಸಂಘದ ಕಥೆ, ಸ್ವಾತಂತ್ರ್ಯ

೭೪. ನಿಮಗೆ ಧರ್ಮ ಬೇಡ

ನಿಮಗೆ ಧರ್ಮ ಬೇಡ

   ಒಮ್ಮೆ ಲಯನ್ಸ್ ಕ್ಲಬ್‍ನ ಒಂದು ಕಾರ್ಯಕ್ರಮಕ್ಕೆ ಶ್ರೀ ಗುರೂಜಿಯವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಒಂದು ಭಾಷಣ ಮಾಡುವ ಯೋಜನೆ ಇತ್ತು.

    ಶ್ರೀ ಗುರೂಜಿಯವರ ಬಗ್ಗೆ ಮತ್ತು ಸಂಘದ ಬಗ್ಗೆ ಗೊತ್ತಿದ್ದ ಕ್ಲಬ್‍ನ ಗವರ್ನರ್ ಶ್ರೀ ಗುರೂಜಿಯವರ ಬಳಿ ಬಂದು "ಈ ಸಮಾರಂಭಕ್ಕೆ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಆದ್ದರಿಂದ ನೀವು ಧರ್ಮದ ಬಗ್ಗೆ ಮಾತನಾಡದಿರುವುದು ಒಳ್ಳೆಯದು" ಎಂದು ಕೇಳಿಕೊಳ್ಳುತ್ತಾರೆ.

    ಆಗ ಶ್ರೀ ಗುರೂಜಿಯವರು "ಧರ್ಮೇಭಿ ಹೀನಃ ಪಶುಭಿಃ ಸಮಾನಃ" ಎಂಬ ಸಂಸ್ಕೃತದ ಒಂದು ಶ್ಲೋಕವನ್ನು ಹೇಳುತ್ತಾ "ನೀವು ಲಯನ್ಸ್ ಕ್ಲಬ್‍ನವರು. ನಿಮಗೆ ಧರ್ಮ ಬೇಡ ಎಂದು ಅನಿಸುತ್ತೆ" ಎಂದರು.

Labels: Dharma, Lion's Club, Sangha Story, Sri Guruji, ಧರ್ಮ, ಲಯನ್ಸ್ ಕ್ಲಬ್, ಶ್ರೀ ಗುರೂಜಿ, ಸಂಘದ ಕಥೆ

೭೧. ಸಾಮೂಹಿಕ ನಿರ್ಣಯ

ಸಾಮೂಹಿಕ ನಿರ್ಣಯ

   ಒಮ್ಮೆ ಯಾವುದೋ ವಿಚಾರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಲುವಾಗಿ ಸಂಘದ ಹಿರಿಯ ಅಧಿಕಾರಿಗಳ ಒಂದು ಬೈಠಕ್ ನಡೆದಿತ್ತು. ಶ್ರೀ ಗುರೂಜಿಯವರು ತಮ್ಮ ನಿಲುವನ್ನು ಮಂಡನೆ ಮಾಡಿದರು. ಆದರೆ ಅಪ್ಪಾಜಿ ಜೋಷಿಯವರು ಗುರೂಜಿಯವರ ವಿಚಾರಕ್ಕೆ ವಿರುದ್ಧವಾಗಿ ತಮ್ಮ ಅನಿಸಿಕೆಯನ್ನು ಮಂಡಿಸಿದರು. ಎರಡೂ ವಿಚಾರಗಳನ್ನು ಚರ್ಚಿಸಲಾಯಿತು.

