Showing posts with label Doctorji. Show all posts
Showing posts with label Doctorji. Show all posts

Sunday, November 25, 2012

೯೯. ಪರಿಪೂರ್ಣ ಸ್ವಯಂಸೇವಕ

ಪರಿಪೂರ್ಣ ಸ್ವಯಂಸೇವಕ

   ಡಾಕ್ಟರ್‌ಜಿಯವರು ಗಾಂಧೀಜಿಯವರನ್ನು ಭೇಟಿ ಮಾಡಿದರು. ವರ್ಧಾ ಶಿಬಿರಕ್ಕೆ ಗಾಂಧೀಜಿಯವರು ಬಂದಿದ್ದರು. ಡಾಕ್ಟರ್‌ಜಿಯವರು ಶಿಬಿರಕ್ಕೆ ಬರುವ ಹಿಂದಿನ ದಿನವೇ ಗಾಂಧೀಜಿಯವರು ಶಿಬಿರವನ್ನು ನೋಡಿಕೊಂಡು ಬಂದಿದ್ದರು. ಸ್ಥಾಪಕ ಯಾರೆಂದು ಅವರಿಗೆ ಗೊತ್ತಾಯಿತು. ಡಾ|| ಹೆಡಗೆವಾರರ ಹೆಸರನ್ನು ಕೇಳಿದ್ದರು, ಮೊದಲೂ ಭೇಟಿ ಮಾಡಿದ್ದರು. ೧೯೨೦ರ ಕಾಂಗ್ರೆಸ್ ಅಧಿವೇಶನದಲ್ಲೇ ಡಾಕ್ಟರ್‌ಜಿಯವರನ್ನು ಗಾಂಧೀಜಿಯವರು ನೋಡಿದ್ದರು. ಡಾ|| ಹೆಡಗೆವಾರರೆನ್ನುವವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ, ಅವರನ್ನು ನಾನು ಭೇಟಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಗಾಂಧೀಜಿಯವರು, ಡಾಕ್ಟರ್‌ಜಿಯವರು ಮರುದಿನ ಬಂದ ನಂತರ ಮತ್ತೆ ಶಿಬಿರಕ್ಕೆ ಹೋದರು. ಅವರ ಜೊತೆ ಇನ್ನೂ ಇಬ್ಬರಿದ್ದರು.

    ಮಾತುಕತೆಯಲ್ಲಿ ಗಾಂಧೀಜಿಯವರು ಡಾಕ್ಟರ್‌ಜಿಯವರನ್ನು ಕೇಳಿದರು ’ಈ ಸ್ವಯಂಸೇವಕ ಎನ್ನುವ ಕಲ್ಪನೆ ಏನು?’ ಎಂದು. ಆಗ ಡಾಕ್ಟರ್‌ಜಿಯವರು ಹೇಳಿದ ಒಂದು ವಾಕ್ಯ ಇದೆ. ’ದೇಶದ ಸರ್ವಾಂಗೀಣ ಉನ್ನತಿಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಣೆಯನ್ನು ಮಾಡುವುದಕ್ಕೆ ಸಿದ್ಧನಾಗಿರುವಂತಹ ಕಾರ್ಯಕರ್ತನನ್ನು ನಾವು ಸ್ವಯಂಸೇವಕನೆಂದು ಕರೆಯುತ್ತೇವೆ’ ಎಂದು ಡಾಕ್ಟರ್‌ಜಿಯವರು ಹೇಳಿದರು.

Labels: Doctorji, Gandhiji, Perfect Swayamsevak, Sangha Story, ಗಾಂಧೀಜಿ, ಡಾಕ್ಟರ್‌ಜಿ, ಪರಿಪೂರ್ಣ ಸ್ವಯಂಸೇವಕ, ಸಂಘದ ಕಥೆ

೯೮. ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

ಡಾಕ್ಟರ್‌ಜಿಯವರ ಚಾರಿತ್ರ್ಯ ಶುದ್ಧತೆ

   ಡಾಕ್ಟರ್‌ಜಿಯವರು ನಾಗಪುರದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಆಗಿನ್ನೂ ಸಂಘ ಸ್ಥಾಪನೆಯಾಗಿರಲಿಲ್ಲ. ಸಂಘ ಸ್ಥಾಪನೆಯಾದ ನಂತರ ಡಾಕ್ಟರ್‌ಜಿಯವರು ರಾಜಕೀಯಕ್ಕೆ, ಚುನಾವಣೆ ಕ್ಷೇತ್ರಕ್ಕೆ ಹೋಗಲಿಲ್ಲ, ಸ್ವಾತಂತ್ರ್ಯ ಹೋರಾಟ ಬಿಟ್ಟು. ಡಾ|| ಮೂಂಜೆ ಎನ್ನುವವರು ಅವರ ಮಿತ್ರರು, ಆತ್ಮೀಯರು, ಹಿರಿಯರು. ಅವರು ಚುನಾವಣೆಗೆ ನಿಂತರು. ಡಾ|| ಮೂಂಜೆ ಅವರ ಪರವಾಗಿ ಪ್ರಚಾರ ಮಾಡಲು ಡಾಕ್ಟರ್‌ಜಿ ಹೋಗಿದ್ದರು. ಡಾ|| ಮೂಂಜೆಯವರ ವಿರುದ್ಧವಾಗಿ ಅಭ್ಯಂಕರ್ ಎನ್ನುವವರು ನಿಂತಿದ್ದರು. ಅಭ್ಯಂಕರರು ಒಬ್ಬ ವಕೀಲರು. ಅವರು ತಮ್ಮ ಭಾಷಣದಲ್ಲಿ ತಮ್ಮ ಎದುರಾಳಿಗಳ ಜನ್ಮ ಜಾಲಾಡುತ್ತಿದ್ದರು. ತಮ್ಮ ಎದುರಾಳಿಗಳ ಬಗ್ಗೆ ಹಾಗೆ, ಹೀಗೆ ಎಂದು ಹೀಗೆಳೆದು ಜನರನ್ನು ಮನರಂಜಿಸುತ್ತಾ ಭಾಷಣ ಮಾಡುವುದರಲ್ಲಿ ಅವರದು ಎತ್ತಿದ ಕೈ.

    ಅಂತಹ ಅಭ್ಯಂಕರರು ಡಾ|| ಮೂಂಜೆಯವರ ಬಗ್ಗೆ ಸಾಕಷ್ಟು ಹೇಳಿದರು. ಡಾ|| ಮೂಂಜೆಯವರ ಸಮರ್ಥನೆಗಾಗಿ ನಿಂತಿದ್ದ ಡಾಕ್ಟರ್‌ಜಿಯವರ ವಿಷಯ ಬಂದಿತು. ತಮ್ಮ ಭಾಷಣದ ವಾಗ್ದಾಳಿಯಲ್ಲಿ ಅವರು ’ಡಾ|| ಹೆಡಗೆವಾರ್..’ ಎಂದರು, ಅಷ್ಟೇ. ಅವರಿಗೆ ಮುಂದೆ ಮಾತು ಹೊರಡಲಿಲ್ಲ. ’ನಾನು ಅವರ ಬಗ್ಗೆ ಹೇಳೋದು ಏನಿದೆ? ಅವರ ಬಗ್ಗೆ ನಾನೇನೂ ಹೇಳಲಾರೆ’ ಎಂದು ಹೇಳಿ ಸುಮ್ಮನಾದರು. ಅಭ್ಯಂಕರರ ಮಾತಿನಲ್ಲಿ ಡಾಕ್ಟರ್‌ಜಿಯವರ ಬಗ್ಗೆ ಒಂದೇ ಒಂದು ನಕಾರಾತ್ಮ ಮಾತೂ ಹೊರಡಲಿಲ್ಲ. ಏಕೆಂದರೆ ಡಾಕ್ಟರ್‌ಜಿಯವರ ಚಾರಿತ್ರ್ಯ, ಅವರ ಸಾರ್ವಜನಿಕ ಜೀವನದ ಶುದ್ಧತೆ, ಅವರ ವ್ಯಕ್ತಿ ಜೀವನದ ಶುದ್ಧತೆ ಇವು ಕಣ್ಣಿಗೆ ಕಟ್ಟುವ ಹಾಗಿದ್ದವು.

Labels: Abhyankar, Doctorji, Dr. Munje, Election, Sangha Story, ಅಭ್ಯಂಕರ್, ಚಾರಿತ್ರ್ಯ, ಡಾ|| ಮೂಂಜೆ, ಡಾಕ್ಟರ್‌ಜಿ, ಸಂಘದ ಕಥೆ,

Saturday, November 24, 2012

೯೦. ಸಂಘಕ್ಕೆ ಹೆಸರು

ಸಂಘಕ್ಕೆ ಹೆಸರು

   ಪ್ರಾರಂಭವಾದಾಗ ಸಂಘಕ್ಕೆ ಹೆಸರೂ ಇರಲಿಲ್ಲ. ಆದರೆ ಸಂಘಕ್ಕೆ ಹೆಸರು ಇಡಬೇಕು ಎನ್ನುವುದು ಮತ್ತು ಯಾವ ಹೆಸರು ಇಡಬೇಕು ಎನ್ನುವ ಕಲ್ಪನೆ ಡಾಕ್ಟರ್‌ಜಿಯವರಿಗಿತ್ತು. ಸಂಘದ ಎಲ್ಲ ನಿರ್ಣಯಗಳ ಒಂದು ಪುಸ್ತಕವಿದೆ. ಅದರಲ್ಲಿ ೧೯೨೭ರಿಂದ ತೆಗೆದುಕೊಂಡ ಎಲ್ಲ ನಿರ್ಣಯಗಳ ವಿವರಗಳಿವೆ. ಮೊಟ್ಟಮೊದಲ ನಿರ್ಣಯವನ್ನು ಮರಾಠಿಯಲ್ಲಿ ಬರೆಯಲಾಗಿದೆ. ಪಾಂಡೆ ಎನ್ನುವ ಒಬ್ಬ ಕಾರ್ಯದರ್ಶಿಗಳು ಅದನ್ನು ಬರೆದಿದ್ದಾರೆ.

    ಸಂಘದ ಹೆಸರು ಏನಿರಬೇಕೆಂದು ಒಂದು ಬೈಠಕ್‍ನಲ್ಲಿ ಚರ್ಚೆಯಾಯಿತು. ಅದರಲ್ಲಿ ೨೭ ಜನ ಸ್ವಯಂಸೇವಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ಮೂರು ಹೆಸರುಗಳನ್ನು ಸೂಚಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಚರೀ ಪಡಕಾ ಸಂಘ ಮತ್ತು ಇನ್ನೊಂದು ಹೆಸರು. ಮತದಾನ ಹಾಕಲಾಯಿತು. ಬಂದವರಲ್ಲಿ ಇಬ್ಬರು ಮತದಾನದಲ್ಲಿ ಭಾಗವಹಿಸದೆ ಹೊರಗುಳಿದರು. ಉಳಿದ ೨೫ ಜನ ಮೂರೂ ಹೆಸರುಗಳನ್ನು ಮುಂದಿಟ್ಟುಕೊಂಡು ಮತ ಹಾಕಿದರು.

    ಅದರಲ್ಲಿ ೧೮ ಮತಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೆಸರಿನ ಪರವಾಗಿ ಬಂದದ್ದರಿಂದ ಸಂಘದ ಹೆಸರನ್ನು ಅದೇ ರೀತಿಯೇ ತೀರ್ಮಾನಿಸಿದರೆಂದು ಬರೆದು ಪಾಂಡೆಯವರು ಸಹಿ ಹಾಕಿದ್ದಾರೆ. ಡಾಕ್ಟರ್‌ಜಿಯವರು ಅದೇ ಹೆಸರಿಡಬೇಕೆಂದು ಅಂದುಕೊಂಡಿದ್ದರು. ಅದನ್ನು ಅವರೇ ಹೇಳಿದ್ದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಎನಿಸಿತು ’ಇಲ್ಲಿ ಯಾರಿಗೂ ಇದು ತನ್ನ ಅಭಿಪ್ರಾಯ ನಡೆಯುತ್ತದೆ ಎಂದು ಎನಿಸಬಾರದು. ನಾವು ಎನ್ನುವ ಭಾವ ಬೆಳೆಯಬೇಕು. ಎಲ್ಲರಿಗೂ ತಮ್ಮ ಆಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರಬೇಕು. ಅದನ್ನು ಅವರು ಪ್ರತಿಪಾದನೆಯನ್ನೂ ಮಾಡಬೇಕು. ಆದರೆ ಕೊನೆಯಲ್ಲಿ ಏನು ನಿರ್ಣಯವಾಗುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕು. ಅನುಶಾಸನವೂ ಇರಬೇಕು, ಅಭಿಪ್ರಾಯ ಸ್ವಾತಂತ್ರ್ಯವೂ ಇರಬೇಕು’.

Labels: Doctorji, Freedom of Expression, Sangha Story, ಅಭಿಪ್ರಾಯ ಸ್ವಾತಂತ್ರ್ಯ, ಡಾಕ್ಟರ್‌ಜಿ, ಸಂಘಕ್ಕೆ ಹೆಸರು, ಸಂಘದ ಕಥೆ

Friday, November 23, 2012

೮೮. ಅವಮಾನವೂ ನೈವೇದ್ಯವೇ

ಅವಮಾನವೂ ನೈವೇದ್ಯವೇ

   ಹತ್ತಿರದ ಒಂದು ಊರಿನಲ್ಲಿ ಒಬ್ಬ ಪ್ರಸಿದ್ಧ ವಕೀಲರಿದ್ದರು. ಡಾ|| ಮೂಂಜೆಯವರಿಗೆ ಅವರ ಪರಿಚಯವಿತ್ತು. ’ನಾನು ಅವರಿಗೆ ಫೋನ್ ಮಾಡಿರುತ್ತೇನೆ. ನಿನ್ನ ಬಳಿಯಲ್ಲಿ ಒಂದು ಚೀಟಿಯನ್ನೂ ಕೊಡುತ್ತೇನೆ. ಅವರ ಮನೆಯಲ್ಲೇ ಉಳಿದುಕೋ. ಅಲ್ಲಿ ಒಂದು ಶಾಖೆ ಶುರು ಮಾಡಬಹುದು’ ಎಂದು ಹೇಳಿ ಡಾಕ್ಟರ್‌ಜಿಯವರನ್ನು ಕಳಿಸಿದರು. ಡಾಕ್ಟರ್‌ಜಿಯವರು ರೈಲಿನಲ್ಲಿ ಅಲ್ಲಿಗೆ ಹೋದರು. ತಾವು ಆ ರೈಲಿನಲ್ಲಿ ಬರುವುದಾಗಿ ಮೊದಲೇ ತಿಳಿಸಿದ್ದರು. ಆದರೆ ಅವರನ್ನು ಕರೆದುಕೊಂಡು ಬರಲು ಯಾರು ರೈಲು ನಿಲ್ದಾಣಕ್ಕೆ ಬಂದಿರಲಿಲ್ಲ. ಡಾಕ್ಟರ್‌ಜಿಯವರು ನಡೆದೇ ಆ ವಕೀಲರ ಮನೆಗೆ ಹೋದರು.

    ಆ ವಕೀಲರದು ತುಂಬಾ ದೊಡ್ಡ ಮನೆ. ೮-೧೦ ಮೆಟ್ಟಿಲು ಹತ್ತಿ ಮನೆಯ ಒಳಗೆ ಹೋಗಬೇಕು. ವಿಶಾಲವಾದ ಅರಮನೆಯಂತಹ ಮನೆ. ಹೊರಗೆ ವಿಶಾಲವಾದ ಹೂತೋಟ. ಹತ್ತಾರು ಜನ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಗೇಟು ಮುಚ್ಚಿದೆ. ಒಬ್ಬ ಕಾವಲು ಕಾಯುತ್ತಿದ್ದಾನೆ. ಡಾಕ್ಟರ್‌ಜಿಯವರು ಒಂದು ಚೀಟಿಯಲ್ಲಿ ತಮ್ಮ ಪರಿಚಯವನ್ನು ಬರೆದು ಒಳಗೆ ಕಳುಹಿಸಿಕೊಟ್ಟರು. ಒಳಗೆ ಬರಲು ಸೂಚನೆ ಬಂದಿತು.

    ಒಳಗೆ ಬಂದಾಗ ಅ ವಕೀಲರು ಕಾಲ ಮೇಲೆ ಕಾಲು ಹಾಕಿಕೊಂಡು ತನ್ನ ಶ್ರೀಮಂತಿಕೆಯ ಅಹಂಕಾರವನ್ನು ತೋರಿಸುತ್ತಾ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಕುಳಿತುಕೊಳ್ಳಲೂ ಹೇಳದೆ ಒದುತ್ತಲೇ ಇದ್ದರು. ಡಾಕ್ಟರ್‌ಜಿಯವರು ವೈದ್ಯರಾಗಿದ್ದವರು. ಸ್ವಾಭಿಮಾನಿಗಳಾಗಿದ್ದವರು. ಕುಳಿತುಕೊಳ್ಳಲು ಹೇಳದಿದ್ದರಿಂದ ನಿಂತೇ ಇದ್ದರು. ಸುಮಾರು ೮-೧೦ ನಿಮಿಷ ಆ ವಕೀಲರು ಡಾಕ್ಟರ್‌ಜಿಯವರ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಒಮ್ಮೆ ಕಿರುನೋಟದಲ್ಲಿ ಡಾಕ್ಟರ್‌ಜಿಯವರ ಕಡೆ ನೋಡುವುದು, ಮತ್ತೆ ಓದುವ ಹಾಗೆ ಮಾಡುವುದು. ಹೀಗೆಯೇ ನಡೆದಿತ್ತು.

    ಡಾಕ್ಟರ್‌ಜಿಯವರಿಗೆ ಗೊತ್ತಾಯಿತು. ತಾವು ಬಂದಿರುವುದೂ ಗೊತ್ತಿದ್ದೂ, ನಿಂತಿರುವುದು ಅರಿವಿದ್ದೂ, ತಾನು ತುಂಬಾ ವ್ಯವಧಾನವಿಲ್ಲದವನು ಎಂದು ತೋರಿಸಲು ವಕೀಲರು ನಾಟಕವಾಡುತ್ತಿದ್ದಾರೆ ಎಂದು. ಆದರೆ ಡಾಕ್ಟರ್‌ಜಿಯವರಿಗೆ ಆ ವ್ಯಕ್ತಿಯನ್ನು ಗೆಲ್ಲಬೇಕಾಗಿತ್ತು. ಎಷ್ಟೇ ಆಗಲಿ ಸಂಘಟನ ಕುಶಲರು. ವಕೀಲರು ಓದುತ್ತಿದ್ದ ಪುಸ್ತಕವನ್ನು ನೋಡಿದರು. ಅದು ಹೋಮಿಯೋಪತಿ ಬಗೆಗಿನ ಪುಸ್ತಕವಾಗಿತ್ತು. ಡಾಕ್ಟರ್‌ಜಿಯವರು ಅಲೋಪತಿ ವೈದ್ಯರಾದರೂ, ಹೋಮಿಯೋಪತಿಯ ಬಗ್ಗೆ ತಿಳಿದಿದ್ದರು. ನಿಂತಲ್ಲೇ ಡಾಕ್ಟರ್‌ಜಿಯವರು ಹೋಮಿಯೋಪತಿಯ ಬಗ್ಗೆ ಮಾತನಾಡಲು ಶುರು ಮಾಡಿದರು.

    ’ಎಂಥ ಅದ್ಭುತ ವೈದ್ಯ ಪದ್ಧತಿ ಅದು! ನೋಡುವುದಕ್ಕೆ ಒಂದು ಸಣ್ಣ ಸಕ್ಕರೆ ಗುಳಿಗೆ ರೀತಿಯಲ್ಲಿ ಇರುತ್ತದೆ. ಎಂಥೆಂತಹ ಖಾಯಿಲೆಗಳನ್ನು ವಾಸಿ ಮಾಡಬಲ್ಲದು ಅದು!’ ಎಂದು ಹೇಳಿದರು. ಅದನ್ನು ಕೇಳಿ ವಕೀಲರು ಓದುವುದನ್ನು ನಿಲ್ಲಿಸಿ ಪುಸ್ತಕವನ್ನು ಮುಚ್ಚಿಟ್ಟು ಡಾಕ್ಟರ್‌ಜಿಯವರು ಹೇಳುತ್ತಿದ್ದನ್ನು ಕೇಳಲು ಶುರು ಮಾಡಿದರು. ಒಂದಾದ ನಂತರ ಸಂಭಾಷಣೆ ಪ್ರಾರಂಭವಾಯಿತು. ವಕೀಲರು ಇದ್ದಕ್ಕಿದ್ದಂತೆ ಗಮನಿಸಿದಂತೆ ’ಅರೆ, ನಿಂತೇ ಇದ್ದೀರಲ್ಲಾ. ಕುಳಿತುಕೊಳ್ಳಿ’ ಎಂದರು. ಕೆಲಸದವನನ್ನು ಕರೆದು ’ಅವರು ಬಂದು ಇಷ್ಟು ಹೊತ್ತಾಗಿದೆ. ಚಹ ಕೊಡಲು ಗೊತ್ತಾಗುವುದಿಲ್ಲವೇ? ಹೋಗು, ಚಹ ತಾ’ ಎಂದು ಕಳಿಸಿದರು.

