Showing posts with label ಡಾಕ್ಟರ್‌ಜೀ. Show all posts
Showing posts with label ಡಾಕ್ಟರ್‌ಜೀ. Show all posts

Monday, November 19, 2012

೫೩. ಪ್ರತಿಭಟನೆಯಲ್ಲೂ ವಿನೂತನ ಶೈಲಿ

ಪ್ರತಿಭಟನೆಯಲ್ಲೂ ವಿನೂತನ ಶೈಲಿ

    ಡಾಕ್ಟರ್‌ಜಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ನಂತರೂ, ಅವರ ಪದವಿಗೆ ಅಂದಿನ ಬ್ರಿಟಿಷ್ ಸರಕಾರದಿಂದ ಮಾನ್ಯತ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಹತಾಶರಾಗಿ ಪದವಿ ಪಡೆಯುವ ಆಸೆಯನ್ನೇ ಬಿಟ್ಟಿದ್ದರು.

    ಆದರೆ ಡಾಕ್ಟರ್‌ಜಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಪ್ರತಿದಿನ ಪತ್ರಿಕೆಗಳಿಗೆ ಪತ್ರವನ್ನು ಬರೆದು, ಸರಕಾರದ ಈ ನೀತಿಯ ವಿರುದ್ಧವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿಸುತ್ತಿದ್ದರು. ಹೀಗೆ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ನೋಡಿದ ಸರಕಾರವು, ಈ ಪ್ರತಿಭಟನೆಗಳನ್ನು ಯಾರು ನಡೆಸುತ್ತಿರುವವರು, ಅದು ಎಲ್ಲಿ ನಡೆಯುತ್ತಿದೆ ಎಂದು ವಿಚಾರಿಸಲು ಕೇವಲ ಗೊಂದಲ ಉತ್ತರಗಳೇ ಸಿಗುತ್ತಿದ್ದವು.

    ನಿಜವಾಗಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಡಾಕ್ಟರ್‌ಜಿ ಸರಕಾರದ ಮೇಲೆ ಒತ್ತಡ ತರಲು ಈ ಯೋಜನೆಯನ್ನು ಹಾಕಿ ಕಾರ್ಯಗತಗೊಳಿಸಿದ್ದರು. ಕೊನೆಗೆ ಸರಕಾರವು ಜನರಿಂದ ಬಂದ ಒತ್ತಡದ ಕಾರಣದಿಂದ ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಮಾನ್ಯತೆ ನೀಡಿತು.

Labels: Doctor Degree, Doctorji, New Style of Protest, Sangha Story, ಡಾಕ್ಟರ್‌ಜೀ, ಪದವಿಗಾಗಿ ಪ್ರತಿಭಟನೆ, ಸಂಘದ ಕಥೆ

Sunday, April 8, 2012

೨೨. ತಾಯಸೇವೆಯ ವ್ರತಧಾರಿ

ತಾಯಸೇವೆಯ ವ್ರತಧಾರಿ

   ಡಾ|| ಹೆಡಗೆವಾರರು ನಾಗಪುರಕ್ಕೆ ಬಂದರು. ಆದರೆ ಅವರು ಮನೆಯಲ್ಲಿರುತ್ತಿದ್ದುದೇ ಅಪರೂಪ. ಕಾರಣವಿತ್ತು. ಕೇಶವರಾಯರು ಮಾಡುತ್ತಿದ್ದ ಕೆಲಸವೆಲ್ಲ ಅಣ್ಣ ಮಹದೇವಶಾಸ್ತ್ರಿ ಅವರ ದೃಷ್ಟಿಯಲ್ಲಿ ತೀರ ಅಯೋಗ್ಯ ಹಾಗೂ ಮಾಡಬಾರದವುಗಳೇ. ಅವರು ತಮ್ಮನ ಗೆಳೆಯರ ಬಳಿ "ಅವನಿಗೆ ಸ್ವಲ್ಪ ಹೇಳಿ, ಎಲ್ಲಾದರೂ ನೌಕರಿ ಮಾಡಬೇಕು. ಮದುವೆ ಮಾಡಿಕೊಳ್ಳಬೇಕು. ಮನೆ ಮಾಡಿಕೊಂಡು ಸುಖವಾಗಿರಬೇಕು. ನೌಕರಿ ಇಷ್ಟವಿಲ್ಲದಿದ್ದರೆ ಸಣ್ಣದೊಂದು ದವಾಖಾನೆ ತೆರೆಯಲಿ. ಹಣವಿಲ್ಲದಿದ್ದರೆ ಎಲ್ಲಾದರೂ ಸಂಪಾದಿಸೋಣ. ಪ್ರಪಂಚದ್ದೆಲ್ಲ ಅನಾವಶ್ಯಕ ಕೆಲಸ ಮಾಡುವುದನ್ನು ಬಿಡಲು ಅವನಿಗೆ ಹೇಳಿ. ಯಾವುದಾದರೂ ಕಷ್ಟಕ್ಕೆ ಸಿಕ್ಕಿದಲ್ಲಿ ಆಗ ಗೊತ್ತಾದೀತು. ಆಗ ಆ ಗೆಳೆಯರಲ್ಲಿ ಯಾರೂ ಬರುವುದಿಲ್ಲ. ದೇಶ, ಸಮಾಜದ ಕೆಲಸ ದೊಡ್ಡವರಿಗೆ, ನಮ್ಮಂತಹವರು ಈ ಜಂಜಾಟಗಳಲ್ಲಿ ಸಿಕ್ಕಿ ಬೀಳಬಾರದು" ಇತ್ಯಾದಿ ಹೇಳುತ್ತಿದ್ದರು.

    ಮಹಾದೇವ ಶಾಸ್ತ್ರಿಗಳ ವಿಚಾರ - ಪ್ರತಿಯೊಬ್ಬನೂ ತನ್ನ ಕುಟುಂಬವನ್ನೇ ಮೊದಲು ಯೋಚಿಸಬೇಕು ಎಂದು. ಕೇಶವನೂ ಸ್ವಭಾವದಲ್ಲಿ ತನ್ನಂತೆಯೇ ಎಂದು ಚೆನ್ನಾಗಿ ತಿಳಿದಿದ್ದ. ಅವರು ತಮ್ಮನ ಬಳಿ ಮಾತ್ರ ಏನೂ ಹೇಳುತ್ತಿರಲಿಲ್ಲ. ಸದಾ ಸಂಬಂಧಿಕರ ಬಳಿ ’ನೀವಾದರೂ ಅವನಿಗೆ ಹೇಳಿ’ ಎನ್ನುತ್ತಿದ್ದರು. ಕೇಶವರಾವ್ ತಮ್ಮ ಅಣ್ಣನ ಹತ್ತಿರ ಬಹು ನಮ್ರತೆಯಿಂದಿರುತ್ತಿದ್ದರು. ಅನಾದರ ಎಂದೂ ತೋರುತ್ತಿರಲಿಲ್ಲ. ಪ್ರತಿವಾದ ಮಾಡುತ್ತಲೂ ಇರಲಿಲ್ಲ; ತಮ್ಮ ಕೆಲಸ ಬಿಡುತ್ತಲೂ ಇರಲಿಲ್ಲ. ಮಾತಿಗೆ ಮಾತು ಬೆಳೆಯಬಹುದೆಂದು ಅವರು ಮನೆಯಲ್ಲಿರುತ್ತಿದ್ದುದೇ ಕಡಿಮೆ.

    ಇದ್ದಕ್ಕಿದ್ದಂತೆ ನಾಗಪುರದಲ್ಲಿ ಇನ್ನೊಮ್ಮೆ ಪ್ಲೇಗ್ ಹರಡಿತು. ಹಲವಾರು ಸಂಸಾರಗಳು ಊರು ಬಿಟ್ಟು ದೂರ ಹೋದವು. ಮಹಾದೇವ ಶಾಸ್ತ್ರಿಗಳು ಮಾತ್ರ ತಮ್ಮ ಮನೆ ಬಿಡಲಿಲ್ಲ. ಯಾರ ಬುದ್ದಿವಾದವೂ ಅವರಿಗೆ ನಾಟಲಿಲ್ಲ. ’ಪ್ಲೇಗ್ ನಮ್ಮನ್ನೇನು ಮಾಡೀತು?’ ಎನ್ನುತ್ತಿದ್ದರು. ಕೇಶವರಾವ್ ಸಹ ಹೇಳಿದರು. ಆಗಲೂ ಅವರು ಊರು ಬಿಡಲು ಒಪ್ಪಲಿಲ್ಲ. ಕೊನೆಗೆ ಅವರ ತೊಡೆಯಲ್ಲಿಯೂ ಗೆಡ್ಡೆ ಕಾಣಿಸಿತು. ಭಾರಿ ಜ್ವರ ಬಂದೇಬಿಟ್ಟಿತು. ಕೇಶವರಾವ ತುಂಬಾ ಕಾಳಜಿ ವಹಿಸಿ ಆರೈಕೆ ಮಾಡಿದರು. ಆದರೂ ಪ್ರಯೋಜನ ದೊರೆಯಲಿಲ್ಲ. ಮಹಾದೇವ ಶಾಸ್ತ್ರಿಗಳು ಪರಲೋಕ ಸೇರಿದರು.

    ಪ್ಲೇಗ್ ಮಾರಿ ಹಿಮ್ಮೆಟ್ಟಿತು. ಜನರು ಊರಿಗೆ ಹಿಂದಿರುಗತೊಡಗಿದರು. ಸೀತಾರಾಮ ಪಂತ್ ಹಾಗೂ ಕೇಶವರಾವ್ ಸಹ ಮನೆಗೆ ಮರಳಿದರು. ಮನೆಯಲ್ಲಿನ ಬಹಳ ಸಾಮಾನು ಕಳವುಗೊಂಡಿದ್ದವು. ಮಹಾದೇವ ಶಾಸ್ತ್ರಿಗಳು ಇಲ್ಲದೆ ಮನೆಯೆಲ್ಲಾ ಬಿಕೋ ಎನ್ನುತ್ತಿತ್ತು. ಸೀತಾರಾಮ ಪಂತರು ಪೌರೋಹಿತ್ಯ ಮಾಡತೊಡಗಿದರು. ಅವರ ಮದುವೆಯೂ ಆಯಿತು. ಆ ನಂತರ ಅನೇಕ ಕನ್ಯಾಪಿತೃಗಳು ಕೇಶವರಾಯರ ಕುರಿತು ಸೀತಾರಾಮ ಪಂತರನ್ನು ಕೇಳತೊಡಗಿದರು. ಮೊದ ಮೊದಲು "ಈಗ ಆ ಯೋಚನೆಯಿಲ್ಲ. ಬದುಕಲು ಏನಾದರೂ ಮಾರ್ಗವಾದಲ್ಲಿ ಮುಂದೆ ನೋಡೋಣ" ಎನ್ನುತ್ತಿದ್ದರು. ಕ್ರಮೇಣ ಕೇಳುವವರು ಹೆಚ್ಚಾದರು. ಕೆಲವರಂತೂ ರಾಮಪಾಯಲಿಯಲ್ಲಿನ ಅವರ ಚಿಕ್ಕಪ್ಪ ಆಬಾಜಿ ಹೆಡಗೆವಾರರ ಬಳಿ ಹೋದರು. ನಾವಷ್ಟು ವರದಕ್ಷಿಣೆ ಕೊಡುತ್ತೇವೆ, ಇಷ್ಟು ಕೊಡುತ್ತೇವೆ ಎಂದೆಲ್ಲಾ ಗಂಟು ಬೀಳತೊಡಗಿದರು. ಕೊನೆಯಲ್ಲಿ ಕೇಶವರಾಯರು ಚಿಕ್ಕಪ್ಪನಿಗೆ ಒಂದು ಪತ್ರ ಬರೆದು "ನಾನು ಆಜನ್ಮ ದೇಶಸೇವೆಯ ವ್ರತ ಹಿಡಿದಿರುವೆ, ಹೀಗಾಗಿ ನನ್ನ ಸುಖ, ಸಂಸಾರದ ಸುಖ ಇತ್ಯಾದಿ ವಿಚಾರ ನನಗಿಲ್ಲ. ರಾಷ್ಟ್ರಕಾರ್ಯ ಮಾಡುತ್ತಾ ಸೆರೆಮನೆಗೂ ಹೋಗಬೇಕಾಗಬಹುದು - ಜೀವವನ್ನೇ ತೆರಬೇಕಾಗಬಹುದು. ಇನ್ನೂ ಬೇರೆ ಬೇರೆ ಕಷ್ಟಗಳು ಬರಬಹುದು. ಹೀಗಿರುವಾಗ ತಿಳಿದೂ ತಿಳಿದೂ ಯಾವುದೇ ಹೆಣ್ಣಿನ ಜೀವನವನ್ನು ಕಷ್ಟಕ್ಕೆ ಸಿಕ್ಕಿಸುವುದು ತರವಲ್ಲ ಎಂಬುದು ನನ್ನ ಖಚಿತ ನಿಲುವು" ಎಂದು ಖಡಾಖಂಡಿತವಾಗಿ ತಿಳಿಸಿದರು.

    ಅಲ್ಲಿಗೆ ಮದುವೆಯ ವಿಚಾರ ಕೊನೆಗೊಂಡಿತು. ಸೀತಾರಾಮ ಪಂತರು ಸೌಮ್ಯ ಸ್ವಭಾವದವರು. ತಮ್ಮನ ಬಗ್ಗ ಅವರಿಗೆ ಅತೀವ ಪ್ರೀತಿ. ಪರಸ್ವರರಲ್ಲಿ ತುಂಬು ವಿಶ್ವಾಸ ಅವರಿಬ್ಬರದು. ಸಿಕ್ಕಿದ ಒಣರೊಟ್ಟಿಯನ್ನೇ ಪ್ರೀತಿಯಿಂದ ಹಂಚಿ ತಿನ್ನುತ್ತಿದ್ದರು. ಬರುಬರುತ್ತಾ ಕೇಶವರಾಯರ ಕೆಲಸ ಕಾರ್ಯಗಳ ಒತ್ತಡ ಇನ್ನಷ್ಟು ಹೆಚ್ಚಿತು ಅವರು ಮನೆಯಲ್ಲಿರುವುದೇ ಅಪರೂಪವಾಯಿತು.

Thursday, April 5, 2012

೨೧. ಈ ಬದುಕು ತಾಯಿ ಭಾರತಿಗೆ ಮುಡಿಪು

ಈ ಬದುಕು ತಾಯಿ ಭಾರತಿಗೆ ಮುಡಿಪು

   ಬರ್ಮಾದಲ್ಲಿನ ಒಂದು ಆಸ್ಪತ್ರೆಯ ಸಂಚಾಲಕರೋರ್ವರು ತಮಗೊಬ್ಬ ವೈದ್ಯ ಬೇಕೆಂದು ಪ್ರಿನ್ಸಿಪಾಲರಿಗೆ ಪತ್ರ ಬರೆದಿದ್ದರು. ಅವರ ಗಮನ ತಟ್ಟನೆ ಕೇಶವರಾಯರತ್ತ ಹರಿಯಿತು. ತಮ್ಮ ಜವಾನನ ಮೂಲಕ ಹೇಳಿ ಕಳಿಸಿದರು. ವಿನಯ ತುಂಬಿದ ಕೇಶವರಾಯರು ಪ್ರಿನ್ಸಿಪಾಲರೆದುರು ಬಂದರು.

    "ಬೇರೆ ಬೇರೆ ಕೆಲಸ ಮಾಡುತ್ತಿದ್ದರೂ ಉತ್ತಮ ದರ್ಜೆಯಲ್ಲಿ ಪಾಸಾಗಿದ್ದೀರಿ. ಅಭಿನಂದನೆಗಳು" ಪ್ರಿನ್ಸಿಪಾಲರೆಂದರು.

    "ನಿಮ್ಮಂತಹರ ಕೈಗಳಲ್ಲಿ ಶಿಕ್ಷಣದಿಂದಾಗಿ ನನ್ನಂತಹ ಸಾಮಾನ್ಯನೂ ಯಶಪಡೆಯುವಂತಾಯಿತು. ನಾನು ನಿಮಗೆ ಕೃತಜ್ಞ" ಕೇಶವರಾಯರು ಉತ್ತರಿಸಿದರು.