    ಕೊನೆಗೆ ಅಪ್ಪಾಜಿ ಜೋಷಿಯವರು ಹೇಳಿದ ರೀತಿಯೇ ಸರಿಯೆಂದು ಎಲ್ಲರೂ ಅಭಿಪ್ರಾಯಪಟ್ಟರು. ಆಗ ಶ್ರೀ ಗುರೂಜಿಯವರು ಅಪ್ಪಾಜಿ ಜೋಷಿಯವರ ನಿಲುವನ್ನು ಒಪ್ಪಿದರು. ಮಾತ್ರವಲ್ಲ, ಆ ನಿರ್ಣಯವನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ತಮ್ಮ ನಿಲುವಿಗೆ ವಿರುದ್ಧವಾದ ನಿರ್ಣಯವನ್ನು ಒಪ್ಪಿಕೊಳ್ಳುವುದಕ್ಕಾಗಲೀ ಅಥವಾ ಅದನ್ನು ಜಾರಿಗೊಳಿಸುವುದಕ್ಕಾಗಲೀ ಶ್ರೀ ಗುರೂಜಿಯವರಿಗೆ ಎಂದೂ ಸ್ವಾಭಿಮಾನ ಅಡ್ಡ ಬರಲಿಲ್ಲ.

Labels: Appaji Joshi, Consensus, Sangha Story, Sri Guruji, ಅಪ್ಪಾಜಿ ಜೋಷಿ, ಶ್ರೀ ಗುರೂಜಿ, ಸಂಘದ ಕಥೆ, ಸಾಮೂಹಿಕ ನಿರ್ಣಯ

Wednesday, November 21, 2012

೭೦. ಡಾಕ್ಟರ್‌ಜಿಯವರ ಸಮಾಧಾನ

ಡಾಕ್ಟರ್‌ಜಿಯವರ ಸಮಾಧಾನ

   ಜನಸಂಘದ ಸಂಸ್ಥಾಪಕರೂ ಹಾಗೂ ಅದರ ಮೊದಲ ಅಧ್ಯಕ್ಷರೂ ಆಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಒಮ್ಮೆ ಯಾವುದೋ ಒಂದು ವಿಷಯದ ಬಗ್ಗೆ ಗೊಂದಲವಾಯಿತು. ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಡಾಕ್ಟರ್‌ಜಿಯವರ ಬಳಿ ಹೋಗಿ ಮಾತನಾಡಲು ನಿಶ್ಚಿಯಿಸಿದರು. ಆ ಸಮಯದಲ್ಲಿ ಡಾಕ್ಟರ್‌ಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.

    ಆ ಸಮಯದಲ್ಲಿ ಶ್ರೀ ಗುರೂಜಿಯವರು ಡಾಕ್ಟರ್‌ಜಿಯವರ ಶುಶ್ರೂಷೆಗೆ ಸ್ವತಃ ತಾವೇ ನಿಂತಿದ್ದರು. ಮುಖರ್ಜಿಯವರು ಡಾಕ್ಟರ್‌ಜಿಯವರನ್ನು ಭೇಟಿ ಮಾಡುವ ಸಲುವಾಗಿ ಬಂದಾಗ ಶ್ರೀ ಗುರೂಜಿಯವರಿಗೆ ಕೊಂಚ ಕಸಿವಿಸಿಯಾಯಿತು. ಮೊದಲೇ ಡಾಕ್ಟರ್‌ಜಿಯವರ ಆರೋಗ್ಯ ಸರಿಯಾಗಿಲ್ಲ, ಇನ್ನು ಸಮಾಲೋಚನೆಗೆ ಹೇಗೆ ಅವಕಾಶ ಕೊಡುವುದು? ಇದು ಗುರೂಜಿಯವರಿಗಿದ್ದ ಸಮಸ್ಯೆ.

    ಡಾಕ್ಟರ್‌ಜಿಯವರ ಜೊತೆ ಚರ್ಚಿಸಬೇಕಾದ ವಿಷಯವನ್ನು ಮುಖರ್ಜಿಯವರಲ್ಲಿ ಕೇಳಿದರು. ಆ ಸಮಸ್ಯೆಯನ್ನು ಕೇಳಿ ಶ್ರೀ ಗುರೂಜಿಯವರಿಗೆ ತಾನೇ ಅದಕ್ಕೆ ಉತ್ತರ ಕೊಡಬಲ್ಲೆನೆಂಬ ಅಭಿಪ್ರಾಯ ಉಂಟಾಯಿತು. ಕೆಲವು ಗಂಟೆಗಳ ಮಾತುಕತೆ ನಡೆಯಿತು. ಆದರೂ ಗುರೂಜಿಯವರು ಹೇಳಿದ ಯಾವ ಪರಿಹಾರವೂ ಮುಖರ್ಜಿಯವರಿಗೆ ಸಮಾಧಾನಕರವಾಗಿ ತೋರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಮುಖರ್ಜಿಯವರಿಗೆ ಡಾಕ್ಟರ್‌ಜಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು.