    ಕೆಲಸದವನು ಚಹ ತರಲು, ಡಾಕ್ಟರ್‌ಜಿಯವರು ಮನಸ್ಸಿನಲ್ಲೇ ನಿಶ್ಚಯ ಮಾಡಿದರು ’ಇವರಿಗೆ ಅಹಂಕಾರ ಇದೆ. ಆದರೆ ಅವರಿಗೆ ಪ್ರಭಾವವೂ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಇವರನ್ನು ಬಿಡಬಾರದು’ ಎಂದು. ಡಾಕ್ಟರ್‌ಜಿ ಆ ಮನೆಯಲ್ಲಿ ತಮ್ಮ ಸಾಮಾನನ್ನು ಇಟ್ಟು ಹೊರಗೆ ಸಂಪರ್ಕಕ್ಕೆ ಹೋಗುತ್ತಿದ್ದರು. ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದರು. ಅಲ್ಲಿ ಒಮ್ಮೆಯೂ ಊಟ, ತಿಂಡಿ ಮಾಡುತ್ತಿರಲಿಲ್ಲ.

    ೭-೮ ದಿನಗಳ ನಂತರ ಆ ವಕೀಲರ ಹತ್ತಿರ ಬಂದು ’ಇಲ್ಲಿ ಸಂಘದ ಶಾಖೆ ಪ್ರಾರಂಭ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಬೈಠಕ್ ಕರೆಯಲು ಯೋಚಿಸಿದ್ದೇನೆ’ ಎಂದರು. ಅದಕ್ಕೆ ವಕೀಲರು ’ಇದೊಂದು ಸುಡುಗಾಡು ಊರು. ಇಲ್ಲಿ ನಾಲ್ಕು ಜನ ಎಂದೂ ಸೇರುವುದಿಲ್ಲ. ಸಂಘಟನೆಯೆಂದರೆ ಯಾರು ಬರುವುದಿಲ್ಲ’ ಎಂದರು. ಆಗ ಡಾಕ್ಟರ್‌ಜಿ ’ಇಲ್ಲಿ ನಿಮಗೆ ಒಳ್ಳೆ ಹೆಸರಿದೆ. ನಿಮ್ಮ ಹೆಸರು ಹೇಳಿದರೆ ಸಾಕಷ್ಟು ಜನ ಬರುತ್ತಾರೆ’ ಎಂದು ಹೊಗಳಿ ಒಪ್ಪಿಸಿದರು.

    ಸುಮಾರು ಒಂದು ನೂರುಕ್ಕೂ ಹೆಚ್ಚು ಜನ ಆ ಬೈಠಕ್‍ಗೆ ಬಂದರು. ಡಾಕ್ಟರ್‌ಜಿ ಎಲ್ಲರಿಗೂ ಸಂಘದ ಬಗ್ಗೆ, ಶಾಖೆಯ ಬಗ್ಗೆ ಹೇಳಿ ಆ ವಕೀಲರನ್ನೇ ಸಂಘಚಾಲಕರೆಂದು ಘೋಷಣೆ ಮಾಡಿದರು. ಓಡಾಡಿದ್ದು, ನೂರಾರು ಜನರನ್ನು ಪರಿಶ್ರಮ ವಹಿಸಿ ಸೇರಿಸಿದ್ದು ಡಾಕ್ಟರ್‌ಜಿಯವರಾದರೂ ವಕೀಲರ ಮನೆಯಲ್ಲಿ ಒಮ್ಮೆ ಊಟವನ್ನು ಮಾಡದಿದ್ದರೂ ಅವರನ್ನೇ ಸಂಘಚಾಲಕರನ್ನಾಗಿ ಘೋಷಣೆ ಮಾಡಿದ್ದರು.

Labels: Doctorji, Insult, Lawyer, Sangha Story, Sanghachalak, ಅವಮಾನ, ಡಾಕ್ಟರ್‌ಜಿ, ವಕೀಲ, ಸಂಘಚಾಲಕ, ಸಂಘದ ಕಥೆ

Wednesday, November 21, 2012

೭೦. ಡಾಕ್ಟರ್‌ಜಿಯವರ ಸಮಾಧಾನ

ಡಾಕ್ಟರ್‌ಜಿಯವರ ಸಮಾಧಾನ

   ಜನಸಂಘದ ಸಂಸ್ಥಾಪಕರೂ ಹಾಗೂ ಅದರ ಮೊದಲ ಅಧ್ಯಕ್ಷರೂ ಆಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಒಮ್ಮೆ ಯಾವುದೋ ಒಂದು ವಿಷಯದ ಬಗ್ಗೆ ಗೊಂದಲವಾಯಿತು. ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಡಾಕ್ಟರ್‌ಜಿಯವರ ಬಳಿ ಹೋಗಿ ಮಾತನಾಡಲು ನಿಶ್ಚಿಯಿಸಿದರು. ಆ ಸಮಯದಲ್ಲಿ ಡಾಕ್ಟರ್‌ಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.

    ಆ ಸಮಯದಲ್ಲಿ ಶ್ರೀ ಗುರೂಜಿಯವರು ಡಾಕ್ಟರ್‌ಜಿಯವರ ಶುಶ್ರೂಷೆಗೆ ಸ್ವತಃ ತಾವೇ ನಿಂತಿದ್ದರು. ಮುಖರ್ಜಿಯವರು ಡಾಕ್ಟರ್‌ಜಿಯವರನ್ನು ಭೇಟಿ ಮಾಡುವ ಸಲುವಾಗಿ ಬಂದಾಗ ಶ್ರೀ ಗುರೂಜಿಯವರಿಗೆ ಕೊಂಚ ಕಸಿವಿಸಿಯಾಯಿತು. ಮೊದಲೇ ಡಾಕ್ಟರ್‌ಜಿಯವರ ಆರೋಗ್ಯ ಸರಿಯಾಗಿಲ್ಲ, ಇನ್ನು ಸಮಾಲೋಚನೆಗೆ ಹೇಗೆ ಅವಕಾಶ ಕೊಡುವುದು? ಇದು ಗುರೂಜಿಯವರಿಗಿದ್ದ ಸಮಸ್ಯೆ.

    ಡಾಕ್ಟರ್‌ಜಿಯವರ ಜೊತೆ ಚರ್ಚಿಸಬೇಕಾದ ವಿಷಯವನ್ನು ಮುಖರ್ಜಿಯವರಲ್ಲಿ ಕೇಳಿದರು. ಆ ಸಮಸ್ಯೆಯನ್ನು ಕೇಳಿ ಶ್ರೀ ಗುರೂಜಿಯವರಿಗೆ ತಾನೇ ಅದಕ್ಕೆ ಉತ್ತರ ಕೊಡಬಲ್ಲೆನೆಂಬ ಅಭಿಪ್ರಾಯ ಉಂಟಾಯಿತು. ಕೆಲವು ಗಂಟೆಗಳ ಮಾತುಕತೆ ನಡೆಯಿತು. ಆದರೂ ಗುರೂಜಿಯವರು ಹೇಳಿದ ಯಾವ ಪರಿಹಾರವೂ ಮುಖರ್ಜಿಯವರಿಗೆ ಸಮಾಧಾನಕರವಾಗಿ ತೋರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಮುಖರ್ಜಿಯವರಿಗೆ ಡಾಕ್ಟರ್‌ಜಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು.

    ವಿಷಯವನ್ನು ಕೇಳಿದ ಡಾಕ್ಟರ್‌ಜಿ, ಕೆಲವೇ ನಿಮಿಷಗಳಲ್ಲಿ ಮುಖರ್ಜಿಯವರಿಗೆ ಸಮಾಧಾನ ಹೇಳಿ ಒಪ್ಪಿಸಿ ಕಳಿಸಿದರು. ಗುರೂಜಿಯವರಿಗೆ ಆಶ್ಚರ್ಯವಾಯಿತು. ತಾವು ಹೇಳಿದ ಪರಿಹಾಕ್ಕೂ ಡಾಕ್ಟರ್‌ಜಿ ತಿಳಿಸಿದ ಸಮಾಧಾನಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ಮುಖರ್ಜಿಯವರು ಡಾಕ್ಟರ್‌ಜಿಯವರು ಹೇಳಿದ ಮಾತ್ರಕ್ಕೆ ಒಪ್ಪಿಕೊಂಡಿದ್ದರು. ಡಾಕ್ಟರ್‌ಜಿಯವರಿಗೆ ಇನ್ನೊಬ್ಬರನ್ನು ಒಪ್ಪಿಸುವ ಸಾಮರ್ಥ್ಯವು ಹಾಗಿತ್ತು. ನಂತರದ ದಿನಗಳಲ್ಲಿ ಶ್ರೀ ಗುರೂಜಿಯವರು ಈ ಸಂದರ್ಭವನ್ನು ನೆನೆಸಿಕೊಂಡು, ಆ ಘಟನೆ ತಮಗಿದ್ದ ಅಹಂಕಾರವನ್ನು ಸುಟ್ಟುಹಾಕಿತು ಎನ್ನುತ್ತಾರೆ.

Labels: Convincing, Doctorji, Mookerjee, Sangha Story, Sri Guruji, ಡಾಕ್ಟರ್‌ಜಿ ಸಾಮರ್ಥ್ಯ, ಮುಖರ್ಜಿ, ಶ್ರೀ ಗುರೂಜಿ, ಸಂಘದ ಕಥೆ

Tuesday, November 20, 2012

೬೧. ಡಾಕ್ಟರ್‌ಜಿಯವರ ಪ್ರಭಾವ

ಡಾಕ್ಟರ್‌ಜಿಯವರ ಪ್ರಭಾವ

   ೧೯೬೬-೬೭ರ ಘಟನೆ. ದತ್ತೋಪಂತ ಠೇಂಗಡಿ ರಾಜ್ಯಸಭಾ ಸದಸ್ಯರಾಗಿದ್ದರು. ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಒಬ್ಬ ಕಮ್ಯೂನಿಸ್ಟ್ ಅವರೊಡನೆ ಮಾತನಾಡಲು ಕುಳಿತಿದ್ದರು. ಇನ್ನೊಬ್ಬ ಕಮ್ಯೂನಿಸ್ಟ್ ಬಾಲಚಂದ್ರ ಮೆನನ್‍ರವರು ಕೂಡ ಇದ್ದರು. ಆ ಮೊದಲ ಕಮ್ಯೂನಿಸ್ಟರು ಠೇಂಗಡಿಯರನ್ನು ಕುಚೇಷ್ಟೆ ಮಾಡುತ್ತಾ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಠೇಂಗಡಿಯವರು ಅವರ ಕುತಂತ್ರ ಅರ್ಥವಾದರೂ, ಶಾಂತವಾಗಿ ಉತ್ತರಿಸುತ್ತಿದ್ದರು.

    ಹೀಗೆ ಸ್ವಲ್ಪ ಹೊತ್ತು ನಡೆಯಿತು. ಇವರಿಬ್ಬರ ಮಾತುಕತೆಯನ್ನು ಕೇಳುತ್ತಿದ್ದ ಮೆನನ್‍ರಿಗೆ ಸಹಿಸಲಸಾಧ್ಯವಾಯಿತು. ಅವರು ಆ ಕಮ್ಯೂನಿಸ್ಟ್ ಸ್ನೇಹಿತರಿಗೆ "ದೊಡ್ಡವರ ಬಗ್ಗೆ ಕುಚೇಷ್ಟೆ ಮಾಡಬಾರದು" ಎಂದು ಕಿವಿಮಾತು ಹೇಳಿದರು.

    ಆದರೂ ಆ ಮನುಷ್ಯ ಬಿಡದೆ ಮತ್ತೆ ಮತ್ತೆ ಅಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಡಾಕ್ಟರ್‌ಜಿಯವರನ್ನು ನೆಹರುರವರ ಜೊತೆ ತಾಳೆ ಮಾಡುತ್ತ ಕೆಲವೊಮ್ಮೊ ಕಟುವಾಗಿ, ಕೆಲವೊಮ್ಮೆ ಕುಹಕವಾಗಿ ಮಾತನಾಡುತ್ತಿದ್ದರು. ಆಗ ಮೆನನ್ ಅವರನ್ನು ಕೇಳಿದರು "ನೆಹರೂ ಕಾಲವಾಗಿ ಎಷ್ಟು ವರ್ಷವಾಯಿತು?".

    "ಎರಡೂ ಎರಡೂವರೆ ವರ್ಷವಾಗಿದೆ" ಆ ಕಮ್ಯೂನಿಸ್ಟರ ಉತ್ತರ.

    "ನೆಹರೂ ತೀರಿಹೋದಾಗ ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತಿತ್ತು?" ಮತ್ತೊಂದು ಪ್ರಶ್ನೆ ಮೆನನ್‍ರಿಂದ.

    "ಇಡೀ ಭಾರತಕ್ಕೇ ತಿಳಿದಿತ್ತು. ಅಷ್ಟೇ ಅಲ್ಲ, ಪ್ರಪಂಚದ ಅನೇಕ ದೇಶಗಳ ಜನರಿಗೂ ಅವರ ಬಗ್ಗೆ ಗೊತ್ತಿತ್ತು".

    ಆಗ ಮೆನನ್ ಠೇಂಗಡಿಯವರ ಕಡೆ ತಿರುಗಿ "ಡಾಕ್ಟರ್‌ಜಿ ಸತ್ತು ಎಷ್ಟು ವರ್ಷವಾಯಿತು?"

    "ಸುಮಾರು ೨೬-೨೭ ವರ್ಷವಾಯಿತು" ಠೇಂಗಡಿಯವರು ಉತ್ತರಿಸಿದರು.

    "ಡಾಕ್ಟರ್‌ಜಿ ಸತ್ತಾಗ ಅವರ ಬಗ್ಗೆ ಎಷ್ಟು ಜನಕ್ಕೆ ತಿಳಿದಿತ್ತು?" ಮತ್ತೆ ಮೆನನ್ ಪ್ರಶ್ನೆ ಮಾಡಿದರು.

    "ಭಾರತದ ಮಧ್ಯಭಾಗದ ಕೆಲವು ಸಾವಿರ ಜನಕ್ಕೆ ತಿಳಿದಿತ್ತು" ಠೇಂಗಡಿ ಹೇಳಿದರು.

    ಆಗ ಮೆನನ್‍ರವರು ಆ ಕಮ್ಯೂನಿಸ್ಟರನ್ನು ಕುರಿತು "ಹಾಗಾದರೆ ನೆಹರೂ ವಿಚಾರಕ್ಕೆ ಪ್ರಾಣ ಕೊಡುವ ಎಷ್ಟು ಜನ ಇದ್ದಾರೆ? ಮತ್ತು ಡಾಕ್ಟರ್‌ಜಿಯವರ ವಿಚಾರಧಾರೆಯ ಅನುಷ್ಟಾನಕ್ಕಾಗಿ ಪ್ರಾಣವನ್ನೇ ಪಣವನ್ನಾಗಿಟ್ಟು ಕೆಲಸ ಮಾಡುವ ಎಷ್ಟು ಜನ ಇದ್ದಾರೆ?"

    ಮೆನನ್‍ರವರ ತೀಕ್ಷ್ಣವಾದ ಆ ಪ್ರಶ್ನೆಗೆ ಉತ್ತರಿಸಲಾಗದೆ ಆ ಕಮ್ಯೂನಿಸ್ಟ್ ಸ್ನೇಹಿತರು ಸುಮ್ಮನಾದರು.

    ಮಾತನ್ನು ಮುಂದುವರೆಸುತ್ತಾ ಮೆನನ್‍ರವರು "ಒಬ್ಬ ವ್ಯಕ್ತಿ ಸತ್ತಾಗ ಅವನು ಎಷ್ಟು ಉದ್ದದ ನೆರಳನ್ನು ಬಿಡುತ್ತಾನೆ ಎಂಬುದರ ಮೇಲೆ ಅವನು ಎಷ್ಟು ಪ್ರಭಾವಿ ಎಂದು ನಿರ್ಧಾರವಾಗುತ್ತದೆ" ಎಂದರು.

Labels: Communist, Doctorji, Sangha Story, Thengadi, ಕಮ್ಯೂನಿಸ್ಟ್, ಠೇಂಗಡಿ, ಡಾಕ್ಟರ್‌ಜಿ, ಬಾಲಚಂದ್ರ ಮೆನನ್, ಸಂಘದ ಕಥೆ

   

Monday, November 19, 2012

೫೪. ಸಿನಿಮಾ

ಸಿನಿಮಾ

    ನಾಗಪುರದ ಒಂದು ಶಾಖೆಯ ಕೆಲವು ಮಕ್ಕಳು ನಿತ್ಯವೂ ಶಾಖೆಗೆ ಬರುತ್ತಿದ್ದವರು, ಇದ್ದಕ್ಕಿದ್ದಂತೆಯೇ ಬರುವುದನ್ನು ನಿಲ್ಲಿಸಿದ್ದರು. ಡಾಕ್ಟರ್‌ಜಿ ವಿಚಾರಿಸಲು ನಿಜವಾದ ಕಾರಣ ತಿಳಿಯಿತು. ಆ ಮಕ್ಕಳೆಲ್ಲರೂ ಶಾಖೆ ತಪ್ಪಿಸಿ ನಿತ್ಯವೂ ಊರಿಗೆ ಬಂದಿದ್ದ ಹೊಸ ಸಿನಿಮಾ ನೋಡುಲು ಹೋಗುತ್ತಿದ್ದರು. ಡಾಕ್ಟರ್‌ಜಿಯವರು ಆ ಮಕ್ಕಳನ್ನು ಸೇರಿಸಿ, ಅವರ ಜೊತೆ ತಾವೂ ಸಿನಿಮಾ ನೋಡಲು ಬರುವುದಾಗಿ ತಿಳಿಸಿದರು. ಮಕ್ಕಳಿಗೆ ಆನಂದವೋ ಆನಂದ. ಡಾಕ್ಟರ್‌ಜಿ ತಮ್ಮ ಜೊತೆ ಸಿನಿಮಾ ನೋಡಲು ಬರುವುದೆಂದರೇನು ಸುಮ್ಮನೆಯೇ?

    ಡಾಕ್ಟರ್‌ಜಿ ಎಲ್ಲರಿಗೂ ಕೂಡಿ ತಮ್ಮ ಮನೆಗೆ ಬರಲು ತಿಳಿಸಿದರು. ಆ ಸಂಜೆ ಮಕ್ಕಳೆಲ್ಲರೂ ಒಟ್ಟಿಗೆ ಡಾಕ್ಟರ್‌ಜಿ ಮನೆಗೆ ಬಂದರು. ಆ ಸಮಯದಲ್ಲಿ ಡಾಕ್ಟರ್‌ಜಿ ಯಾರೊಡನೆಯೋ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅವರ ಊಟ ಮುಗಿದು ಎಲ್ಲರೂ ಸಿನಿಮಾ ಮಂದಿರಕ್ಕೆ ಬರುವ ಹೊತ್ತಿಗೆ, ಸಿನಿಮಾ ಪ್ರಾರಂಭವಾಗಿ ಚಿತ್ರಮಂದಿರ ಭರ್ತಿಯಾಗಿತ್ತು.

    ನಿರಾಸೆಗೊಂಡ ಹುಡುಗರನ್ನು ಕರೆದುಕೊಂಡು ಡಾಕ್ಟರ್‌ಜಿ ಪಕ್ಕದ ಒಂದು ಉದ್ಯಾನವನಕ್ಕೆ ಬಂದರು. ಸಿನಿಮಾಗೆಂದು ತಂದಿದ್ದ ಹಣವನ್ನು ತೆಗೆದುಕೊಂಡು ಪುರಿಕಡಲೆ ಇತ್ಯಾದಿ ಕೊಂಡು ಹುಡುಗರನ್ನೆಲ್ಲಾ ಸುತ್ತ ಕೂರಿಸಿಕೊಂಡು ಹರಟೆ ಹೊಡೆಯಲು ಪ್ರಾರಂಭಿಸಿದರು. ಮಕ್ಕಳೂಂದಿಗೆ ಮಕ್ಕಳಾಗಿ ಡಾಕ್ಟರ್‌ಜಿ ಆ ಸಂಜೆ ಪೂರ್ತಿ ಅವರೊಡನೆ ನಕ್ಕು ನಲಿದರು.

    ಆ ಆತ್ಮೀಯತೆಯೇ ಆ ಮಕ್ಕಳನ್ನು ಮತ್ತೆ ಶಾಖೆಗೆ ಕರೆತಂದಿತು. ಡಾಕ್ಟರ್‌ಜಿ ಮಕ್ಕಳ ಜೊತೆ ಈ ರೀತಿ ಬಾಂಧವ್ಯವನ್ನು ಬೆಳೆಸಿ ಅವರಿಗೆ ಸಂಘ ಕಾರ್ಯದಲ್ಲಿ ರುಚಿ ಹಚ್ಚಿಸುತ್ತಿದ್ದರು.

Labels: Doctorji, RSS Story, Sangha Story, To Cinema with Kids, ಡಾಕ್ಟರ್‌ಜಿ, ಮಕ್ಕಳ ಜೊತೆ ಸಿನಿಮಾ, ಸಂಘದ ಕಥೆ

೫೩. ಪ್ರತಿಭಟನೆಯಲ್ಲೂ ವಿನೂತನ ಶೈಲಿ

ಪ್ರತಿಭಟನೆಯಲ್ಲೂ ವಿನೂತನ ಶೈಲಿ

    ಡಾಕ್ಟರ್‌ಜಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ನಂತರೂ, ಅವರ ಪದವಿಗೆ ಅಂದಿನ ಬ್ರಿಟಿಷ್ ಸರಕಾರದಿಂದ ಮಾನ್ಯತ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಹತಾಶರಾಗಿ ಪದವಿ ಪಡೆಯುವ ಆಸೆಯನ್ನೇ ಬಿಟ್ಟಿದ್ದರು.

