Sunday, October 28, 2012

೨೬. ನ್ಯಾಯಾಲಯದಲ್ಲಿ

ನ್ಯಾಯಾಲಯದಲ್ಲಿ

    ೧೯೨೧ರಲ್ಲಿ ದೇಶದಲ್ಲೆಲ್ಲ ಅಸಹಕಾರ ಆಂದೋಲನದ ಕಾವು. ಡಾಕ್ಟರ್ ಹೆಡಗೆವಾರರು ಈ ಹೋರಾಟಕ್ಕಾಗಿಯೇ ವಿದರ್ಭ ಪ್ರಾಂತದ ಗ್ರಾಮ ಗ್ರಾಮಗಳಿಗೆ ಹೋದರು. ಭಂಡಾರಾ, ಖಾಪಾ, ತಲೆಗಾಂವ್, ದೆವೋಲಿ, ಮೊದಲಾದೆಡೆ ಅವರ ಓಜಸ್ವಿ ಭಾಷಣಗಳಾದವು. ಆಂಗ್ಲರ ಕ್ರೂರ ದಬ್ಬಾಳಿಕೆಯ ಚಿತ್ರವನ್ನು ಎಳೆ‍ಎಳೆಯಾಗಿ ವಿವರಿಸಿ ಟೀಕಿಸುತ್ತಿದ್ದವರು ಅವರು. ಸಿಟ್ಟಿಗೆದ್ದ ಆಂಗ್ಲ ಅಧಿಕಾರಿಗಳು ಅವರಿಗೆ ವಿಧವಿಧದ ದಿಗ್ಬಂಧನ ವಿಧಿಸಿದರು. ಆದರೆ ಇದಾವುದಕ್ಕೂ ಜಗ್ಗದ ಡಾಕ್ಟರ್‌ಜಿ ತಮ್ಮ ಬಿರುಸಿನ ಪ್ರವಾಸ ಮಾಡುತ್ತಲೇ ಇದ್ದರು. ಅವರ ಬಿರುಗಾಳಿ ಪ್ರವಾಸದಿಂದಾಗಿ ಗ್ರಾಮ ಗ್ರಾಮದಲ್ಲೂ ಜನತೆಯ ಮನದಲ್ಲಿ ದೇಶಪ್ರೇಮದ ಕಿಡಿ ಹೊತ್ತಿ ಉರಿಯತೊಡಗಿತು.

    ಕೊನೆಗೊಮ್ಮೆ ಡಾಕ್ಟರ್‌ಜಿ ಅವರು ಬಂಧಿತರಾದರು. ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಅಸಹಕಾರ ಆಂದೋಲನದ ನೀತಿಯಾಗಿತ್ತು. ವಕೀಲರನ್ನಿಡುವಂತಿರಲಿಲ್ಲ. ಆದರೆ ಡಾಕ್ಟರ್‌ಜಿ ಮಾತ್ರ ತಮ್ಮ ಪರ ಓರ್ವ ವಕೀಲರನ್ನಿಡಲು ನಿರ್ಧರಿಸಿದರು.

    ಡಾಕ್ಟರ್‌ಜಿ ಪರವಾಗಿ ವಾದ ಹೂಡಲು ಅನೇಕ ವಕೀಲರು ಮುಂದೆ ಬಂದರು. ಆಗ ಇದ್ದ ನ್ಯಾಯಾಧೀಶ ಸ್ಮೇಲಿ ತೀರ ಉದ್ಧಟ. ವಕೀಲರನ್ನು ಅವಮಾನಿಸುತ್ತಿದ್ದ. ಹೀಗಾಗಿ ಅವನಿರುವ ನ್ಯಾಯಾಲಯಕ್ಕೆ ವಕೀಲರು ಬಹಿಷ್ಕಾರ ಹಾಕಿದ್ದರು.