    "ನೋಡಿ, ಹೆಡಗೆವಾರರೇ, ನಿಮಗೊಂದು ಸುವರ್ಣ ಅವಕಾಶವಿದೆ. ಬರ್ಮಾದ ಆಸ್ಪತ್ರೆಯೊಂದಕ್ಕೆ ಉತ್ಸಾಹಿ ವೈದ್ಯರೊಬ್ಬರ ಅಗತ್ಯವಿದೆ. ಅವರು ನನ್ನನ್ನು ಕೇಳಿದ್ದಾರೆ. ಉತ್ತಮ ಅನುಕೂಲತೆ. ವೇತನ ಎಲ್ಲವೂ ಇದೆ. ನಾನು ನಿಮ್ಮ ಹೆಸರು ಅವರಿಗೆ ಸೂಚಿಸುವೆ" ಪ್ರಿನ್ಸಿಪಾಲರೆಂದರು.

    "ಕ್ಷಮಿಸಿ, ನಾನಲ್ಲಿ ಹೋಗಲಾರೆ" ಕೇಶವರಾಯರ ಧ್ವನಿ ಅಷ್ಟೇ ಸ್ಪಷ್ಟ. ಮಾತಿ ಕೇಳಿ ಪ್ರಿನ್ಸಿಪಾಲರು ಚಕಿತರಾದರು. ಒಂದು ರೀತಿಯ ಸಿಟ್ಟೂ ಬಂದಿತ್ತು. "ಇದೇನು ಹೇಳುತ್ತಿರುವಿರಿ? ಅವರಸರವಸರವಾಗಿ ನಿರ್ಣಯಿಸಬೇಡಿ. ಯೋಚಿಸಿ ಉತ್ತರಿಸಿ. ಇಂಥ ಅವಕಾಶ ಕೈಬಿಡಬೇಡಿ. ನೀವು ಯುವಕರು. ನೀವೆಲ್ಲಿ ಹೋದರೂ ಜಯಿಸಿ ಬರಬಲ್ಲಿರೆಂಬ ವಿಶ್ವಾಸ ನನಗಿದೆ. ಸ್ವಂತ ಔಷಧಾಲಯ ನಡೆಸಲು ನಿಮ್ಮ ಬಳಿ ಹಣವೂ ಇಲ್ಲ ಎಂದು ಗೊತ್ತು. ಇಂಥ ನೌಕರಿ ಇನ್ನೆಲ್ಲೂ ಸಿಗದು" ಎಂದರು.

    ಕೇಶವರಾಯರು ನಿಧಾನವಾಗಿ ಆದರೆ ದೃಢವಾಗಿ "ನೀವು ನನಗೆ ಪೂಜ್ಯರು. ನಿಮ್ಮ ಮಾತುಗಳೆಲ್ಲವೂ ನನಗೆ ಒಪ್ಪಿಗೆ. ನನಗೆ ವಿದೇಶಕ್ಕೆ ಹೋಗಲು ಭಯವಿಲ್ಲ. ವೇತನ ಹೆಚ್ಚೂ - ಕಡಿಮೆ ಈ ಕುರಿತೂ ನನಗೆ ಚಿಂತೆ ಇಲ್ಲ. ಆದರೆ ನಾನು ಪ್ರತಿಜ್ಞೆ ಮಾಡಿರುವೆ. ನಾನು ನನ್ನನ್ನು ಈ ದೇಶದ ಸೇವೆಗೆ ಸಮರ್ಪಿಸಿಕೊಂಡಿರುವೆ. ಈ ದೇಹದ ಕಣಕಣವೂ ಅದರ ಸೇವೆಗೆ ಮುಡಿಪು. ನಾನೆಂದೂ ನೌಕರಿ ಮಾಡೆನು. ಸ್ವಂತ ಔಷಧಾಲಯವೂ ಇಲ್ಲ. ಸುತ್ತ ಇರುವ ಅತಿ ಅವಶ್ಯ ಕೆಲಸಗಲನ್ನು ಯೋಚಿಸಿದಲ್ಲಿ ನನಗೆ ಬಿಡುವೇ ಸಾಲದೆನಿಸುತ್ತದೆ" ಎನ್ನುತ್ತ ತಮ್ಮ ಮನದಿಂಗಿತ ತಿಳಿಸಿದರು.

    ಪ್ರಿನ್ಸಿಪಾಲರಿಗೆ ಆಶ್ಚರ್ಯ. ಇವನೆಂತಹ ವಿಚಿತ್ರ ತರುಣ ! ಹಣ ಸಂಪಾದಿಸಲು ಸಮಯವೇ ಸಿಕ್ಕದು ಎನ್ನುವನಲ್ಲಾ. ಕೇಶವರಾಯರ ವಾದ ಅವರ ಬುದ್ಧಿಗೆ ನಿಲುಕಲಿಲ್ಲ.

    ಪುನಃ ಪ್ರಶ್ನಿಸಿದರು - "ಹೊಟ್ಟೆಯ ಪಾಡೇನು ? ಹೆಂಡತಿ ಮಕ್ಕಳ ಗತಿಯೇನು?" ಕೇಶವರಾಯರ ಉತ್ತರ ಸಿದ್ಧವಾಗಿತ್ತು - "ನಾನು ಅವಿವಾಹಿತ. ಮದುವೆಯ ವಿಚಾರವೂ ಇಲ್ಲ. ನನ್ನ ಕುರಿತು.... ನನಗೆ ಭಗವಂತನ ಮೇಲೆ ಭರವಸೆ ಇದೆ."

    ಮತ್ತೆ ಪ್ರಾಚಾರ್ಯರೆಂದರು "ನೀವಿನ್ನೂ ಯುವಕರು. ಪ್ರಪಂಚವನ್ನು ಕಂಡಿಲ್ಲ. ಈ ವಯಸ್ಸಿನಲ್ಲಿ ಎಲ್ಲರೂ ಭಾವನಾಶೀಲರಾಗುವರು. ಆಕಾಶದಲ್ಲಿಯೇ ಹಾರತೊಡಗುವರು ಆದರೆ ಕಷ್ಟ ಬಂದಾಗ ಯಾರೂ ಜೊತೆಗಿರಲಾರರು. ಆಗ ನಾನೇಕೆ ಮನೆ ಮಾಡಿಲ್ಲ. ಸಂಸಾರ ಮಾಡಿಲ್ಲ? ಎಂದೆಲ್ಲಾ ಯೋಚನೆ ಬರುತ್ತದೆ. ಆ ಕಷ್ಟದಲ್ಲಿ ಯಾರೂ ಸಹಾಯ ಮಾಡಲಾರರು. ನಿಮ್ಮ ಜೀವನಕ್ಕಂತಹ ದುರ್ಗತಿ ಬಾರದಿರಲಿ ಎಂದೇ ನನ್ನಿಚ್ಛೆ.""

    "ನಿಮ್ಮ ಹೃದಯದಲ್ಲಿ ದೇಶಭಕ್ತಿ ಇದೆ. ನನಗಂತೂ ಅದನ್ನು ಕಂಡು ತುಂಬಾ ಅಭಿಮಾನ. ಆದರೆ ಮನೆ, ಸಂಸಾರದೊಂದಿಗೇ ದೇಶಭಕ್ತಿ ಮಾಡಲಾಗದೇ? ವೈದ್ಯಕೀಯ ವೃತ್ತಿಯಂತೂ ಜನಸೇವೆಯದೇ. ಹಾಗಿರುವಾಗ ಮನೆ ಮಠ ಬಿಡುವ ಅವಶ್ಯಕತೆಯಾದರೂ ಏನು?" - ಅವರ ಹಿತ ನುಡಿ-ಅನುಭವ, ಆತ್ಮೀಯತೆಗಳ ರಸಪಾಕವಾಗಿತ್ತು.

    "ಮಾನ್ಯರೇ, ನಮ್ಮ ದೇಶದ ಇಂದಿನ ಸ್ಥಿತಿ ತುಂಬ ದಯನೀಯ. ಅದನ್ನು ಸರಿಪಡಿಸಲು ತರುಣರು ತಮ್ಮದೆಲ್ಲವನ್ನೂ ಸಮರ್ಪಿಸಿದರೂ ಅದು ಸಾಲದೆನಿಸಬಹುದು. ಉನ್ನತ ವಿದ್ಯಾವಂತರದು ಇದರಲ್ಲಿ ಅಗ್ರಪಾತ್ರವಿರಬೇಕು. ಗ್ರಾಮ ನಗರಗಳ ಮೂಲೆ ಮೂಲೆಗಳಲ್ಲಿ ಇಂದು ನಾನಾ ವಿಧ ಕಾರ್ಯಗಳು ಅಸಂಖ್ಯ ಕಾರ್ಯಕರ್ತರನ್ನೆದುರು ನೋಡುತ್ತಿವೆ. ತ್ಯಾಗಿ ಮನೋಭಾವದ, ಬಾಂಧವ್ಯದ ಭಾವದಿಂದ ಕೂಡಿದ ಸೇವಾವ್ರತಿ ತರುಣ ಕಾರ್ಯಕರ್ತರಿಂದು ಬೇಕೆಂದು ತಾಯಿ ಭಾರತಿ ಕೂಗಿ ಕರೆಯುತ್ತಿದ್ದಾಳೆ. ತಾಯಿಯ ಈ ಕರೆ ಕೇಳಿಯೇ ನಾನು ನನ್ನ ಜೀವನಪಥ ನಿರ್ಧಾರ ಮಾಡಿರುವೆ." ಕೇಶವರಾಯರು ಗಂಭೀರವಾಗಿ ನುಡಿದರು.

    ಈ ಮಾತುಗಳನ್ನು ಕೇಳುತ್ತಾ, ಪ್ರಿನ್ಸಿಪಾಲರು ತನ್ಮಯರಾದರು. ಅವರ ಹೃದಯ ತುಂಬಿ ಬಂತು. ಭಾವಪೂರಿತರಾಗಿ, "ಡಾಕ್ಟರ್ ಹೆಡಗೆವಾರ್, ನಿಮ್ಮದು ತುಂಬ ಉತ್ತಮ ನಿರ್ಧಾರ. ಅಸಾಮಾನ್ಯರು ನೀವು. ನಿಮ್ಮ ಗುಣಗಳ ಉಪಯೋಗ ಈ ದೇಶಕ್ಕೆ ಸದಾ ಆಗುತ್ತಿರಲಿ. ನಿಮ್ಮ ಉನ್ನತಿಯಾಗಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ ಇದೇ ನನ್ನ ಶುಭಾಕಾಂಕ್ಷೆ" ಎಂದರು.

    "ನಿಮ್ಮ ಆಶೀರ್ವಾದದಿಂದ ನನಗೆ ಸದಾ ಶಕ್ತಿ ದೊರೆಯುತ್ತಿರಲಿ. ಧ್ಯೇಯ ಪಥದಲ್ಲೆ ಮುನ್ನಡೆಯುತ್ತಿರುವೆ. ಧನ್ಯವಾದಗಳು." ಕೇಶವರಾಯರೆಂದರು.

    ಪ್ರಾಚಾರ್ಯರಿಗೆ ನಮಸ್ಕರಿಸಿ ಡಾ|| ಹೆಡಗೆವಾರ್ ಹೊರಬಂದರು.

    ಕೆಲವು ದಿನಗಳ ನಂತರ ಅವರು ನಾಗಪುರಕ್ಕೆ ವಾಪಸ್ಸಾದರು.

೨೦. ನಾಯಕನ ನಿಂದೆ ಸಹ್ಯವಲ್ಲ

ನಾಯಕನ ನಿಂದೆ ಸಹ್ಯವಲ್ಲ

   ಆಗ ಮೌಲವಿ ಲಿಯಾಖತ್ ಹುಸೇನರು ಕಲ್ಕತ್ತೆಯ ಜನನಾಯಕರಲ್ಲಿ ಒಬ್ಬರು. ಸುಮಾರು ೬೦ ವರ್ಷ ವಯಸ್ಸು. ಆದರೂ ಉತ್ಸಾಹಿ. ಸದಾ ಚಟುವಟಿಕೆಯಿಂದಿರುತ್ತಿದ್ದವರು. ತರುಣರಂತೆ ಎಲ್ಲದರಲ್ಲೂ ಮುಂದು. ಲೋಕಮಾನ್ಯ ತಿಲಕರ ಪರಮಭಕ್ತರವರು. ಕೇಶವರಾಯರ ತೇಜಸ್ಸು, ಧೈರ್ಯ ಅವರನ್ನು ಆಕರ್ಷಿಸಿತ್ತು. ಒಂದು ಘಟನೆಯಿಂದ ಅವರೀರ್ವರೂ ಬಹು ಆತ್ಮೀಯರಾದರು.

    ಒಮ್ಮೆ ಯಾವುದೇ ಒಂದು ಸಭೆ ನಡೆಯುತ್ತಿತ್ತು. ಕೇಶವರಾಯರು ಅಲ್ಲಿದ್ದರು. ಒಬ್ಬ ವಕ್ತಾರ ತುಂಬ ಜಂಭದಿಂದ ಬಾಯಿಗೆ ಬಂದಂತೆಲ್ಲಾ ಭಾಷಣ ಬಿಗಿಯುತ್ತಿದ್ದ. ಆತ ಲೋಕಮಾನ್ಯ್ ತಿಲಕರನ್ನೂ ಭಾಷಣದಲ್ಲಿ ಹೀಗೆಳೆದ. ಎಲ್ಲರಿಗೂ ಅದು ತೀರಾ ಕೆಟ್ಟದೆನಿಸಿತು. ಓರ್ವ ನಿಧಾನವಾಗಿ ’ಹೀಗೆನ್ನಬಾರದು’ ಎಂದರೆ ಮತ್ತೋರ್ವ ತಲೆ ಕೆಳಗೆ ಹಾಕಿದ. ಕೇಶವರಾಯರು ಧಿಗ್ಗನೆದ್ದರು. ವೇದಿಕೆ ಹತ್ತಿದರು. ಭಾಷಣಕಾರನ ಕೆನ್ನೆಗೆರಡು ಬಿಗಿದರು. ಎಲ್ಲೆಡೆ ಗಲಭೆ. ಆತನ ಜೊತೆಯವರು ಕೆಲವರು ಕೇಶವರಾಯರ ಮೇಲೇರಿ ಬಂದರು. ಆದರೆ ಕೇಶವರಾಯರ ಶಕ್ತಿಯ ಯಾರೂ ನಿಲ್ಲದಾದರು.

    ಮೌಲವಿಯವರೂ ಅಲ್ಲಿದರು. ಕೇಶವರಾಯರ ಕೆಲಸ ಅವರಿಗೆ ತುಂಬಾ ಹಿಡಿಸಿತು. ಅವರ ಬೆನ್ನು ಚಪ್ಪರಿಸುತ್ತಾ ’ನವ ಯುವಕರೆಂದರೆ ಹೀಗಿರಬೇಕು. ತುಂಬಾ ಒಳ್ಳೆಯ ಕೆಲಸ ಮಾಡಿದಿರಿ. ನಾನೂ ಲೋಕಮಾನ್ಯರ ಭಕ್ತ. ನಾವೀರ್ವರೂ ಜೊತೆಗೂಡಿ ಕೆಲಸ ಮಾಡೋಣ’ ಎಂದರು.

    ಕಲ್ಕತ್ತೆಯಲ್ಲಿರುವವರೆಗೂ ಅವರೀರ್ವರೂ ಸದಾ ಜೊತೆಗೇ ಇರುತ್ತಿದ್ದರು. ಮೌಲವಿಯವರು ಏರ್ಪಡಿಸಿದ ಸಭೆಗಳಲ್ಲೆಲ್ಲಾ ಕೇಶವರಾಯರ ಭಾಷಣ ಇದ್ದೇ ಇರುತ್ತಿತ್ತು. ಎಲ್ಲ ಮೆರವಣಿಗೆಗಳಲ್ಲೂ ಅವರು ತಮ್ಮ ಗೆಳೆಯರೊಂದಿಗೆ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಭಗವಾಧ್ವಜ ಹಿಡಿದು ಎಲ್ಲರಿಗಿಂತ ಮುಂದಿರುತ್ತಿದ್ದರು.