    ಆದರೆ ಡಾಕ್ಟರ್‌ಜಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಪ್ರತಿದಿನ ಪತ್ರಿಕೆಗಳಿಗೆ ಪತ್ರವನ್ನು ಬರೆದು, ಸರಕಾರದ ಈ ನೀತಿಯ ವಿರುದ್ಧವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿಸುತ್ತಿದ್ದರು. ಹೀಗೆ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ನೋಡಿದ ಸರಕಾರವು, ಈ ಪ್ರತಿಭಟನೆಗಳನ್ನು ಯಾರು ನಡೆಸುತ್ತಿರುವವರು, ಅದು ಎಲ್ಲಿ ನಡೆಯುತ್ತಿದೆ ಎಂದು ವಿಚಾರಿಸಲು ಕೇವಲ ಗೊಂದಲ ಉತ್ತರಗಳೇ ಸಿಗುತ್ತಿದ್ದವು.

    ನಿಜವಾಗಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಡಾಕ್ಟರ್‌ಜಿ ಸರಕಾರದ ಮೇಲೆ ಒತ್ತಡ ತರಲು ಈ ಯೋಜನೆಯನ್ನು ಹಾಕಿ ಕಾರ್ಯಗತಗೊಳಿಸಿದ್ದರು. ಕೊನೆಗೆ ಸರಕಾರವು ಜನರಿಂದ ಬಂದ ಒತ್ತಡದ ಕಾರಣದಿಂದ ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಮಾನ್ಯತೆ ನೀಡಿತು.

Labels: Doctor Degree, Doctorji, New Style of Protest, Sangha Story, ಡಾಕ್ಟರ್‌ಜೀ, ಪದವಿಗಾಗಿ ಪ್ರತಿಭಟನೆ, ಸಂಘದ ಕಥೆ

೫೨. ಅಮರ ಡಾಕ್ಟರ್ ಹೆಡಗೆವಾರ್

ಅಮರ ಡಾಕ್ಟರ್ ಹೆಡಗೆವಾರ್

    ಡಾಕ್ಟರ್‌ಜಿಯವರ ಜೀವನವೇ ಕಷ್ಟ ಮತ್ತು ತ್ಯಾಗಗಳಿಗೆ ಇನ್ನೊಂದು ಹೆಸರು. ಬಾಲ್ಯದಿಂದಲೇ ದೇಶಭಕ್ತಿಯ ವ್ರತ ಸ್ವೀಕರಿಸಿದ್ದವರು ಅವರು. ಅತ್ಯಂತ ಶ್ರದ್ಧೆಯಿಂದ ಜೀವನವಿಡೀ ಅದನ್ನು ನಡೆಸಿಯೂ ನಡೆಸಿದರು. ಸ್ಫಟಿಕದಂತಹ ಶುದ್ಧ ಚಾರಿತ್ರ್ಯ ಅವರದು.

    ಆಕಾರದಲ್ಲಿ ಭವ್ಯ, ಆಜಾನುಬಾಹು. ಮುಖದಲ್ಲಿ ಸಿಡುಬಿನ ಕಲೆ. ಶ್ಯಾಮ ವರ್ಣ. ಕಣ್ಣುಗಳಲ್ಲಿ ತುಳುಕಿ ಚಿಮ್ಮುತ್ತಿದ್ದ ಅಲೌಕಿಕ ತೇಜಸ್ಸು, ದೊಡ್ಡದಾದ ಮೀಸೆ, ಆದರೂ ತುಂಬ ಶಾಂತ ಸ್ವಭಾವ, ಸೌಮ್ಯ ನಡವಳಿಕೆ, ಮಾತುಗಳೆಂದರೆ ಪ್ರೇಮದ ಹೊಳೆ.

    ಸದಾ ಪ್ರಸನ್ನಚಿತ್ತರು ಅವರು. ಹಗಲು ರಾತ್ರಿ ಬಿಡುವಿಲ್ಲದೆ ಕ್ರಿಯಾಶಾಲಿ. ಸಂಘಕಾರ್ಯದ ಕುರಿತಾಗಿಯೇ ಸದಾ ಆಲೋಚನೆ. ಕೈಯಲ್ಲಿ ಕಾಸಿಲ್ಲ. ಸಾಧನಗಳೂ ಇಲ್ಲ. ನಿತ್ಯ ನೂರಾರು ವಿಧ ಸಂಕಟ, ತೊಂದರೆಗಳು. ಇಷ್ಟಾದರೂ ಅವರ ಪ್ರಸನ್ನತೆಗೆ ಎಂದು ಭಂಗವಿರಲಿಲ್ಲ. ತಮ್ಮ ಸುತ್ತ ಇಂತಹ ಪ್ರಸನ್ನತೆಯ ಕಂಪು ಹರಡುತ್ತಿದ್ದರು. ಭಾಷಣ, ಮಾತುಕತೆಯ ಅವರ ಶೈಲಿ ಸಹ ತೀರ ಸರಳ, ಅಹಂಕಾರದ ಲವಲೇಶವೂ ಅದರಲ್ಲಿ ಇರುತ್ತಿರಲಿಲ್ಲ. ಕೋಪವನ್ನು ನಿಯಂತ್ರಿಸಿದ್ದರು. ಲೋಭ, ಮೋಹಗಳನ್ನು ಬಾಲ್ಯದಲ್ಲಿಯೇ ದೂರಗೊಳಿಸಿದ್ದರು. ಅವರ ಉಡುಪು ಸರಳ, ಜೀವನವೂ ಸರಳ.

    ಡಾಕ್ಟರ್ ಹೆಡಗೆವಾರ್ ಅವರು ನಿಧನರಾದರೆನ್ನುವುದೇನೋ ನಿಜ. ಆದರೆ ಒಮ್ಮೊಮ್ಮೆ ಯೋಚಿಸಿದಾಗ ಅದೂ ಅಸತ್ಯವೇನೋ ಎನ್ನಿಸುತ್ತದೆ. ಅವರು ಇನ್ನೂ ಜೀವಂತ ಇದ್ದಾರೆ ಎನ್ನುವುದೇ ಹೆಚ್ಚು ಸರಿ. ಕಾರಣ ಡಾಕ್ಟರ್‌ಜಿ ಹಾಗೂ ಸಂಘ ಇವೆರಡೂ ಅಭಿನ್ನ. ಸಂಘ ಇರುವಾಗ ಡಾಕ್ಟರ್‌ಜಿ ಇಲ್ಲವಾಗುವುದು ಹೇಗೆ ಸಾಧ್ಯ? ಪ್ರತಿಯೊಂದು ಸಂಘಸ್ಥಾನದಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಹೃದಯಮಂದಿರದಲ್ಲಿ ಅವರು ವಿರಾಜಿತರು.

    ನಿತ್ಯ ಶಾಖೆಗೆ ಹೋಗಬೇಕು. ಅಲ್ಲಿನ ಕಾರ್ಯಕ್ರಮಗಳಲ್ಲಿ ಒಂದಾಗಿ ಪಾಲ್ಗೊಳ್ಳಬೇಕು. ಸಂಘ ಕಾರ್ಯವನ್ನು ತನುಮನಧನಗಳಿಂದ ಅತ್ಯಂತ ಶ್ರದ್ಧೆ ವಹಿಸಿ ಮಾಡಬೇಕು. ಹಾಗಾದಾಗ ನಮ್ಮ ಹೃದಯದೊಳಗೂ ಡಾಕ್ಟರ್‌ಜಿಯವರ ಶಾಶ್ವತ ಆವಾಸ ಆಗಿಯೇ ಆಗುವುದು.

Labels: Doctorji, Doctorji Immortalised, Sangha Story, ಅಮರ ಡಾಕ್ಟರ್‌ಜಿ, ಡಾಕ್ಟರ್‌ಜಿ, ಸಂಘದ ಕಥೆ

೫೧. ಮಹಾಪ್ರಯಾಣ

ಮಹಾಪ್ರಯಾಣ

    ಡಾಕ್ಟರ್‌ಜಿಯವರ ಮಹಾನಿರ್ವಾಣದ ಸುದ್ದಿ ಎಲ್ಲೆಡೆ ಹರಡಿತು. ತಂತಿ, ದೂರವಾಣಿ ಮೂಲಕ ದೂರದೂರದವರೆಗೆ ಸುದ್ದಿ ಹೋಯಿತು. ತಂಡ ತಂಡವಾಗಿ ಜನ ಬರತೊಡಗಿದರು. ಸೈಕಲ್ಲು, ಕಾರು, ಬಸ್ಸುಗಳಲ್ಲಿ, ಸಿಕ್ಕಿದ ಯಾವುದೇ ವಾಹನದಲ್ಲಿ ಸ್ವಯಂಸೇವಕರ, ಅಭಿಮಾನಿಗಳ ಮಹಾಪೂರವೇ ನಾಗಪುರದತ್ತ ಹರಿಯತೊಡಗಿತು. ನಾಗಪುರ ನಗರ ಸಂಘಚಾಲಕ ಘಟಾಟೆಯವರ ಮನೆಯಲ್ಲಿ ಸ್ವಯಂಸೇವಕರಲ್ಲದೆ ಸಹಸ್ರಾರು ಮಂದಿ ಬಂದು ಕೂಡಿದ್ದರು. ತಮ್ಮ ಪ್ರಾಣ ಪ್ರಿಯ ನಾಯಕನ ಅಂತ್ಯದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದ ಅನೇಕರಿಗೆ ತಡೆದಷ್ಟೂ ಉಮ್ಮಳಿಸಿ ಬರುತ್ತಿದ್ದ ದುಃಖ, ಕಣ್ಣುಗಳಲ್ಲಿ ಧಾರಾಕಾರ ನೀರು. ಇನ್ನೂ ಕೆಲವರದು ಮೂಕರೋದನ ಮಾತ್ರ.

    ೧೯೪೦ ಜೂನ್ ೨೧ರ ಸಂಜೆ ೫ ಗಂಟೆಗೆ ನಾಗಪುರದಲ್ಲಿ ಡಾಕ್ಟರ್‌ಜಿಯವರ ವಿರಾಟ್ ಶವಯಾತ್ರೆ. ಸಹಸ್ರಾವಧಿ ಸ್ವಯಂಸೇವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಹಿಂದೆಂದೂ ಕಂಡಿರದಷ್ಟು ಉದ್ದದ ಸಾಲು. ಎಲ್ಲವೂ ಶಾಂತ ಸಹಜ ಅನುಶಾಸನ ಬದ್ಧ.

    ಮಾರ್ಗದುದ್ದಕ್ಕೂ ಎಲ್ಲಿ ನೋಡಿದರಲ್ಲಿ ಜನಸಂದಣಿ. ಜಾತಿ, ಪಕ್ಷ, ಪಂಥಗಳ ಭೇದ ಮರೆತು ಎಲ್ಲರಿಂದ ಡಾಕ್ಟರ್‌ಜಿಯವರ ಕಳೇಬರಕ್ಕೆ ಹಾರ, ಪುಷ್ಪಗುಚ್ಛ ಸಮರ್ಪಣೆ, ಹೂವಿನ ಮಳೆ. ’ರೇಶಿಂಬಾಗ್’ ಮೈದಾನಕ್ಕೆ ೯ ಗಂಟೆಗೆ ಶವಯಾತ್ರೆ ತಲುಪಿತು.

    ರೇಶಿಂಬಾಗ್ ಅವರ ಕರ್ಮಭೂಮಿ. ಆ ಮೈದಾನವನ್ನು ತಾವೇ ಹಣ ಕೂಡಿಸಿ ಸಂಘಕ್ಕಾಗಿ ಕೊಂಡಿದ್ದರು. ಅದೆಷ್ಟು ಸಂಘ ಶಿಕ್ಷಾ ವರ್ಗಗಳು, ಉತ್ಸವಗಳು ಅಲ್ಲಿ ನಡೆದಿದ್ದವೋ? ಆ ನೆಲದ ಕಣ ಕಣವೂ ಡಾಕ್ಟರ್‌ಜಿಯವರ ನಡೆದಾಟ, ಬೆವರಿನಿಂದ ಪವಿತ್ರ. ಡಾಕ್ಟರ್‌ಜಿಯವರ ಧ್ವನಿಯಿಂದ ಅಲ್ಲಿನ ವಾತಾವರಣವೆಲ್ಲ ಅನುರಣಿತ, ಅದೇ ಪವಿತ್ರ ಸ್ಥಾನದಲ್ಲಿ ಈಗ ಡಾಕ್ಟರ್‌ಜಿಯವರ ಪಾರ್ಥಿವ ದೇಹವೂ ಅಗ್ನಿಗರ್ಪಿತವಾಯಿತು. ಧ್ಯೇಯಾಗ್ನಿಯಿಂದ ಪ್ರಜ್ವಲಿಸುತ್ತಿದ್ದ ಆ ದೇಹ ಧಗಧಗಿಸುವ ಅಗ್ನಿ ನಾರಾಯಣನಲ್ಲಿ ಒಂದಾಯಿತು. ಎಲ್ಲೆಲ್ಲೂ ದುಃಖದ ಛಾಯೆ ಆವರಿಸಿತು.

Labels: Doctorji, Last Journey, Sangha Story, ಡಾಕ್ಟರ್‌ಜಿ, ಮಹಾಪ್ರಾಯಾಣ, ಸಂಘದ ಕಥೆ

೫೦. ಉತ್ತರಾಧಿಕಾರಿ

ಉತ್ತರಾಧಿಕಾರಿ

     ಡಾಕ್ಟರ್‌ಜಿಯವರ ಕಾಯಿಲೆ ಮತ್ತಷ್ಟು ಉಲ್ಬಣಿಸಿತು. ಲಂಬರ್ ಪಂಕ್ಚರ್ ಚಿಕಿತ್ಸೆ ಮಾಡುವ ನಿರ್ಧಾರ ಕೈಗೊಂಡರು ವೈದ್ಯರು. ಇದು ಡಾಕ್ಟರ್‌ಜಿಯವರಿಗೆ ತಿಳಿಯಿತು. ಅವರು ಶ್ರೀ ಗುರೂಜಿ, ಮಾ|| ಬಾಬಾಜಿ ಪಾಧ್ಯೆ, ಬಾಳಾಸಾಹೆಬ ದೇವರಸ್, ಕೃಷ್ಣರಾವ್ ಮೊಹರೀಲ್ ಮೊದಲಾದ ಪ್ರಮುಖ ಕಾರ್ಯಕರ್ತರನ್ನು ಬಳಿ ಕರೆದರು.

    ಚಿಂತೆ ತುಂಬಿ ಮೌನ ಕವಿದ ವಾತಾವರಣ. ಎಲ್ಲರ ಕಣ್ಣುಗಳು ಡಾಕ್ಟರ್‌ಜಿಯವರ ಮೇಲೆ. ನಡು ನಡುವೆ ತಮ್ಮ ಮನದಲ್ಲಿ ಏಳುತ್ತಿದ್ದ ಭಾವನೆಗಳ ಆವೇಗವನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಅವರೆಲ್ಲ ನಡೆಸಿದರು. ಡಾಕ್ಟರ್‌ಜಿಯವರೆ ಕೊನೆಯಲ್ಲಿ ಮೌನ ಮುರಿದರು. "ಈಗ ಲಂಬರ್ ಪಂಕ್ಚರ್ ಮಾಡುವರು. ಪ್ರಾಯಶಃ ಇದೇ ಕೊನೆಯ ಉಪಾಯ ಉಳಿದಿರಬಹುದು. ಯಶಸ್ವಿಯಾದಲ್ಲಿ ಸಂತೋಷ. ಆದರೆ ಆಗದೆ ಹೋದಲ್ಲಿ ಸಂಘ ಕಾರ್ಯದ ಪೂರ್ತಿ ಹೊಣೆ ನಿಮ್ಮ ಮೇಲೆಯೇ ಎಂದು ನೀವು ತಿಳಿಯಿರಿ" ಗುರೂಜಿಯವರಿಗೆ ಅವರು ತಿಳಿಸಿದರು.

    "ಡಾಕ್ಟರ್‌ಜಿ ಹಾಗೇಕೆ ಮಾತನಾಡುವಿರಿ? ಎಲ್ಲವೂ ಸರಿಯಾಗುವುದು" ಎಂದರು ಶ್ರೀ ಗುರೂಜಿ.

    ಡಾಕ್ಟರ್‌ಜಿ ಮುಗುಳ್ನಗುತ್ತಾ "ಮನುಷ್ಯನಾದವನು ಯಾವಾಗಲೂ ಒಳ್ಳೆಯ ಭರವಸೆ ಇಟ್ಟುಕೊಳ್ಳಬೇಕೆಂಬುದನ್ನು ನಾನೂ ಒಪ್ಪುವೆ. ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿಯೂ ಇರುವುದು ಅಗತ್ಯ. ಸದ್ಯ ನಾನು ಹೇಳಿದಷ್ಟು ಮಾಡಿ" ಎಂದರು.

    ಈಗ ಡಾಕ್ಟರ್‌ಜಿ ನಿಶ್ಚಿಂತರು. "ಇನ್ನು ಬೇಕಾದಲ್ಲಿ ಲಂಬರ್ ಪಂಕ್ಚರ್ ಮಾಡಿರಿ" ವೈದ್ಯರಿಗೆ ಅವರು ತಮ್ಮ ಅನುಮತಿ ತಿಳಿಸಿದರು.

    ವೈದ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸಂಜೆ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ದಿನ ಡಾಕ್ಟರ್‌ಜಿಯವರಿಗೆ ಅಸಹನೀಯ ವೇದನೆ. ಮಾನಸಿಕವಾಗಿಯೂ ಅಪಾರ ನೋವಿನ ಅನುಭವ. ತಮ್ಮ ಜೀವಿತ ಕಾಲದಲ್ಲಿಯೇ ಸುಸಂಘಟಿತ ಸಮೃದ್ಧ ಹಿಂದು ರಾಷ್ಟ್ರವನ್ನು ಅವರು ಕಾಣಬಯಸಿದ್ದರು. ಆದರೆ ಆರೋಗ್ಯ ಕೆಟ್ಟು ಶರೀರವೇ ಕುಸಿಯುತ್ತಿದೆ. "ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ, ನನ್ನ ಆರಾಧ್ಯ ದೇವತೆಗಳೇ, ಸಂಘ ಕಾರ್ಯ ಬೆಳೆಸಲು ಮುಂದೆ ನೀವೆಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದೋ..." ಎಂಬೆಲ್ಲ ಯೋಚನೆ. ಆ ಚಿಂತೆಯೇ ಅವರ ಮನಸ್ಸನ್ನು ಕಾಡುತ್ತಿತ್ತು. ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದರು. ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಆಗಾಗ್ಗೆ ಮಗ್ಗಲು ಬದಲಿಸುತ್ತಿದ್ದರು. ಒಮ್ಮೊಮ್ಮೆ ಏಳುವರು. ಪುನಃ ಕುಳಿತುಕೊಳ್ಳುವರು; ವಿಚಾರಮಗ್ಯರಾಗಿ ಅತ್ತಿಂದಿತ್ತ ಓಡಾಡುವರು. ಶ್ರೀ ಗುರೂಜಿಯವರಿಗೆ ಸಂಘ ಕಾರ್ಯದ ಹೊಣೆ ಒಪ್ಪಿಸಿದ ಮೇಲಷ್ಟೇ ಮನಸ್ಸು ತುಸು ಶಾಂತವಾಯಿತು.

    ಸಾಯಂಕಾಲ ಚಿಕಿತ್ಸೆ ನಡೆಯಿತು. ಬೆನ್ನು ಹುರಿಯಿಂದ ನೀರು ಧಾರಾಕಾರವಾಗಿ ಹರಿಯಿತು. ಅಷ್ಟಾದರು ನೋವು ಮಾತ್ರ ಕಡಿಮೆಯಾಗಲೇ ಇಲ್ಲ.

    ಮಧ್ಯರಾತ್ರಿಯ ನಂತರ ಅವರು ಪ್ರಜ್ಞಾಶೂನ್ಯರಾದರು. ಬೆಳಗಾಗುತ್ತಿದ್ದಂತೆಯೇ ಅವರ ಜ್ವರ ೧೦೬ ಡಿಗ್ರಿಗೆ ಏರಿತು. ನಾಗಪುರದ ಗಣ್ಯ ವೈದ್ಯರೆಲ್ಲಾ ಸೇರಿದರು. ಸಾಕಷ್ಟು ವಿಚಾರ ವಿನಿಮಯ ನಡೆಯಿತು. ತರ ತರದ ಚಿಕಿತ್ಸೆಗಳಾದವು. ಆದರೂ ಯಾರಿಗೂ ಏನೂ ಹೊಳೆಯದು.

    ಡಾಕ್ಟರ್‌ಜಿಯವರ ಆರೋಕ್ಯ ಹದಗೆಟ್ಟ ಸುದ್ದಿ ನಾಗಪುರದಲ್ಲೆಲ್ಲಾ ಹರಡಿತು. ಸಹಸ್ರಾರು ಸ್ವಯಂಸೇವಕರು ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ. ಮನದಲ್ಲಿ ಭಗವಂತನಿಗೆ ಮೊರೆ. ಆದರೆ ಕಲನೆದುರಲ್ಲಿ ಯಾರ ಇಚ್ಛೆಯೂ ನಡೆಯದು.