    ವಿಷಯವನ್ನು ಕೇಳಿದ ಡಾಕ್ಟರ್‌ಜಿ, ಕೆಲವೇ ನಿಮಿಷಗಳಲ್ಲಿ ಮುಖರ್ಜಿಯವರಿಗೆ ಸಮಾಧಾನ ಹೇಳಿ ಒಪ್ಪಿಸಿ ಕಳಿಸಿದರು. ಗುರೂಜಿಯವರಿಗೆ ಆಶ್ಚರ್ಯವಾಯಿತು. ತಾವು ಹೇಳಿದ ಪರಿಹಾಕ್ಕೂ ಡಾಕ್ಟರ್‌ಜಿ ತಿಳಿಸಿದ ಸಮಾಧಾನಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ಮುಖರ್ಜಿಯವರು ಡಾಕ್ಟರ್‌ಜಿಯವರು ಹೇಳಿದ ಮಾತ್ರಕ್ಕೆ ಒಪ್ಪಿಕೊಂಡಿದ್ದರು. ಡಾಕ್ಟರ್‌ಜಿಯವರಿಗೆ ಇನ್ನೊಬ್ಬರನ್ನು ಒಪ್ಪಿಸುವ ಸಾಮರ್ಥ್ಯವು ಹಾಗಿತ್ತು. ನಂತರದ ದಿನಗಳಲ್ಲಿ ಶ್ರೀ ಗುರೂಜಿಯವರು ಈ ಸಂದರ್ಭವನ್ನು ನೆನೆಸಿಕೊಂಡು, ಆ ಘಟನೆ ತಮಗಿದ್ದ ಅಹಂಕಾರವನ್ನು ಸುಟ್ಟುಹಾಕಿತು ಎನ್ನುತ್ತಾರೆ.

Labels: Convincing, Doctorji, Mookerjee, Sangha Story, Sri Guruji, ಡಾಕ್ಟರ್‌ಜಿ ಸಾಮರ್ಥ್ಯ, ಮುಖರ್ಜಿ, ಶ್ರೀ ಗುರೂಜಿ, ಸಂಘದ ಕಥೆ

Monday, November 19, 2012

೫೦. ಉತ್ತರಾಧಿಕಾರಿ

ಉತ್ತರಾಧಿಕಾರಿ

     ಡಾಕ್ಟರ್‌ಜಿಯವರ ಕಾಯಿಲೆ ಮತ್ತಷ್ಟು ಉಲ್ಬಣಿಸಿತು. ಲಂಬರ್ ಪಂಕ್ಚರ್ ಚಿಕಿತ್ಸೆ ಮಾಡುವ ನಿರ್ಧಾರ ಕೈಗೊಂಡರು ವೈದ್ಯರು. ಇದು ಡಾಕ್ಟರ್‌ಜಿಯವರಿಗೆ ತಿಳಿಯಿತು. ಅವರು ಶ್ರೀ ಗುರೂಜಿ, ಮಾ|| ಬಾಬಾಜಿ ಪಾಧ್ಯೆ, ಬಾಳಾಸಾಹೆಬ ದೇವರಸ್, ಕೃಷ್ಣರಾವ್ ಮೊಹರೀಲ್ ಮೊದಲಾದ ಪ್ರಮುಖ ಕಾರ್ಯಕರ್ತರನ್ನು ಬಳಿ ಕರೆದರು.