    ಆದ್ದರಿಂದ ಡಾಕ್ಟರ್‌ಜಿ ಸ್ವತಃ ವಾದಿಸಲು ಮುಂದಾದರು. ಅವರ ಮೇಲೆ ರಾಜದ್ರೋಹದ ಆಪಾದನೆ ಹೊರಿಸಲಾಗಿತ್ತು. ಸರಕಾರಿ ಪರ ಸಾಕ್ಷಿಗಳ ವಿಚಾರಣೆ ನಡೆದಾಗ ಡಾಕ್ಟರ್‌ಜಿ ಅವರನ್ನೆಲ್ಲ ಪಾಟೀ ಸವಾಲಿಗೆಳೆದು ಅವರ ಹೇಳಿಕೆಗಳೆಲ್ಲ ಸುಳ್ಳು ಎಂದು ಸಿದ್ಧಪಡಿಸಿದರು. ಕೊನೆಯಲ್ಲಿ ತಮ್ಮ ವಾದಸರಣಿ ಮುಂದಿಡುತ್ತಾ "ಈಗ ನ್ಯಾಯಾಲಯದ ಮುಂದಿರುವ ನನ್ನ ಭಾಷಣದ ವರದಿ ಸಂಪೂರ್ಣವಾಗಿ ವಿಕೃತ. ನನ್ನೆಲ್ಲ ಭಾಷಣಗಳ ವಿಚಾರ ನೇರವಾಗಿಯೇ ಇದೆ. ನಮ್ಮ ದೇಶ ದಾಸ್ಯದಲ್ಲಿದೆ. ಅದನ್ನು ಬಿಡುಗಡೆಗೊಳಿಸುವುದು ನಮ್ಮ ಧ್ಯೇಯ. ಭಾರತದ ಪ್ರತಿಯೋರ್ವ ನಾಗರಿಕನ ಕರ್ತವ್ಯ ಅದು. ಅದಕ್ಕಾಗಿ ಆದ ಸದಾ ಪ್ರಯತ್ನಿಸುತ್ತಿರಬೇಕು. ಈಗಿರುವ ನಮ್ಮ ಆಡಳಿತದಾರರು ದುಷ್ಟರು. ಮೋಸಗಾರರು. ನಮ್ಮ ವಿಚಾರ ಅವರು ಅರ್ಥ ಮಾಡಿಕೊಳ್ಳಲಾರರು. ಆಂಗ್ಲರ ಈ ನ್ಯಾಯಾಲಯ ನಮಗೇನು ನ್ಯಾಯ ನೀಡಿತು? ಇದು ನ್ಯಾಯ ಪದ್ಧತಿಯ ಆಭಾಸ ಮಾತ್ರ. ಇಂದಿರುವ ಆಂಗ್ಲರ ಅಧಿಕಾರಶಾಹಿ ನ್ಯಾಯಯುತವಲ್ಲ; ಅದು ಪಾಶವೀ ಬಲದ ಮೇಲಿದೆ. ಒಂದು ದೇಶದಲ್ಲಿ ಅಲ್ಲಿನ ದೇಶವಾಸಿಗಳು ನಡೆಸುವ ಅಧಿಕಾರವೇ ನಿಜವಾದ ಆಡಳಿತ. ಬೇರೆಯವರ ಆಳ್ವಿಕೆ ಕೇವಲ ಕುಟಿಲತನ. ಮೋಸ, ವಂಚನೆಯದು ಮಾತ್ರ. ನಾನ ನನ್ನ ಭಾಷಣಗಳ ಮೂಲಕ ನನ್ನ ದೇಶವಾಸಿಗಳ ಮನದಲ್ಲಿ ದೇಶಭಕ್ತಿ ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದೇನೆ. ಆತ್ಮಾಭಿಮಾನ ಜಾಗೃತಗೊಳಿಸಿದ್ದೇನೆ. ಇದನ್ನು ವಿರೋಧಿಸುತ್ತಿರುವ ಆಡಳಿತಗಾರರಿಗೆ ಈಗ ಇನ್ನು ತಮ್ಮ ಕಾಲ ಇಲ್ಲಿ ಮುಗಿದು ಹೋಗಿದೆ. ಬಹು ಬೇಗನೆ ತಾವು ಗಂಟು ಮೂಟೆ ಕಟ್ಟಬೇಕಾಗಿದೆ ಎಂದು ತಿಳಿಯಬೇಕಾದ ಕಾಲ ಬಂದಿದೆ. ನನ್ನೆಲ್ಲ ಭಾಷಣಗಳಲ್ಲೂ ನಾನು ದೇಶಭಕ್ತಿ ಜಾಗೃತಿ ಮಾಡಿರುವೆ. ಅದು ನನ್ನ ಕರ್ತವ್ಯ ಎಂದೇ ನನ್ನ ದೃಢವಾದ ನಂಬಿಕೆ" ಎಂದು ಪುಟ್ಟ ಭಾಷಣವನ್ನೇ ಮಾಡಿದರು.