    ೧೯೪೦ ಜೂನ್ ೨೧ ಶುಕ್ರವಾರ ಬೆಳಿಗ್ಗೆ ೯.೨೭ಕ್ಕೆ ಡಾಕ್ಟರ್‌ಜಿ ಇಹ ಲೋಕದ ಯಾತ್ರೆ ಮುಗಿಸಿದರು. ಸಹಸ್ರಾರು ಸ್ವಯಂಸೇವಕರ ಜೀವನದ ಆದರ್ಶ ಚೇತನ ಕಣ್ಮರೆಯಾಯಿತು. ಸಹಸ್ರಾವಧಿ ಕಾರ್ಯಕರ್ತರ ಪ್ರೇರಣಾ ಸ್ಥಾನ ಇಲ್ಲವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಲ್ಪಿ, ಆದ್ಯ ಸರಸಂಘಚಾಲಕ ಪರಮ ಪೂಜನೀಯ ಡಾಕ್ಟರ್ ಹೆಡಗೆವಾರ್‌ಜಿ ಕಾಲದೊಂದಿಗೆ ಲೀನವಾದರು.

Labels: Doctorji, Next Sarasanghachalak, Sangha Story, Sri Guruji, ಉತ್ತರಾಧಿಕಾರಿ, ಡಾಕ್ಟರ್‌ಜಿ, ಸಂಘದ ಕಥೆ

೪೯. ನಾನು ಬಂಗಾಲಕ್ಕೆ ಬರಬೇಕೆಂದಿರುವೆ

ನಾನು ಬಂಗಾಲಕ್ಕೆ ಬರಬೇಕೆಂದಿರುವೆ

    ೧೯೪೦ ಜೂನ್ ೧೯ರ ಸಾಯಂಕಾಲ. ಬಂಗಾಲದ ಓರ್ವ ವ್ಯಕ್ತಿ ಡಾಕ್ಟರ್‌ಜಿಯವರನ್ನು ಕಾಣಲು ಬಂದರು. ಮೊದಲು ಕ್ರಾಂತಿಕಾರಿಗಳಾಗಿದ್ದವರು ಅವರು. ಡಾಕ್ಟರ್‌ಜಿಯವರ ಆಪ್ತ ಮಿತ್ರ ಹಾಗೂ ಸಹಕಾರಿ. ಪರಸ್ಪರ ಕಾಣುತ್ತಲೇ ಅವರೀರ್ವರ ಕಣ್ಣುಗಳಲ್ಲಿ ಸಂತೋಷ ಮಿಂಚಿತು. ಪ್ರೀತಿಯಿಂದ ಆಲಂಗಿಸಿಕೊಂಡರು. ಡಾಕ್ಟರ್‌ಜಿ ಜೊತೆ ಅವರ ಮಾತುಕತೆ ಆರಂಭವಾಯಿತು. ಹಳೆಯ ನೆನಪುಗಳೆಲ್ಲ ಮತ್ತೆ ಹಸಿರಾದವು. "ನಾನು ವಾಸಿಯಾದ ಕೂಡಲೇ ಬಂಗಾಲಕ್ಕೆ ಬರುವೆ. ಹಳೆಯ ಗೆಳೆಯರನ್ನೆಲ್ಲ ಇನ್ನೊಮ್ಮೆ ಭೇಟಿ ಮಾಡುವೆ" ಡಾಕ್ಟರ್‌ಜಿಯವರೆಂದರು. ಮಾತು ಮುಂದುವರೆಸುತ್ತಾ "ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಸಂಘ ಕಾರ್ಯ ಎಷ್ಟು ಮಹತ್ವದ್ದೆಂದು ಅವರಿಗೆ ತಿಳಿಸುವೆ. ಅವರೆಲ್ಲ ಕಾರ್ಯಕ್ಕಿಳಿದಲ್ಲಿ ನಮ್ಮ ದೇಶದ ಪರಿಸ್ಥಿತಿ ಶೀಘ್ರವೇ ಸುಧಾರಿಸಬಹುದು. ಚಿತ್ರವೇ ಬದಲಾಗಬಹುದು" ಎಂದರು.

    "ನಾಳೆ ನಾಗಪುರಕ್ಕೆ ಶ್ರೀ ಸುಭಾಷಚಂದ್ರ ಬೋಸರು ಬರುವವರಿದ್ದಾರೆ. ನಿಮ್ಮನ್ನು ಭೇಟಿ ಮಾಡುವ ಇಚ್ಛೆ ಅವರಿಗಿದೆ. ಅದನ್ನು ತಿಳಿಸಲೆಂದೇ ನಾನು ಬಂದಿರುವೆ. ಅವರು ತುಂಬ ಅಪೇಕ್ಷೆಪಟ್ಟಿದ್ದಾರೆ". ಬಂಗಾಲದಿಂದ ಬಂದ ವ್ಯಕ್ತಿ ನುಡಿದರು.

    ಅದರಂತೆ ಮರುದಿನ ಶ್ರೀ ಬೋಸರು ಶ್ರೀ ಘಟಾಟೆಯವರ ಮನೆಗೆ ಬಂದರು. ಆಗ ಡಾಕ್ಟರ್‌ಜಿ ಜ್ವರದಿಂದ ತೀರ ನಿತ್ರಾಣರಾಗಿದ್ದರು. ಕಣ್ಣುಗಳೂ ಮುಚ್ಚಿದ್ದವು. ಅರೆ ಎಚ್ಚರ ಅವರಿಗೆ. ಹಾಗಾಗಿ ಸುಭಾಷ್ ಚಂದ್ರರಿಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಅವರಿಗೂ ಡಾಕ್ಟರ್‌ಜಿಯವರ ಸ್ಥಿತಿ ಅರ್ಥವಾಯಿತು. ಸ್ವಯಂಸೇವಕರು ಅವರನ್ನು ಎಬ್ಬಿಸಲು ಯೋಚಿಸಿದರು. ಆದರೆ ಸುಭಾಷ್‍ಚಂದ್ರರೇ ಅವರನ್ನು ತಡೆದರು. "ಬೇಡ ಈಗ ಎಬ್ಬಿಸಬೇಡಿ. ಸರಿಯಲ್ಲ ಅದು. ನಾನು ಪುನಃ ಬರುವೆ" ಎಂದರು. ಕೆಲವು ಕ್ಷಣ ಅಲ್ಲಿಯೇ ನಿಂತು, ಡಾಕ್ಟರ್‌ಜಿಯವರನ್ನು ಎವೆಯಿಕ್ಕದೇ ನೋಡಿದರು. ಕೊನೆಯಲ್ಲಿ ಮೌನವಾಗಿ ಪ್ರಣಾಮ ಸಲ್ಲಿಸಿ ಹೊರಬಂದರು.

Labels: Doctorji, Sangha Story, ಅಂತಿಮ ದಿನಗಳು, ಡಾಕ್ಟರ್‌ಜಿ, ಬಂಗಾಲದ ನಂಟು, ಸಂಘದ ಕಥೆ

೪೮. ಜೀವನ ಮರಣಗಳ ತೂಗುಯ್ಯಾಲೆ

ಜೀವನ ಮರಣಗಳ ತೂಗುಯ್ಯಾಲೆ

    ಸಂಘ ಶಿಕ್ಷಾ ವರ್ಗ ಮುಗಿಯಿತು. ಈಗ ಡಾಕ್ಟರ್‌ಜಿಯವರ ಸೇವೆಯಲ್ಲಿ ಹೆಚ್ಚಿನ ಕಾರ್ಯಕರ್ತರೆಲ್ಲ ತೊಡಗಿದರು. ವೈದ್ಯರ ಸಲಹೆಯಂತೆ ಉಪಚಾರ ಸಾಗಿತ್ತು. ಅನ್ಯ ಊರುಗಳಿಂದಲೂ ಸ್ವಯಂಸೇವಕರು ಡಾಕ್ಟರ್‌ಜಿಯವರನ್ನು ನೋಡಲು ಬರುತ್ತಿದ್ದರು. "ನಮ್ಮೂರಿಗೆ ಬನ್ನಿ, ಅಲ್ಲಿನ ವಾತಾವರಣ, ನೀರು ಚೆನ್ನಾಗಿವೆ. ಉತ್ತಮ ವೈದ್ಯರೂ ಇದ್ದಾರೆ. ಚೆನ್ನಾದ ವ್ಯವಸ್ಥೆ ಕೂಡಾ ಮಾಡುತ್ತೇವೆ. ನಿಮ್ಮ ಆರೋಗ್ಯ ನಿಶ್ಚಯವಾಗಿ ಸುಧಾರಿಸುತ್ತದೆ" ಎನ್ನುತ್ತಿದ್ದವರು ಅನೇಕ. ಆದರೆ ಡಾಕ್ಟರ್‌ಜಿ ಎಲ್ಲೂ ಹೋಗುವಂತಿರಲಿಲ್ಲ. ವಿಧಿಯ ಯೋಜನೆ ಇದ್ದುದ್ದೇ ಬೇರೆ.

    ಅವರ ಆರೋಗ್ಯ ದಿನದಿನಕ್ಕೂ ಕುಸಿಯತೊಡಗಿತು. ನಾಗಪುರದ ತಜ್ಞ ವೈದ್ಯರಿಂದ ಚಿಕಿತ್ಸೆ ಆರಂಭಗೊಂಡಿತು. ಆದರೆ ಆರೋಗ್ಯ ಒಂದಿನಿತೂ ಸುಧಾರಿಸಲಿಲ್ಲ. ೧೯೪೦ ಜೂನ್ ೧೫ ರಂದು ಅವರನ್ನು ಮೇಯೋ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಸಮಗ್ರ ತಪಾಸಣೆ ನಡೆಯಿತು. ಆದರೂ ವ್ಯಾಧಿ ಏನೆಂದು ತಿಳಿಯದು. ಬೆನ್ನು ನೋವು ಅಸಹನೀಯವಾಗಿತ್ತು, ಅವರಿಗೆ. ನಿತ್ಯ ಏರುತ್ತಿದ್ದ ಜ್ವರ, ತೀರಾ ನಿಶ್ಶಕ್ತಿ. ಮನದ ತುಂಬ ನೂರೆಂಟು ವಿಧ ಯೋಚನೆಗಳು. ಆಸ್ಪತ್ರೆಯ ವಾತಾವರಣ ಅವರಿಗೆ ಹಿತಕರ ಎನಿಸಲಿಲ್ಲ. ನಾಗಪುರ ನಗರ ಸಂಘಚಾಲಕ ಶ್ರೀ ಬಾಬಾಸಾಹೇಬ ಘಾಟಾಟೆಯವರ ಮನೆಗೆ ಅವರನ್ನು ಕರೆದೊಯ್ಯಲಾಯಿತು.

    ತಜ್ಞ ವೈದ್ಯರ ಔಷಧೋಪಚಾರ ನಡೆಯುತ್ತಿತ್ತು. ತಮ್ಮ ಸರ್ವ ಪ್ರಯತ್ನ ಸುರಿದು ಅವರು ಚಿಕಿತ್ಸೆಗೆ ತೊಡಗಿದ್ದರು. ಕಾರ್ಯಕರ್ತರೂ ತತ್ಪರತೆಯಿಂದ ಸೇವೆ ಮಾಡುತ್ತಿದ್ದರು. "ಹೇ ಭಗವಂತ, ನಮ್ಮ ಪ್ರಿಯ ನಾಯಕನನ್ನು ಬದುಕಿಸು" ಎಂದು ಅವರು ಸದಾ ಭಗವಂತನಲ್ಲಿ ಮೊರೆಯಿಡುತ್ತಿದ್ದರು. ಸಹಸ್ರಾರು ಸ್ವಯಂಸೇವಕರ ಪ್ರಾರ್ಥನೆ ಅಂತೂ ನಿತ್ಯ ನಡೆದೇ ಇತ್ತು. ಆದರೂ ಡಾಕ್ಟರ್‌ಜಿಯವರ ಆರೋಗ್ಯ ದಿನ ಕಳೆದಂತೆ ಹೆಚ್ಚೆಚ್ಚು ಆತಂಕಕಾರಿಗೊಳ್ಳುತ್ತಲೇ ಕುಸಿಯುತ್ತಿತ್ತು.

    ತಾನು ಇನ್ನು ಹೆಚ್ಚು ದಿನ ಬದುಕಲಾರೆನೆಂದು ಡಾಕ್ಟರ್‌ಜಿಯವರಿಗೂ ಅನಿಸಿತ್ತು. ಆ ದಿನಗಳಲ್ಲಿ ಸದಾ ಅವರ ಹತ್ತಿರ ಇರುತ್ತಿದ್ದವರು ಯಾದವರಾವ್ ಜೋಶಿ. ಅವರು ಭಾವನಾಶೀಲ ಯುವಕರು. ಡಾಕ್ಟರ್‌ಜಿಯವರ ಕುರಿತು ಅಪಾರ ಶ್ರದ್ಧೆ. ಒಂದು ದಿನ "ಯಾದವ, ಸಂಘದ ಹಿರಿಯ ಅಧಿಕಾರಿ ಮೃತನಾದಲ್ಲಿ ಅಂತ್ಯಯಾತ್ರೆ ಹೇಗೆ ನಡೆಸುವೆ?" ಎಂದು ಪ್ರಶ್ನಿಸಿದರು ಡಾಕ್ಟರ್‌ಜಿ.

    ಪ್ರಶ್ನೆ ಕೇಳಿ ಒಂದು ಕ್ಷಣ ತಬ್ಬಿಬ್ಬಾದರು ಯಾದವರಾವ್‍ಜಿ. ಒತ್ತಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡು, ಆ ಪ್ರಶ್ನೆಯನ್ನೇ ಮರೆಸಲು ವಿಷಯಾಂತರ ಮಾಡುತ್ತಾ "ಈಗ ಔಷಧಿ ಕೊಡುವ ಸಮಯ ಆಗಿದೆ. ನನಗೆ ನೆನಪೇ ಇಲ್ಲ" ಎನ್ನುತ್ತಾ ಮೇಲೆದ್ದರು. ಔಷದಿ ಕುಡಿಸಿದರು. ಡಾಕ್ಟರ್‌ಜಿ ಸಹ ಮರುಮಾತಾಡದೇ ಔಷಧಿ ಕುಡಿದರು. ಡಾಕ್ಟರ್‌ಜಿ ಆ ಕಟು ವಿಷಯ ಮರೆತರೆಂದೇ ಯಾದವರಾವ್‍ಜಿ ಭಾವಿಸಿದರು.

    ಆದರೆ ಸ್ವಲ್ಪ ಸಮಯ ಮಾತ್ರ. ಪುನಃ ಡಾಕ್ಟರ್‌ಜಿ ಶಾಂತ, ಗಂಭೀರ ಸ್ವರದಲ್ಲಿ ಮಾತನಾಡತೊಡಗಿದರು. "ನಮ್ಮ ಸಂಘ ಒಂದು ಕುಟುಂಬದಂತೆ. ಇಲ್ಲಿ ಆಡಂಬರ, ಪ್ರದರ್ಶನಗಳಿಗೆ ಅವಕಾಶವಿಲ್ಲ. ಸಂಘದ ಯಾವುದೇ ಅಧಿಕಾರಿ ತೀರಿಕೊಂಡಲ್ಲಿ ಅವರ ಅಂತ್ಯಕ್ರಿಯೆ ಸರಳವಾಗಿರಬೇಕು. ಯಾವುದೇ ಆಡಂಬರವಾಗಲೀ, ಸೈನಿಕ ಪದ್ಧತಿಯಾಗಲೀ ಇರಬಾರದು."

    ಇನ್ನೊಂದು ದಿನ ಮಧ್ಯಾಹ್ನ ಯಾದವರಾವ್‍ಜಿ, ಡಾಕ್ಟರ್‌ಜಿ ಅವರಿಗಾಗಿ ಚಹ ತಂದರು. "ಎಲ್ಲರನ್ನೂ ಕರೆಯಿರಿ. ಎಲ್ಲರೊಂದಿಗೆ ನಾನು ಚಹ ಕುಡಿಯುವೆ" ಡಾಕ್ಟರ್‌ಜಿ ಎಂದರು.

    ಆದರೆ ಅನಗತ್ಯವಾಗಿ ತಡವಾಗುವುದೆಂದು ಯಾದವರಾವ್‍ಜಿ ವಿಧವಿಧವಾಗಿ ಅವರಿಗೆ ಅವಸರಪಡಿಸಿದರು. ಡಾಕ್ಟರ್‌ಜಿಯವರದು ಚಿಕ್ಕ ಮಕ್ಕಳಂತೆ ಒಂದೇ ಹಠ. ಅವರು ಚಹ ಕುಡಿಯಲು ನಿರಾಕರಿಸಿದರು. ಯಾದವರಾವ್‍ಜಿ ಏನು ಮಾಡಬೇಕೆಂಬುದೇ ತಿಳಿಯದಾಯಿತು.

    ಅದೇ ಹೊತ್ತಿಗೆ ಶ್ರೀ ಗುರೂಜಿ ಅಲ್ಲಿಗೆ ತಲುಪಿದರು. ಅವರಿಗೆ ವಿಷಯವೆಲ್ಲ ತಿಳಿಯಿತು. ಅವರು ಸ್ವಯಂಸೇವಕರನ್ನು ಕಳಿಸಿ ಪ್ರಮುಖ ಕಾರ್ಯಕರ್ತರನ್ನೆಲ್ಲ ಸೇರಿಸಿದರು. ಇನ್ನು ಹದಿನೈದಿಪ್ಪತ್ತು ಲೋಟ ಚಹವೂ ಬಂತು. ಡಾಕ್ಟರ್‌ಜಿಯವರನ್ನು ಗಾದಿಗೆ ಒರಗಿಸಿ ಕುಳ್ಳಿರಿಸಿದರು. ತುಂಬ ಪ್ರೀತಿಯಿಂದ ಡಾಕ್ಟರ್‌ಜಿ ಎಲ್ಲರೊಡನೆ ಚಹ ಕುಡಿದರು.

    ಯೇಸುಕ್ರಿಸ್ತ ತನ್ನ ಮಹಾಪ್ರಸ್ಥಾನಕ್ಕೆ ಮೊದಲು ತನ್ನೆಲ್ಲ ಶಿಷ್ಯರಿಗೆ ಪ್ರೀತಿಯಿಂದ ಊಟ ಮಾಡಿಸಿದ್ದ. ಸ್ವಾಮಿ ವಿವೇಕಾನಂದರು ಸಹ ತಮ್ಮ ಗುರು ಬಂಧುಗಳು ಹಾಗೂ ಶಿಷ್ಯರೊಡನೆ ಕೂಡಿ ಇದೇರೀತಿ ಊಟ ಮಾಡಿದ್ದರು.

Labels: Doctorji, Last Days, Sangha Story, ಅಂತಿಮ ದಿನಗಳು, ಜೀವನ ಮರಣಗಳ ತೂಗುಯ್ಯಾಲೆ, ಡಾಕ್ಟರ್‌ಜಿ, ಸಂಘದ ಕಥೆ,

೪೭. ಅಂತಿಮ ಭಾಷಣ

ಅಂತಿಮ ಭಾಷಣ

    ಹಿಂದಿನ ಎಲ್ಲ ವರ್ಷಗಳಿಗಿಂತಲೂ ಆ ವರ್ಷ ವರ್ಗದಲ್ಲಿ ಶಿಕ್ಷಾರ್ಥಿಗಳ ಸಂಖ್ಯೆ ಹೆಚ್ಚು. ಎಲ್ಲಾ ಪ್ರಾಂತಗಳೂ ಆ ವರ್ಷ ಪ್ರತಿನಿಧಿಸಲ್ಪಟ್ಟದ್ದು ಮತ್ತೊಂದು ವಿಶೇಷ. ಬೇರೆ ಬೇರೆ ಜಾತಿ, ಉದ್ಯೋಗಗಳ ವಿವಿಧ ವಯೋಮಾನಗಳ ಸ್ವಯಂಸೇವಕರು ಅಲ್ಲಿದ್ದರು. ಒಂದು ರೀತಿ ಸಮಗ್ರ ಭಾರತವೇ ಅಲ್ಲಿ ಸಂಕ್ಷಿಪ್ತ ರೂಪ ತಳೆದು ಬಂದಂತೆ ಭಾಸವಾಗುತ್ತಿತ್ತು.

    ಅಂದು ೧೯೪೦ ಜೂನ್ ೯, ವರ್ಗದ ಖಾಸಗಿ ಸಮಾರೋಪ. ಡಾಕ್ಟರ್‌ಜಿಯವರ ಇಚ್ಛೆಯನ್ನು ಗೌರವಿಸಿ ತುಂಬ ಕಾಳಜಿಯಿಂದ ಅವರನ್ನು ಸಂಘ ಶಿಕ್ಷಾ ವರ್ಗಕ್ಕೆ ಕರೆದೊಯ್ಯಲಾಯಿತು. ಸರ್ವಾಧಿಕಾರಿಗಳೊಡನೆ ಡಾಕ್ಟರ್‌ಜಿ ಬೌದ್ಧಿಕ ಮಂಟಪ ಪ್ರವೇಶಿಸಿದರು. ವೇದಿಕೆಯ ಮೇಲೆ ದಿಂಬು ಹಾಸಿದ ಖುರ್ಚಿಯಲ್ಲಿ ಡಾಕ್ಟರ್‌ಜಿ ಕುಳಿತರು. ಅವರ ಅನುಕೂಲತೆಗಾಗಿ ಅಂದು ವಿಶೇಷವಾಗಿ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ವೈಯಕ್ತಿಕ ಗೀತೆ ಹಾಡಲಾಯಿತು. ಅಮೃತವಚನ ಓದಿದರು. ನಂತರ ಡಾಕ್ಟರ್‌ಜಿ ತಮ್ಮ ಶಾಂತ ಗಂಭೀರ ಧ್ವನಿಯಲ್ಲಿ ಮಾತು ಆರಂಭಿಸಿದರು.