    ಈ ಎಲ್ಲಾ ಕೆಲಸಗಳಂತೆ ಓದಿನಲ್ಲೂ ಅವರು ಸದಾ ಮುಂದೆ. ೭೦-೮೦ ಶೇಕಡಾ ಅಂಕ ಪಡೆಯುತ್ತಿದ್ದರು. ಹಗಲಿಡೀ ಬೇರೆ ಬೇರೆ ಕೆಲಸ. ರಾತ್ರಿಯೆಲ್ಲಾ ಪ್ರಶಾಂತ ವಾತಾವರಣದಲ್ಲಿ ಓದಿನಲ್ಲಿ ಮಗ್ನ. ಸ್ವಂತ ಪುಸ್ತಕವಿರಲಿಲ್ಲ. ಬೇರೆಯವರ ಎರವಲು ಪುಸ್ತಕ. ಒಮ್ಮೆ ಓದಿದರೆ ಸಾಕು, ಮತ್ತೆಂದೂ ನೆನಪಿನಿಂದ ಮಾಶುತ್ತಿರಲಿಲ್ಲ ಆ ವಿಷಯ. ಅವರ ಅಲೌಕಿಕ ಬುದ್ಧಿವಂತಿಕೆ, ಕರ್ತೃತ್ವಶಕ್ತಿ ಕಂಡು ಗೆಳೆಯರೆಲ್ಲಾ ಅಚ್ಚರಿಪಡುತ್ತಿದ್ದರು. ಕೇಶವರಾಯರು ವೈದ್ಯಕೀಯ ಪದವಿಯನ್ನು ಉತ್ತಮ ದರ್ಜೆಯಲ್ಲಿಯೇ ಪಡೆದರು.

೧೯. ಸೇರಿಗೆ ಸವ್ವಾಸೇರು

ಸೇರಿಗೆ ಸವ್ವಾಸೇರು

   ಬೇರೆಡೆಯಿಂದ ಕಲ್ಕತ್ತೆಗೆ ಓದಲು ಬಂದ ವಿದ್ಯಾರ್ಥಿಗಳು ಒಂದು ಮನೆಯನ್ನೇ ಬಾಡಿಗೆಗೆ ಪಡೆದಿದ್ದರು. ಅವರಲ್ಲಿರುವುದು. ಆಮೊಹಲ್ಲೆಯ ಕೆಲವರಿಗೆ ಹಿಡಿಸುತ್ತಿರಲಿಲ್ಲ. ಕೆಲವು ಗೂಂಡಾಗಳನ್ನು ಪುಸಲಾಯಿಸಿದರು. ಆ ಹುಡುಗರಿಗೆ ತೊಂದರೆ ಆರಂಭವಾಯಿತು. ರಾತ್ರಿಮನೆಯ ಮೇಲೆ ಕಲ್ಲು ಬೀಳಲಾರಂಭಿಸಿತು. ಕೆಲವು ದೊಡ್ಡ ಹುಡುಗರು ಸೇರಿ ಹತ್ತಿರದ ಮನೆಗಳಿಗೆ ಹೋದರು. ’ನಾವು ಯಾರಿಗೂ ತೊಂದರೆ ನಿಮಗೆ ಕೊಡುತ್ತಿರುವರೋ ನಮಗಂತೂ ತಿಳಿಯದು’ ಎಂದು ಬಿಟ್ಟರು. ಮರುದಿನವೂ ಕಲ್ಲುಗಳು ಬಿದ್ದವು. ಮೂರನೇ ದಿನ ಮತ್ತಷ್ಟು ಹೆಚ್ಚಿತು. ವಿದ್ಯಾರ್ಥಿಗಳೆಲ್ಲ ಹೆದರಿದರು. ಒಬ್ಬನೆಂದ - ’ಇವೆಷ್ಟು ದೊಡ್ಡ ಕಲ್ಲುಗಳು! ತಲೆಯ ಮೇಲೆ ಬಿದ್ದರೆ ಸಾವು ಖಂಡಿತ’ ’ನಾವು ದೂರ ದೂರದಿಂದ ಇಲ್ಲಿ ಬಂದವರು. ಇಲ್ಲಿನವರೊಂದಿಗೆ ನಮಗೇಕೆ ಜಗಳ? ನೀರಿನಲ್ಲಿದ್ದು ಮೀನು ಮೊಸಳೆಗಳೊಡನೆ ವೈರ ಸಾಧಿಸಲು ಬಂದೀತೆ?’ ಮತ್ತೊಬ್ಬನೆಂದ.

    ಮೂರನೆಯವ ’ಇದೇನು, ಮಾರಣ ಪ್ರಯೋಗವಲ್ಲವಷ್ಟೇ? ಬಂಗಾಲ ಮಂತ್ರ ವಿದ್ಯೆಗೆ ಪ್ರಸಿದ್ಧ ತಾನೇ?’ ಎಂದು ಶಂಕೆ ವ್ಯಕ್ತಪಡಿಸಿದ.

    ನಾಲ್ಕನೆಯವ ನಿರ್ಣಾಯಕವಾಗಿ ನುಡಿದ "ಇಲ್ಲಿನವರಿಗೆ ನಾವಿರುವುದು ಬೇಡವೆನಿಸಿದರೆ ಬೇರೆ ಕಡೆ ಹೋಗೋಣ." ಹೀಗೆ ಹತ್ತು ಹಲವು ತರ ಮಾತುಕತೆ ನಡೆಯುತ್ತಿತ್ತು. ಕೇಶವರಾಯರೆಂದರು - "ಹೆದರಬೇಡಿ. ಈ ಕೆಲಸ ನನಗೊಪ್ಪಿಸಿ ಅದೇಕೆ ಕಲ್ಲು ತೂರಾಟ ನಿಲ್ಲದು? ನಾನು ನೋಡುವೆ."

    ಆ ರಾತ್ರಿ ಎಂದಿನಂತೆಯೇ ಮೊದಲು ಕಲ್ಲು ಬಂತು. ಕೇಶವರಾವ್ ಓಡುತ್ತಾ ಹೊರ ಬಂದರು. ಎದುರು ಸಿಕ್ಕಿದವನನ್ನು ಹಿಡಿದು ಚೆನ್ನಾಗಿ ಚಚ್ಚತೊಡಗಿದರು. ’ಅಯ್ಯೋ ಸತ್ತೇ - ಸತ್ತೇ ..... ಬಿಡಿಸಿ’ ಆತ ಕೂಗತೊಡಗಿದ. ಚೀರಾಟ ಕೇಳಿ ಕೇರಿಯ ಜನರೆಲ್ಲ ಒಟ್ಟಾದರು. ಅವರಲ್ಲಿ ಓರ್ವ ಹೇಳಿದ "ಇವನಿಗ್ಯಾಕೆ ಹೊಡೆಯುತ್ತೀರಿ? ಈತ ಒಳ್ಳೆಯವ ನಿಮಗೇನು ಮಾಡಿದ್ದಾನೆ?"

    ಕೇಶವರಾಯರು ಹೊಡೆತ ನಿಲ್ಲಿಸಿದರು. ಜನರ ಮಧ್ಯೆ ನಿಂತರು. ಗಡಸು ಧ್ವನಿಯಲ್ಲಿ ಅವರೆಂದರು - ’ನಾವು ನಿಮ್ಮ ಕೇರಿಯಲ್ಲೇ ವಾಸಿಸುತ್ತೇವೆ. ನಮ್ಮ ಮನೆ ಮೇಲೆ ಕಲ್ಲು ಬಿದ್ದಾಗಲೂ ನೀವೆಲ್ಲ ತೆಪ್ಪನೆ ಕುಳಿತಿದ್ದಿರಿ ಏಕೆ? ಕೇಳಿದರೆ ನಮಗೇನು ಗೊತ್ತು ಎನ್ನುತ್ತೀರಿ. ನಾನಿದನ್ನೆಲ್ಲ ನಡೆಯಗೊಡುವುದಿಲ್ಲ. ನಮ್ಮ ಮನೆ ಮೇಲೆ ಕಲ್ಲು ಬೀಳುವುದಕ್ಕೆ ಕೇರಿಯ ಜನರೆಲ್ಲ ಜವಾಬ್ದಾರರು. ಹೀಗೆಯೇ ನಿತ್ಯ ಕಲ್ಲು ಬೀಳುತ್ತಿದ್ದರೆ ನಾನೂ ಸಿಕ್ಕಸಿಕ್ಕವರಿಗೆ ಹೊಡೆಯುವುದು ಖಂಡಿತ."

    ಜನರೆಲ್ಲ ತಂತಮ್ಮ ಮನೆಗಳಿಗೆ ನಡೆದರು. ಎಲ್ಲ ಮನೆಗಳಲ್ಲೂ ಕೇಶವರಾಯರ ಶಕ್ತಿ. ಸಾಹಸಗಳದ್ದೇ ಚರ್ಚೆ. ಆ ನಂತರ ಮನೆಯ ಮೇಲೆ ಕಲ್ಲು ಎಂದೂ ಬೀಳಲಿಲ್ಲ.

Wednesday, April 4, 2012

೧೮. ’ಮನುಷ್ಯನೋ ಭೂತವೋ?’

’ಮನುಷ್ಯನೋ ಭೂತವೋ?’

   ಅದೊಂದು ದಿನ ಕಾಲೇಜಿನಲ್ಲಿ ಓರ್ವ ಪ್ರಾಧ್ಯಾಪಕರು ಇನ್ನೂ ತರಗತಿಗೆ ಬಂದಿರಲಿಲ್ಲ. ವಿದ್ಯಾರ್ಥಿಗಳೆಲ್ಲ ಗುಂಪು ಗುಂಪಾಗಿ ಹರಟೆ ಹೊಡೆಯುತ್ತಿದ್ದರು. ಅಮೂಲ್ಯ ಘೋಷ್ ಆ ತರಗತಿಯ ಇನ್ನೋರ್ವ ವಿದ್ಯಾರ್ಥಿ. ಆತ ಸಹ ಕಟ್ಟುಮಸ್ತಾದ ಆಳು. ನಿತ್ಯ ವ್ಯಾಯಾಮ ಮಾಡುತ್ತಿದ್ದ ದೃಡಕಾಯ. ಇದ್ದಕ್ಕಿದ್ದಂತೆ ಆತ ಆತ ಕೇಶವರಾಯರೆದುರು ಬಂದು ’ರೀ, ಹೆಡ್ಗೆವಾರ್, ನಿಮ್ಮ ಶಕ್ತಿ ಕುರಿತು ಹಲವರು ಹೊಗಳುವರು. ಅದು ಹೇಗಿದೆ ನಾನೂ ಸ್ವಲ್ಪ ನೋಡುವೆ, ನನ್ನ ಭುಜದ ಮೇಲೆ ಹೊಡೆಯಿರಿ ನೋಡೋಣ?’ ಸವಾಲಿನ ಧ್ವನಿಯಲ್ಲಿ ಕೆಣಕಿದ.

    "ಮೊದಲು ನೀವು ನನ್ನ ಭುಜದ ಮೇಲೆ ಹೊಡೆಯಿರಿ. ನಂತರ ನಾನು" ಕೇಶವರಾಯರೆಂದರು.

    ಘೋಷ್ ಒಪ್ಪಿದ. ಕೇಶವರಾವ್ ಭುಜ ಎತ್ತಿ ನಿಂತರು. ಆತ ಮುಷ್ಠಿ ಎತ್ತಿ ಹೊಡೆಯತೊಡಗಿದ. ತರಗತಿಯ ವಿದ್ಯಾರ್ಥಿಗಳೆಲ್ಲ ಕುತೂಹಲದಿಂದ ಸುತ್ತ ನೆರೆದರು. ಹತ್ತು...... ಇಪ್ಪತ್ತು...... ಐವತ್ತು...... ನೂರು...... ಗುದ್ದುಗಳ ಸತತ ಸುರಿಮಳೆ.

    ಗುದ್ದುತ್ತಾ ಗುದ್ದುತ್ತಾ ಅಮೂಲ್ಯ ಘೋಷ್ ಸುಸ್ತಾದ. ಆದರೆ ಕೇಶವರಾವ್ ನಿಂತಲ್ಲಿಂದ ಸ್ವಲ್ಪವೂ ಕದಲಲಿಲ್ಲ. ವಿದ್ಯಾರ್ಥಿಗಳೆಲ್ಲ ಅಚ್ಚರಿಗೊಂಡರು. ಕೇಶವರಾಯರನ್ನು ಹೊಗಳತೊಡಗಿದರು.

    ಅದಾದ ಮೇಲೆ ಕೇಶವರಾಯರ ಸರದಿ. ತಮ್ಮ ವಜ್ರಮುಷ್ಥಿ ಬಿಗಿದರು. ಬಿದ್ದುದ್ದು ಒಂದೇ ಹೊಡೆತ. ಅಮೂಲ್ಯ ಘೋಷ್ "ಸ್ಪರ್ಧೆ ಸಾಕು" ಎಂದು ಉದ್ಗರಿಸಿದ.

    ಘೋಷ್ ಕೈ ಮುಗಿದು ಹೇಳಿದ "ನೀನೇನು ಮನುಷ್ಯನೋ ಭೂತವೋ? ನಿನ್ನ ಮೈಯಲ್ಲಿರುವುದು ಮಾಂಸವೋ ಕಬ್ಬಿಣವೋ?" ಎಲ್ಲಾ ವಿದ್ಯಾರ್ಥಿಗಳೂ ನಗತೊಡಗಿದರು. "ನೀನು ಶಿವಾಜಿಯ ನಾಡಿನಿಂದ ಬಂದವನೆಂದು ನಾವೆಲ್ಲ ಒಪ್ಪಿದೆವು" ಎಂದು ಘೋಷ್ ಹೆಡಗೆವಾರರನ್ನು ಆಲಂಗಿಸಿದ.

೧೭. ಸೇವಕಾರ್ಯ

ಸೇವಕಾರ್ಯ

    ನಮ್ಮ ದೇಶದ ಬಹು ದೊಡ್ಡ ನದಿಗಳೆಲ್ಲ ಹರಿಯುತ್ತಿರುವುದು ಬಂಗಾಲದಲ್ಲಿ. ಗಂಗಾ-ಬ್ರಹ್ಮಪುತ್ರಾ ಸಂಗಮ ಇರುವುದು ಇಲ್ಲಿಯೇ. ಹಲವು ಉಪನದಿಗಳೂ ಇವುಗಳನ್ನು ಸೇರುತ್ತವೆ. ಮಳೆಗಾಲದಲ್ಲಿ ಈ ನದಿಗಳು ಉಕ್ಕಿ ಹರಿದಾಗ ಬಂಗಾಳದ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ.

    ೧೯೧೩ರಲ್ಲಿ ಬಂಗಾಲದಲ್ಲಿ ಬಂದ ಪ್ರವಾಹ ಬಹು ಭಯಾನಕ. ಎಲ್ಲಿ ನೋಡಿದರಲ್ಲಿ ನೀರೇ ನೀರು. ಹಳ್ಳಿ ಹಳ್ಳಿಗಳೇ ಮುಳುಗಿದ್ದವು. ಬೆಳೆದು ನಿಂತು ಪೈರು ಪಚ್ಚೆಗಳೆಲ್ಲ ಕೊಚ್ಚಿ ಹೋಗಿದ್ದವು. ಸಾವಿರಾರು ದನಕರುಗಳು ನೀರುಪಾಲ. ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರು ಲಕ್ಷಾಂತರ. ಆಗ ಇದ್ದದು ಆಂಗ್ಲರ ಅಧಿಕಾರ. ಇಲ್ಲಿನವರ ಬವಣೆ ಕಷ್ಟಗಳ ಕುರಿತು ಅವರಿಗೆ ಚಿಂತೆಯೇ ಇರಲಿಲ್ಲ.