    ಚಿಂತೆ ತುಂಬಿ ಮೌನ ಕವಿದ ವಾತಾವರಣ. ಎಲ್ಲರ ಕಣ್ಣುಗಳು ಡಾಕ್ಟರ್‌ಜಿಯವರ ಮೇಲೆ. ನಡು ನಡುವೆ ತಮ್ಮ ಮನದಲ್ಲಿ ಏಳುತ್ತಿದ್ದ ಭಾವನೆಗಳ ಆವೇಗವನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಅವರೆಲ್ಲ ನಡೆಸಿದರು. ಡಾಕ್ಟರ್‌ಜಿಯವರೆ ಕೊನೆಯಲ್ಲಿ ಮೌನ ಮುರಿದರು. "ಈಗ ಲಂಬರ್ ಪಂಕ್ಚರ್ ಮಾಡುವರು. ಪ್ರಾಯಶಃ ಇದೇ ಕೊನೆಯ ಉಪಾಯ ಉಳಿದಿರಬಹುದು. ಯಶಸ್ವಿಯಾದಲ್ಲಿ ಸಂತೋಷ. ಆದರೆ ಆಗದೆ ಹೋದಲ್ಲಿ ಸಂಘ ಕಾರ್ಯದ ಪೂರ್ತಿ ಹೊಣೆ ನಿಮ್ಮ ಮೇಲೆಯೇ ಎಂದು ನೀವು ತಿಳಿಯಿರಿ" ಗುರೂಜಿಯವರಿಗೆ ಅವರು ತಿಳಿಸಿದರು.

    "ಡಾಕ್ಟರ್‌ಜಿ ಹಾಗೇಕೆ ಮಾತನಾಡುವಿರಿ? ಎಲ್ಲವೂ ಸರಿಯಾಗುವುದು" ಎಂದರು ಶ್ರೀ ಗುರೂಜಿ.

    ಡಾಕ್ಟರ್‌ಜಿ ಮುಗುಳ್ನಗುತ್ತಾ "ಮನುಷ್ಯನಾದವನು ಯಾವಾಗಲೂ ಒಳ್ಳೆಯ ಭರವಸೆ ಇಟ್ಟುಕೊಳ್ಳಬೇಕೆಂಬುದನ್ನು ನಾನೂ ಒಪ್ಪುವೆ. ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿಯೂ ಇರುವುದು ಅಗತ್ಯ. ಸದ್ಯ ನಾನು ಹೇಳಿದಷ್ಟು ಮಾಡಿ" ಎಂದರು.

    ಈಗ ಡಾಕ್ಟರ್‌ಜಿ ನಿಶ್ಚಿಂತರು. "ಇನ್ನು ಬೇಕಾದಲ್ಲಿ ಲಂಬರ್ ಪಂಕ್ಚರ್ ಮಾಡಿರಿ" ವೈದ್ಯರಿಗೆ ಅವರು ತಮ್ಮ ಅನುಮತಿ ತಿಳಿಸಿದರು.

    ವೈದ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸಂಜೆ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ದಿನ ಡಾಕ್ಟರ್‌ಜಿಯವರಿಗೆ ಅಸಹನೀಯ ವೇದನೆ. ಮಾನಸಿಕವಾಗಿಯೂ ಅಪಾರ ನೋವಿನ ಅನುಭವ. ತಮ್ಮ ಜೀವಿತ ಕಾಲದಲ್ಲಿಯೇ ಸುಸಂಘಟಿತ ಸಮೃದ್ಧ ಹಿಂದು ರಾಷ್ಟ್ರವನ್ನು ಅವರು ಕಾಣಬಯಸಿದ್ದರು. ಆದರೆ ಆರೋಗ್ಯ ಕೆಟ್ಟು ಶರೀರವೇ ಕುಸಿಯುತ್ತಿದೆ. "ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ, ನನ್ನ ಆರಾಧ್ಯ ದೇವತೆಗಳೇ, ಸಂಘ ಕಾರ್ಯ ಬೆಳೆಸಲು ಮುಂದೆ ನೀವೆಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದೋ..." ಎಂಬೆಲ್ಲ ಯೋಚನೆ. ಆ ಚಿಂತೆಯೇ ಅವರ ಮನಸ್ಸನ್ನು ಕಾಡುತ್ತಿತ್ತು. ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದರು. ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಆಗಾಗ್ಗೆ ಮಗ್ಗಲು ಬದಲಿಸುತ್ತಿದ್ದರು. ಒಮ್ಮೊಮ್ಮೆ ಏಳುವರು. ಪುನಃ ಕುಳಿತುಕೊಳ್ಳುವರು; ವಿಚಾರಮಗ್ಯರಾಗಿ ಅತ್ತಿಂದಿತ್ತ ಓಡಾಡುವರು. ಶ್ರೀ ಗುರೂಜಿಯವರಿಗೆ ಸಂಘ ಕಾರ್ಯದ ಹೊಣೆ ಒಪ್ಪಿಸಿದ ಮೇಲಷ್ಟೇ ಮನಸ್ಸು ತುಸು ಶಾಂತವಾಯಿತು.