    "ಮಾನನೀಯ ಸರ್ವಾಧಿಕಾರಿಜೀ, ಪ್ರಾಂತಸಂಘಚಾಲಕಜೀ, ಅನ್ಯ ಅಧಿಕಾರಿ ವರ್ಗ ಹಾಗೂ ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ -

    ನಾನಿಂದು ನನ್ನ ಅನಾರೋಗ್ಯದ ಕಾರಣ ನಿಮ್ಮ ಮುಂದೆ ನಾಲ್ಕಾರು ಶಬ್ದಗಳನ್ನಾದರೂ ಸರಿಯಾಗಿ ಆಡಬಲ್ಲೆನೆಂದು ನನಗನಿಸುವುದಿಲ್ಲ. ಕಳೆದ ಇಪ್ಪತ್ನಾಲ್ಕು ದಿನಗಳಿಂದಲೂ ಹಾಸಿಗೆ ಹಿಡಿದು ನಾನು ಮಲಗಿರುವುದು ನಿಮಗೆಲ್ಲ ತಿಳಿದೇ ಇದೆ. ಸಂಘದ ದೃಷ್ಟಿಯಿಂದ ಈ ವರ್ಷ ಅತ್ಯಂತ ಸೌಭಾಗ್ಯಪೂರ್ಣವಾದುದು. ಕಾರಣ, ನಾನಿಂದು ನನ್ನೆದುರಲ್ಲಿ ಹಿಂದು ರಾಷ್ಟ್ರದ ಚಿಕ್ಕ ಪ್ರತಿಮೆಯೊಂದನ್ನು ಕಾಣುತ್ತಿದ್ದೇನೆ. ನೀವೆಲ್ಲರೂ ತುಂಬ ದೂರ ದೂರದ ಸ್ಥಳಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ನನ್ನ ಅನಾರೋಗ್ಯದ ಕಾರಣದಿಂದಾಗಿ ಇಷ್ಟು ದಿನಗಳು ನಾಗಪುರದಲ್ಲಿ ಇದ್ದರೂ ನಿಮ್ಮೆಲ್ಲರನ್ನು ಕಂಡು ಪರಿಚಯ ಮಾಡಿಕೊಳ್ಳುವ ಇಚ್ಛೆ ನನಗೆ ಪೂರೈಸಲಾಗಲಿಲ್ಲ. ಪುಣೆಯ ಅಧಿಕಾರಿ ಶಿಕ್ಷಣ ಶಿಬಿರದಲ್ಲಿ ಹದಿನೈದು ದಿನಗಳ ಕಾಲ ಇದ್ದೆ. ಅಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಪರಿಚಯ ಮಾಡಿಕೊಂಡೆ. ಅದೇ ರೀತಿ ನಾಗಪುರದಲ್ಲೂ ಮಾಡಬಲ್ಲೆನೆಂದು ಆಶಿಸಿದ್ದೆ. ಆದರೆ ನಾನು ತಮ್ಮ ಸೇವೆಯನ್ನು ಕಿಂಚಿತ್ತೂ ಮಾಡಲಾರೆನಾದೆ. ನಾನಿಂದು ನಿಮ್ಮೆಲ್ಲರ ದರ್ಶನ ಮಾಡಲು ಬಂದಿರುವೆ. ಸಾಧ್ಯವೆನಿಸಿದಲ್ಲಿ ನಾಲ್ಕಾರು ಮಾತುಗಳನ್ನು ಆಡಬೇಕೆನ್ನುವುದಷ್ಟೇ ನನ್ನ ಇಚ್ಛೆ.

    ನನ್ನ ಮತ್ತು ನಿಮ್ಮೆಲರ ನಡುವೆ ಈ ಹಿಂದಿನ ಪರಿಚಯ ಸ್ವಲ್ಪವೂ ಇಲ್ಲ. ಆದರೂ ನನ್ನ ಅಂತಃಕರಣವನ್ನು ನಿಮ್ಮೆಡೆಗೂ ನಿಮ್ಮೆಲ್ಲರ ಅಂತಃಕರಣಗಳನ್ನು ನನ್ನೆಡೆಗೂ ಸೆಳೆಯುವಂತಹ ಸಂಗತಿ ಯಾವುದು? ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯ ಪುಣ್ಯ ಪ್ರಭಾವವೇ ಅದು. ಸ್ವಯಂಸೇವಕರಲ್ಲಿ ಎಳ್ಳಷ್ಟೂ ಪರಸ್ಪರ ಪರಿಚಯ ಇರದಿದ್ದರೂ ಪ್ರಥಮ ಭೇಟಿಗೆ ಅವರಲ್ಲಿ ಪರಸ್ಪರ ಪ್ರೇಮ ನೆಲೆಸುತ್ತದೆ. ಮಾತುಕತೆ ಆಗಿರಲಿ, ಆಗದಿರಲಿ ಅವರ ಪರಸ್ಪರ ಮಿತ್ರರಾಗುತ್ತಾರೆ. ಮುಖದಲ್ಲಿನ ಮುಗುಳು ನಗೆಯಿಂದಲೇ ಒಬ್ಬರು ಇನ್ನೊಬ್ಬರನ್ನು ಗುರುತಿಸುತ್ತಾರೆ. ಕೆಲವು ದಿನಗಳ ಹಿಂದೆ ಪುಣೆಯಲ್ಲಿದ್ದಾಗ ಒಮ್ಮೆ ನಾನು ಮತ್ತು ಸಾಂಗಲಿಯ ಶ್ರೀ ಕಾಶಿನಾಥ ಪಂತ ಲಿಮಯೆ ಲಕಡೀಪುಲ್ ಮೇಲೆ ಹೋಗುತ್ತಿದ್ದೆವು. ಅದೇ ಸಮಯದಲ್ಲಿ ನಮಗೆದುರಾಗಿ ಸುಮಾರು ಎಂಟು ಹತ್ತು ವರ್ಷದ ಬಾಲಕರಿಬ್ಬರು ಬರುತ್ತಿದ್ದರು. ನಮ್ಮ ಬಳಿ ಬಂದಾಗ ಸ್ವಲ್ಪ ಮುಗುಳ್ನಕ್ಕು ಅವರು ಮುಂದೆ ಹೋದರು. ಆಗ ನಾನು ಕಾಶಿನಾಥರಾಯರಿಗೆ "ಈ ಹುಡುಗರು ಸಂಘದ ಸ್ವಯಂಸೇವಕರು" ಎಂದೆ. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾದರು. ಮುಂಚಿತವಾಗಿ ಯಾವ ಗುರುತು ಪರಿಚಯ ಇಲ್ಲದೆಯೇ ನಾನು ನಿಸ್ಸಂದಿಗ್ಧವಾಗಿ ಅವರಿಬ್ಬರೂ ಸ್ವಯಂಸೇವಕರೆಂದು ಹೇಗೆ ಹೇಳಿದೆ ಎಂಬುದು ಅವರಿಗೊಂದು ಒಗಟೇ ಆಯಿತು. "ಇವರು ನಮ್ಮ ಸ್ವಯಂಸೇವಕರೆಂದು ಹೇಗೆ ಹೇಳುವಿರಿ?" ಎಂದು ಅವರು ನನ್ನನ್ನು ಪ್ರಶ್ನಿಸಿದರು. ಏಕೆಂದರೆ ಅವರಿಬ್ಬರ ವೇಷಭೂಷಣಗಳಲ್ಲಿ ಸ್ವಯಂಸೇವಕತ್ವದ ಯಾವ ಬಾಹ್ಯ ಚಿಹ್ನೆಯೂ ಇರಲಿಲ್ಲ. "ನಾನು ಹೇಳುತ್ತಿರುವುದೇ ಅದಕ್ಕೆ ಸಾಕ್ಷಿ. ನೀವು ಈ ಮಾತಿನ ಸತ್ಯತೆಯನ್ನು ಬೇಕಾದರೆ ಪರೀಕ್ಷಿಸಿ" ಎಂದು ಹೇಳಿ, ಸ್ವಲ್ಪ ಮುಂದೆ ಹೋಗಿದ್ದ ಆ ಬಾಲಕರನ್ನು ಕರೆದೆ "ಹೌದು, ಎರಡು ವರ್ಷಗಳ ಹಿಂದು ತಾವು ನಮ್ಮ ಬಾಲಶಾಖೆಗೆ ಬಂದಿದ್ದಿರಿ. ನೀವು ನಮ್ಮ ಸರಸಂಘಚಾಲಕ ಡಾಕ್ಟರ್‌ ಹೆಡಗೆವಾರ್‌ಜಿ ಮತ್ತು ನಿಮ್ಮೊಡನೆ ಇರುವವರು ಸಾಂಗಲಿಯ ಶ್ರೀ ಕಾಶಿನಾಥ ಲಿಮಯೇ ಅವರು" ಎಂದರು. ಇದು ಸಂಘದ ತಪಶ್ಚರ್ಯದ ಫಲ. ಇಲ್ಲೇ ಕೆಲದಿನಗಳ ಹಿಂದೆ ಭಾಷಣ ಮಾಡಿದ ಮದ್ರಾಸಿನ ಶ್ರೀ ಸಂಜೀವ ಕಾಮತರು ಇಲ್ಲಿ ಓರ್ವ ಅಪರಿಚಿತ ವ್ಯಕ್ತಿಯಂತೆ ಬಂದರು. ನಾಲ್ಕು ದಿನಗಳ ಕಾಲ ನಮ್ಮೊಂದಿಗೆ ಇದ್ದು ಈಗ ನಮ್ಮ ಸೋದರರಾಗಿ ವಾಪಸಾಗುತ್ತಿದ್ದಾರೆ. ಇದರ ಶ್ರೇಯಸ್ಸು ಯಾವೊಬ್ಬ ವ್ಯಕ್ತಿಯದೂ ಅಲ್ಲ. ಸಂಘದ್ದೇ ಆಗಿದೆ. ನಡೆನುಡಿಗಳಲ್ಲಿ ಭಿನ್ನತೆ ಇದ್ದರೂ ಪಂಜಾಬ್, ಬಂಗಾಲ, ಮದರಾಸ್, ಮುಂಬಯಿ, ಸಿಂಧ್ ಇತ್ಯಾದಿ ಪ್ರಾಂತಗಳ ಸ್ವಯಂಸೇವಕರು ಇಷ್ಟೊಂದು ಪ್ರೀತಿಸುವಂತೆ ಹೇಗಾದರು? ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕರಾಗಿದ್ದಾರೆಂಬುದೇ ಕಾರಣ. ನಮ್ಮ ಸಂಘದ ಪ್ರತಿಯೊಬ್ಬ ಸ್ವಯಂಸೇವಕನೂ ಇನ್ನೊಬ್ಬ ಸ್ವಯಂಸೇವಕನನ್ನು ಸೋದರಿನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ. ಒಡಹುಟ್ಟಿದ ಸೋದರರಾದರೂ ಒಮ್ಮೊಮ್ಮೆ ಮನೆ ಮಾರುಗಳಿಗಾಗಿ ತಮ್ಮ ತಮ್ಮೊಳಗೆ ಜಗಳ ಕಾಯುವುದುಂಟು. ಆದರೆ ಸ್ವಯಂಸೇವಕರಲ್ಲಿ ಎಂದಿಗೂ ಆಗದು. ನಾನು ಇಪ್ಪತ್ತನಾಲ್ಕು ದಿನಗಳಿಂದಲೂ ಮನೆಯಲ್ಲೇ ಮಲಗಿದ್ದೆ. ಆದರೆ ನನ್ನ ಹೃದಯ ಮಾತ್ರ ಇಲ್ಲೇ ತಮ್ಮೆಲ್ಲರ ನಡುವೆಯೇ ಇತ್ತು. ನನ್ನ ದೇಹವೇನೋ ಮನೆಯಲ್ಲಿತ್ತು. ಆದರೆ ಮನಸ್ಸೆಲ್ಲಾ ತಮ್ಮೆಲ್ಲರ ಜೊತೆಯಲ್ಲೇ ಸುಳಿದಾಡುತ್ತಿತ್ತು. ನಿನ್ನೆ ಸಂಜೆಯ ಕಾರ್ಯಕ್ರಮದಲ್ಲಿ ಕಡೆಯ ಪಕ್ಷ ಐದು ನಿಮಿಷಗಳ ಮಟ್ಟಿಗಾದರೂ, ಕೇವಲ ಪ್ರಾರ್ಥನೆಗಾದರೂ, ಬರಲು ನನ್ನ ಜೀವ ಒಂದೇ ಸಮನೆ ತಳಮಳಿಸಿತು. ಆದರೆ ವೈದ್ಯರ ಕಟ್ಟಪ್ಪಣೆಯಿಂದಾಗಿ ನಾನು ಸುಮ್ಮನಿರಬೇಕಾಯಿತು.

    ಇಂದು ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳುವವರಿದ್ದೀರಿ. ನಾನು ಪ್ರೇಮಪೂರ್ವಕವಾಗಿ ನಿಮ್ಮನ್ನು ಬೀಳ್ಕೊಡುತ್ತೇನೆ. ಇದು ವಿರಹದ ಸಂದರ್ಭವಾದರೂ ದುಃಖದ್ದೇನೂ ಅಲ್ಲ. ಯಾವ ಕಾರ್ಯವನ್ನು ಬೆಳೆಸುವ ನಿಶ್ಚಯದಿಂದ ನೀವಿಲ್ಲಿಗೆ ಬಂದಿರೋ ಅದರ ಪೂರ್ತಿಗಾಗಿಯೇ ನೀವು ಈಗ ನಿಮ್ಮ ನಿಮ್ಮ ಸ್ಥಾನಗಳಿಗೆ ವಾಪಸಾಗುತ್ತಿದ್ದೀರಿ. ದೇಹದಲ್ಲಿ ಪ್ರಾಣ ಇರುವವರೆಗೂ ಸಂಘವನ್ನು ಮರೆಯೆನೆಂಬ ಪ್ರತಿಜ್ಞೆ ಮಾಡಿ. ಯಾವುದೇ ಮೋಹದಿಂದಲೂ ವಿಚಲಿತರಾಗದಿರಿ. "ಐದು ವರ್ಷಗಳ ಹಿಂದೆ ನಾನು ಸಂಘದ ಸ್ವಯಂಸೇವಕನಾಗಿದ್ದೆ" ಎಂದು ಹೇಳಿಕೊಳ್ಳುವ ಕೆಟ್ಟ ಗಳಿಗೆ ನಿಮ್ಮ ಜೀವನದಲ್ಲಿ ಎಂದೂ ಬರಗೊಡದಿರಿ. ಜೀವವಿರುವವರೆಗೂ ನಾವು ಸ್ವಯಂಸೇವಕರಾಗಿಯೇ ಇರೋಣ. ತನು, ಮನ, ಧನಗಳಿಂದ ಸಂಘ ಕಾರ್ಯ ಮಾಡುವ ನಮ್ಮ ದೃಢನಿಶ್ಚಯವನ್ನು ಅವಿರತವಾಗಿ ಜಾಗೃತವಾಗಿಡೋಣ. ನಿತ್ಯವೂ ಮಲಗುವ ಮುನ್ನ, "ಇಂದು ನಾನೆಷ್ಟು ಸಂಘ ಕಾರ್ಯ ಮಾಡಿದೆ" ಎಂದು ಚಿಂತಿಸಿರಿ. ಕೇವಲ ಸಂಘದ ಕಾರ್ಯಕ್ರಮಗಳನ್ನು ಸರಿಯಾಗಿ ನಡೆಸಿದ ಮಾತ್ರಕ್ಕೆ ಅಥವಾ ನಿತ್ಯವೂ ನಿಯಮಿತವಾಗಿ ಸಂಘಸ್ಥಾನದಲ್ಲಿ ಉಪಸ್ಥಿತರಾದ ಮಾತ್ರಕ್ಕೆ ಸಂಘಕಾರ್ಯ ಪೂರ್ಣವಾಗದು. ಅಸೇತು ಹಿಮಾಚಲ  ಹಬ್ಬಿರುವ ಈ ವಿರಾಟ ಹಿಂದು ಸಮಾಜವನ್ನು ನಾವು ಸಂಘಟಿಸಬೇಕಾಗಿದೆ. ನಿಜಕ್ಕೂ ನಮ್ಮ ಮಹತ್ವಪೂರ್ಣವಾದ ಕಾರ್ಯಕ್ಷೇತ್ರವೆಂದರೆ ಸಂಘ ಹೊರಗಿನ ಹಿಂದು ಜಗತ್ತೇ ಆಗಿದೆ.

    ಸಂಘವು ಕೇವಲ ಸ್ವಯಂಸೇವಕರಿಗಷ್ಟೇ ಅಲ್ಲ. ಅದು ಸಂಘದ ಹೊರಗಡೆ ಇರುವ ಹಿಂದು ಜನರಿಗಾಗಿಯೇ ಇದೆ. ಆ ಜನರಿಗೆ ನಾವು ರಾಷ್ಟ್ರೋದ್ಧಾರದ ಸತ್ಯಮಾರ್ಗವನ್ನು ಮನಗಾಣಿಸುವುದೇ ನಮ್ಮ ಮುಖ್ಯ ಕರ್ತವ್ಯ. ಸಂಘಟನೆಯೇ ಆ ಸತ್ಯವಾದ ಮಾರ್ಗ. ಹಿಂದು ಜನಾಂಗದ ಅಂತಿಮ ಕಲ್ಯಾಣವು ಈ ಸಂಘಟನೆಯಿಂದಾಗಿಯೇ ಸಾಧ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಇನ್ನಾವುದೇ ಕಾರ್ಯವನ್ನು ಮಾಡಲು ಇಚ್ಛಿಸದು. ಸಂಘವು ಮುಂದೆ ಏನು ಮಾಡಲಿದೆ ಎಂಬ ಪ್ರಶ್ನೆ ಅರ್ಥವಿಲ್ಲದ್ದು. ಸಂಘ ಇದೇ ಸಂಘಟನೆಯ ಕಾರ್ಯವನ್ನು ಇನ್ನೂ ಅನೇಕ ಪಟ್ಟು ವೇಗದಿಂದ ಬೆಳೆಸುತ್ತದೆ. ಹಾಗೆಯೇ ಬೆಳೆಯುತ್ತಾ ಹೋದಾಗ ಒಂದು ದಿನ ಇಡೀ ಭಾರತವರ್ಷವು ಒಂದಾಗಿ ಎದ್ದು ನಿಂತಿರುವ ದೃಶ್ಯ ಕಾಣುವ ಸ್ವರ್ಣ ದಿನ ಅಗತ್ಯವಾಗಿ ಬಂದೀತು. ಅಂದಿಗೆ ಹಿಂದು ಜನಾಂಗದತ್ತ ವಕ್ರದೃಷ್ಟಿಯಿಂದ ನೋಡುವ ಸಾಹಸ ವಿಶ್ವದ ಯಾವ ಶಕ್ತಿಗೂ ಆಗಲಾರದು. ನಾವು ಯಾರ ಮೇಲೂ ಆಕ್ರಮಣ ನಡೆಸಲು ಹೊರಟಿಲ್ಲ. ಆದರೆ ನಮ್ಮ ಮೇಲೂ ಇನ್ನಾರ ಆಕ್ರಮಣವು ನಡೆಯಲಾಗದಂತೆ ನಾವು ಸದಾ ಸಚೇತರಾಗಬೇಕು. ನಾನು ನಿಮಗೆ ಇಂದು ಒಂದು ಹೊಸ ವಿಚಾರವನ್ನೇನೂ ಹೇಳುತ್ತಿಲ್ಲ. ನಮ್ಮ ಪ್ರತಿಯೊಬ್ಬ ಸ್ವಯಂಸೇವಕನೂ ಸಂಘ ಕಾರ್ಯವನ್ನೇ ತನ್ನ ಜೀವನದ ಪ್ರಧಾನ ಕಾರ್ಯವಾಗಿ ಭಾವಿಸಬೇಕಾಗಿದೆ. ಸಂಘ ಕಾರ್ಯವೊಂದೇ ನನ್ನ ಜೀವನದ ಕಾರ್ಯ ಎಂಬ ಮಂತ್ರವನ್ನು ನೀವು ನಿಮ್ಮ ಹೃದಯದಲ್ಲಿ ಆಳವಾಗಿ ಅಂಕಿತಗೊಳಿಸಿಕೊಂಡು ಇಲ್ಲಿಂದ ತೆರಳುವಿರೆಂಬ ದೃಢ ವಿಶ್ವಾಸದೊಂದಿಗೆ ನಾನಿಂದು ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ".

