Sunday, October 28, 2012

೨೫. ಅಪಾರ ಸಂಪರ್ಕ

ಅಪಾರ ಸಂಪರ್ಕ

   ಆಗಸ್ಟ್ ೧, ೧೯೨೦. ಲೋಕಮಾನ್ಯ ತಿಲಕರು ಕಾಲವಶವಾದರು. ಅದೇ ವರ್ಷ ನಾಗಪುರದಲ್ಲಿ ಕಾಂಗ್ರೆಸ್ ಅಧಿವೇಶನ. ಲೋಕಮಾನ್ಯ ತಿಲಕರೇ ಅದರಲ್ಲಿ ಅಧ್ಯಕ್ಷತೆ ವಹಿಸಬೇಕಾಗಿತ್ತು. ಏಕಮಾತ್ರ ಅನುಭವಿ ನಾಯಕನೂ ಇಲ್ಲದಂತಹ ವಿಚಿತ್ರ ಸ್ಥಿತಿ ಒದಗಿತು. ಎಲ್ಲೆಡೆ ನಿರಾಶೆ. ಆದರೂ ಡಾಕ್ಟರ್‌ಜಿ ಮಾತ್ರ ಇಮ್ಮಡಿ ಉತ್ಸಾಹದಿಂದ ಸಮ್ಮೇಳನದ ಚಟುವಟಿಕೆಯಲ್ಲಿ ತೊಡಗಿದರು.

   ಅಧಿವೇಶನಕ್ಕಾಗಿ ಅವರು ಹಳ್ಳಿ ಹಳ್ಳಿಗಳಲ್ಲೂ ಓಡಾಡಿದರು. ಹಿಂದೆ ಕ್ರಾಂತಿಕಾರ್ಯಕ್ಕಾಗಿಯೂ ಇದೇ ರೀತಿ ಅವರು ಪ್ರಾಂತವೆಲ್ಲಾ ಸುತ್ತಾಡಿದ್ದರು. ಆಗ ನೂರಾರು ಯುವಕರ ಪರಿಚಯವಾಗಿತ್ತು. ಈಗ ಅವರೆಲ್ಲ ಆಪ್ತಮಿತ್ರರಾದರು. ಕ್ರಾಂತಿಯ ದಿನಗಳಲ್ಲಿ ಅವರ ಕಾರ್ಯ ಗುಪ್ತ. ಈಗಲಾದರೋ ಅದು ಖುಲ್ಲಂಖುಲ್ಲಾ ಬಹಿರಂಗ. ಯುವಕರ ಸಂಪರ್ಕ ಹಾಗೂ ಅವರಲ್ಲಿ ದೇಶಭಕ್ತಿಯ ಕಿಡಿ ಹಚ್ಚುವುದು ಡಾಕ್ಟರ್‌ಜಿಯವರಿಗೆ ಅತ್ಯಂತ ಪ್ರಿಯವಾದ ಕಾರ್ಯ.

   ಡಾಕ್ಟರ್‌ಜಿಯವರ ಪ್ರೇರಣೆಯಂತೆ ಉತ್ಸಾಹಿ ತರುಣರೆಲ್ಲ ಒಂದು ನಿರ್ಣಯಕ್ಕೆ ಬಂದರು. ಅದರಂತೆ ಕಾಂಗ್ರೆಸ್ ಅಧಿವೇಶನದೊಡನೆ ಕಾಲೇಜು ವಿದ್ಯಾರ್ಥಿಗಳ ಒಂದು ಸಮ್ಮೇಳನ ಸಹ ನಡೆಸಬೇಕೆಂದಾಯಿತು. ಗೋಖಲೆ ಎಂಬ ಓರ್ವ ಯುವಕ ಆ ಕಾರ್ಯದ ಹೊಣೆ ಹೊತ್ತ.

   ಗೋಖಲೆ ಕಾರ್ಯದ ಆರಂಭವನ್ನೇನೋ ಮಾಡಿದ. ಆದರೆ ಮಿಕ್ಕವರ ಅಸಹಕಾರದಿಂದ ಸ್ವಲ್ಪ ನಿರಾಶನಾದ. ಆತ ಮನದಲ್ಲಿ ತುಂಬ ಆಶೆ ಹೊತ್ತು ನಾಯಕರ ಬಳಿಗೆ ಹೋಗಿದ್ದ. ಆದರೆ ಅವರು ಆತನಿಗೆ ಪರಿಚಯಪತ್ರ ಕೊಡಲೂ ಸಹ ನಿರಾಕರಿಸಿದರು.