    ಡಾಕ್ಟರ್‌ಜಿಯವರ ಮಾತು ಕೇಳಿ ನ್ಯಾಯಾಧೀಶ ಸ್ಮೇಲಿ "ನಿಮ್ಮ ಭಾಷಣಕ್ಕಿಂತ ಅದರ ಸಮರ್ಥನೆಯೇ ಹೆಚ್ಚು ಉಗ್ರವಾಗಿದೆ. ನಿಮ್ಮ ಉಗ್ರವಾದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಪ್ರಮಾಣ ಬೇಕಿಲ್ಲ" ಎಂದು ತೀರ್ಪಿತ್ತ.

    ಒಂದು ವರ್ಷದ ಕಠಿಣ ಶಿಕ್ಷೆ ಡಾಕ್ಟರ್‌ಜಿ ಅವರಿಗೆ ವಿಧಿಸಲ್ಪಟ್ಟಿತು.

೨೫. ಅಪಾರ ಸಂಪರ್ಕ

ಅಪಾರ ಸಂಪರ್ಕ

   ಆಗಸ್ಟ್ ೧, ೧೯೨೦. ಲೋಕಮಾನ್ಯ ತಿಲಕರು ಕಾಲವಶವಾದರು. ಅದೇ ವರ್ಷ ನಾಗಪುರದಲ್ಲಿ ಕಾಂಗ್ರೆಸ್ ಅಧಿವೇಶನ. ಲೋಕಮಾನ್ಯ ತಿಲಕರೇ ಅದರಲ್ಲಿ ಅಧ್ಯಕ್ಷತೆ ವಹಿಸಬೇಕಾಗಿತ್ತು. ಏಕಮಾತ್ರ ಅನುಭವಿ ನಾಯಕನೂ ಇಲ್ಲದಂತಹ ವಿಚಿತ್ರ ಸ್ಥಿತಿ ಒದಗಿತು. ಎಲ್ಲೆಡೆ ನಿರಾಶೆ. ಆದರೂ ಡಾಕ್ಟರ್‌ಜಿ ಮಾತ್ರ ಇಮ್ಮಡಿ ಉತ್ಸಾಹದಿಂದ ಸಮ್ಮೇಳನದ ಚಟುವಟಿಕೆಯಲ್ಲಿ ತೊಡಗಿದರು.

   ಅಧಿವೇಶನಕ್ಕಾಗಿ ಅವರು ಹಳ್ಳಿ ಹಳ್ಳಿಗಳಲ್ಲೂ ಓಡಾಡಿದರು. ಹಿಂದೆ ಕ್ರಾಂತಿಕಾರ್ಯಕ್ಕಾಗಿಯೂ ಇದೇ ರೀತಿ ಅವರು ಪ್ರಾಂತವೆಲ್ಲಾ ಸುತ್ತಾಡಿದ್ದರು. ಆಗ ನೂರಾರು ಯುವಕರ ಪರಿಚಯವಾಗಿತ್ತು. ಈಗ ಅವರೆಲ್ಲ ಆಪ್ತಮಿತ್ರರಾದರು. ಕ್ರಾಂತಿಯ ದಿನಗಳಲ್ಲಿ ಅವರ ಕಾರ್ಯ ಗುಪ್ತ. ಈಗಲಾದರೋ ಅದು ಖುಲ್ಲಂಖುಲ್ಲಾ ಬಹಿರಂಗ. ಯುವಕರ ಸಂಪರ್ಕ ಹಾಗೂ ಅವರಲ್ಲಿ ದೇಶಭಕ್ತಿಯ ಕಿಡಿ ಹಚ್ಚುವುದು ಡಾಕ್ಟರ್‌ಜಿಯವರಿಗೆ ಅತ್ಯಂತ ಪ್ರಿಯವಾದ ಕಾರ್ಯ.