    ಡಾಕ್ಟರ್‌ಜಿಯವರ ಆ ಚಿಕ್ಕ ಭಾಷಣ ತುಂಬ ಪ್ರಭಾವಶಾಲಿಯಾಗಿತ್ತು. ಸ್ವಯಂಸೇವಕರು ಮೈಯೆಲ್ಲಾ ಕಿವಿಯಾಗಿ ಆ ಭಾಷಣ ಕೇಳುತ್ತಿದ್ದರು. ಮಾತಿನ ಮಧ್ಯೆ ಒಂದೆರಡು ನಿಮಿಷಗಳ ಕಾಲ ಮೌನ. ಡಾಕ್ಟರ್‌ಜಿ ಬಳಲಿದ್ದರು. ಭಾವಗದ್ಗದಿತರಾಗಿದ್ದರು. ಭವಿಷ್ಯದ ಸುಂದರ ಚಿತ್ರ ಅವರ ಕಣ್ಮುಂದೆ ತೇಲಿಬರುತ್ತಿತ್ತು.

    ಡಾಕ್ಟರ್‌ಜಿ ಎರಡು ನಿಮಿಷ ಕಣ್ಮುಚ್ಚಿ ಕುಳಿತರು. ಮುಂದೆ ಕುಳಿತಿದ್ದ ಸ್ವಯಂಸೇವಕರೂ ಅದೇ ರೀತಿ ಶಾಂತ ಮೌನ. ಎಲ್ಲರೂ ಎವೆಯಿಕ್ಕದೇ ಡಾಕ್ಟರ್‌ಜಿಯವರನ್ನು ನೋಡುತ್ತಿದ್ದರು. ಉಸಿರಾಟವೂ ನಿಂತಿತೋ ಎನಿಸುವಂತಹ ಗಂಭೀರ ನೀರವತೆ, ಕೆಲವರು ರೋಮಾಂಚಿತರಾದರು. ಕೆಲವರ ಕಣ್ಣುಗಳು ತುಂಬಿ ಬಂದಿದ್ದವು. ಹೃದಯದಲ್ಲಿ ಹೊಸ ಶಕ್ತಿಯೊಂದು ಸಂಚಾರವಾದಂತೆ ಅನಿಸುತ್ತಿತ್ತು. ಕೆಲವರಿಗೆ ಆ ಎರಡು ನಿಮಿಷಗಳ ದಿವ್ಯ ಮೌನ ಮಾತಿಗೆ ನಿಲುಕದ ಒಂದು ಅಲೌಕಿಕ ಸಂದೇಶವೇ ಆಗಿತ್ತು.

    ಭಾಷಣ ಮುಗಿಯಿತು. ತಮ್ಮ ದಿವ್ಯವಾಣಿಯ ಮೂಲಕ ತಮ್ಮೊಳಗಿನ ಎಲ್ಲ ಶಕ್ತಿಯನ್ನೂ ಅವರು ಸ್ವಯಂಸೇವಕರಿಗೆ ಬಸಿದು ಹಂಚಿದಂತೆ ಅನಿಸುತ್ತಿತ್ತು. ಡಾಕ್ಟರ್‌ಜಿ ಇನ್ನಷ್ಟು ಬಳಲಿದ್ದರು. ಕಾರ್ಯಾಲಯದಲ್ಲಿ ತುಸು ಹೊತ್ತು ಮಲಗಿದ್ದು ಸುಧಾರಿಸಿದ ನಂತರ ಅವರನ್ನು ಮನೆಗೆ ಕರೆತಂದರು.

    ವರ್ಗ ಮುಗಿಯಿತು. ಸ್ವಯಂಸೇವಕರು ಡಾಕ್ಟರ್‌ಜಿಯವರ ಸಂದರ್ಶನಕ್ಕಾಗಿ ಬರತೊಡಗಿದರು. ಆದರೂ ಅದೆಂತಹ ಭೇಟಿ? ಕೇವಲ ಮುಖದರ್ಶನ ಮಾತ್ರ. ಡಾಕ್ಟರ್‌ಜಿ ಅವರಿಗೆ ತೀರ ಪ್ರಯಾಸವೆನಿಸುತ್ತಿತ್ತು. ಆದರೂ ಕೆಲವೊಮ್ಮೆ ಅವರು ಒಂದೆರಡು ಮಾತನಾಡುತ್ತಿದ್ದರು. "ಮುಂದೇನು ಮಾಡುವಿ? ಮತ್ತೆಂದು ಭೇಟಿ?" ಎಂದು ಪ್ರಶ್ನಿಸುತ್ತಿದ್ದರು. ಅಲ್ಲಲ್ಲಿನ ಪರಿಚಿತ ಕಾರ್ಯಕರ್ತರಿಗೆ ನಮಸ್ಕಾರ ತಿಳಿಸಲು ಕೆಲವರಿಗೆ ಹೇಳಿದರೆ, ಮತ್ತೆ ಕೆಲವರಿಗೆ ಕಾರ್ಯಕ್ಕಾಗಿ ಸಮರ್ಪಿಸಿಕೊಳ್ಳಲು ಚತುರತೆಯಿಂದ ಹೇಳುತ್ತಿದ್ದರು.

    ಡಾಕ್ಟರ್‌ಜಿ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದಲೇ ಬೀಳ್ಕೊಂಡರು.

Labels: Doctorji, Last Speech, Sangha Story, ಅಂತಿಮ ಭಾಷಣ, ಡಾಕ್ಟರ್‌ಜಿ, ಸಂಘದ ಕಥೆ

೪೬. ಸಂಘ ಶಿಕ್ಷಾವರ್ಗ

ಸಂಘ ಶಿಕ್ಷಾವರ್ಗ

    ;ಆ ದಿನಗಳಲ್ಲಿ ಸಂಘ ಶಿಕ್ಷಾವರ್ಗ ನಡೆಯುತ್ತಿದ್ದುದು ನಾಗಪುರ ಮತ್ತು ಪುಣೆಗಳಲ್ಲಿ ಮಾತ್ರ. ೧೯೪೦ರಲ್ಲಿ ಪುಣೆಯ ವರ್ಗ ಪೂರೈಸಿ ಡಾಕ್ಟರ್‌ಜಿ ನಾಗಪುರಕ್ಕೆ ಬಂದರು. ಆಗ ಅವರ ಆರೋಗ್ಯ ತೀರಾ ವಿಷಮಿಸಿತ್ತು. ನಾಗಪುರಕ್ಕೆ ಬಂದ ಮೇಲಂತೂ ಅದು ಮತ್ತಷ್ಟು ಹದಗೆಟ್ಟಿತು. ಪ್ರತಿನಿತ್ಯ ಜ್ವರ ಬರತೊಡಗಿತು.

    ಸಂಘ ಶಿಕ್ಷಾವರ್ಗ ಮೂರು ವರ್ಷಗಳ ತರಬೇತಿ, ಮೂರನೇ ವರ್ಷದ ವರ್ಗ ನಡೆಯುವುದು ನಾಗಪುರದಲ್ಲಿಯೇ. ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ಸ್ವಯಂಸೇವಕರು ಪಾಲ್ಗೊಳ್ಳುತ್ತಾರೆ.

    ಆ ಸ್ವಯಂಸೇವಕರನ್ನು ಭೇಟಿಯಾಗುವುದು ಡಾಕ್ಟರ್‌ಜಿ ತಪ್ಪದೆ ಅನುಸರಿಸುತ್ತಿದ್ದ ಕ್ರಮ. ಅವರೆಲ್ಲ ವೈಯಕ್ತಿಕ ಪರಿಚಯ, ಅವರ ಗುಣ ವಿಕಾಸಕ್ಕಾಗಿ ಮಾರ್ಗದರ್ಶನ, ಇತ್ಯಾದಿ ಅವರು ಮಾಡುತ್ತಿದ್ದರು. ಪುಣೆಯಲ್ಲಿ ಆರೋಗ್ಯ ಕೆಟ್ಟಿದ್ದರೂ ಎಲ್ಲ ಸ್ವಯಂಸೇವಕರನ್ನು ಅವರು ಭೇಟಿಯಾಗಿದ್ದರು. ಆದರೆ ಜ್ವರದ ಕಾರಣದಿಂದ ನಾಗಪುರದ ವರ್ಗದಲ್ಲಿ ಅವರಿಗೆ ಅದು ಸಾಧ್ಯವಾಗಲಿಲ್ಲ. ಅಲ್ಲಿನ ಕಾರ್ಯಕರ್ತರಾಗಲಿ, ವೈದ್ಯರಾಗಲಿ ಯಾರೂ ಕೂಡ ಅವರಿಗೆ ಕಷ್ಟ ಕೊಡಲು ಸಿದ್ಧರಿರಲಿಲ್ಲ. ಡಾಕ್ಟರ್‌ಜಿಗೆ ಇದು ಸಹಿಸಲಾಗದ ವ್ಯಥೆಯನ್ನುಂಟು ಮಾಡಿತ್ತು. "ಜ್ವರದ ಬಗ್ಗೆ ಚಿಂತೆ ಬೇಡ, ನನ್ನನ್ನು ವರ್ಗಕ್ಕೆ ಕರೆದೊಯ್ಯಿರಿ" ಎಂದು ಒಂದೇ ಸಮನೆ ಅವರು ಹೇಳುತ್ತಿದ್ದರು. ಆದರೆ ಅವರಿಗೆ ಬರುತ್ತಿದ್ದುದು ಕೆಂಡದಂತಹ ಜ್ವರ. ಶರೀರ ತೀರಾ ಸುಸ್ತು. ಮಲಗಿದಲ್ಲಿಂದ ಅಲ್ಲಾಡಲು ಸಹ ಅವರಿಗೆ ವೈದ್ಯರ ಅನುಮತಿಯಿರಲಿಲ್ಲ.

    ಡಾಕ್ಟರ್‌ಜಿಯವರಿಗೆ ಸ್ವಯಂಸೇವಕರೆಂದರೆ ಸಾಕ್ಷಾತ್ ದೇವರು. ಅವರ ಕನಸಿನ ನವಭಾರತದ ಆಧಾರಸ್ತಂಭಗಳೇ ಅವರು. ದೇಶದ ಉಜ್ವಲ ಭವಿಷ್ಯದ ಶಿಲ್ಪಿಗಳಾಗುವವರು ಅವರೇ. ಅಂತಹ ಸ್ವಯಂಸೇವಕರೊಂದಿಗೆ ಅತ್ಯಂತ ಪ್ರೇಮ ಹಾಗೂ ಆದರದಿಂದ ಭೇಟಿಯಾಗಿ ಮಾತನಾಡುವುದರಲ್ಲೇ ಅವರಿಗೆ ಅಪಾರ ಆನಂದ. ಅವರೊಡನೆ ಹಾಸ್ಯ, ವಿನೋದದಿಂದ ಇರುವ ಅವಕಾಶ ದೊರೆತಲ್ಲಿ ಜಗತ್ತಿನಲ್ಲಿ ಇನ್ನೇನೂ ಬೇಡ. ಡಾಕ್ಟರ್‌ಜಿಯವರ ಪಾಲಿಗೆ ದೇಶಸೇವೆ, ಪೂಜೆ, ಭಜನೆ, ಸುಖ ಸಂಪತ್ತು ಎಲ್ಲವೂ ಸ್ವಯಂಸೇವಕರ ಸಹವಾಸವೇ.

    ಸಂಘಕಾರ್ಯದ ಆರಂಭದಿಂದ ಸತತ ಹದಿನೈದು ವರ್ಷಗಳ ಕಾಲ ಅವರು ಆನಂದ ಕಂಡುದು ಇದರಲ್ಲೇ. ಅಂತಹ ಆನಂದವನ್ನು ಇತರರೂ ಸವಿಯಬೇಕು ಎನ್ನುವುದೊಂದೇ ಅವರಿಗಿದ್ದ ತಳಮಳ. ಮಲಗಿದ್ದಲ್ಲಿ ಡಾಕ್ಟರ್‌ಜಿ ಅವರ ಮನಸ್ಸು ಚಡಪಡಿಸುತ್ತಿತ್ತು. ಸ್ವಯಂಸೇವಕರನ್ನು ಕಂಡು ಮಾತನಾಡಿಸುವ ಇಚ್ಛೆ ಬಿಟ್ಟು ಇನ್ನಾವುದರಲ್ಲೂ ಅವರಿಗೆ ರುಚಿ ಎನಿಸುತ್ತಿರಲಿಲ್ಲ.

    ಸಂಘದ ಪ್ರಮುಖ ಕಾರ್ಯಕರ್ತರೇನೋ ಸರದಿಯಂತೆ ಅವರಿ ಬಳಿ ಕುಳಿತುಕೊಳ್ಳುತ್ತಿದ್ದರು. ಅವರ ಸೇವೆ ಮಾಡುತ್ತಿದ್ದರು. ವರ್ಗದ ಪ್ರತಿ ದಿನದ ವರದಿ ಅವರಿಗೆ ಒಪ್ಪಿಸುತ್ತಿದ್ದರು. ಆದರೆ ಹಾಲಿನ ಸವಿ ಮಜ್ಜಿಗೆಗೆ ಬರುವುದು ಹೇಗೆ ಸಾಧ್ಯ?

    ಸ್ವಯಂಸೇವಕರನ್ನು ಕಾಣಲಾಗದ ಸ್ಥಿತಿಯಲ್ಲಿ ಡಾಕ್ಟರ್‌ಜಿ ಅವರ ಮನಸ್ಸು ನೀರಿನಿಂದ ಹೊರಬಂದ ಮೀನಿನಂತೆ ವಿಲವಿಲನೆ ಪರಿತಪಿಸತೊಡಗಿತು. ಕಾರ್ಯಕರ್ತರು ಅವರ ಮಾನಸಿಕ ವೇದನೆಯನ್ನು ವೈದ್ಯರಿಗೆ ತಿಳಿಸಿದರು. ಅದರಿಂದಲೇ ಅವರ ಆರೋಗ್ಯ ಸುಧಾರಿಸುವುದಾದಲ್ಲಿ ಅವಕಾಶ ಕೊಟ್ಟಲ್ಲಿ ತಪ್ಪೇನು ಎಂದೂ ವೈದ್ಯರಿಗೂ ಅನಿಸಿತು. ಕೊನೆಗೆ ಸ್ವಯಂಸೇವಕರ ಭೇಟಿಗೆ ಅವರು ಅನುಮತಿ ನೀಡಿದರು.

Labels: ಅನಾರೊಗ್ಯದ ನಡುವೆ, ಡಾಕ್ಟರ್‌ಜಿ, ಸಂಘ ಶಿಕ್ಷಾವರ್ಗ, ಸಂಘದ ಕಥೆ, Doctorji, Sangha Shikshavarga, Last SSV

Saturday, November 17, 2012

೪೫. ಇದೇ ಕಣ್ಣುಗಳಿಂದ ನೋಡಬಯಸುವೆ

ಇದೇ ಕಣ್ಣುಗಳಿಂದ ನೋಡಬಯಸುವೆ

    ;"ನಮ್ಮ ಕಾರ್ಯ ಬೇಗನೆ ಬೆಳಯಬೇಕಾಗಿದೆ. ೧೯೪೦ನೇ ವರ್ಷವೂ ವ್ಯರ್ಥವಾಗಿ ಕಳೆಯುವುದೇನು?"

    ಅಪ್ಪಾಜಿ ಜೋಷಿ ಹೌಹಾರಿ ಡಾಕ್ಟರ್‌ಜಿಯವರೆಡೆಗೆ ನೋಡಿದರು. ಗಾಢ ನಿದ್ರೆಯಲ್ಲಿದ್ದ ಡಾಕ್ಟರ್‌ಜಿ ಬಡಬಡಿಸುತ್ತಿದ್ದರು. ಕನಸಿನಲ್ಲಿಯೂ ಆ ಮಹಾಪುರುಷನಿಗೆ ಸಂಘ ಕಾರ್ಯದ ವಿಸ್ತಾರದ್ದೇ ಚಿಂತೆ. "ಇದೇ ದೇಹದಿಂದ ನಾನು ನನ್ನ ಧ್ಯೇಯ ಸಾಧಿಸಬೇಕು. ಇದೇ ಕಣ್ಣುಗಳಿಂದ ಸುಸಂಘಟಿತ ಭಾರತ ನೋಡಬೇಕು". ಇದು ಅವರಿಗಿದ್ದ ಉತ್ಕಟ ಹಂಬಲ. ಆದರೆ ನಿಲ್ಲದ ಕಾಯಿಲೆ, ದುರ್ಬಲಗೊಳ್ಳುತ್ತಿದ್ದ ಶರೀರ ಬೇರೊಂದು ಆಟ ಹೂಡಿದ್ದವು.

    ತನ್ನಂತೆಯೇ ಇನ್ನೂ ಅನೇಕ ಕಾರ್ಯಕರ್ತರನ್ನು ನಿರ್ಮಿಸಿದ್ದು ಅವರ ವೈಶಿಷ್ಟ್ಯ. ಕಾಲೇಜು ವಿದ್ಯಾರ್ಥಿಯಾಗಿ ಲಖ್ನೋಗೆ ಬಂದ ಭಾವುರಾವ್ ದೇವರಸ್ ಡಾಕ್ಟರ್‌ಜಿಯವರ ಪ್ರೇರಣೆಯಂತೆ ಲಖ್ನೋ, ಕಾನಪುರ ಹಾಗೂ ಉತ್ತರಪ್ರದೇಶದ ಹಲವಾರು ನಗರಗಳಲ್ಲಿ ಶಾಖೆ ಆರಂಭಿಸಿದ್ದರು. ಅದೇ ರೀತಿ ರಾಜಾಭಾವು ಪಾತುರಕರ್ ಪಂಜಾಬಿಗೆ ಹೋಗಿದ್ದರು. ಮಾಲವಾ ಹಾಗೂ ಮಹಾಕೋಶಲಗಳಲ್ಲಿ ಏಕನಾಥಜಿರಾನಡೆ ಸಂಚಾರ ಮಾಡುತ್ತಿದ್ದರು. ವಸಂತರಾವ್ ಓಕ್ ದಿಲ್ಲಿ ಹಾಗೂ ಸುತ್ತಮುತ್ತ ಸಂಘ ಕಾರ್ಯದ ವಿಸ್ತಾರ ಕೈಗೊಂಡಿದ್ದರು.

    "ಕೊಂಕಣದಲ್ಲಿ ಮಾಧವರಾವ್ ಮುಳೆ, ದಕ್ಷಿಣದಲ್ಲಿ ದಾದಾರಾವ್ ಪರಮಾರ್ಥ್, ಕಲ್ಕತ್ತೆಯಲ್ಲಿ ಬಾಳಾಸಾಹೇಬ ದೇವರಸ್, ಬಿಹಾರದಲ್ಲಿ ನರಹರಿ ಪಾರಖಿ, ಬಾಪುರಾವ್ ದಿವಾಕರ್ ಹೀಗೆ ಒಬ್ಬೊಬ್ಬ ಘಟಾನುಘಾಟಿಗೂ ಒಂದೊಂದು ಕ್ಷೇತ್ರ. ಶಾಂತ ಸೌಮ್ಯ ಆದರೆ ಅಷ್ಟೇ ಕಠೋರವ್ರತಿ ಬಾಬಾಸಾಹೇಬ ಆಪಟೆ ಅವರಿಗೆ ದೇಶವಿಡೀ ಪ್ರವಾಸದ ಹೊಣೆ. ಹೊಸ ಹೊಸ ಪ್ರಚಾರಕರನ್ನು ಹೊರಡಿಸುವ, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವ ಕೆಲಸ ಅವರದು.

    ಇವರೆಲ್ಲರೂ ಸುಶಿಕ್ಷಿತ ತರುಣರು. ಪದವೀಧರರು. ಕಾರ್ಯತತ್ಪರರು. ಧ್ಯೇಯನಿಷ್ಥರು. ಡಾಕ್ಟರ್‌ಜಿಯವರ ಆದೇಶದಂತೆ ತಮ್ಮೆಲ್ಲ ಸುಖಸ್ವಾರ್ಥಗಳನ್ನು ತೊರೆದು ಹೊರಟವರು. ಹಗಲು ರಾತ್ರಿ ಸಂಘ ಕಾರ್ಯಕ್ಕಾಗಿಯೇ ದುಡಿಮೆಯಲ್ಲಿ ಉನ್ಮತ್ತರಾಗಿದ್ದವರು. ಇದೇ ವೇಳೆ ಇವರೆಲ್ಲರಿಗೂ ಮುಕುಟ ಮಣಿ ಎನಿಸುವ ಇನ್ನೋರ್ವ ವ್ಯಕ್ತಿಗೂ ಡಾಕ್ಟರ್‌ಜಿ ಸಂಘದೀಕ್ಷೆ ನೀಡಿದರು.

    ಅವರ ಹೆಸರು ಮಾಧವ ಸಾದಾಶಿವ ಗೋಳವಳಕರ್. ಎಂ.ಎಸ್‍ಸಿ ಪದವಿ ಪಡೆದ ನಂತರ ಕೆಲಕಾಲ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು. ಅವರು ನಾಗಪುರದಲ್ಲಿ ಎರಡು ವರ್ಷ ವಕೀಲಿ ಸಹ ಮಾಡಿದ್ದರು. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಸಾರಗಾಛಿ ಆಶ್ರಮದಲ್ಲಿ ಸ್ವಾಮಿ ಅಖಂಡಾನಂದರಿಂದ ದೀಕ್ಷೆ ಪಡೆದು ತಮ್ಮ ಗುರುಗಳ ಮಹಾಸಮಾಧಿಯ ನಂತರ ಅವರು ನಾಗಪುರಕ್ಕೆ ಮರಳಿದರು. ಆಗ ಅವರನ್ನು ಕಂಡ ಡಾಕ್ಟರ್‌ಜಿಯವರು ದೇಶಸೇವೆಯೂ ಈಶ್ವರ ಸೇವೆಯದೇ ಇನ್ನೊಂದು ರೂಪ ಎಂದು ಅವರಿಗೆ ಮನಗಾಣಿಸಿದರು.