    ಕಲ್ಕತ್ತೆಯ ಬೀದಿಗಳೆಲ್ಲ ನಿರ್ಗತಿಕರಿಂದಲೇ ತುಂಬಿಹೋದವು. ಮನೆ ಮನೆ ಅಲೆಯುತ್ತಿದ್ದ ಅವರ ಹಸಿವಿನ ಕೂಗು ಕರುಣಾಜನಕ. ಈ ದೃಶ್ಯ ಹಲವು ತರುಣರ ಮನ ಕಲಕಿತು. ನಿರ್ಗತಿಕರ ಸೇವೆಗಾಗಿ ಅವರು ಎದ್ದು ನಿಂತರು. ಅಂತಹವರಲ್ಲಿ ಕೇಶವರಾಯರೇ ಮೊದಲಿಗರು. ತಮ್ಮ ಅಧ್ಯಯನ ನಿಲ್ಲಿಸಿ ಅವರು ಹೊರಬಮ್ದರು. ಊಟ, ನಿದ್ದೆ, ವಿಶ್ರಾಂತಿಗಳಿಲ್ಲದೇ ಅವರ ಶಕ್ತಿ ಸಮಯಗಳು ಸೇವೆಗೆ ಮುಡಿಪಾದವು. ಶ್ರೀ ರಾಮಕೃಷ್ಣಾಶ್ರಮದ ಮೂಲಕ ಅವರ ಸೇವೆ ಆರಂಭವಾಯಿತು.

    ಕೇಶವರಾಯರು ಬಂಗಾಳದ ನೂರಾರು ನೆರೆಪೀಡಿತ ಹಳ್ಳಿಗಳಲ್ಲಿ ಓಡಾಡಿದರು. ಕೆಲವೆಡೆ ಅಂತೂ ತುಂಬು ಪ್ರವಾಹದಲ್ಲಿ ಈಜಿ ಹೋಗುತ್ತಿದ್ದುದೂ ಉಂಟು. ಹಗಲಿರುಳೆನ್ನದೆ ಕೆಸರು ತುಂಬಿದ ದಾರಿಗಳಲ್ಲಿ ಓಡಾಟ. ಮುಳುಗುತ್ತಿದ್ದ ನೂರಾರು ಬಂಧುಗಳನ್ನು ಸಾವಿನ ದವಡೆಯಿಂದ ತಪ್ಪಿಸಿ ಎಳೆದು ತಂದರು. ದಿನವೆಲ್ಲ ಅಂತಹವರ ಸೇವೆಯಲ್ಲಿಯೇ ಕಳೆಯುತ್ತಿತ್ತು. ಒಂದೆರಡು ಘಂಟೆ ನಿದ್ದೆ. ತುತ್ತು ಕೂಳು. ಮತ್ತೆ ಓಡಾಟ.

    ಕಟ್ಟು ಮಸ್ತಾದ ಶರೀರ ಅವರದು. ದಣಿವರಿಯದೆ, ಸೋಲೊಪ್ಪದ ಅವರು ಸಾವು ಬದುಕಿನ ಹೋರಾಟದಲ್ಲಿದ್ದ ಸಾವಿರಾರು ಹಳ್ಳಿಗರ ಸೇವೆಗೈದರು. ಬಂಗಾಳಿ ಅವರಿಗೆ ತಾಯಿನುಡಿಯಷ್ಟು ಸಲೀಸು. ಹಾಗಾಗಿ ಅವರಿಗೆ ಎಲ್ಲರ ಹತ್ತಿರವೂ ಹೋಗಲು ಸಾಧ್ಯವಾಯಿತು. ಸೇವೆಯ ವೇಳೆ ಅವರ ಬಳಿ ಅಹಂಕಾರ ಎಂದೂ ಸುಳಿಯಲಿಲ್ಲ. ಅವರ ಪಾಲಿಗೆ ಅದೊಂದು ಪರೋಪಕಾರದ ಕೆಲಸವೂ ಎನಿಸಲಿಲ್ಲ. ಸೇವೆಯನ್ನು ತಮ್ಮ ಸಹಜ ಕರ್ತವ್ಯವೆಂದೇ ಬಗೆದವರು ಅವರು. "ಇವರೆಲ್ಲ ಬೇರೆಯವರೇನು? ನಮ್ಮ ಬಂಧು ಬಾಂಧವರೇ" ಎನ್ನುತ್ತಿದ್ದರು.

    ಕೇಶವರಾಯರೊಂದಿಗೆ ಕೆಲಸ ಮಾಡುವುದೇ ಜೊತೆಗಾರರಿಗೆಲ್ಲ ಒಂದು ಆನಂದ. ಅವರ ಏಕಾಗ್ರತೆ, ಕಾರ್ಯ ತತ್ಪರತೆ ನೋಡಿ ಮಿತ್ರರಲ್ಲಿ ಬೆರೆಗಾದರು. ತಮ್ಮ ನಾಯಕನ ಬಗ್ಗೆ ಅವರಿಗೆಲ್ಲ ತುಂಬ ಅಭಿಮಾನ. ಕೇಶವರಾಯರ ಮಾತು ಅವರಿಗೆಲ್ಲಾ ಮೀರಲಾಗದ ಆಣತಿ.

೧೬. ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಲೆ

ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಲೆ

    ಆಗ ಬಂಗಾಳದಲ್ಲೆಲ್ಲಾ ಕ್ರಾಂತಿಕಾರಿ ಸಂಸ್ಥೆಗಳು ಗುಪ್ತ ಚಟುವಟಿಗೆಯಲ್ಲಿ ತೊಡಗಿದ್ದವು. ತೇಜಸ್ವೀ ನವ ಯುವಕರು ಜಗನ್ಮಾತೆಯೆದುರು ಪ್ರತಿಜ್ಞೆ ತೆಗೆದುಕೊಳ್ಳುತ್ತಿದ್ದರು. "ನಾವು ನಮ್ಮ ಪ್ರಾಣವನ್ನೇ ಪಣವನ್ನಾಗಿರಿಸಿ ಈ ದೇಶವನ್ನು ಸ್ವತಂತ್ರಗೊಳಿಸುವೆವು. ರಹಸ್ಯ ಯೋಜನೆಗಳಿಂದ ಆಂಗ್ಲ ಅಧಿಕಾರಿಗಳನ್ನು ಮುಗಿಸುವೆವು. ನಮ್ಮ ಸಂಸ್ಥೆಯ ರಹಸ್ಯವನ್ನು ಕಾಪಾಡುವೆವು. ನಮ್ಮ ಸಂಸ್ಥೆಗೆ ವಿಶ್ವಾಸದ್ರೋಹ ಗೈದವರಿಗೆ ಪ್ರಾಣದಂಡನೆಯೇ ಶಿಕ್ಷೆ. ನಾವೆಂದೂ ವೈಯಕ್ತಿಕ ಸುಖ ಬಯಸೆವು. ಸರ್ವಸ್ವವನ್ನೂ ತಾಯಿ ಭಾರತಿಯ ಪಾದಕಮಲಗಳಲ್ಲಿ ಸಮರ್ಪಿಸುವೆವು."

    ಈ ಪ್ರತಿಜ್ಞೆ ಪೂರೈಸಲು ಅವರು ಬಾಂಬು ತಯಾರಿಸುವ ಶಿಕ್ಷಣ ಪಡೆಯುತ್ತಿದ್ದರು. ಕಗ್ಗಾಡಿನ ನಡುವೆ ಆಗಾಗ ಬಂದೂಕು ಗುರಿ ಅಭ್ಯಾಸ ಸಹ ಮಾಡುತ್ತಿದ್ದರು.

    ಕೇಶವರಾಯರೂ ಇಂಥ ಒಂದು ಗುಪ್ತ ಸಂಸ್ಥೆಯ ಅಧ್ಯಕ್ಷರು. ಒಮ್ಮೆ ಆ ಸಂಸ್ಥೆಯ ನಾಲ್ಕಾರು ಗೆಳೆಯರೊಂದಿಗೆ ಅವರು ಓರ್ವ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮನೆಗೆ ಹೋಗಿದ್ದರು. ನಡುರಾತ್ರಿಯ ನಂತರವೂ ಅಲ್ಲಿ ಅವರ ಅಧ್ಯಯನ ನಡೆಯುತ್ತಿತ್ತು. ಒಂದು ಪ್ರಯೋಗ ನಡೆದಿತ್ತು. ಅದನ್ನು ಪೂರೈಸಿ ಗೆಳೆಯರೆಲ್ಲ ಹೊರ ಹೊರಟರು. ಮನೆ ಬಾಗಿಲ ಬಳಿ ಓರ್ವ ಮಲಗಿದ್ದುದು ಅವರಿಗೆ ಕಾಣಿಸಿತು. ಅವನೊಬ್ಬ ಗುಪ್ತಚರ. ಇವರು ಬರುವ ಶಬ್ದ ಕೇಳಿ ಆತ ಗಾಬರಿಯಿಂದ ಮೇಲೆದ್ದು ಓಡತೊಡಗಿದ.

    ಕೇಶವರಾಯರ ಗೆಳೆಯರೂ ಅವನ ಹಿಂದೆ ಓಡಿದರು. ಹಿಡಿದು ಚೆನ್ನಾಗಿ ನಾಲ್ಕು ಬಡಿದರು. ಆತ ಬಡಬಡಿಸತೊಡಗಿದ - "ಅಣ್ಣಾ, ನಾನೊಬ್ಬ ಬಡ ನೌಕರ. ಹೊಟ್ಟೆಪಾಡಿಗಾಗಿ ಹೀಗೆಲ್ಲ ಮಾಡಬೇಕಾಗಿದೆ."

    ಆಗ ಕೇಶವರಾಯರು - "ಹೊಡೆಯಬೇಡಿ, ಬಿಟ್ಟು ಬಿಡಿ ಅವನನ್ನು. ನಮ್ಮ ಕುರಿತು ಯೋಚಿಸುವ ಗೆಳೆಯ ಅವನು. ಅವನಿರುವುದರಿಂದ ನಮ್ಮ ವಿಷಯವೆಲ್ಲಾ ಮೇಲಧಿಕಾರಿಗಳಿಗೆ ಆತ ತಿಳಿಸುವುದಿಲ್ಲ. ಆದ್ದರಿಂದ ಅವನನ್ನು ನಮ್ಮವನನ್ನಾಗಿ ಮಾಡಿಕೊಳ್ಳುವುದೇ ಲಾಭದಾಯಕ" ಎಂದರು.

    ಆ ಗುಪ್ತಚರನನ್ನು ಮಿಠಾಯಿ ಅಂಗಡಿಗೆ ಕರೆತಂದರು. ಎಲ್ಲರೂ ಕೂಡಿ ಮಿಠಾಯಿ ತಿಂದರು. ಹಣ ಆತನೇ ಕೊಟ್ಟ. ನಂತರವೇ ಎಲ್ಲರೂ ಹಾಸ್ಯ ವಿನೋದ ಮಾಡುತ್ತಾ ತಂತಮ್ಮ ಮನೆಗಳಿಗೆ ಹೊರಟರು. ಆತ ಕೇಶವರಾಯರ ಕಾಲು ಹಿಡಿದು "ನೀವಿಂದು ನನ್ನನ್ನಿ ಬದುಕಿಸಿದಿರಿ. ನನ್ನನ್ನು ನಿಮ್ಮ ದಾಸನೆಂದೇ ತಿಳಿಯಿರಿ" ಎಂದ.

    ಆ ದಿನಗಳಲ್ಲಿ ಕೇಶವರಾಯರ ಚಟುವಟಿಕೆ ತಿಳಿಯಲು ಅನೇಕ ಗುಪ್ತಚರರು ಅವರ ಬೆನ್ನು ಹತ್ತಿದ್ದರು. ಆದರೆ ಕೇಶವರಾಯರು ಹೇಗೋ ಅವರ ಗುರುತು ಹಿಡಿಯುತ್ತಿದ್ದರು. ಅವರು ಯಾರನ್ನೂ ತಿರಸ್ಕರಿಸುತ್ತಿರಲಿಲ್ಲ. ಬದಲಾಗಿ ತಮ್ಮ ಚತುರತೆಯಿಂದ ಅವರನ್ನೂ ತಮ್ಮವರನ್ನಾಗಿಸಿಕೊಳ್ಳುತ್ತಿದ್ದರು. ವ್ಯಕ್ತಿಗಳ ಪರೀಕ್ಷೆಯಲ್ಲಿ ಕೇಶವರಾಯರು ಎತ್ತಿದಕೈ.

೧೫. ನಿರ್ಭಯತೆ

ನಿರ್ಭಯತೆ

   ಒಮ್ಮೆ ಬೇಸಿಗೆ ರಜೆಯಲ್ಲಿ ಕೇಶವರಾಯರು ನಾಗಪುರಕ್ಕೆ ಬಂದರು. ಅಲ್ಲಿಂದ ಯವತಮಾಳಕ್ಕೂ ಹೋದರು. ಆ ದಿನಗಳಲ್ಲಿ ಆಂಗ್ಲ ಕಲೆಕ್ಟರ್‌ನೊಬ್ಬ ಅಲ್ಲಿರುತ್ತಿದ್ದ. ತಾನು ಹೊರಗೆ ಓಡಾಡುವಾಗಲೆಲ್ಲ ಜನರು ದಾರಿ ಬಿಟ್ಟು ಕೈ ಮುಗಿದು ನಿಲ್ಲಬೇಕೆಂದು ಆತ ಬಯಸುತ್ತಿದ್ದ.

    ಒಂದು ಸಂಜೆ. ಕೇಶವರಾಯರು ತಮ್ಮ ಗೆಳೆಯರೊಡನೆ ತಿರುಗಾಡಲು ಹೊರಟಿದ್ದರು. ಕಲೆಕ್ಟರ್ ಸಾಹೇಬ ಅವರೆದುರು ಬರುತ್ತಿದ್ದ. ಆತ ಹತ್ತಿರ ಬರುತ್ತಿದ್ದಂತೆಯೇ ಯವತಮಾಳದ ಅವರ ಮಿತ್ರ ಹೇಳಿದ - "ಇವನಿಗೆ ನಮಸ್ಕರಿಸು, ಇದು ಇಲ್ಲಿನ ಪದ್ಧತಿ."

    ಕೇಶವರಾಯರು ಕೇಳಿದರು - "ಇದೆಂಥ ಪದ್ಧತಿ ? ಒತ್ತಾಯದಿಂದ ನಮಸ್ಕಾರ ಮಾಡಿಸುವುದೇ?"

    ಅವರು ನಮಸ್ಕಾರ ಮಾಡದೇ ಮುಂದುವರೆದರು. ಕಲೆಕ್ಟರನ ಜೊತೆಗಿದ್ದ ಇತರ ಅಧಿಕಾರಿಗಳು ಕೇಶವರಾಯರನ್ನು ಹತ್ತಿರ ಕರೆಸಿದರು. "ನಮಸ್ಕಾರ ಮಾಡು. ದೊಡ್ಡವರಿಗೆ ನಮಸ್ಕಾರ ಮಾಡಲೇಬೇಕು. ಅದರಲ್ಲಿ ನಷ್ಟವೇನು?" ಎಂದರು.

    ಆಗ ಕೇಶವರಾಯರು ಗಡಸು ಧ್ವನಿಯಲ್ಲಿ ಹೇಳಿದರು " "ನೋಡಿ, ನಮಸ್ಕರಿಸುವುದು ಪರಿಚಯಸ್ಥರಿಗೆ. ನನಗೆ ಈತನ ಪರಿಚಯವಿಲ್ಲ. ಈತ ನಮ್ಮ ದೇಶ ಧರ್ಮದವನೂ ಅಲ್ಲ. ವ್ಯಕ್ತಿತ್ವವೂ ಒಳ್ಳೆಯದಿಲ್ಲದಿರುವಾಗ ಗೌರವಿಸುವುದಾದರೂ ಎಂತು? ಒಂದು ವಿಷಯ ನಿಮಗೆ ತಿಳಿದಿರಲಿ - ನಮಸ್ಕರಿಸುವುದು ಗೌರವವಿರುವಲ್ಲಿ ಮಾತ್ರ. ಅದರ ಭಿಕ್ಷೆ ಬೇಡುವುದು ಸಲ್ಲದು. ಆದರ ಎನ್ನುವುದು ಒತ್ತಾಯ, ಬೆದರಿಕೆಯಿಂದ ಹುಟ್ಟದು. ತನ್ನಿಂತಾನೇ ಅದು ಹುಟ್ಟಬೇಕು. ಸ್ವಂತ ಕರ್ತೃತ್ವದಿಂದ ಅದು ಸಾಧ್ಯ. ಅಪಾತ್ರರಿಗೆ ಆದರ್ರ ತೋರಿಸುವುದೂ ಪಾಪ."