   ಡಾಕ್ಟರ್‌ಜಿಯವರ ಪ್ರೇರಣೆಯಂತೆ ಉತ್ಸಾಹಿ ತರುಣರೆಲ್ಲ ಒಂದು ನಿರ್ಣಯಕ್ಕೆ ಬಂದರು. ಅದರಂತೆ ಕಾಂಗ್ರೆಸ್ ಅಧಿವೇಶನದೊಡನೆ ಕಾಲೇಜು ವಿದ್ಯಾರ್ಥಿಗಳ ಒಂದು ಸಮ್ಮೇಳನ ಸಹ ನಡೆಸಬೇಕೆಂದಾಯಿತು. ಗೋಖಲೆ ಎಂಬ ಓರ್ವ ಯುವಕ ಆ ಕಾರ್ಯದ ಹೊಣೆ ಹೊತ್ತ.

   ಗೋಖಲೆ ಕಾರ್ಯದ ಆರಂಭವನ್ನೇನೋ ಮಾಡಿದ. ಆದರೆ ಮಿಕ್ಕವರ ಅಸಹಕಾರದಿಂದ ಸ್ವಲ್ಪ ನಿರಾಶನಾದ. ಆತ ಮನದಲ್ಲಿ ತುಂಬ ಆಶೆ ಹೊತ್ತು ನಾಯಕರ ಬಳಿಗೆ ಹೋಗಿದ್ದ. ಆದರೆ ಅವರು ಆತನಿಗೆ ಪರಿಚಯಪತ್ರ ಕೊಡಲೂ ಸಹ ನಿರಾಕರಿಸಿದರು.

   ಅವರ ದೃಷ್ಟಿಯಲ್ಲಿ ಯುವ ಸಮ್ಮೇಳನ ಅಷ್ಟೇನೂ ಮಹತ್ವದ್ದಾಗಿರಲಿಲ್ಲ. ದೊಡ್ಡ ದೊಡ್ಡ ವಿಷಯಗಳ ಮೇಲೆ ಉದ್ದುದ್ದ ಭಾಷಣಗಳು ಇವೇ ಅವರ ಮನಸ್ಸಿನ ತುಂಬಾ ಇದ್ದು ನವಪೀಳಿಗೆಯ ಕುರಿತು ಅವರೆಲ್ಲ ತೀರ ಉದಾಸೀನರಾಗಿದ್ದರು. ಭವಿಷ್ಯದ ಕುರಿತು ಯೋಚಿಸಲೂ ಅವರಾರಿಗೂ ಬಿಡುವೇ ಇರಲಿಲ್ಲ. ಇದರಿಂದ ಗೋಖಲೆ ನಿರಾಶನಾದ.

   ನಿರಾಶನಾದ ಗೋಖಲೆ ಕೊನೆಯಲ್ಲಿ ಡಾಕ್ಟರ್‌ಜಿಯವರ ಬಳಿ ಬಂದ. ಡಾಕ್ಟರ್‌ಜಿ ಅವನಿಗೆ ಕಲ್ಕತ್ತೆಯಿಂದ ಬೊಂಬಾಯಿ ಹಾಗೂ ಲಾಹೋರಿನಿಂದ ಮದ್ರಾಸ್‍ವರೆಗಿನ ನಗರಗಳ ನೂರಾರು ಕಾರ್ಯಕರ್ತರ ವಿಳಾಸ ನೀಡಿದರು. ಕೆಲವರಿಗೆ ತಾವೇ ಪತ್ರ ಸಹ ಬರೆದರು. ಅನೇಕ ಪ್ರಾಂತಗಳ ನೂರಾರು ವ್ಯಕ್ತಿಗಳೊಡನೆ ಅವರಿಗಿರುವ ಇಂಥ ಸಂಪರ್ಕ ನೋಡಿ ಗೋಖಲೆ ಚಕಿತನಾದ. ಕೊನೆಗೆ ಕೇಳಿಯೂಬಿಟ್ಟ. "ಡಾಕ್ಟರ್‌ಜಿ ಇಷ್ಟು ನೆನಪು ಹೇಗೆ ಸಾಧ್ಯ?"

   ಡಾಕ್ಟರ್‌ಜಿ ತಮಾಷೆಯಾಗಿ ಹೇಳಿದರು. "ಈ ಕೆಲಸಕ್ಕಾಗಿ ನನ್ನ ತಲೆಯಲ್ಲಿ ಒಂದು ಕಾರ್ಯಾಲಯವನ್ನೇ ತೆರೆದಿರುವೆ."