   ಅವರ ದೃಷ್ಟಿಯಲ್ಲಿ ಯುವ ಸಮ್ಮೇಳನ ಅಷ್ಟೇನೂ ಮಹತ್ವದ್ದಾಗಿರಲಿಲ್ಲ. ದೊಡ್ಡ ದೊಡ್ಡ ವಿಷಯಗಳ ಮೇಲೆ ಉದ್ದುದ್ದ ಭಾಷಣಗಳು ಇವೇ ಅವರ ಮನಸ್ಸಿನ ತುಂಬಾ ಇದ್ದು ನವಪೀಳಿಗೆಯ ಕುರಿತು ಅವರೆಲ್ಲ ತೀರ ಉದಾಸೀನರಾಗಿದ್ದರು. ಭವಿಷ್ಯದ ಕುರಿತು ಯೋಚಿಸಲೂ ಅವರಾರಿಗೂ ಬಿಡುವೇ ಇರಲಿಲ್ಲ. ಇದರಿಂದ ಗೋಖಲೆ ನಿರಾಶನಾದ.

   ನಿರಾಶನಾದ ಗೋಖಲೆ ಕೊನೆಯಲ್ಲಿ ಡಾಕ್ಟರ್‌ಜಿಯವರ ಬಳಿ ಬಂದ. ಡಾಕ್ಟರ್‌ಜಿ ಅವನಿಗೆ ಕಲ್ಕತ್ತೆಯಿಂದ ಬೊಂಬಾಯಿ ಹಾಗೂ ಲಾಹೋರಿನಿಂದ ಮದ್ರಾಸ್‍ವರೆಗಿನ ನಗರಗಳ ನೂರಾರು ಕಾರ್ಯಕರ್ತರ ವಿಳಾಸ ನೀಡಿದರು. ಕೆಲವರಿಗೆ ತಾವೇ ಪತ್ರ ಸಹ ಬರೆದರು. ಅನೇಕ ಪ್ರಾಂತಗಳ ನೂರಾರು ವ್ಯಕ್ತಿಗಳೊಡನೆ ಅವರಿಗಿರುವ ಇಂಥ ಸಂಪರ್ಕ ನೋಡಿ ಗೋಖಲೆ ಚಕಿತನಾದ. ಕೊನೆಗೆ ಕೇಳಿಯೂಬಿಟ್ಟ. "ಡಾಕ್ಟರ್‌ಜಿ ಇಷ್ಟು ನೆನಪು ಹೇಗೆ ಸಾಧ್ಯ?"

   ಡಾಕ್ಟರ್‌ಜಿ ತಮಾಷೆಯಾಗಿ ಹೇಳಿದರು. "ಈ ಕೆಲಸಕ್ಕಾಗಿ ನನ್ನ ತಲೆಯಲ್ಲಿ ಒಂದು ಕಾರ್ಯಾಲಯವನ್ನೇ ತೆರೆದಿರುವೆ."

   "ಡಾಕ್ಟರ್‌ಜಿ, ನಾನು ಈವರೆಗೆ ದೊಡ್ಡ ದೊಡ್ಡ ನಾಯಕರನೇಕರನ್ನು ಭೇಟಿ ಮಾಡಿರುವೆ. ಆದರೆ ಯಾರೂ ಇಷ್ಟು ಆಸಕ್ತಿ ತೋರಿಸಿರಲಿಲ್ಲ. ಮಾರ್ಗದರ್ಶನ ಮಾಡಲೂ ಇಲ್ಲ. ಇಂತಹ ಆತ್ಮೀಯತೆ ನನಗೆಲ್ಲೂ ದೊರೆತಿಲ್ಲ" ಭಾವಪೂರ್ಣವಾಗಿ ಗೋಖಲೆ ನುಡಿದ.

   ಡಾಕ್ಟರ್‌ಜಿ ಮುಗುಳ್ನಕ್ಕರು.

No comments:

Post a Comment