    ಡಾಕ್ಟರ್‌ಜಿಯವರ ವ್ಯಕ್ತಿತ್ವ ಶ್ರೀ ಗೋಳವಳಕರ ಗೂರೂಜಿಯವರ ಮೇಲೆ ಪ್ರಭಾವ ಬೀರಿತು. ಅವರೂ ಸಂಘ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಡಾಕ್ಟರ್‌ಜಿ ಅವರನ್ನು ಅಖಿಲ ಭಾರತೀಯ ಸರ ಕಾರ್ಯವಾಹರನ್ನಾಗಿ ನಿಯುಕ್ತಿಸಿದರು. ಆ ಹೊತ್ತಿಗಾಗಲೇ ಕೃಷ್ಣರಾವ್ ಮೊಹರೀಲ್, ರಾಮಭಾವು ಜಾಮಗಡೆ, ಯಾದವರಾವ್ ಜೋಷಿ, ಬಾಪುರಾವ್ ಭಿಶೀಕರ್ ಮೊದಲಾದ ಅನೇಕ ನವಯುವಕರು ಡಾಕ್ಟರ್‌ಜಿಯವರ ಕೈಗಳಲ್ಲಿ ತಮ್ಮ ಬದುಕನ್ನು ಒಪ್ಪಿಸಿದ್ದರು.

    ತಮ್ಮ ವ್ಯಕ್ತಿಗತ ಆಸೆ ಆಕಾಂಕ್ಷೆ ಸುಖ ಸಂತೋಷಗಳನ್ನೆಲ್ಲ ತ್ಯಜಿಸಿ ದೇಶ ಹಿತಕ್ಕಾಗಿ ಜೀವನಪರ್ಯಂತ ಸಂಘ ಕಾರ್ಯ ಮಾಡುವ ನೂರಾರು ಕಾರ್ಯಕರ್ತರನ್ನಂತೂ ಡಾಕ್ಟರ್‌ಜಿ ಒಂದು ಕಡೆ ನಿರ್ಮಿಸಿದ್ದರು. ಅದೇ ರೀತಿ ಇನ್ನೊಂದು ಕಡೆ ತಮ್ಮ ಕುಟುಂಬ, ಕೃಷಿ, ವ್ಯಾಪಾರ, ಉದ್ಯೋಗ ಇತ್ಯಾದಿ ನಡೆಸಿಕೊಂಡು ಸಹ ನಿಷ್ಠೆಯಿಂದ ತ್ರಿಕರಣಪೂರ್ವಕ ಸಂಘಕಾರ್ಯ ಮಾಡುವಂತಹ ಇನ್ನೂ ಅನೇಕ ಗೃಹಸ್ಥ ಕಾರ್ಯಕರ್ತರನ್ನೂ ಅವರು ತಮ್ಮೊಂದಿಗೆ ಸೇರಿಸಿಕೊಂಡಿದ್ದರು. ಉಮರೇಡನ ಭಯ್ಯಾಜಿ ದಾಣಿ, ಟಿರ್ಮನಿಯ ಸರದಾರ್ ಭಾವು ಸಾಹೇಬ ಭುಸ್ಕುಟೆ, ಪುಣೆಯ ವಕೀಲ ಬಾಬಾರಾವ್ ಭಿಡೆ ಮೊದಲಾದವರು ಇವರಲ್ಲಿ ಪ್ರಮುಖರು.

    ತ್ಯಾಗ, ಸೇವೆ, ಸ್ವಚ್ಛತೆ, ಪರಿಶ್ರಮಗಳ ಹೊಸ ಅಲೆಯೇ ದೇಶದಲ್ಲಿ ಹರಡಿತು. ಸಂಘದ ಪ್ರಗತಿ ಕಂಡು ಎಲ್ಲರಿಗೂ ಆಶ್ಚರ್ಯ. ಹಲವಾರು ನಗರಗಳಲ್ಲಿ ವಿಜಯದಶಮಿಯಂದು ಸ್ವಯಂಸೇವಕರ ಪಥಸಂಚಲನಗಳು ನಡೆದಾಗ "ಈವರೆಗೆ ಹಿಂದುಗಳ ಇಂತಹ ದೊಡ್ಡ ಸಂಘಟನೆಯನ್ನು ಯಾರೂ ಕಟ್ಟಿರಲಿಲ್ಲ. ಹಿಂದುಗಳು ಪರಸ್ಪರ ಜಗಳಾಡಲು ಮಾತ್ರವೇ ಹುಟ್ಟಿರುವರು. ಅವರು ಒಗ್ಗಟ್ಟಾಗುವುದು ಎಂದಿಗೂ ಸಾಧ್ಯವಿಲ್ಲ ಎಂದು ನಂಬಿದ್ದೆವು. ಆದರೆ ಡಾಕ್ಟರ್‌ಜಿ ಅಸಾಧ್ಯವನ್ನು ಸಾಧ್ಯಗೊಳಿಸಿದ್ದಾರೆ. ನಮ್ಮ ಕಣ್ಣುಗಳು ಧನ್ಯವಾದವು" ಎಂದು ಜನರು ಆಡಿಕೊಳ್ಳುವಂತಾಯಿತು.

    ಜನರು ಹೊಗಳುತ್ತಿದ್ದುದೇನೋ ನಿಜ. ಆದರೆ ಡಾಕ್ಟರ್‌ಜಿಯವರಿಗೆ ಮಾತ್ರ ಅದರಲ್ಲಿ ಸಮಾಧಾನ ಸ್ವಲ್ಪವೂ ಇರಲಿಲ್ಲ. ಅವರು ಹೇಳುತ್ತಿದ್ದುದೇ ಬೇರೆ. "ಇದು ಆರಂಭ ಮಾತ್ರ. ನಾಲ್ಕು ಮಂದಿ ಸಹ ಎಲ್ಲಿ ಒಂದಾಗುತ್ತಿರಲಿಲ್ಲವೋ ಅಂತಹ ಕಡೆ ಈಗ ನಲ್ವತ್ತು ಜನ ಸೇರುತ್ತಿದ್ದಾರೆ ಅಷ್ಟೇ. ನಾವಿದರಿಂದಲೇ ತೃಪ್ತರಾಗಬಾರದು. ಇನ್ನೂ ಅದೆಷ್ಟು ಸಮಾಜ ಬಾಂಧವರು ಸಂಘಟಿತರಾಗಿಲ್ಲ ಎಂಬುದನ್ನು ಗಮನಿಸೋಣ. ಸಾವಿರಾರು ಗ್ರಾಮಗಳಿನ್ನೂ ಬಾಕಿ ಉಳಿದಿವೆ. ನಗರಗಳಲ್ಲಿನ ನೂರಾರು ಸ್ಥಾನಗಳಿಗೆ ನಾವಿನ್ನೂ ತಲುಪಿಲ್ಲ. ಹಲವಾರು ಸಮಸ್ಯೆಗಳಿನ್ನೂ ಜೀವಂತವೇ ಇವೆ. ನಮ್ಮ ದೇಶದ ದಾಸ್ಯ ಇನ್ನೂ ತೊಲಗಿಲ್ಲ. ನಮ್ಮ ಸಮಾಜ ಈಗಲೂ ದುರ್ಬಲ, ಧ್ಯೇಯಹೀನವಾಗಿಯೇ ಉಳಿದಿದೆ".

    "ನಾನು ಯಾರು? ನನ್ನ ಕರ್ತವ್ಯ ಏನು? ಈ ಜ್ಞಾನ ನಮ್ಮ ಹಿಂದು ಸಮಾಜಕ್ಕಿನ್ನೂ ಬಂದಿಲ್ಲ. ನಾವು ಎಲ್ಲರನ್ನೂ ತಲುಪಬೇಕು. ಎಲ್ಲರ ಹೃದಯಗಳಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಭಾವನೆಗಳನ್ನು ನೆಲೆಗೊಳಿಸಬೇಕು. ಈ ಹಿಂದು ರಾಷ್ಟ್ರವನ್ನು ಬಲಶಾಲಿ, ವೈಭವಶಾಲಿಯನ್ನಾಗಿಸಬೇಕು". ಡಾಕ್ಟರ್‌ಜಿ ಕಾಣುತ್ತಿದ್ದ ಕನಸು ತುಂಬ ದೂರಗಾಮಿ.

    ಹಗಲು ರಾತ್ರಿ ಅವರಿಗೆ ಇದೊಂದೇ ಯೋಚನೆ. ಆದರೆ... ಅವರ ಶರೀರ ಸ್ವಾಸ್ಥ್ಯ ದಿನ ಕಳೆದಂತೆ ದುರ್ಬಲಗೊಳ್ಳುತ್ತಿತ್ತು. ರಾಜಗೀರ್‌ನಲ್ಲಿ ಅನೇಕ ದಿನಗಳ ಕಾಲ ಉಪಚಾರ ನಡೆದರೂ ಆವರ ದೇಹಸ್ಥಿತಿ ಸುಧಾರಿಸಲಿಲ್ಲ. ಡಾಕ್ಟರ್‌ಜಿ ತಮ್ಮ ಶರೀರದ ಚಿಂತೆಯನ್ನೇ ಬಿಟ್ಟರು. ಮೊದಲಿನಂತೆಯೇ ಸಂಘಕಾರ್ಯಕ್ಕಾಗಿ ಪ್ರವಾಸ ಆರಂಭಿಸಿದರು. ಹೊಸ ಹೊಸ ಸ್ಥಳಗಳಿಗೆ ಹೋಗುವ, ಅಲ್ಲಿ ಸ್ವಯಂಸೇವಕರ, ಗಣ್ಯರ ಭೇಟಿ ಮಾಡುವ, ಅವರಿಗೆ ಸಂಘ ಕಾರ್ಯದ ಮಹತ್ವ ತಿಳಿಸುವ ಇತ್ಯಾದಿ ಅನೇಕ ವಿಧ ಕೆಲಸಗಳನ್ನು ಇನ್ನೊಮ್ಮೆ ಭರದಿಂದ ನಡೆಸತೊಡಗಿದರು.

Labels: Deteriorating Health, Doctorji, Sangha Story, ಉಲ್ಬಣಗೊಂಡ ಅನಾರೋಗ್ಯದ, ಕನಸು, ಡಾಕ್ಟರ್‌ಜಿ, ಸಂಘದ ಕಥೆ

೪೪. ಹಗಲಿರುಳು ಒಂದೇ ಜಪ

ಹಗಲಿರುಳು ಒಂದೇ ಜಪ

    ಡಾಕ್ಟರ್‌ಜಿಯವರಿಗೆ ದೈಹಿಕ ಕಷ್ಟ ಚೆನ್ನಾಗಿ ರೂಢಿ. ಸಂಘ ಕಾರ್ಯ ಆರಂಭವಾದ ನಂತರವಂತೂ ಅವರ ಕಷ್ಟಗಳಿಗೆ ತುದಿ ಮೊದಲೇ ಉಳಿಯಲಿಲ್ಲ. ಸದಾ ಪ್ರವಾಸ, ಸೈಕಲ್, ಬಸ್ಸು, ರೈಲು, ಯಾವುದು ಸಿಕ್ಕಿತೋ ಅದೇ. ಯಾವುದೂ ಇಲ್ಲದಿದ್ದಲ್ಲಿ ಕಾಲ್ನಡಿಗೆ. ಹಳ್ಳಿ ಹಳ್ಳಿಗಳಲ್ಲೂ ತಿರುಗಾಟ. ಊಟ, ವಿಶ್ರಾಂತಿಯನ್ನೂ ಲೆಕ್ಕಿಸಿದವರಲ್ಲ. ಚರೈವೇತಿ, ಚರೈವೇತಿ - ನಡೆಯುತ್ತಿರು, ನಡೆಯುತ್ತಿರು, ಸಂಘಕ್ಕಾಗಿ ದುಡಿಯುತ್ತಿರು ಇದೇ ಅವರ ಜೀವನಶೈಲಿಯಾಯಿತು.

    ಪರಿಣಾಮವಾಗಿ ಡಾಕ್ಟರ್‌ಜಿಯವರ ಕಟ್ಟುಮಸ್ತಾದ ಶರೀರ ಸಹ ಜೀರ್ಣವಾಗತೊಡಗಿತು. ರೋಗದ ಚಿಹ್ನೆ ಕಾಣಲಾರಂಭಿಸಿದವು. ಒಂದೇ ಸಮನೆ ಬೆನ್ನು ನೋವಿನ ಪೀಡೆ ಕಾಣಿಸಿತು. ಚಳಿಗಾಳದಲ್ಲೂ ಬೆವರುವಂತಹ ವಿಚಿತ್ರ ಕಾಯಿಲೆ. ದಿನದಲ್ಲಿ ಎರಡು ಮೂರು ಬಾರಿ ಬನಿಯನ್ ಬದಲಿಸಬೇಕಾಗಿತ್ತು.

    ಬಿಹಾರಿನ ರಾಜಗೀರ್‌ನಲ್ಲಿ ನೈಸರ್ಗಿಕವಾದ ಬಿಸಿನೀರಿನ ಕುಂಡ ಇದೆ. ಅಲ್ಲಿ ಕೆಲವು ದಿನ ನಿಯಮಿತವಾಗಿ ಸ್ನಾನ ಮಾಡಿದಲ್ಲಿ ಡಾಕ್ಟರ್‌ಜಿಯವರ ಬೆನ್ನು ನೋವು ಶಮನಗೊಳ್ಳಬಹುದು ಎಂಬ ಸಲಹೆ ಒಬ್ಬರಿಂದ ಬಂತು. ನಾಗಪುರದ ಪ್ರಮುಖ ಕಾರ್ಯಕರ್ತರೂ ಅದನ್ನೊಪ್ಪಿ ಆಗ್ರಹ ಮಾಡಿದರು. ಕೆಲವು ಡಾಕ್ಟರುಗಳಿಂದಲೂ ಅದಕ್ಕೆ ಅನುಮೋದನೆ ಬಂದಾಗ ಡಾಕ್ಟರ್‌ಜಿ ಸಹ ಒಪ್ಪಿದರು. ಅವರೊಂದಿಗೆ ಅಪ್ಪಾಜಿ ಜೋಷಿ ಹಾಗೂ ಬೇರೆ ಕೆಲವು ಕಾರ್ಯಕರ್ತರೂ ರಾಜಗೀರ್‌ಗೆ ಹೋದರು.

    ರಾಜಗೀರ್‌ನಲ್ಲಿ ಚಿಕಿತ್ಸೆ ಏನೋ ಆರಂಭವಾಯಿತು. ಜೊತೆಯಲ್ಲಿ ಡಾಕ್ಟರ್‌ಜಿ ತಮ್ಮ ಪ್ರಿಯತಮ ಸಂಘ ಕಾರ್ಯವನ್ನೂ ಆರಂಭಿಸಿದರು. ದೂರ ದೂರದಿಂದ ಅಲ್ಲಿಗೆ ಬರುವಂತಹ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುವರು. ಅವರೊಂದಿಗೆ ಆತ್ಮೀಯತೆ ಸಂಪಾದಿಸುವರು. ಆ ನಗರದ ಗಣ್ಯರನೇಕರ ಭೇಟಿ, ಮಾತುಕತೆ ಇತ್ಯಾದಿ ಸಹ ನಡೆಯತೊಡಗಿತು. ಅದಾಗಿ ಸ್ವಲ್ಪ ದಿನಗಳಲ್ಲೇ ಅಲ್ಲಿ ಸಂಘಶಾಖೆ ಸಹ ಆರಂಭವಾಯಿತು. ಸಮೀಪದ ಊರುಗಳಲ್ಲಿಯೂ ಶಾಖೆ ಆರಂಭಿಸುವ ಯೋಜನೆಗಳಾದವು. ಮುಂದೆ ಬಿಹಾರ ಪ್ರಾಂತದ ಮೂಲೆ ಮೂಲೆಗಳಲ್ಲಿಯೂ ಕಾರ್ಯ ವಿಸ್ತಾರ ಮಾಡುವ ಮಾಡುವ ಯೋಜನೆ ಸಿದ್ಧವಾಯಿತು. ಕಾರ್ಯಕರ್ತರ ಬೈಠಕ್‌ಗಳಂತೂ ಗಂಟಗಟ್ಟಲೆ ನಡೆಯುತ್ತಿದ್ದವು.

    ಡಾಕ್ಟರ್‌ಜಿಯವರ ಆರೈಕೆಗಾಗಿ ಬಂದಂತಹ ಸ್ವಯಂಸೇವಕರಿಗೆ ತುಂಬ ಇಕ್ಕಟ್ಟು, ಏನು ಹೇಳಬೇಕೋ ತೋಚದು. ಡಾಕ್ಟರ್‌ಜಿ ಬಂದಿರುವುದು ಆರೈಕೆಗಾಗಿಯೇ ಅಥವಾ ಕಾರ್ಯ ವಿಸ್ತಾರಕ್ಕಾಗಿಯೇ ಯಾವುದೂ ತಿಳಿಯಲೊಲ್ಲದು. ಅವರಿಗಂತೂ ಸಂಘ ಕಾರ್ಯದ ವಿನಃ ಬೇರೆ ಚಿಂತೆಯೇ ಇದ್ದಂತಿರಲಿಲ್ಲ.

Labels: Deteriorating Health, Doctorji, Sangha Story, ಅನಾರೋಗ್ಯದ ನಡುವೆ, ಡಾಕ್ಟರ್‌ಜಿ, ಸಂಘದ ಕಥೆ, ಹಗಲಿರುಳು ಒಂದೇ ಜಪ

೪೩. ಕುಶಪಥಕ

ಕುಶಪಥಕ

    ಮೊದ ಮೊದಲು ಸಂಘ ಶಾಖೆಗೆ ಬರುತ್ತಿದ್ದವರು ಕೇವಲ ತರುಣರು ಮಾತ್ರ. ಕ್ರಮೇಣ ಅವರ ತಮ್ಮಂದಿರೂ ಬರತೊಡಗಿದರು. ಕಿಶೋರ ಸ್ವಯಂಸೇವಕರ ಒಂದು ಗಣವೇ ತಯಾರಾಯಿತು. ಡಾಕ್ಟರ್‌ಜಿ ಅದಕ್ಕೆ ’ಕುಶಪಥಕ’ ಎಂದು ಹೆಸರಿಟ್ಟರು.

    ಲವ, ಕುಶರು ಶ್ರೀರಾಮನ ಮಕ್ಕಳು. ತಮ್ಮ ತಾಯಿ ಸೀತೆಯೊಂದಿಗೆ ಅವರಿಬ್ಬರೂ ದಟ್ಟ ಕಾಡಿನಲ್ಲಿದ್ದರು. ರಾಜನ ಮಕ್ಕಳಾದರೂ ಪರ್ಣಕುಟೀರದಲ್ಲಿ ವಾಸ, ಒಣ ರೊಟ್ಟಿ ಆಹಾರ. ತುಂಬ ಶ್ರದ್ಧೆಯಿಂದ ವಾಲ್ಮೀಕಿ ಮುನಿಗಳ ಬಳಿ ವಿವಿಧ ವಿದ್ಯೆಗಳನ್ನು ಕಲಿತರು. ಚಕ್ರವರ್ತಿ ಶ್ರೀರಾಮಚಂದ್ರನ ಪತ್ನಿಯಾದರೂ ವನದಲ್ಲಿ ವಾಸ ಮಾಡುತ್ತಾ ಅನೇಕ ವಿಧ ಕಷ್ಟ ಸಹಿಸುತ್ತಿದ್ದವಳು ಸೀತೆ. ಶಾಖೆಗೆ ಬರುತ್ತಿದ್ದ ಆ ಕಿಶೋರರ ಮನದಲ್ಲೂ ಇದೇ ಭಾವನೆಯನ್ನು ಪ್ರತಿಬಿಂಬಿಸುವ ಸಲುವಾಗಿ ಡಾಕ್ಟರ್‌ಜಿ ಅವರ ಗುಂಪಿಗೆ ’ಕುಶಪಥಕ’ ಎಂದು ಹೆಸರಿಟ್ಟರು. ನಮ್ಮ ಗತ ಇತಿಹಾಸ ವೈಭವಪೂರ್ಣವಾದುದು. ಆದರೆ ಭಾರತಮಾತೆ ಮಾತ್ರ ಪರತಂತ್ರಳು. ಆಕೆ ದುಃಖಿನಿ. ನಾವು ಆಕೆಯ ಮಕ್ಕಳು. ಸರ್ವಸ್ವವನ್ನೂ ಪಣಕ್ಕಿಟ್ಟು ಆಕೆಯ ದುಃಖವನ್ನು ದೂರಗೊಳಿಸುವುದು ನಮ್ಮ ಪರಮ ಕರ್ತವ್ಯ. ಈ ನಿಲುವು ಕುಶಪಥಕದ ಎಲ್ಲ ಸ್ವಯಂಸೇವಕರದಾಯಿತು.