   "ಡಾಕ್ಟರ್‌ಜಿ, ನಾನು ಈವರೆಗೆ ದೊಡ್ಡ ದೊಡ್ಡ ನಾಯಕರನೇಕರನ್ನು ಭೇಟಿ ಮಾಡಿರುವೆ. ಆದರೆ ಯಾರೂ ಇಷ್ಟು ಆಸಕ್ತಿ ತೋರಿಸಿರಲಿಲ್ಲ. ಮಾರ್ಗದರ್ಶನ ಮಾಡಲೂ ಇಲ್ಲ. ಇಂತಹ ಆತ್ಮೀಯತೆ ನನಗೆಲ್ಲೂ ದೊರೆತಿಲ್ಲ" ಭಾವಪೂರ್ಣವಾಗಿ ಗೋಖಲೆ ನುಡಿದ.

   ಡಾಕ್ಟರ್‌ಜಿ ಮುಗುಳ್ನಕ್ಕರು.

೨೪. ಸೋಲಿನ ವಿಷವೂ ಅನುಭವದ ಅಮೃತ

ಸೋಲಿನ ವಿಷವೂ ಅನುಭವದ ಅಮೃತ

   ೧೯೧೮ರಲ್ಲಿ ಜರ್ಮನಿಯು ಸೋತು ಮಹಾಯುದ್ಧ ನಿಂತಿತು. ಆಂಗ್ಲರು ಗೆದ್ದರು. ಈಗಂತೂ ಅವರ ಜಂಭ ಇನ್ನೂ ಹೆಚ್ಚಿತು. ಯುದ್ಧಕ್ಕೆ ಹೋದ ಸೈನ್ಯ ಹಿಂದಿರುಗಿತು. ಭಾರತೀಯರೊಂದಿಗೆ ಆಂಗ್ಲರ ಉದ್ಧಟತನ ಹೆಚ್ಚಿತು. ಕಾನೂನುಕ್ರಮ ಇನ್ನೂ ಕ್ರೂರವಾದವು. ಸ್ವಾತಂತ್ರ್ಯದ ಹೆಸರೆತ್ತಿದರೂ ಸಾಕು. ಸೆರೆಮನೆವಾಸ ಖಂಡಿತ. ಅಲ್ಲಿ ವಿವಿಧ ಚಿತ್ರ ಹಿಂಸೆ, ಅನೇಕ ಸಂಪಾದಕರು ಬಂಧಿತರಾದರು. ಅವರ ಪತ್ರಿಕೆಗಳೆಲ್ಲ ಮುಚ್ಚಲ್ಪಟ್ಟವು. ಕ್ರಾಂತಿಕಾರಿಗಳ ಅನೇಕ ನಾಯಕರು ಆಂಗ್ಲರು ಹೆಣೆದ ಬಲೆಯಲ್ಲಿ ಬಿದ್ದರು. ಗುಪ್ತ ಸಂಸ್ಥೆಗಳು ಸ್ತಬ್ಧವಾದವು. ಆಂಗ್ಲರ ವಿರುದ್ಧ ಸ್ವರ ಎತ್ತುವುದೇ ಕಠಿಣವಾದಾಗ ಇನ್ನು ಬಾಂಬ್ ಇತ್ಯಾದಿ ಎಲ್ಲಿ ಸಾಧ್ಯ? ಎಲ್ಲೆಡೆ ನಿರಾಶೆ, ಜನಸಾಮಾನ್ಯರಂತೂ ಹೆದರಿ ಕಂಗಾಲಾದರು. ವಿದ್ಯಾವಂತರೂ "ಆಂಗ್ಲರ ಆಡಳಿತ ನಮಗೊಂದು ವರವೇ. ಅವರಿಗೆ ದೇವರ ಬೆಂಬಲವಿದೆ. ನಾವೀಗ ಅವರ ವಿರುದ್ಧ ಹೋಗುವುದು ವ್ಯರ್ಥ" ಇತ್ಯಾದಿ ಎನ್ನತೊಡಗಿದರು.