    ಅವರಿಗೆ ಉಪದೇಶಿಸಬಂದವರೆಲ್ಲ ತಣ್ಣಗಾದರು. ಕಲೆಕ್ಟರ್ ಸಾಹೇಬರಿಗೂ ಸಾಕೆನಿಸಿತು. "......ಈತ ಬೇರೆ ಊರಿನವನೆಂದು ತೋರುತ್ತದೆ. ಅವನನ್ನು ಬಿಟ್ಟುಬಿಡಿ" ಎಂದರು.

    ಆ ವಿಷಯ ಅಲ್ಲಿಗೇ ಮುಕ್ತಾಯವಾಯಿತು. ಇಂಗ್ಲೀಷ್ ಅಧಿಕಾರಿಗಳೆದುರು ನಿಲ್ಲಲೂ ಸಹ ಭಾರತೀಯರು ಹೆದರುತ್ತಿದ್ದ ದಿನಗಳು ಅವು. ಕೇಶವರಾಯರ ನಿರ್ಭಯತೆ ಯವತಮಾಳದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿತು.

೧೪. ಊಟದ ವ್ಯವಸ್ಥೆ

ಊಟದ ವ್ಯವಸ್ಥೆ

    ಕಲ್ಕತ್ತೆಯ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಕೇಶವರಾವ್ ಪ್ಫ಼ವೇಶ ಪಡೆದರು. ವಿದರ್ಭ ಪ್ರಾಂತದ ಹಲವು ತರುಣರು ಅಲ್ಲಿಯೇ ಓದುತ್ತಿದ್ದರು. ಅವರೆಲ್ಲ ಶ್ರೀಮಂತರು. ಕೆಲವರು ಸೇರಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಕೇಶವರಾಯರ ಮೃದು ಮಧುರ ಸ್ವಭಾವ ಅವರೆನ್ನೆಲ್ಲ ಆಕರ್ಷಿಸಿತು. ಪುಕ್ಕಟೆ ವಸತಿ ವ್ಯವಸ್ಥೆ ಅವರಿಗಾಯಿತು.

    ಊಟಕ್ಕಾಗಿ ಭೋಜನಾಲಯಕ್ಕೆ ಹೋಗಬೇಕಾಗಿತ್ತು. ಎರಡು ಮೂರು ತಿಂಗಳಂತೂ ಹೇಗಾದರೂ ಹಣ ಕೊಡಬಹುದು. ಮುಂದೇನು ಎನ್ನುವುದು ಕೇಶವರಾಯರಿಗಿದ್ದ ಸವಾಲು. ಅವರಿಗೊಂದು ಯೋಚನೆ ಹೊಳೆಯಿತು. ನಿತ್ಯದ ಊಟಕ್ಕಿಂತ ೨-೩ ಪಟ್ಟು ಹೆಚ್ಚು ಉಣ್ಣತೊಡಗಿದರು. ಹೋಟೆಲ್ ಮಾಲಿಕ ಉತ್ತರಪ್ರದೇಶದವ. ಕೇಶವರಾಯರ ಕಟ್ಟುಮಸ್ತಾದ ಶರೀರ, ಧೀರ ನಿಲುವಿನ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದ. ಬಹು ಪ್ರೀತಿಯಿಂದ ಒತ್ತಾಯ ಮಾಡಿ ಬಡಿಸುತ್ತಿದ್ದ. ಕೆಲವು ದಿನ ಕಳೆದವು. ಕೇಶವರಾಯರೇ ಅವನನ್ನು ಕೇಳಿದರು. "ಇಲ್ಲಿ ಊಟಕ್ಕೆ ಬಂದು ಹೋಗಲು ಬಹು ಸಮಯವೇ ಬೇಕು. ಓದಲು ತೊಂದರೆ, ನಮ್ಮ ಮನೆಗೆ ನೀವೇ ಊಟ ಕಳುಹಿಸಿದರೆ ಓಳಿತು."

    ಹೋಟೆಲ್ ಮಾಲಿಕ ಹೇಳಿದ "ಏಕಿಲ್ಲ? ಅವಶ್ಯವಾಗಿ ಕಳಿಸುವೆ. ನಾನೇ ಈ ಸಲಹೆ ಕೊಡಬೇಕೆಂದಿದ್ದೆ. ನೀವು ಊಟ ಮಾಡುವಾಗ ಸುತ್ತಲಿರುವವರು ನಿಮ್ಮನ್ನೇ ನೋಡುತ್ತಿರುತ್ತಾರೆ. ಅವರ ದೃಷ್ಟಿ ಎಲ್ಲಿ ನಿಮಗೆ ತಗಲುವುದೋ ಎಂದು ನನಗೆ ಹೆದರಿಕೆ. ನಿತ್ಯದ ಹಣಕ್ಕೆ ನಿಮಗೆ ನೀವು ಉಣ್ಣುವಷ್ಟು ಊಟ ಕಳಿಸುವೆ. ನೀವು ವ್ಯಾಯಾಮ ಮಾಡುತ್ತೀರಿ. ನಿಮ್ಮಂತಹ ಬಲೋಪಾಸಕ ಯುವಕರು ನನಗೆ ಬಹು ಪ್ರಿಯ. ನಾನೂ ತರುಣನಾಗಿದ್ದಾಗ ವ್ಯಾಯಾಮ ಮಾಡುತ್ತಿದ್ದೆ."

    ಮುಂದೆ ಕೇಶವರಾಯರಿರುವ ಮನೆಗೇ ಊಟದ ಡಬ್ಬಿ ಬರತೊಡಗಿತು. ಅವರು ತಮ್ಮೊಬ್ಬ ಗೆಳೆಯನೊಡನೆ ಅಲ್ಲಿಯೇ ಊಟ ಮಾಡಲಾರಂಭಿಸಿದರು. ಆತ ಊಟದ ಹಣ ತಾನೇ ಕೊಡುತ್ತಿದ್ದ. ಕಲ್ಕತ್ತೆಯಲ್ಲಿ ಅವರಿರುವ ತನಕವೂ ಇದೇ ವ್ಯವಸ್ಥೆ ಮುಂದುವರೆಯಿತು.

೧೩. ವಂಗಭೂಮಿ

ವಂಗಭೂಮಿ

    ಬಂಗಾಲ ಬಹು ಪವಿತ್ರ ಭೂಮಿ. ಚೈತನ್ಯ ಮಹಾಪ್ರಭುಗಳ ನಾಡು. ಗಂಗೆಯ ಪವಿತ್ರ ಜಲದಿಂದ ಅಲ್ಲಿನ ಕಣ ಕಣ ಪುನೀತವಾಗಿದೆ. "ಹರಿನಾಮ"ದ ಗುಂಜಾರವ ಅಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿರುತ್ತದೆ. ಅಲ್ಲಿನ ಪ್ರತಿ ಮಗುವೂ ಕಾಳಿಯ ಆಶೀರ್ವಾದ ಪಡೆದಿದೆ. ಭಗವಾನ್ ರಾಮಕೃಷ್ನರು ಈಶ್ವರ ಭಕ್ತಿಯ ಅಡಿಗಲ್ಲನಿಟ್ಟುದು ಇಲ್ಲಿಯೇ. ಸ್ವಾಮಿ ವಿವೇಕಾನಂದರು ಅದರ ಮೇಲೇ ವಿಶ್ವವಿಜಯಿ ಹಿಂದು ಧರ್ಮದ ಮಂದಿರ ನಿರ್ಮಿಸಿದರು. ಅದ್ಭುತ ಮಂತ್ರಶಕ್ತಿಯ "ವಂದೇ ಮಾತರಂ" ಕರ್ತೃ ಬಂಕಿಮಬಾಬು ಇದೇ ಮಣ್ಣಿನಲ್ಲಿ ಜನ್ಮತಾಳಿದರು. ಅಪ್ರತಿಮ ನಾಟಕಕಾರ ದ್ವಿಜೇಂದ್ರಲಾಲರಾಯ್, ಈಶ್ವರಚಂದ್ರ ವಿದ್ಯಾಸಾಗರ, ರಾಜಾರಾಮ ಮೋಹನರಾಯ್, ವಿಪಿನ್‍ಚಂದ್ರಪಾಲ, ಸುರೇಂದ್ರನಾಥ ಬ್ಯಾನರ್ಜಿ, ಕೇಶವಚಂದ್ರಸೇನ, ಅರವಿಂದಘೋಷ್, ರವೀಂದ್ರನಾಥ್ ಠಾಕೂರ್‌ರಂತಹ ವಿದ್ವಾಂಸರು, ಸೇವಾವ್ರತಿಗಳಿಗೆ ಇದೇ ಮಣ್ಣು ಪ್ರೇರಣೆ ನೀಡಿದೆ.

    ಕೇಶವರಾವ್ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಬಂಗಾಲಕ್ಕೆ ಹೋಗುವಾಗ ಈ ಗೌರವಭಾವನೆಗಳ ಸಹಿತವೇ ಹೋದರು. ಕೇವಲ ಮಾನವ ದೇಹದ ರೋಗ ವಾಸಿ ಮಾಡುವ ವಿಚಾರ ಅವರದಾಗಿರಲಿಲ್ಲ. ಬದಲಾಗಿ ಅವರ ಮನದಲ್ಲಿದ್ದ ಭಾವನೆಗಳೇ ಬೇರೆ. ಈ ನಾಡಿನ ಪ್ರಾಚೀನ ಅರಸರು ತಮ್ಮ ಅಧಿಕಾರ ಕಳೆದುಕೊಂಡುದೇಕೆ? ಅವರೇಕೆ ದುರ್ಬಲರಾಗಿದ್ದರು? ಅದೆಷ್ಟೋ ದುರ್ಗುಣಗಳೂ ಮನೆ ಮಾಡಿವೆಯಲ್ಲಾ ಇಲ್ಲಿ - ಇವನ್ನೆಲ್ಲಾ ದೂರಗೊಳಿಸುವುದೆಂತು? ಪುನಃ ಹಿಂದುಗಳಲ್ಲಿ ಸದ್ಗುಣ ಜಾಗೃತಿ ಮಾಡುವುದೆಂತು? ಇದಕ್ಕೇನು ಉಪಾಯ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಂಗಾಲದಲ್ಲಿ ದೊರೆತೇ ದೊರೆಯುತ್ತದೆ ಎಂಬುದು ಕೇಶವರಾಯರಿಗಿದ್ದ ನಂಬಿಕೆ. ಸುಜಲಾಂ, ಸುಫಲಾಂ ಆದ ನಿಸರ್ಗ ರಮಣೀಯ ಬಂಗಾಲದತ್ತ ಅವರು ಇದಕ್ಕಾಗಿಯೇ ಹೋದರು ಎಂದರೂ ತಪ್ಪಾಗದು.

    ಕಲ್ಕತ್ತೆಯ ಮೂಲೆ ಮೂಲೆ ಸುತ್ತಿದರು. ಬಂಗಾಲದ ತೀರ್ಥಕ್ಷೇತ್ರಗಳನ್ನೆಲ್ಲ ಯಾತ್ರೆ ಮಾಡಿದರು. ಅನೇಕ ಮಹಾಪುರುಷರ ದರ್ಶನ ಮಾಡಿದರು. ಬಾಂಬು ತಯಾರಿಸುವ ಕ್ರಾಂತಿಕಾರಿಗಳ ಬಳಿಯೂ ಹೋದರು. ಆತ್ಮಶಾಂತಿಯ ಬೋಧನೆ ಮಾಡುವ ಸಾಧುಸಂತರ ಸಾಮೀಪ್ಯಕ್ಕೂ ಹೋದರು. ಹಲವಾರು ಪತ್ರಿಕೆಗಗಳ ಸಂಪಾದಕರೊಡನೆ ಆತ್ಮೀಯ ಸಂಬಂಧ ಹೊಂದಿದ್ದರು. ಅಲ್ಲಿನ ಅನೇಕ ಸಾಮಾಜಿಕ ಮುಖಂಡರೊಡನೆ ಅವರ ನಿತ್ಯ ಚರ್ಚೆ ನಡೆಯುತ್ತಿತ್ತು. ಬೇರೆ ಬೇರೆ ರೀತಿಯ ಸಭೆಗಳಲ್ಲಿ ಪಾಲ್ಗೊಂಡು ಭಾಷಣ ಕೇಳುತ್ತಿದ್ದರು. ಸಣ್ಣ ದೊಡ್ಡ ನೂರಾರು ಮೆರವಣಿಗೆಗಳಲ್ಲಿ ಅಂತೂ ಅವರದೇ ಪ್ರಮುಖ ಪಾತ್ರ. ಬಹು ಬೇಗ ಕೇಶವರಾಯರು ವಂಗಭೂಮಿಯಲ್ಲಿ ಒಂದಾಗಿ ಹೋದರು. ಬಂಗಾಲ ಭಾವನೆಗಳನ್ನು ಗೌರವಿಸಿ ಸಮರಸರಾದರು. ಅವರು ಬಂಗಾಳ ಭಾಷೆಯನ್ನು ಪ್ರೀತಿಸಿ ಅದರಲ್ಲೂ ಸಹಜವಾಗಿ ಮಾತನಾಡುವ, ಬರೆಯುವ ಕಲೆಯನ್ನೂ ರೂಢಿಸಿಕೊಂಡರು.

Sunday, March 25, 2012

೧೧. ಯವತಮಾಳದ ಶಾಲೆಯಲ್ಲಿ

ಯವತಮಾಳದ ಶಾಲೆಯಲ್ಲಿ

    ವಿದರ್ಭ ಪ್ರಾಂತದ ಯವತಮಾಳ ಆ ದಿನಗಳಲ್ಲಿ ಕ್ರಾಂತಿಕಾರಿಗಳ ಕೇಂದ್ರ. ಲೋಕನಾಯಕ ಆಣೆ (ಬಾಪೂಜಿ ಆಣೆ) ಅಲ್ಲಿಯೇ ಇದ್ದರು. ಕೇಶವ ನೇರ ಅವರ ಬಳಿ ಬಂದ. ಅವರ ಮನೆಯಲ್ಲಿಯೇ ವಾಸ. ಅಲ್ಲಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಆರಂಭವಾಯಿತು.

    ಬಾಬಾಸಾಹೇಬ ಪರಾಂಜಪೆ ಯವತಮಾಳ ರಾಷ್ಟ್ರೀಯ ವಿದ್ಯಾಲಯದ ಸಂಚಾಲಕರು. ಅವರ ತ್ಯಾಗಮಯ ಜೀವನ ಕಂಡ ಜನರು ಅವರನ್ನು ತಪಸ್ವಿಗಳೆನ್ನುತ್ತಿದ್ದರು. ಅವರು ಹಳ್ಳಿ ಹಳ್ಳಿ, ಮನೆ ಮನೆ ತಿರುಗಿ ಚಂದಾ ಕೂಡಿಸಿ ಕಟ್ಟಿಸಿದ ಶಾಲೆ ಅದು. ಅನೇಕ ರೈತರು ಸುಗ್ಗಿಯಲ್ಲಿ ಧಾನ್ಯ ಕೊಡುತ್ತಿದ್ದರು. ರಾಷ್ಟ್ರಸೇವೆಯ ಹಂಬಲ ಹೊತ್ತ ಕೆಲ ಯುವಕರು-ವಿದ್ಯಾವಂತರು - ಅವರೊಡನೆ ಸೇರಿದರು. ಉಚಿತ ಪಾಠ ಪ್ರವಚನ ಆರಂಭಿಸಿದರು. ವಿದ್ಯಾರ್ಥಿಗಳಿಗೆ ಮಾನವತೆಯ ಪಾಠ ಸಿಗತೊಡಗಿತು. ಶೀಲ ತುಂಬಿ ಮಾನವ ಜೀವನವನ್ನು ಸಾರ್ಥಕಗೊಳಿಸುವ ಧರ್ಮವನ್ನು ಅಲ್ಲಿ ಕಲಿಸತೊಡಗಿದರು. ’ವಿದ್ಯಾಗೃಹ’ ಅದರ ಹೆಸರಾಯಿತು. ಕೇಶವ ಅಲ್ಲಿ ಸೇರಿದ.