    ಅದೇ ಕಿಶೋರರು ಬೆಳೆದು ದೊಡ್ಡವರಾದರು. ಶಾಲೆ ಕಾಲೇಜುಗಳಲ್ಲಿ ನಿರ್ಭೀತರಾಗಿ ಆತ್ಮವಿಶ್ವಾಸದಿಂದ ಕಾರ್ಯ ಮಾಡತೊಡಗಿದರು. ಅವರಲ್ಲಿ ಅನೇಕರು ಬೇರೆ ಪ್ರಾಂತಗಳಿಗೆ ಪ್ರಚಾರಕರಾಗಿ ಸಹ ಹೊರಟರು. ಇವರನ್ನು ಕಂಡು ಉನ್ನತ ಶಿಕ್ಷಣ ಪಡೆದ ಇತರ ತರುಣರೂ ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯದ ವಿಸ್ತಾರಕ್ಕಾಗಿ ಹೊರಟರು. ತಾವು ತಲುಪಿದಲ್ಲೆಲ್ಲ ಉತ್ತಮ ಶಾಖೆಗಳನ್ನು ಆರಂಭಿಸಿ ಕ್ರಮೇಣ ಅಲ್ಲಿನವರೇ ಆದರು. ಅಲ್ಲಿನ ಭಾಷೆ, ಅಲ್ಲಿನ ವ್ಯವಹಾರದ ರೀತಿ ನೀತಿ ಇತ್ಯಾದಿ ತಮ್ಮದಾಗಿಸಿಕೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. ಈ ದೇಶವೇ ನನ್ನದು, ಇಲ್ಲಿನ ಜನ, ಭಾಷೆಗಳು, ಹಳ್ಳಿಗಳು ಎಲ್ಲವೂ ನನ್ನವೇ ಎಂಬ ಭಾವನೆ ಅವರಲ್ಲಿ ದೃಢಗೊಂಡಿತು.

    ಬ್ರಾಹ್ಮಣ-ಅಬ್ರಾಹ್ಮಣ, ಬಡವ-ಬಲ್ಲಿದ, ಓದಿದ-ಓದದ ಯಾರೇ ಆಗಲಿ, ಯಾವುದೇ ಪಂಥ, ಸಂಪ್ರದಾಯ ಆಗಿರಲಿ, ನಾವೆಲ್ಲರೂ ಒಂದೇ. ಒಬ್ಬಳೇ ತಾಯಿಯ ಮಕ್ಕಳ ನಾವು ಎಂಬ ಸಂಘದ ವಿಚಾರ ಎಲ್ಲೆಡೆ ಬೇರೂರತೊಡಗಿತು. ಪ್ರತ್ಯಕ್ಷ ಆಚರಣೆಯಲ್ಲಿಯೂ ಅದು ಕಾಣಲಾರಂಭಿಸಿತು.

    ಹಿಂದೊಮ್ಮೆ ಭಗೀರಥ ಪಾಪನಾಶಿನಿ ಗಂಗೆಯನ್ನು ಭೂಮಿಗೆ ಕರೆತಂದಿದ್ದು. ಅಂತೆಯೇ ಹೀನ ಭಾವನೆಯನ್ನು ನಾಶಗೊಳಿಸುವ ಸಂಘ ಗಂಗೆಯನ್ನು ಡಾಕ್ಟರ್‌ಜಿ ದೇಶದ ತುಂಬಾ ಹರಿಸಿ ಆಧುನಿಕ ಕಾಲದ ಭಗೀರಥರಾದರು.

    ಮುಂದೆ ಸರಸಂಘಚಾಲಕರಾದ ಬಾಳಾಸಾಹೇಬ ದೇವರಸರು ಸಹ ಇದೇ ಕುಶಪಥಕದ ಸ್ವಯಂಸೇವಕರು. ಶಿಕ್ಷಕರೂ ಆಗಿದ್ದವರು. ಈ ಪಥಕ ಅನೇಕ ಹಿರಿಯ ಕಾರ್ಯಕರ್ತರನ್ನು ಸಂಘಕ್ಕೆ ನೀಡಿದೆ.

೪೨. ಅವಿರತ ಪರಿಶ್ರಮ

ಅವಿರತ ಪರಿಶ್ರಮ

    ಸಂಘ ಕಾರ್ಯದಲ್ಲಿ ಹಲವಾರು ವರ್ಷಗಳಿಂದ ಕಠಿಣ ಪರಿಶ್ರಮ ನಿರ್ವಹಿಸುತ್ತಿದ್ದ ಡಾಕ್ಟರ್‌ಜಿಯವರಲ್ಲಿ ಕಾಲಕ್ರಮೇಣ ಅನಾರೋಗ್ಯ ಕಾಣತೊಡಗಿತು. ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಅವರನ್ನು ನಾಸಿಕ್‍ಗೆ ಕರೆದೊಯ್ಯಲಾಯಿತು.

    ಅವರು ನಾಸಿಕಕ್ಕೆ ಹೋದುದು ವಿಶ್ರಾಂತಿಗಾಗಿ. ಆದರೆ ಅಲ್ಲಿ ಅವರು ಪ್ರತ್ಯಕ್ಷ ನಡೆಸಿದುದು ಹೊಸ ಶಾಖೆ ಆರಂಭಿಸುವ ಯತ್ನವೇ. ಸ್ವಯಂಸೇವಕರು ಅವರನ್ನು ನೋಡಲು ಬರುತ್ತಿದ್ದರು. ಅವರೊಂದಿಗೆ ಗಂಟೆಗಳವರೆಗೆ ಮಾತುಕತೆ ನಡೆಯುತ್ತಿತ್ತು. ವೈದ್ಯರು ’ಅವರಿಗೆ ಕಡ್ಡಾಯವಾಗಿ ವಿಶ್ರಾಂತಿ ಬೇಕಾಗಿದೆ, ರಾತ್ರಿ ೧೦ ಗಂಟೆಗೆ ಅವರು ಮಲಗಲೇಬೇಕು’ ಎನ್ನುತ್ತಿದ್ದರು. ಆದರೆ ಡಾಕ್ಟರ್‌ಜಿಯವರ ಬೈಠಕ್ ರಾತ್ರಿ ೨-೩ ಗಂಟೆಯವರೆಗೂ ಮುಗಿಯುತ್ತಿರಲಿಲ್ಲ. ಎಲ್ಲ ಸ್ವಯಂಸೇವಕರೂ ಮಂತ್ರಮುಗ್ಧರಾಗಿ ಕೇಳುತ್ತಾ ಇರುವಷ್ಟು ಮೋಡಿ ಆ ಮಾತುಕತೆಗಳಲ್ಲಿ. ಎಲ್ಲರಿಗೂ ಈ ಪ್ರಪಂಚವೇ ಮರೆಯುತ್ತಿತ್ತು. ಅವರನ್ನು ಮಲಗಿಸುವುದು ಎಷ್ಟು ಕಷ್ಟ ಎಂದು ವೈದ್ಯರಿಗೆ ಕಾರ್ಯಕರ್ತರು ಹೇಳಿದರು. ವೈದ್ಯರು "ನಾನೇ ಸ್ವತಃ ಇದ್ದು ೯.೪೫ಕ್ಕೇ ನೆನಪಿಸುವೆ. ೧೦ ಘಂಟೆಗೆ ಸರಿಯಾಗಿ ಅವರನ್ನು ಮಲಗಿಸುವೆ" ಎಂದರು.

    ರಾತ್ರಿ ೯ ಘಂಟೆಗೇ ಆ ವೈದ್ಯರು ಡಾಕ್ಟರ್‌ಜಿ ಇದ್ದಲ್ಲಿಗೆ ಬಂದರು. ಅವರಿಗೂ ಕ್ರಮೇಣ ಡಾಕ್ಟರ್‌ಜಿ ಅವರ ಮಾತಿನ ರುಚಿ ಹತ್ತತೊಡಗಿತು. ಒಂದಾದ ಮೇಲೊಂದು ವಿಷಯ ಹರಿದುಬರುತ್ತಿತ್ತು. ಡಾಕ್ಟರ್‌ಜಿ ತಮ್ಮದೇ ಆಕರ್ಷಕ ಶೈಲಿಯಲ್ಲಿ ನಾನಾ ವಿಷಯಗಳ ಮೇಲೆ ರಸವತ್ತಾಗಿ ಮಾತನಾಡುತ್ತಿದ್ದರು. ಈ ವೈದ್ಯರೂ ಮಾತುಕತೆಗಳಲ್ಲಿ ತಲ್ಲೀನರಾಗಿದ್ದರು. ಅವರಿಗೂ ತಾವೂ ಬಂದ ಉದ್ದೇಶವೇ ಮರೆತುಹೋಯಿತು. ತುಂಬ ತಡವಾಗಿ ತಮ್ಮ ಗಡಿಯಾರ ನೋಡಿದಾಗ ಅದು ಗಂಟೆ ೧.೩೦ ತೋರಿಸುತ್ತಿತ್ತು. "ಛೇ, ಛೇ ಅವರನ್ನು ಮಲಗಿಸಲು ಬಂದ ನಾನೇ ಹೀಗಾದೆನಲ್ಲಾ" ಎಂದು ಅವರೂ ತಮ್ಮ ಸೋಲು ಒಪ್ಪಿಕೊಂಡರು.

    ಡಾಕ್ಟರ್‌ಜಿಯವರ ಮಾತು ಎಷ್ಟು ಆಕರ್ಷಕ; ಅದಕ್ಕೆ ಕಾರಣವೂ ಇದೆ. ಅದರಲ್ಲಿ ಕೃತ್ರಿಮತೆ ಲವಲೇಶವೂ ಇರುತ್ತಿರಲಿಲ್ಲ. ಮಾತ್ರವಲ್ಲ ಅವರ ಒಂದೊಂದು ಶಬ್ದದಲ್ಲಿಯೂ ಅವರ ತಪಶ್ಚರ್ಯೆ ಹೊಮ್ಮಿ ಹರಿಯುತ್ತಿತ್ತು.

೪೧. ಬಂಧುತ್ವದ ಬೆಸುಗೆ

ಬಂಧುತ್ವದ ಬೆಸುಗೆ

    ಸಂಘ ಶಾಖೆಗೆ ಬರುವಂತಹವರು ತಮ್ಮೊಳಗಿನ ಭೇದಗಳನ್ನು ಮರೆಯುತ್ತಾರೆ. ಅವರಲ್ಲಿ ಬಂಧುಭಾವನೆ ತಾನಾಗಿ ಬೆಳೆಯುತ್ತದೆ. ಅನೇಕರಿಗೆ ಇದು ಆಶ್ಚರ್ಯಕರ ಎನಿಸುವಂತಹುದು. ಡಾಕ್ಟರ್‌ಜಿಯವರ ಬಳಿ ಕೆಲವರು ಪ್ರಶ್ನೆ ಸಹ ಮಾಡುತ್ತಿದ್ದರು. "ಇದರಲ್ಲೇನೂ ಜಾದೂ ಇಲ್ಲ. ಅದೊಂದು ದೊಡ್ಡ ರಹಸ್ಯವೂ ಇಲ್ಲ. ಅತ್ಯಂತ ನೇರ ಸರಳ ಸಂಗತಿ ಇದು. ಸಾಧಿಸಬೇಕಾದ ಧ್ಯೇಯದ ಮೇಲೆ ಗಮನ ಕೇಂದ್ರೀಕರಿಸಿ. ಕೆಟ್ಟದಾಗಿರುವುದನ್ನು ನೆನಪಿಸಲೂ ಸಹ ಬೇಡಿ. ಆಗ ಮನಸ್ಸುಗಳು ತಾವಾಗಿ ಒಂದುಗೂಡುತ್ತವೆ. ಜನರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಾಗ ಅವರ ಧ್ಯೇಯ ಕೇವಲ ಪುಸ್ತಕ ಅಥವಾ ಭಾಷಣಗಳಲ್ಲಿ ಮಾತ್ರ ಉಳಿಯುತ್ತದೆ" ಡಾಕ್ಟರ್‌ಜಿಯವರು ತಿಳಿಯಾಗಿ ವಿವರಿಸುತ್ತಿದ್ದ ರೀತಿ ಇದು.

    ೧೯೩೪ರ ಡಿಸೆಂಬರ್. ವರ್ಧಾದಲ್ಲಿ ಜಮುನಾಲಾಲಜಿ ಬಜಾಜರ ತೋಟದ ಸಮೀಪದಲ್ಲಿ ಸಂಘದ ಶಿಬಿರ. ಆ ದಿನಗಳಲ್ಲಿ ಮಹಾತ್ಮಾ ಗಾಂಧಿಯವರು ಅಲ್ಲೇ ವಾಸವಿರುತ್ತಿದ್ದರು. ಶಿಬಿರದ ವ್ಯವಸ್ಥೆ, ಅನುಶಾಸನ, ಸ್ವಯಂಸೇವಕರ ಪರಿಶ್ರಮಶೀಲತೆ, ಸ್ವಂತ ಖರ್ಚಿನಲ್ಲಿ ಗಣವೇಶ ಸಹಿತ ಶಿಬಿರಕ್ಕೆ ಬಂದಿರುವುದು ಇತ್ಯಾದಿ ಸುದ್ದಿ ಅವರಿಗೆ ತಿಳಿಯಿತು. ಅವರೂ ತುಂಬ ಉತ್ಸುಕತೆಯಿಂದ ಬೆಳಿಗ್ಗೆ ೬ ಘಂಟೆಗೆ ಶಿಬಿರದ ಸಂದರ್ಶನಕ್ಕೆ ಬಂದರು. ಎಲ್ಲೆಡೆ ಸ್ವತಃ ಓಡಾಡಿ ಶಿಬಿರದ ವ್ಯವಸ್ಥೆಗಳನ್ನು ನೋಡಿದರು.

    ಸ್ವಯಂಸೇವಕರ ವ್ಯಾಯಾಮ ಯೋಗ ಕಾರ್ಯಕ್ರಮವನ್ನು ಅವರು ಕಂಡರು. ನೂರಾರು ಸ್ವಯಂಸೇವಕರು ಒಟ್ಟಿಗೆ, ಉತ್ಸಾಹ ಹಾಗೂ ಅನುಶಾಸನದಿಂದ ಕೂಡಿ ಮಾಡಿದ ವ್ಯಾಯಾಮ ಕಂಡು ಅವರು ತುಂಬ ಪ್ರಭಾವಿತರಾದರು. ಸ್ವಯಂಸೇವರೊಡನೆ ಅವರ ಪ್ರಶ್ನೋತ್ತರ ಸಹ ನಡೆಯಿತು.

    "ಈ ಗಣವೇಶವನ್ನು ನಿನಗ್ಯಾರು ಕೊಟ್ಟರು?" ಮಹಾತ್ಮಾಜಿ ಸ್ವಯಂಸೇವಕನೊಬ್ಬನನ್ನು ಪ್ರಶ್ನಿಸಿದರು.

    "ಇದು ನನ್ನದೇ. ನಾನೇ ನನಗಾಗಿ ಹೊಲಿಸಿಕೊಂಡೆ" ಆತ ಉತ್ತರಿಸಿದ.

    "ಅದನ್ನು ಹೊಲಿಸಲು ಹಣ ಕೊಟ್ಟವರು ಯಾರು?" ಮತ್ತೆ ಬಂದಿತು ಪ್ರಶ್ನೆ.

    "ನಮ್ಮ ತಂದೆ-ತಾಯಿಗಳು. ಬರೀ ಗಣವೇಶದ್ದೇನು? ಇಲ್ಲಿ ಊಟ ವಸತಿಯ ಸಲುವಾಗಿ ತಗಲುವ ಖರ್ಚನ್ನೂ ಪ್ರತಿ ಸ್ವಯಂಸೇವಕ ತಾನೇ ಕೊಡುವನು. ದೂರ ದೂರದ ಹಳ್ಳಿಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಸಂಘದ ನಿಯಮವೇ ಹಾಗೆ" ನೇರವಾಗಿ ಉತ್ತರ ಬಂತು.

    "ಪ್ರಯಾಣ, ಗಣವೇಶ, ಊಟ ಇದಕ್ಕೆಲ್ಲ ಸಂತ ಹಣ ಖರ್ಚು ಮಾಡಿ ಬಂದು ಇಲ್ಲಿ ಸೇರುವುದರಿಂದ ನಿಮಗಾಗುವ ಲಾಭವೇನು? ಅಂತಹ ಯಾವ ಆಕರ್ಷಣೆ ಇಲ್ಲಿದೆ?" ಮಾಹಾತ್ಮಾಜಿ ಪುನಃ ಪ್ರಶ್ನೆ ಮುಂದುವರಿಸಿದರು.

    "ಇದಕ್ಕಾಗಿ ನಿಶ್ಚಿತವಾಗಿ ಉತ್ತರ ಹೇಳಲು ನಾವು ಅಸಮರ್ಥರು. ಆದರೂ ದಿನನಿತ್ಯ ಒಟ್ಟಿಗೆ ಏಳುವುದು, ಕುಳಿತುಕೊಳ್ಳುವುದು, ಆಟ, ಊಟ, ನಿದ್ದೆ ಇತ್ಯಾದಿ ಎಲ್ಲದರಲ್ಲೂ ನಾವು ಒಂದು. ಮಾತ್ರವಲ್ಲ ಇವೆಲ್ಲವೂ ನಮ್ಮ ದೇಶಕ್ಕಾಗಿ ನಾವು ಮಾಡುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿದೆ. ಇದೇ ನಮಗೆ ಬಹಳ ಸಂತೋಷ ಕೊಡುತ್ತದೆ" - ಸ್ವಯಂಸೇವಕನೊಬ್ಬ ಉತ್ತರಿಸಿದ.

    ಮತ್ತ ಪ್ರಶ್ನೆ ’ನೀನು ಯಾರು? ಯಾವ ಜಾತಿ?’

    ’ನಾನು ಒಬ್ಬ ವಿದ್ಯಾರ್ಥಿ. ಹಿಂದು’ ಆತ ಉತ್ತರಿಸಿದ.

    ’ನೀನು ಯಾರು?’ ಮತ್ತೊಬ್ಬನಿಗೆ ಪ್ರಶ್ನೆ.

    ’ನಾನು ಒಬ್ಬ ವ್ಯಾಪಾರಿ. ಹಿಂದು’.

    ’ನೀನು’ ಮಗದೊಬ್ಬನಿಗೆ ಪ್ರಶ್ನೆ.

    ’ನಾನು ಹೊಲದಲ್ಲಿ ಕೂಲಿ ಮಾಡುವವನು. ಹಿಂದು’ ಆತ ಉತ್ತರಿಸಿದ. ಗಾಂಧೀಜಿ ಎಲ್ಲರನ್ನೂ ಕೇಳುತ್ತಾ ಹೊರಟರು. ಚಮ್ಮಾರ, ಕಮ್ಮಾರ, ಕ್ಷತ್ರಿಯ, ಸೊನೆಗಾರ ಹೀಗೆ ಹತ್ತು ಹಲವು ಕಸುಬು, ಜಾತಿಯವರು ಅಲ್ಲಿದ್ದರು. ಮಹಾತ್ಮಾಜಿ ಪ್ರಶ್ನಿಸಿದರು. "ನೀವು ಅಸ್ಪೃಶ್ಯರೊಡನೆ ಇರುವುದಲ್ಲದೇ ಊಟ ಸಹ ಮಾಡುವಿರಾ?"

    ಸಂಘದಲ್ಲಿ ಆ ಭೇದಭಾವವೇ ಇಲ್ಲ. ನಮಗೆ ಇನ್ನೊಬ್ಬನ ಜಾತಿ ಸಹ ಗೊತ್ತಿರುವುದಿಲ್ಲ. ನಮಗದು ಬೇಕಾಗಿಯೂ ಇಲ್ಲ. ನಾವೆಲ್ಲ ಹಿಂದುಗಳು. ಭಾರತ ಮಾತೆಯ ಮಕ್ಕಳು. ನಾವು ಪರಸ್ಪರ ಸಹೋದರರು. ಸಂಘ ನಮಗೆ ಈ ಶಿಕ್ಷಣ ಕೊಟ್ಟಿದೆ. ಆದ್ದರಿಂದ ಮೇಲು ಕೀಳು ಎಂಬ ಭೇದ ನಮ್ಮ ಮನದಲ್ಲಿ ಎಂದೂ ಏಳದು" ಸ್ವಯಂಸೇವಕರ ಬಿಚ್ಚುನುಡಿ ಸ್ಪಷ್ಟವಾಗಿತ್ತು.

    ಉತ್ತರ ಕೇಳಿ ಮಹಾತ್ಮಾಜಿ ತುಂಬ ಸಂತಸಗೊಂಡರು. ಈ ಶಿಬಿರ ನೋಡಿ ಡಾಕ್ಟರ್‌ಜಿ ಅವರನ್ನು ಭೇಟಿ ಮಾಡಿ ಅವರು ಪ್ರಸನ್ನರಾದುದಷ್ಟೇ ಅಲ್ಲ. ಪ್ರಭಾವಿತರೂ ಆದರು.

    ಈ ರೀತಿ ಎಲ್ಲೆಡೆ ತನ್ನ ಕಾರ್ಯಕ್ರಮಗಳಿಂದ ಸಂಘ ಎಲ್ಲರಿಗೂ ಪ್ರಿಯವಾಗತೊಡಗಿತು. ಹಿಂದು ಸಮಾಜದಲ್ಲಿ ಬಂಧುಭಾವನೆ ಬೇರೂರಲಾರಂಭಿಸಿತು.