   ಡಾಕ್ಟರ್‌ಜಿಯವರ ಗೆಳೆಯನೊಬ್ಬ "ಡಾಕ್ಟರ್‌ಜಿ ಎಂಥೆಂಥವರೆಲ್ಲಾ ಹತಾಶರಾಗಿದ್ದಾರೆ. ಅವರೆಲ್ಲ ದೇಶಕಾರ್ಯಕ್ಕೆ ತಿಲಾಂಜಲಿಯಿತ್ತಿದ್ದಾರೆ. ಆದರೆ ನೀವಿನ್ನೂ ಉತ್ಸಾಹದಿಂದಿರುವಿರಿ. ಸ್ವರಾಜ್ಯದ ಸುಂದರ ಸ್ವಪ್ನ ಕಾಣುತ್ತಿರುವಿರಿ. ಇದು ಹೇಗೆ ಸಾಧ್ಯ?" ಎಂದು ಕೇಳಿದ.

   "ಸೋಲು ಗೆಲುವಿನ ಸೋಪಾನ’ ಎನ್ನುವುದು ಕೇವಲ ಬೊಗಳೆ ಮಾತೇನು? ಮಾತಿಗೆ ಅರ್ಥವೇ ಇಲ್ಲವೇ? ಗುರಿಗಿಂತ ಸಾಧನಗಳನ್ನು ಯಾರು ಹೆಚ್ಚು ಪ್ರೀತಿಸುವರೋ ಅವರು ಸೋಲುಂಡಾಗ ನಿರಾಶರಾಗುವರು. ಗುರಿಯಲಿ ಅಚಲ ನಿಷ್ಠೆ ಹೊಂದಿರುವವರು ಹಾಗಲ್ಲ. ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರೆ ಅವರು. ನದಿಯ ಪ್ರವಾಹ ಎದುರಿಗೆ ಬಂದ ಪರ್ವತವನ್ನು ಕಿತ್ತೆಸೆದು ಹೋಗುತ್ತದೆ. ಕೆಲವೊಮ್ಮೆ ಅದನ್ನು ಸುತ್ತಿ ಬಳಸಿಯೂ ಹೋಗುತ್ತದೆ. ಕೆಲವು ಬಾರಿ ಸ್ವಲ್ಪ ದೂರ ಮರಳಿನಲ್ಲಿ ಇಂಗಿ ನಂತರ ಅದೇ ಪ್ರವಾಹ ಮುಂದೆ ಹರಿಯಬೇಕಾಗುತ್ತದೆ. ನಾವು ಶಿವನ ಉಪಾಸಕರು. ಆತ ಎಂಥ ಘೋರ ವಿಷವನ್ನು ಕುಡಿದು ಅರಗಿಸಿಕೊಂಡ. ನಾವು ಸಣ್ಣ ಸೋಲನ್ನೂ ಅರಗಿಸಿಕೊಳ್ಳಲಾರೆವಾ?" ಎನ್ನುತ್ತಿದ್ದರು ಡಾಕ್ಟರ್‌ಜಿ.

   "ಬಂದಿರುವ ಸೋಲನ್ನು ನಾವು ಜೀರ್ಣಿಸಿಕೊಳ್ಳಲೇಬೇಕು" ಸೋಲಿನ ಕಾರಣ ಹುಡುಕೋಣ. ಹೊಸ ಪ್ರಯತ್ನದಲ್ಲಿ ಹಳೆಯ ತಪ್ಪಾಗದಂತೆ ಮಾಡೋಣ. ಹೀಗೆ ಯೋಚಿಸಿ ಹೆಜ್ಜೆಯಿಟ್ಟಾಗ ಗುರಿ ಸಾಧಿಸಬಲ್ಲ ಯಾವುದಾದರೂ ಹೊಸ ಮಾರ್ಗ ದೊರೆತೇ ದೊರೆಯುತ್ತದೆ. ಡಾಕ್ಟರ್‌ಜಿ ಯೋಚಿಸುತ್ತಿದ್ದ ರೀತಿ ಅದು.