    ಹನ್ನೊಂದರಿಂದ ಐದರವರೆಗೆ ಶಾಲೆ. ಬಾಪೂಜಿ ಆಣೆಯವರ ಮನೆಯ ಮಧ್ಯಾಹ್ನದ ಊಟ ತಡವಾಗುತ್ತಿತ್ತು. ಹೀಗಾಗಿ ಎಷ್ಟೋ ದಿನ ಕೇಶವ ಮಧ್ಯಾಹ್ನದ ಊಟವಿಲ್ಲದೇ ಶಾಲೆಗೆ ಹೋಗಬೇಕಾಗುತ್ತಿತ್ತು. ಆದರೆ ಆತ ಸದಾ ಹಸನ್ಮುಖಿ. ಅಧ್ಯಯನಕ್ಕೆ ಹಸಿವು ಎಂದೂ ಅಡ್ಡಿ ಬರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅಭ್ಯಾಸ ತಪ್ಪಿತ್ತು. ಅದಕ್ಕಾಗಿ ಹೆಚ್ಚು ಓದಬೇಕಿತ್ತು. ರಾತ್ರಿ ಬಹು ಹೊತ್ತು ಓದುತ್ತಿದ್ದ. ಆದರೂ ಬೆಳಿಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದ. ರಾಷ್ಟ್ರೀಯ ವಿಚಾರವುಳ್ಳ ಪತ್ರಿಕೆಗಳನ್ನು ತಪ್ಪದೆ ನಿತ್ಯ ಓದುತ್ತಿದ್ದ.

    ಬಾಬಾಸಾಹೇಬ ಪರಾಂಜಪೆ ಅವರ ವ್ಯಕ್ತಿತ್ವ ತುಂಬ ಉನ್ನತ. ಅವರ ಸಹವಾಸದಿಂದ ಕೇಶವನ ಹೃದಯದಲ್ಲಿ ಸದ್ಗುಣಗಳ ಸುಂದರ ಹೂವುಗಳು ಅರಳಿ ಘಮಘಮಿಸತೊಡಗಿದವು. ಅಧ್ಯಾಪಕರು ಮನಸ್ಸಿಟ್ಟು ಕಲಿಸುತ್ತಿದ್ದರು. ವಿದ್ಯಾರ್ಥಿಗಳೂ ಗಮನವಿಟ್ಟು ಕಲಿಯುತ್ತಿದ್ದರು. ಆ ವಿದ್ಯಾಲಯದ ಕೀರ್ತಿ ಎಲ್ಲೆಡೆ ಹರಡಿತು. ಹಳ್ಳಿ ಹಳ್ಳಿಗಳಿಂದ ಜನ ಅದಕ್ಕೆ ಸಹಾಯ ನೀಡಲು ಮುಂದಾದರು. ಧನ, ಧಾನ್ಯ ಇತ್ಯಾದಿ ಎಲ್ಲ ರೀತಿಯ ನೆರವು ಹರಿದುಬರತೊಡಗಿತು. ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಲಾರಂಭಿಸಿತು. ಆ ಶಾಲೆ ರಾಷ್ಟ್ರೀಯ ಜಾಗರಣದ ಕೇಂದ್ರವಾಯಿತು. ಅನೇಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಬಿಡಿಸಿ ರಾಷ್ಟ್ರೀಯ ವಿದ್ಯಾಲಯಕ್ಕೆ ಸೇರಿಸತೊಡಗಿದರು.

    ಈ ವಿದ್ಯಾಲಯದ ಪ್ರಗತಿ ಆಂಗ್ಲ ಅಧಿಕಾರಿಗಳ ಕಣ್ಣು ಕುಕ್ಕಿತು. ಅವರ ದಮನಚಕ್ರ ಅದರತ್ತ ತಿರುಗಿತು. ಆ ಶಾಲೆಯ ಮಕ್ಕಳ ತಂದೆ ತಾಯಿಗಳನ್ನು ವಿನಾಕಾರಣ ಸತಾಯಿಸತೊಡಗಿದರು. ಬಾಬಾಸಾಹೇಬ ಪರಾಂಜಪೆಯವರಿಗೆ ಎಲ್ಲ ರೀತಿಯ ದಿಗ್ಬಂಧನ ಹಾಕಲಾಯಿತು. ಅವರು ಭಾಷಣ ಮಾಡುವುದು ಅಪರಾಧವೆನಿಸಿತು. ಬೇರೆ ಅಧ್ಯಾಪಕರನ್ನೂ ಹೆದರಿಸತೊಡಗಿದರು. ತಪಸ್ವಿ ಪರಾಂಜಪೆ ಮತ್ತು ಅವರ ಸಹಕಾರಿಗಳು ಅನೇಕ ದಿನಗಳವರೆಗೆ ಈ ರೀತಿಯ ಕಷ್ಟ ಪರಂಪರೆಗಳನ್ನು ಸಹಿಸಿದರು. ಕೊನೆಗೆ ೧೯೦೯ರಲ್ಲಿ ಆ ಶಾಲೆಯೇ ಮುಚ್ಚಲ್ಪಟ್ಟಿತು. ಆಗ ಕೇಶವ ಅನಿವಾರ್ಯವಾಗಿ ಯವತಮಾಳ ಬಿಡಬೇಕಾಯಿತು. ಆದರೆ ಆತ ಧೈರ್ಯಗೆಡಲಿಲ್ಲ. ನೇರವಾಗಿ ಪುಣೆ ತಲುಪಿದ. ಅಲ್ಲಿ ತನ್ನ ಶಿಕ್ಷಣ ಪೂರೈಸುವ ನಿಶ್ಚಯ ಮಾಡಿದ. ಎರಡು ತಿಂಗಳು ಶಂಕರಮಠ ಅವನ ತಾಣವಾಯಿತು. ಹಗಲುರಾತ್ರಿ ಎಡಬಿಡದೆ ಓದಿದ. ಪರೀಕ್ಷೆಗಾಗಿ ಅಮರಾವತಿಗೆ ಹೋದ. ಆ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಆತ ಪಾಸಾದ.

೧೦. ದಿಗಿಲೋ ದಿಗಿಲು

ದಿಗಿಲೋ ದಿಗಿಲು

    ಅಂದು ರಾಮಪಾಯಲಿಯಲ್ಲಿ ಭಾರೀ ದೊಡ್ಡ ಗಲಾಟೆ. ರಾತ್ರಿ ಒಂಭತ್ತು ಹೊಡೆದಿರಬಹುದು. ಸ್ಟೇಷನ್‍ನಲ್ಲಿ ಪೊಲೀಸರು ಯಾವುದೋ ಹರಟೆ ಕೊಚ್ಚುತ್ತಿದ್ದರು. ಇದ್ದಕ್ಕಿದ್ದಂತೆ ದೊಡ್ಡದೊಂದು ಶಬ್ದ. ಎಲ್ಲ ಬೆಚ್ಚಿದರು.

    ಪೊಲೀಸರಿಗೆ ದಿಗಿಲು. ಏನು, ಏಕೆ, ಹೇಗೆ, ಯಾವುದೂ ತಿಳಿಯದು. ಠಾಣೆಯ ಹೊರಬಾಗಿಲಿನಲ್ಲಿ ಒಂದು ರಂಧ್ರ ಬಿದ್ದಿತ್ತು. ಹತ್ತಿರದಲ್ಲೇ ಕೆಳಗೆ ಕರಟ. ತಾಮ್ರ, ಉಕ್ಕಿನ ಚೂರುಗಳು, ಸುಟ್ಟ ವಾಸನೆ ಬಡಿಯುತ್ತಿತ್ತು. ಅಕ್ಕಪಕ್ಕದ ಮನೆಮಂದಿಯೆಲ್ಲ ಭಯಭೀತರಾಗಿ ಹಣಕತೊಡಗಿದರು. ಪೊಲೀಸು ಅಧಿಕಾರಿಗಳು ಬಂದರು. ಬಿರುಸಿನ ಓಡಾಟ ಆರಂಭವಾಯಿತು.

    ಈ ಸುದ್ದಿ ಬಹು ಬೇಗನೆ ಹರಡಿತು. ಎಲ್ಲೆಡೆ ಬಹಿರಂಗ ಚರ್ಚೆ. ಗುಸುಗುಸು.

    "ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಏನು ಶಬ್ದ? ಯಾರಾದರೂ ಶಿಕಾರಿಗೆ ಬಂದಿದ್ದರೇನೆ?" ಒಬ್ಬನ ಪ್ರಶ್ನೆ.

    ನಿಂಗೊತ್ತಿಲ್ವಾ? ನಿನ್ನೆ ರಾತ್ರಿ ಯಾರೋ ಠಾಣೆಯ ಮೇಲೆ ಬಾಂಬೆಸೆದರು. ಎಷ್ಟು ಹುಡುಕಿದರೂ ಯಾರೆಂದು ತಿಳಿದಿಲ್ಲ" ಇನ್ನೊಬ್ಬನ ಉತ್ತರ.

    ’ರಾಮಪಾಯಲಿಗೆ ಯಾರಾದರೂ ಕ್ರಾಂತಿಕಾರಿ ಬಂದಿರಬಹುದೇ?’

    ’ನಿಧಾನ ಮಾತನಾಡಪ್ಪಾ, ಯಾರಾದರೂ ಕೇಳಿದರೆ ಸುಮ್ಮನೇ ಕಷ್ಟಕ್ಕೆ ಸಿಲುಕುವೆ.’

    ಎಲ್ಲರಿಗೂ ಭಯ. ಜನರಲ್ಲಿ ಪರಸ್ಪರ ಭೇಟಿ, ಮಾತುಕತೆ ಎಲ್ಲ ನಿಂತು ಹೋಯಿತು. ಕೆಲವರನ್ನು ಪೊಲೀಸರು ಹಿಡಿದರು, ಹೊಡೆದರು, ಬಡಿದರು. ಆದರೆ ಗುಟ್ಟು ಮಾತ್ರ ಬಯಲಾಗಲಿಲ್ಲ.

    ಯಾರೂ ಹೇಳದೇ ಇದ್ದರೂ ಆಬಾಜಿ ಹೆಡಗೆವಾರರಿಗೆ ಇದು ಕೇಶವನದೇ ಕೆಲಸ ಎಂದು ಖಾತ್ರಿಯಾಯಿತು. ಪೊಲೀಸರಿಗೆ ಅನುಮಾನ ಮೂಡುವುದರೊಳಗೇ ಅವನನ್ನು ನಾಗಪುರಕ್ಕೆ ವಾಪಸ್ ಕಳಿಸಿದರು. ಕೇಶವ ಸ್ವಲ್ಪ ದಿನಗಳಲ್ಲಿಯೇ ನಾಗಪುರವನ್ನೂ ಬಿಟ್ಟ. ಡಾ|| ಮೂಂಜೆಯವರ ಪರಿಚಯಪತ್ರದೊಡನೆ ಯವತಮಾಳ ಸೇರಿದ.

೯. ಅಂಧ ಕಾನೂನನ್ನು ಕಿತ್ತೆಸೆಯಿರಿ

ಅಂಧ ಕಾನೂನನ್ನು ಕಿತ್ತೆಸೆಯಿರಿ

    ಈ ಘಟನೆಯ ನಂತರ ಕೇಶವ ಕೆಲವು ದಿನ ನಾಗಪುರದಲ್ಲಿಯೇ ಇದ್ದ. ಅಕ್ಕಪಕ್ಕದವರು, ನೆಂಟರಿಷ್ಟರು ಪುನಃ ಶಾಲೆಗೆ ಹೋಗುವಂತೆ ಉಪದೇಶಿಸ ತೊಡಗಿದರು. "ಅದರಲ್ಲೇನು ಮಹಾ. ಕ್ಷಮೆ ಕೇಳು, ಶಾಲೆಗೆ ಹೋಗು" ಓರ್ವನೆಂದ.

    "ಏಕೆ? ನಾನೇನು ತಪ್ಪು ಮಾಡಿದೆನೆಂದು ಕ್ಷಮೆ ಕೇಳಲಿ?" ಕೇಶವನೆಂದ.

    "ವಂದೇ ಮಾತರಂ ಹೇಳಲಿಲ್ಲವೇ? ಬೇರೆಯವರಿಗೆ ಹೇಳಲು ಕಲಿಸಲಿಲ್ಲವೇ? ಅದು ಅಪರಾಧವಲ್ಲವೇ?"

    "ನಮ್ಮ ತಾಯಿಗೆ ವಂದಿಸುವುದೂ ಅಪರಾಧವೇ?" ಕೇಶವನ ಪ್ರಶ್ನೆ ಈಗ ಒಂದು ಕೆಂಡಮಂಡಲದಂತೆ.

    "ಹೌದು, ಕಾನೂನಿನಂತೆ ಅದು ಅಪರಾಧ’. ಕೇಶವ ಧೃಡಸ್ವರದಲ್ಲಿ ಮಾರುತ್ತರ ಕೊಟ್ಟಾ "ನಾನು ಅಂಥ ಕಾನೂನನ್ನು ಒಪ್ಪುವುದಿಲ್ಲ. ಅಂಥ ಅನ್ಯಾಯದ ಕಾನೂನುಗಳನು ಕಿತ್ತೆಸೆಯಬೇಕು ನಾವು."

    ಕೇಶವನ ತೇಜಸ್ವಿ ಶಬ್ದಗಳನ್ನು ಕೇಳಿದ ಅವರೆಲ್ಲರಿಗೆ ದಂಗುಬಡಿದಂತಾಯಿತು.

    "ಅಯ್ಯಾ, ಇಂಥ ಹುಡುಗರೊಡನೆ ಮಾತನಾಡದಿರುವುದೇ ವಾಸಿ. ನಿಮಗೂ ಬಾಯಿಗೆ ಬಂದಂತೆ ಮಾತನಾಡುವವರು ಇವರು’ ಅವರಲ್ಲಿ ಒಬ್ಬನೆಂದ.

    "ಅಯ್ಯೋ, ಈಗಿ ಹುಡುಗರು ಎಲ್ಲಿಂದಲೋ ಏನೋ ಕಲಿತು ಬಾಯಿಗೆ ಬಂದಂತೆ ಮಾತನಾಡುವರು" ಮತ್ತೊಬ್ಬ ತನ್ನ ನಿರ್ಣಯವಿತ್ತ.

    ಕೇಶವನಿಗೆ ಎಲ್ಲರಿಂದಲೂ ಇದೇ ಉಪದೇಶ. ಅವನ ಉತ್ತರ ಅಷ್ಟೇ ಸ್ಪಷ್ಟ.

    ಕೇಶವನನ್ನು ಕೆಲದಿನಗಳಿಗೆ ರಾಮಪಾಯಲಿಗೆ ಕಳಿಸಿದರು. ಅಲ್ಲಿ ಅವನ ಚಿಕ್ಕಪ್ಪನ ಸ್ನೇಹಿತರು "ಕೇಶವ, ನೀನಿನ್ನೂ ಚಿಕ್ಕವ. ಈ ವಯಸ್ಸಿನಲ್ಲಿ ಕಲಿಯುವ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ದೇಶಭಕ್ತಿಯ ಉದ್ಯೋಗವನ್ನೇಕೆ ಕೈಗೊಂಡಿರುವೆ" ಎನ್ನತೊಡಗಿದರು.

    ಕೇಶವ ಚುರುಕಾಗಿಯೇ ಉತ್ತರಿಸಿದ - "ನಿಮ್ಮಂಥವರು ಅದನ್ನು ನನಗೆ ಕಲಿಸಲಿಲ್ಲ. ನಾನೇ ಮಾಡಬೇಕಾಯಿತು. ವಿದ್ಯೆ ಕಲಿತ ಮೇಲೆ ಎಷ್ಟು ಜನ ದೇಶಹಿತ ಗಮನಿಸುವರು? ನಿಮಗೀಗ ವಯಸ್ಸಾಗಿದೆಯಲ್ಲಾ. ನೀವೇಕೆ ದೇಶಸೇವೆಯ ವ್ರತ ಕೈಗೊಂಡಿಲ್ಲ? ನೀವೇ ಈ ಕೆಲಸ ಮಾಡಿ. ಆಗ ನಾನು ಶಾಲೆಗೆ ಹೋಗಿ ಕಲಿಯುತ್ತೇನೆ."

    ಈಗ ಅವರೆಲ್ಲ ನಿರುತ್ತರ. ಈ ಹುಡುಗ ಅಸಾಮಾನ್ಯ ಎಂದು ಅವರಿಗೆ ತಿಳಿಯಿತು. ಎಷ್ಟು ಹೇಳಿದರೂ ಅವನ ಕೇಳನೆಂಬುದು ಖಾತ್ರಿಯಾಯಿತು.