    ಸಾಯಂಕಾಲ ಚಿಕಿತ್ಸೆ ನಡೆಯಿತು. ಬೆನ್ನು ಹುರಿಯಿಂದ ನೀರು ಧಾರಾಕಾರವಾಗಿ ಹರಿಯಿತು. ಅಷ್ಟಾದರು ನೋವು ಮಾತ್ರ ಕಡಿಮೆಯಾಗಲೇ ಇಲ್ಲ.

    ಮಧ್ಯರಾತ್ರಿಯ ನಂತರ ಅವರು ಪ್ರಜ್ಞಾಶೂನ್ಯರಾದರು. ಬೆಳಗಾಗುತ್ತಿದ್ದಂತೆಯೇ ಅವರ ಜ್ವರ ೧೦೬ ಡಿಗ್ರಿಗೆ ಏರಿತು. ನಾಗಪುರದ ಗಣ್ಯ ವೈದ್ಯರೆಲ್ಲಾ ಸೇರಿದರು. ಸಾಕಷ್ಟು ವಿಚಾರ ವಿನಿಮಯ ನಡೆಯಿತು. ತರ ತರದ ಚಿಕಿತ್ಸೆಗಳಾದವು. ಆದರೂ ಯಾರಿಗೂ ಏನೂ ಹೊಳೆಯದು.

    ಡಾಕ್ಟರ್‌ಜಿಯವರ ಆರೋಕ್ಯ ಹದಗೆಟ್ಟ ಸುದ್ದಿ ನಾಗಪುರದಲ್ಲೆಲ್ಲಾ ಹರಡಿತು. ಸಹಸ್ರಾರು ಸ್ವಯಂಸೇವಕರು ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ. ಮನದಲ್ಲಿ ಭಗವಂತನಿಗೆ ಮೊರೆ. ಆದರೆ ಕಲನೆದುರಲ್ಲಿ ಯಾರ ಇಚ್ಛೆಯೂ ನಡೆಯದು.

    ೧೯೪೦ ಜೂನ್ ೨೧ ಶುಕ್ರವಾರ ಬೆಳಿಗ್ಗೆ ೯.೨೭ಕ್ಕೆ ಡಾಕ್ಟರ್‌ಜಿ ಇಹ ಲೋಕದ ಯಾತ್ರೆ ಮುಗಿಸಿದರು. ಸಹಸ್ರಾರು ಸ್ವಯಂಸೇವಕರ ಜೀವನದ ಆದರ್ಶ ಚೇತನ ಕಣ್ಮರೆಯಾಯಿತು. ಸಹಸ್ರಾವಧಿ ಕಾರ್ಯಕರ್ತರ ಪ್ರೇರಣಾ ಸ್ಥಾನ ಇಲ್ಲವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಲ್ಪಿ, ಆದ್ಯ ಸರಸಂಘಚಾಲಕ ಪರಮ ಪೂಜನೀಯ ಡಾಕ್ಟರ್ ಹೆಡಗೆವಾರ್‌ಜಿ ಕಾಲದೊಂದಿಗೆ ಲೀನವಾದರು.

Labels: Doctorji, Next Sarasanghachalak, Sangha Story, Sri Guruji, ಉತ್ತರಾಧಿಕಾರಿ, ಡಾಕ್ಟರ್‌ಜಿ, ಸಂಘದ ಕಥೆ