೨೩. ಗುಪ್ತ ಯೋಜನೆ

ಗುಪ್ತ ಯೋಜನೆ

   ಯುರೋಪಿನಲ್ಲಿ ಮೊದಲ ಮಹಾಯುದ್ಧ ಭರದಿಂದ ನಡೆದಿತ್ತು. ಎಲ್ಲೆಡೆ ಆಂಗ್ಲರಿಗೆ ಸೋಲು. ಭಾರತದಲ್ಲಿ ಅವರದು ಇದ್ದುದೇ ಸ್ವಲ್ಪ ಸೈನ್ಯ. ಅನೇಕ ದೇಶಭಕ್ತ ಕ್ರಾಂತಿಕಾರಿಗಳು ಇದೇ ಸುವರ್ಣಾವಕಾಸ ಎಂದು ಯೋಚಿಸಿದರು. ಆಂಗ್ಲರ ಈ ದುಸ್ಥಿತಿಯಲ್ಲೆ ತಾವು ಲಾಭ ಪಡೆಯುವ ಹಂಚಿಕೆ ಅವರದು. ಭಾರತ ಸ್ವತಂತ್ರವಾಗಲು ದೇಶದ ಎಲ್ಲ ಕಡೆಗಳಲ್ಲಿ ಪ್ರಯತ್ನ ನಡೆಸಬೇಕೆಂದು ಯೋಚಿಸಿದರು. ಬಂಗಾಲದಲ್ಲಿ ಅದಕ್ಕಾಗಿ ನೀಲಿನಕಾಶೆ ಸಿದ್ಧವಾಯಿತು. ಬೇರೆ ಬೇರೆ ಪ್ರಾಂತಗಳ ಸೂತ್ರಧಾರರು ನಿಶ್ಚಿತರಾದರು. ಮಧ್ಯಪ್ರದೇಶ ಹಾಗೂ ವಿದರ್ಭಗಳ ಹೊಣೆ ಡಾಕ್ಟರ್‌ಜಿಯವರದಾಯಿತು.

    ನಾಗಪುರದಲ್ಲಿ ವೈದ್ಯ ಭಾವುಜಿ ಕಾವರೆ ಡಾಕ್ಟರ್‌ಜಿಯವರ ಆಪ್ತ ಮಿತ್ರರು. ವಿಚಾರದಲ್ಲಿ ಇಬ್ಬರೂ ಒಂದೇ. ಸದಾ ಓಡಾಡುತ್ತಾ ಹಲವಾರು ಕಾರ್ಯಕರ್ತರನ್ನು ಜೋಡಿಸುತ್ತಿದ್ದರು. ಮದುವೆ, ಮುಂಜಿ, ಸಭೆ, ಸಮಾರಂಭಗಳು ಯಾವುದೇ ಇರಲಿ, ಅಲ್ಲಿ ಇವರಿಬ್ಬರೂ ಹಾಜರು. ಒಂದು ಕಡೆ ಶುಭ ಕಾರ್ಯಗಳ ವ್ಯವಸ್ಥಾಪಕರಿಗೆ ಉತ್ತಮ ಸಹಕಾರ. ಇನ್ನೊಂದು ಕಡೆ ತಮ್ಮ ಕಾರ್ಯಕ್ಕಾಗಿ ಹಲವಾರು ಗೆಳೆಯರ ಸಂಪಾದನೆ. ಎಲ್ಲರಿಗೂ ದೇಶಭಕ್ತಿಯ ಪ್ರೇರಣೆ ನೀಡುತ್ತಾ, ಆಂಗ್ಲರ ವಿರುದ್ಧ ಅವರಲ್ಲಿ ಅತೃಪ್ತಿ ಮೂಡಿಸುತ್ತಿದ್ದರು. ಇಂತಹ ಪ್ರಯತ್ನಗಳಿಂದಾಗಿ ಮಧ್ಯಪ್ರದೇಶ ಹಾಗೂ ವಿದರ್ಭಗಳಲ್ಲಿ ತರುಣರ ಉತ್ತಮ ಗುಪ್ತಸಂಘಟನೆಯೊಂದು ತಲೆಯೆತ್ತಿತು. ಸಾಕಷ್ಟು ಹಣವೂ ಸೇರಿತು. ಬಂದೂಕು ತಯಾರಿಸುವ ಚಿಕ್ಕ ಕಾರಖಾನೆಯೂ ಆರಂಭವಾಯಿತು. ದೂರದ ಕಾಡಿನಲ್ಲಿ ಗುಂಡು ಹಾರಿಸುವ ಅಭ್ಯಾಸವೂ ನಡೆಯತೊಡಗಿತು.