Saturday, March 24, 2012

೮. ವಂದೇ ಮಾತರಂ

ವಂದೇ ಮಾತರಂ

    ದೇಶದ ತುಂಬ ತರತರದ ಅನ್ಯಾಯದ ಕಾನೂನುಗಳು. ಆಗ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸಹ ಇಂತಹ ಕಾನೂನುಗಳಿಂದ ಹೊರತುಪಟ್ಟವರಾಗಿರಲಿಲ್ಲ. ಲೋಕಮಾನ್ಯ ತಿಲಕರಂಥ ಮಹಾಪುರುಷರ ಭಾಷಣ ಕೇಳಲೂ ಸಹ ಅವರಿಗೆ ಅವಕಾಶವಿರಲಿಲ್ಲ. ದೇಶಭಕ್ತಿ ಪ್ರಸಾರ ಮಾಡುವ ಪತ್ರಿಕೆಗಳನ್ನೂ ಓದುವಂತಿರಲಿಲ್ಲ. ಇನ್ನು ಪೂರ್ತಿ ರಾಷ್ಟ್ರಗೀತೆ ಹಾಡುವುದಂತೂ ದೂರದ ಮಾತು. ’ವಂದೇ ಮಾತರಂ’ ಉಚ್ಛಾರ ಕೂಡ ಭಾರಿ ಅಪರಾಧವೆನಿಸಿತ್ತು. ಇದನ್ನೆಲ್ಲ ಮುರಿಯಹೊರಟರೆ ಬೆತ್ತದೇಟು ಅಲ್ಲದೇ ಇನ್ನೂ ಬೇರೆ ರೀತಿಯ ಶಿಕ್ಷೆಗಳೂ ಆಗುತ್ತಿದ್ದವು.

    ಆಗ ಕೇಶವನ ವಯಸ್ಸು ಕೇವಲ ೧೮ ವರ್ಷ. ಆತ ನಾಗಪುರದ ನೀಲ ಸಿಟಿ ಹೈಸ್ಕೂಲು ವಿದ್ಯಾರ್ಥಿ. ಆಂಗ್ಲ ಅಧಿಕಾರಿಗಳ ದಬ್ಬಾಳಿಕೆಯನ್ನು ಪ್ರತಿದಿನ ಕಾಣುತ್ತಿದ್ದ. ಅವನ ಹೃದಯದಲ್ಲಿ ಬಂಡಾಯದ ಬಿರುಗಾಳಿ ಏಳುತ್ತಿತ್ತು. ತನ್ನ ಗೆಳಯರೊಡನೆ ಕೂಡಿ ಯೋಜನೆಯೊಂದನ್ನು ತಯಾರಿಸಿದ. ಸದ್ದಿಲ್ಲದೇ ಎಲ್ಲ ತರಗತಿಗಳಿಗೂ ಈ ಸುದ್ದಿ ತಲುಪಿತು. "ಹೌದು, ಹಾಗೆಯೇ ಮಾಡಬೇಕು" ಎಂದು ಎಲ್ಲ ವಿದ್ಯಾರ್ಥಿಗಳೂ ನಿಶ್ಚಯಿಸಿದರು.

    ವಿದ್ಯಾಧಿಕಾರಿಗಳು ಶಾಲೆಯ ತಪಾಸಣೆಗೆ ಬರುವವರಿದ್ದರು. ಮೊದಲಿಗೇ ಕೇಶವನ ಕೊಠಡಿಗೆ ಬಂದರು. ಅವರು ಬಾಗಿಲಿನಲ್ಲಿ ಹೆಜ್ಜೆ ಇಡುತ್ತಿದ್ದಂತೆಯೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಒಂದೇ ಸ್ವರದಲ್ಲಿ ಕೂಗಿದರು, "ವಂದೇ ಮಾತರಂ". ಅದನ್ನು ಅನುಸರಿಸಿ ಮತ್ತೊಂದು ಕೋಣೆಯಿಂದಲೂ ಪ್ರತಿಧ್ವನಿ ಬಂತು. "ವಂದೇ ಮಾತರಂ". ಹೀಗೆ ಎಲ್ಲ ಕೋಣೆಗಳೂ "ವಂದೇ ಮಾತರಂ" ರಣಗರ್ಜನೆಯಿಂದ ತುಂಬಿ ಹೋದವು.

    ಸ್ಕೂಲ್ ಇನ್ಸ್‍ಪೆಕ್ಟರ್ ಕ್ರೋಧದಿಂದ ಕಿಡಿಕಿಡಿಯಾದ. ’ಈ ಕಾರಸ್ಥಾನದ ಮೂಲ ಯಾರು? ಹುಡುಕಿ’ ಎಂದು ಅಬ್ಬರಿಸಿದ. ಶಾಲೆಯ ಸಂಚಾಲಕರು ಗರಬಡಿದವರಂತೆ ನಿಂತುಬಿಟ್ಟರು. ಏನು ಮಾಡಬೇಕೆಂದು ಯಾರಿಗೂ ತಿಳಿಯದು. ಬಂದ ಅಧಿಕಾರಿ ಮುಖ್ಯೋಪಾಧ್ಯಾಯರಿಗೆ ’ಈ ಕಾರಸ್ಥಾನ ಮೂಲ ಯಾರು? ಹುಡುಕಿ. ಇದನ್ನೆಂದೂ ಸಹಿಸುವುದು ಸಾಧ್ಯವಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ಕೊಡಬೇಕು’ ಇನ್ನೊಮ್ಮೆ ಆಜ್ಞಾಪಿಸಿದರು. ಅವರು ಸಹ‍ಅಧ್ಯಾಪಕರಿಗೆ ಅದೇ ಆಜ್ಞೆ ಮಾಡಿದರು.

    ಕಣ್ಣುಗಳಲ್ಲಿ ಕೆಂಡ ಕಾರುತ್ತಾ ಇನ್ಸ್‍ಪೆಕ್ಟರ್ ಹಿಂದಿರುಗಿದ. ಹೆಡ್ಮಾಸ್ಟರ್ ಬೆತ್ತ ತಿರುಗಿಸುತ್ತಾ ಕೋಣೆ ಕೋಣೆ ತಿರುಗಿದರು. ಎಲ್ಲ ಉಪಾಧ್ಯಾಯರೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕೇಳತೊಡಗಿದರು. "ಸತ್ಯ ಹೇಳಿ, ಈ ಘಟನೆಯ ಹಿಂದೆ ಯಾರ ಕೈವಾಡವಿದೆ?"

    ಎಲ್ಲ ರೀತಿಯ ಪ್ರಯತ್ನವಾಯಿತು. ಹೆದರಿಸಿದರು, ಪುಸಲಾಯಿಸಿದರು, ಕೂಗಾಡಿದರು, ಹೊಡೆದರು, ಬಡಿದರು, ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಯಾರೂ ತಮ್ಮ ನಾಯಕನಾರೆಂದು ಬಾಯಿ ಬಿಡಲಿಲ್ಲ. ಅಧ್ಯಾಪಕರೆಲ್ಲ ಹತಾಶರಾದರು. ಮುಖ್ಯೋಪಾಧ್ಯಾಯರೂ ಗುಡುಕಿದರು. ’ಎಲ್ಲ ವಿದ್ಯಾರ್ಥಿಗಳನ್ನೂ ಶಾಲೆಯಿಂದ ಹೊರಹಾಕುತ್ತೇನೆ.’ ವಿದ್ಯಾರ್ಥಿಗಳೆಲ್ಲ "ವಂದೇ ಮಾತರಂ" ಎನ್ನುತ್ತಾ ಹೊರನಡೆದರು. ಹಲವು ದಿನಗಳವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರಲೇ ಇಲ್ಲ.

    ಆದರೆ ವಿದ್ಯಾರ್ಥಿಗಳ ಆ ನಿರ್ಧಾರ ಬಹುಕಾಲ ಉಳಿಯಲಿಲ್ಲ. ದೇಶದ ಅಂದಿನ ಪರಿಸ್ಥಿತಿಯೇ ಹಾಗಿತ್ತು. ಮಕ್ಕಳ ತಂದೆ, ತಾಯಿ, ಪೋಷಕರ ಮೇಲೆ ಒತ್ತಡ ಬರತೊಡಗಿತು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮಾಡಲು ಅಧಿಕಾರಿಗಳು ತಮ್ಮೆಲ್ಲ ನಿಪುಣತೆ ಪ್ರಯೋಗಿಸಿದರು. ಸುಮಾರು ಒಂದೂವರೆ ತಿಂಗಳ ನಂತರ ವಿದ್ಯಾರ್ಥಿಗಳು ಪುನಃ ಶಾಲೆಗೆ ಬರತೊಡಗಿದರು. ಆದರೆ ಕೇಶವ ಮಾತ್ರ ಮತ್ತೆ ಆ ಶಾಲೆಗೆ ಹೆಜ್ಜೆಯಿಡಲಿಲ್ಲ.

೬. ಆಂಗ್ಲರ ಆಡಳಿತ ವೈಖರಿ

ಆಂಗ್ಲರ ಆಡಳಿತ ವೈಖರಿ

    ಒಡಕು ಹುಟ್ಟಿಸುವುದೇ ಆಂಗ್ಲರ ನೀತಿ. ಪರಸ್ಪರ ಜಗಳ ಹುಟ್ಟಿಸಿ ತಾವು ಲಾಭ ಪಡೆಯುವುದು ಅವರ ರೀತಿ. ಈ ಕೆಟ್ಟ ಗುರಿ ಇರಿಸಿಕೊಂಡೇ ೧೯೦೫ರಲ್ಲಿ ಅವರು ಬಂಗಾಲ ಪ್ರಾಂತವನ್ನು ಎರಡಾಗಿ ಒಡೆಯುವ ನಿಶ್ಚಯ ಮಾಡಿದರು. ಇದರ ವಿರುದ್ಧ ಬಂಗಾಲದ ನಾಯಕರು ಜನಸಾಧಾರಣರನ್ನು ಬಡಿದೆಬ್ಬಿಸಿದರು. ಜನರೆಲ್ಲ ರೊಚ್ಚಿಗೆದ್ದರು. ಸಭೆ, ಮೆರವಣಿಗೆಗಳು ನಡೆಯತೊಡಗಿದವು. ’ಬಂಗಾಲ ತುಂಡರಿಸಲು ಬಿಡೆವು’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬಂಕಿಮಚಂದ್ರರ ವಂದೇ ಮಾತರಂ ಹಾಡು ರಾಷ್ಟ್ರಗೀತೆಯಾಯಿತು. ಆ ರಣಮಂತ್ರದ ಉಚ್ಛಾರ ಮಾತ್ರದಿಂದ ಎಲ್ಲೆಡೆ ನವಚೈತನ್ಯ ಸಂಚರಿಸತೊಡಗಿತು.

    ಈ ಆಂದೋಲನ ಕೇವಲ ಬಂಗಾಲದ್ದಾಗಿ ಉಳಿಯಲಿಲ್ಲ. ಭಾರತದ ಮೂಲೆ ಮೂಲೆಗಳಲ್ಲಿ ’ವಂದೇ ಮಾತರಂ’ ಪ್ರತಿಧ್ವನಿಸಿತು. ’ಬಂಗಾಲ ತುಂಡರಿಸಲು ಬಿಡೆವು. ಇದು ಕೇವಲ ಬಂಗಾಲದ ಪ್ರಶ್ನೆಯಲ್ಲ. ಇಡೀ ದೇಶದ್ದು. ’ವಂದೇ ಮಾತರಂ’, ’ಭಾರತ ಮಾತಾಕೀ ಜಯ್’ ಎಂದು ಜನರ ಧ್ವನಿ ಗುಡುಗತೊಡಗಿತು.

    ಘೋಷಣೆ ಕೇಳಿ ಆಂಗ್ಲ ಅಧಿಕಾರಿಗಳು ಹೌಹಾರಿದರು. ಆಂದೋಲನ ಬಗ್ಗು ಬಡಿಯಲು ದಮನ ಮಾರ್ಗ ಹಿಡಿದರು. "ಭಾರತ ಮಾತಾಕೀ ಜಯ್" - "ವಂದೇ ಮಾತರಂ" ಎಂದವರಿಗೆ ಕಠಿಣ ಶಿಕ್ಷೆ ಎಂಬ ಆದೇಶ ಹೊರಡಿಸಿದರು.

    ಆದರೆ ದೇಶಭಕ್ತಿಯ ಹೆದ್ದೆರೆಯನ್ನು ಅವರಿಂದ ತಡೆಯಲಾಗಲಿಲ್ಲ. ದೂರ ದೂರದ ಗ್ರಾಮಗಳನ್ನೂ ಅದು ತಲುಪಿತು. ಭಾವನಾಶೀಲ ಕೇಶವ ಇದರಿಂದ ಪ್ರಭಾವಿತನಾದ.

೫. ಕೋಟೆ ಗೆಲ್ಲುವ ಇಚ್ಛೆ

ಕೋಟೆ ಗೆಲ್ಲುವ ಇಚ್ಛೆ

    ಛತ್ರಪತಿ ಶಿವಾಜಿ ಮಹಾರಾಜರ ಕಥೆ ಕೇಳಿದಾಗಲೆಲ್ಲ ಕೇಶವ ಅವರ ಸೈನಿಕರಲ್ಲಿಯೇ ಒಬ್ಬನಾಗುತ್ತಿದ್ದ. ಕುದುರೆಯೇರಿ ವೇಗವಾಗಿ ಹೋಗುತ್ತಿದ್ದ. ಆಗಾಗ ಯಾವುದೋ ಗಡವನ್ನು ಆಕ್ರಮಿಸುತ್ತಿದ್ದ. ರಹಸ್ಯ ಮಾರ್ಗದಲ್ಲಿ ಹೋಗಿ ಕೋಟೆ ಗೆಲ್ಲುತ್ತಿದ್ದ. ಹೀಗೆಲ್ಲ ಮನದಲ್ಲೆ ಯೋಚಿಸುತ್ತಿದ್ದ ಅವನಿಗೆ ತಾನೂ ಪ್ರತ್ಯಕ್ಷ ಅಂಥದೇ ಪ್ರಯತ್ನ ಮಾಡಬೇಕೆನಿಸುತ್ತಿತ್ತು.

    ನಾಗಪುರದ ಮಧ್ಯದಲ್ಲಿ ಒಂದು ಚಿಕ್ಕ ಕೋಟೆ. ಅದೇ ’ಸೀತಾಬರ್ಡಿ.’ ಆಗ ಆ ಕೋಟೆಯ ಮೇಲೆ ಹಾರುತ್ತಿದ್ದುದು ಆಂಗ್ಲರ ಯೂನಿಯನ್ ಜಾಕ್. ಅದನ್ನು ನೋದಿ ಕೇಶವನಿಗೆ ತಡೆಯಲಾರದಷ್ಟು ನೋವು. ’ಈ ಧ್ವಜವನ್ನು ಹೇಗಾದರೂ ಮಾಡಿ ತೆಗೆದೆಸೆದು ಅಲ್ಲಿ ಭಗವಾ ಹಾರಾಡಿಸಬೇಕು. ಕೋಟೆ ಗೆಲ್ಲಬೇಕು’ ಎಂದು ತನ್ನ ಗೆಳೆಯರ ಬಳಿ ಹೇಳುತ್ತಿದ್ದ.

    ’ನಾವು ಕೋಟೆಯೊಳಗೆ ಹೋದರೆ ಅಲ್ಲಿರುವ ಆಂಗ್ಲರನು ಸೋಲಿಸಿ ಕೋಟೆ ಗೆಲ್ಲಬಹುದು’ ಒಬ್ಬನೆಂದ.

    ’ಆದರೆ ನಾವು ಅಲ್ಲಿ ಹೋಗುವುದಾದರೂ ಹೇಗೆ’ ಮತ್ತೊಬ್ಬನ ಪ್ರಶ್ನೆ.

    ಮೂರನೆಯವ ಉಪಾಯ ಸೂಚಿಸಿದ. ’ನಾವೇಕೆ ಸುರಂಗ ತೋಡಬಾರದು? ಒಳಗೊಳಗೇ ಹೋಗಿ ಕೋಟೆ ಸೇರಲು ದಾರಿಯಾಗುತ್ತದಲ್ಲ?’

    ’ನಡೆಯಿರಿ, ನಾವೀಗಲೇ ಕೆಲಸ ಆರಂಭಿಸೋಣ. ಒಳ್ಳೆಯ ಕೆಲಸಕ್ಕೆ ತಡವಾಗಬಾರದು.’

    ಈ ಹುಡುಗರು ಆಟವಾಡುತ್ತಿದ್ದುದು ವಝೆಮಾಸ್ತರ ಮನೆ ಸಮೀಪ. ಅದರ ಆವಾರ ವಿಶಾಲವಾಗಿತ್ತು. ಸುತ್ತ ಎತ್ತರದ ಗೋಡೆಗಳು. ಮನೆಯವರೆಲ್ಲ ಪಕ್ಕದೂರಿಗೆ ಹೋಗಿದ್ದರು. ಮಾಸ್ತರರು ಶಾಲೆಗೆ ಹೋದಾಗ ಬೇರಾರೂ ಅಲ್ಲಿರುತ್ತಿರಲಿಲ್ಲ.

    ಅದೇ ಜಾಗ ತಮ್ಮ ಕೆಲಸಕ್ಕೆ ಸರಿಯಾದುದೆಂದು ಈ ಹುಡುಗರು ಆರಿಸಿದರು. ತಂತಮ್ಮ ಮನೆಗಳಿಂದ ಅಗೆಯುವ ಸಲಕರಣೆ ತಂದರು. ಗುದ್ದಲಿ, ಪಿಕಾಸಿ, ಹಾರೆಗೋಲು ಇತ್ಯಾದಿ.

    ಬಾಲಕರ ಕೆಲಸ ಸದ್ದಿಲ್ಲದೇ ಸಾಗಿತು. ವಝೆ ಮಾಸ್ತರರ ಮನೆಯಂಗಳದಲ್ಲಿ ದೊಡ್ಡದೊಂದು ಹೊಂಡು ನಿರ್ಮಾಣವಾಯಿತು. ಸಂಜೆ ಮನೆಗೆ ಬಂದ ಮಾಸ್ತರರಿಗೆ ಈ ಹುಡುಗರ ಸಾಹಸ ನೋಡಿ ಭಾರೀ ಅಚ್ಚರಿ. ಆವರು ಒಬ್ಬಿಬ್ಬರನ್ನು ಪ್ರತ್ಯೇಕ ಕರೆದು ಇದೇನೆಂದು ವಿಚಾರಿಸಿದರು. ಆ ಹುಡುಗರು ಸರಳವಾಗಿ ತಮ್ಮ ಯೋಜನೆ ವಿವರಿಸಿದರು. ಆ ಚಿಕ್ಕ ಬಾಲಕರ ಮುಗ್ಧ ಕಲ್ಪನೆ ಕೇಳಿ ಅವರಿಗೆ ತಡೆಯಲಾರದಷ್ಟು ನಗು. ಜೊತೆಗೆ ಅವರ ಉಜ್ವಲ ಯೋಜನೆ ನೋಡಿ ಸಂತೋಷವೂ  ಸಹ. ಎಲ್ಲ ಹುಡುಗರನ್ನೂ ಕರೆದು ಹತ್ತಿರ ಕೂರಿಸಿ ಮೈದಡವಿದರು. ಸರಿಯಾಗಿ ತಿಳಿ ಹೇಳಿದರು. ಕೇಶವನೇ ಆ ತಂಡದ ನಾಯಕನೆಂದು ಅವರಿಗೆ ತಿಳಿಯಿತು. ವಿಶೇಷವಾಗಿ ಅವನನ್ನು ಸಮಾಧಾನಪಡಿಸಿದರು. ’ನೀನು ಮುಂದೆ ಒಳ್ಳೆಯ ದೇಶಸೇವೆ ಮಾಡುವೆ’ ಎಂದು ಹರಸಿದರು.

೩. ಚುರುಕು ಬುದ್ಧಿಯ ಬಾಲಕ

ಚುರುಕು ಬುದ್ಧಿಯ ಬಾಲಕ

    ಕೇಶವ ಬಹಳ ಬುದ್ಧಿವಂತ. ಅವನ ನೆನಪಿನ ಶಕ್ತಿ ಅಸಾಧಾರಣವಾದುದು. ರಾಮರಕ್ಷಾ ಸ್ತೋತ್ರ ಹಾಗೂ ಸಮರ್ಥ ರಾಮದಾಸರ ಮನೋಬೋಧದ ಶ್ಲೋಕಗಳನ್ನು ಬಹಳ ಬೇಗ ಕಲಿತ. ಅವನು ಗೀತೆಯ ಶ್ಲೋಕಗಳನ್ನು ತನ್ನ ಮಧುರ ಕಂಠದಿಂದ ಶುದ್ಧವಾಗಿ ಹೇಳುವುದನ್ನು ಕೇಳಿ ದೊಡ್ಡವರೂ ತಲೆದೂಗುತ್ತಿದ್ದರು. ತನ್ನ ಅಣ್ಣಂದಿರೊಡನೆ ಅವನು ರಾಮಾಯಣ, ಭಾರತ ಕೇಳಲು ಹೋಗುತ್ತಿದ್ದ. ಗಮನವಿಟ್ಟು ಕೇಳುತ್ತಿದ್ದ. ಪ್ರತಿ ಕಥೆಗಳ ನೀತಿ ಆಗಲೇ ಗ್ರಹಿಸುತ್ತಿದ್ದ. ಛತ್ರಪತಿ ಶಿವಾಜಿ ಮಹಾರಾಜರ ಕಥೆಗಳನ್ನು ಕೇಳುವುದರಲ್ಲಿ ಬಹಳ ಆಸಕ್ತಿ ಅವನಿಗೆ. ಅವನ್ನು ಕೇಳುತ್ತಾ ಕೇಳುತ್ತಾ ತನ್ಮಯನಾಗುತ್ತಿದ್ದ.

    ಒಮ್ಮೆ ಕೇಶವನ ನೆಂಟರೊಬ್ಬರು ಬಂದರು. ಅವರು ಕಥೆ ಹೇಳುವುದರಲ್ಲಿ ನಿಸ್ಸೀಮರು. ಶಿವಾಜಿಯ ಬಾಲ್ಯದ ಕಥೆಯನ್ನು ಹೇಳುತ್ತಿದ್ದರು. ಕೇಶವ ಕಥೆ ಕೇಳುತ್ತಾ ಅದರಲ್ಲಿಯೇ ಮೈಮರೆತ. ಕಥೆ ಮುಗಿಯಿತು. ಕೇಳುತ್ತಾ ಕುಳಿತಿದ್ದ ಉಳಿದ ಹುಡುಗರು ಅತ್ತಿತ್ತ ಹೊರಟರು. ಆದರೆ ಕೇಶವ ಮಾತ್ರ ಮೇಲೇಳಲಿಲ್ಲ. ಅವನು ಶಿವಾಜಿಯ ಕಾಲ ತಲುಪಿದ್ದ. ಕಥೆ ಅವನ ಕಣ್ಣ ಮುಂದೆ ಜೀವ ತಳೆದಿತ್ತು. ಶಿವಾಜಿಯ ತಂದೆ ಶಹಾಜಿ ಬಾಲಕ ಶಿವಬಾನನ್ನು ಬಿಜಾಪುರದ ದರಬಾರಿಗೆ ಕರೆದೊಯ್ದರು. ’ಮಗೂ, ಬಾದಷಹರಿಗೆ ನಮಸ್ಕರಿಸು’ ಎಂದು ಶಹಜಿ ಹೇಳಿದರು. ಶಿವಬಾ ಚುತುಮ್ಮನೆ ಉತ್ತರಿಸಿದ - ’ಇಲ್ಲ. ಎಂದೂ ಸಾಧ್ಯವಿಲ್ಲ. ಈತ ನಮ್ಮ ದೇಶ, ನಮ್ಮ ಧರ್ಮದವನಲ್ಲ. ಇವನಿಗೆ ನಾನೆಂದೂ ತಲೆಬಾಗಿಸೆನು.’

    ಇದೇ ವೇಳೆ ಯಾರೋ ಕೇಶವನನ್ನು ಕರೆದರು. ಅವನಿಂದ ಉತ್ತರಿಸಲು ಸಾಧ್ಯವಾಗಲಿಲ್ಲ. ಕೇಶವ ಇತಿಹಾಸ ಕಾಲದಿಂದ ವರ್ತಮಾನಕ್ಕೆ ಬಂದುದು ಅವರು ಹತ್ತಿರ ಬಂದು ಭುಜ ಅಲುಗಿಸಿದಾಗಲೇ. ಆ ಎಳೆಯ ವಯಸ್ಸಿನಲ್ಲಿಯೇ ಕೇಶವನ ಮನಸ್ಸಿನಲ್ಲಿ ದೇಶದ ಕುರಿತು ಭಾವನಾಂತರಗಳೇಳುತ್ತಿದ್ದವು.

೧. ಮಂಗಲ ದಿನ

ಮಂಗಲ ದಿನ

     ಅಂದು ಯುಗಾದಿ, ವಿರೋಧಿ ಸಂವತ್ಸರ. ಇಸವಿ ೧೮೮೯ರ ಎಪ್ರಿಲ್ ಮೊದಲ ದಿನ. ಎಲ್ಲೆಡೆ ಉತ್ಸಾಹದಿಂದ ಹೊಸ ವರ್ಷದ ಸ್ವಾಗತ.

     ಮುಂಜಾನೆಯ ಸೂರ್ಯ ಅದೇ ತಾನೇ ಮೂಡುತ್ತಿದ್ದ. ಪ್ರತಿಯೊಂದು ಮನೆಯ ಅಂಗಳದಲ್ಲೂ ರಂಗವಲ್ಲಿಯ ಸಿಂಗಾರ. ಬಾಗಿಲುಗಳಲ್ಲಿ ಮಾವಿನ ಚಿಗುರೆಲೆಗಳ ಹಸಿರು ತೋರಣ. ಮಾವು, ಬೇವಿನೆಲೆ ತರಲು ತೋರಣ ಕಟ್ಟಲು, ಹೂವು ತರಲು ಮಕ್ಕಳೆಲ್ಲರೂ ಓಡಾಡುತ್ತಿದ್ದರು. ದೊಡ್ಡವರೊಂದಿಗೆ ತಾವೂ ಸಡಗರದಿಂದ ಕೆಲಸ ಮಾಡುತ್ತಿದ್ದರು.

     ಮಹಾರಾಷ್ಟ್ರದಲ್ಲಿ "ಯುಗಾದಿ"ಯನ್ನು "ಗುಡಿಪಡವಾ" ಎನ್ನವರು. ಗುಡಿ ಎಂದರೆ ಧ್ವಜ. ಅಂದು ಮನೆ ಮನೆಯಲ್ಲಿ ಎತ್ತರದ ಪತಾಕೆ ಹಾರಿಸುವರು. ಪೂಜೆ ಮಾಡುವರು.

     ಮಕ್ಕಳು ಇದಕ್ಕೆ ಬೇಕಾದ ಸಾಮಗ್ರಿ ಜೋಡಿಸತೊಡಗಿದ್ದರು, ಉತ್ಸಾಹದಿಂದ. "ನಮ್ಮ ಮನೆ ಪತಾಕೆ ಎತ್ತರವಾಗಿರಬೇಕು, ಚೆನ್ನಾಗಿರಬೇಕು" ಎಂದು ಪರಸ್ಪರರಲ್ಲಿ ಸ್ಪರ್ಧೆ. ಬಣ್ಣದ ಪತಾಕೆ ಮೇಲೇರುವಾಗ, ಪಟಪಟನೆ ಹಾರಾಡುವಾಗ ಮಕ್ಕಳೆಲ್ಲ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಕುಣಿಯುವರು. ಎಲ್ಲರೂ ಅಂದು ಹೊಸ ಬಟ್ಟೆ ತೊಡುವರು. ಹಬ್ಬದಡಿಗೆ ಉಣ್ಣುವರು. ಎಲ್ಲೆಡೆ ಆನಂದ ಉತ್ಸಾಹಗಳ ಅಲೆ ತಾನೇ ತಾನಾಗಿ ಇರುವ ದಿನ ಅದು.

     ಅಂದು ನಾಗಪುರದ ಪಂಡಿತ ಬಲಿರಾಮಪಂತ ಹೆಡಗೆವಾರರ ಮನೆಯಲ್ಲಿ ಈ ಆನಂದ ಇನ್ನೂ ಹೆಚ್ಚು. ಆ ದಿನ ಮಂಗಲೋತ್ಸವ. ಪೌರಾಣಿಕ ಹಾಗೂ ಐತಿಹಾಸಿಕವಾಗಿಯೂ ಬಹು ಮಹತ್ವಪೂರ್ಣ ವಿಜಯದ ದಿನ ಎನಿಸಿದ ಅಂದು ಅವರ ಮನೆಯಲೊಬ್ಬ ಹುಡುಗ ಹುಟ್ಟಿದ. ಈ ಶುಭಯೋಗ ಎಲ್ಲರಿಗೂ ಆನಂದ ತಂದಿತ್ತು.

     ’ಎಷ್ಟು ಒಳ್ಳೆಯ ಮುಹೂರ್ತದಲ್ಲಿ ಈ ಹುಡುಗ ಹುಟ್ಟಿದ್ದಾನೆ. ಮುಂದೆ ನಿಜವಾಗಿಯೂ ಯಾವುದೋ ಪರಾಕ್ರಮ ಸಾಧಿಸುವನು’ ಒಬ್ಬ ಹೇಳುತ್ತಿದ್ದ.

     ’ಯುಗಾದಿ ವಿಜಯದ ಹಬ್ಬ. ಶತ ಶತಮಾನಗಳ ಮೊದಲು ಪರಾಕ್ರಮಿ ಶಾಲಿವಾಹನ ಆಕ್ರಮಕ ಶಕರನ್ನು ಹೊಡೆದೋಡಿಸಿದ ದಿನ ಇದು. ಅದರ ನೆನಪಿಗಾಗಿ ನಾವಿಂದೂ ಪತಾಕೆ ಹಾರಿಸುತ್ತೇವೆ. ಅವನ ಹತ್ತಿರ ಸಂಪತ್ತು, ಸೈನ್ಯ ಯಾವುದೂ ಇರಲಿಲ್ಲ. ಆದರೂ ಈ ನಾಡಿನ ದುರ್ದೆಸೆ ಕಂಡು ದುಃಖಿತನಾಗಿದ್ದ - ಶಿವಶಕ್ತಿಯಿಂದ ಪ್ರೇರಿತನಾಗಿದ್ದ. ಮಣ್ಣಿನ ಕುದುರೆ ಸವಾರರ ಗೊಂಬೆ ಮಾಡಿ ಪ್ರಾಣ ತುಂಬಿದ. ಆ ಸೈನ್ಯದಿಂದಲೇ ಪರಕೀಯರನ್ನು ಓಡಿಸಿದ. ದಾಸ್ಯ ತೊಲಗಿಸಿದ. ಈ ಹುಡುಗನೂ ಅಂಥದೇ ಒಂದಲ್ಲೊಂದು ಅಸಾಧಾರಾಣ ಕೆಲಸ ಮಾಡಿ ತೋರಿಸುತ್ತಾನೆ ಎಂದು ನನಗನಿಸುತ್ತದೆ’ ಮತ್ತೊಬ್ಬನ ಅಂಬೋಣ.

     ಇನ್ನೊಬ್ಬ ಹೇಳುತ್ತಿದ್ದ - ’ಈತ ಹೆಡಗೆವಾರರ ಕುಲದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸುವನು. ದೇಶದ ತುಂಬ ತಮ್ಮ ವಂಶದ ಹೆಸರು ಹಬ್ಬಿಸುವನು.

    ಹುಡುಗ ಹುಟ್ಟುತ್ತಿದ್ದಂತೆಯೇ ಹರಿದ ಭಾವನೆಗಳ ಪ್ರವಾಹ ಇದು. ಹನ್ನೆರಡನೆಯ ದಿನ ನಾಮಕರಣ ಮಹೋತ್ಸವ. ಕೇಶವ ಎಂದು ಹೆಸರಿಟ್ಟರು.