    ನಾಗಪುರಕ್ಕೆ ಸಮೀಪದ ಕಾಮಟಿಯಲ್ಲಿ ಆಂಗ್ಲರ ಸೈನಿಕನೆಲೆ ಇತ್ತು. ಅಲ್ಲಿಂದಲೇ ಕ್ರಾಂತಿಕಾರಿಗಳು ಶಸ್ತ್ರವನ್ನೂ ಸಂಪಾದಿಸಿದ್ದರು. ಅಲ್ಲಿನ ನೌಕರರಿಂದ ಹಲವು ಗುಪ್ತ ಮಾಹಿತಿಗಳನ್ನೂ ಪಡೆಯುತ್ತಿದ್ದರು. ಒಮ್ಮೆ ಶಸ್ತ್ರಾಸ್ತ್ರ ತುಂಬಿದ ರೈಲು ಬರುವ ಸಂಗತಿ ಕ್ರಾಂತಿಕಾರಿಗಳಿಗೆ ತಿಳಿಯಿತು. ತಕ್ಷಣವೇ ಒಂದು ಯೋಜನೆ ಸಿದ್ಧವಾಯಿತು. ನಾಗಪುರ ನಿಲ್ದಾಣದಲ್ಲಿ ಗಾಡಿ ನಿಲ್ಲಿಸಲಾಯಿತು. ಸೇನಾಧಿಕಾರಿ ಒಬ್ಬ ಅಲ್ಲಿಗೆ ಹೋದ. ರಕ್ಷಕರು ಸಲಾಂ ಮಾಡಿದರು. ಆತ ಆದೇಶ ನೀಡಿದ. ಅದರಂತೆ ಮದ್ದುಗುಂಡಿನ ಕೆಲವು ಪೆಟ್ಟಿಗೆಗಳನ್ನು ಇಳಿಸಿದರು. ಜೀಪಿನಲ್ಲಿ ಇರಿಸಿದರು. ತಕ್ಷಣವೇ ಜೀಪು ಹೊರಟಿತು. ರೈಲ್ವೆ ಅಧಿಕಾರಿಗಳ ಮನಸ್ಸಿನಲ್ಲಿ ಅನುಮಾನ ತಲೆಯಿತ್ತಿದಾಗ ಜೀಪು ಇರಲಿಲ್ಲ. ಸರಿ ಹುಡುಕಾಟ ಆರಂಭ. ಆ ಸೇನಾಧಿಕಾರಿ ಯಾರು? ಕೆಲವೇ ಪೆಟ್ಟಿಗೆಗಳನ್ನು ಇಳಿಸಿದ್ದೇಕೆ? ಅವೆಲ್ಲಿ ಹೋದವು? ಕೊನೆಗೂ ಉತ್ತರ ದೊರೆಯಲೇ ಇಲ್ಲ. ಪೋಲೀಸರು ವಿಫಲರಾದರು. ಪತ್ತೆ ಹತ್ತುವುದಾದರೂ ಹೇಗೆ? ಡಾಕ್ಟರ್‌ಜಿಯವರ ಯೋಜನೆ ಅಷ್ಟು ನಿಖರ. ಸಣ್ಣಪುಟ್ಟ ಸಂಗತಿಗಳನ್ನೂ ಮೊದಲೇ ಯೋಚಿಸಿ ಪರ್ಯಾಯ ಯೋಜನೆ ಮಾಡಿರುತ್ತಿದ್ದುದೇ ಅವರ ಕೌಶಲ್ಯ.

    ಅದೇ ಸಮಯದಲ್ಲಿ ಕೆಲವರನ್ನು ಗೋವೆಗೂ ಕಳಿಸಲಾಗಿತ್ತು. ಯುರೋಪಿನಿಂದ ಕ್ರಾಂತಿಕಾರಿಗಳಿಗಾಗಿ ಅಲ್ಲಿ ಶಸ್ತ್ರಾಸ್ತ್ರ ಬರುವುದಿತ್ತು. ಅದಕ್ಕೂ ಡಾಕ್ಟರ್‌ಜಿಯವರ ಪಕ್ಕಾ ಯೋಜನೆ ಸಿದ್ಧವಾಗಿತ್ತು. ಆ ದಿನಗಳಲ್ಲಿ ಡಾಕ್ಟರ್‌ಜಿ ಆಗಾಗ ಡಾ|| ಮೂಂಜೆಯವರ ಸಲಹೆ ಪಡೆಯುತ್ತಿದ್ದರು. ಕೆಲವು ಮಹತ್ವದ ಸಂಗತಿಗಳಲ್ಲಿ ಅವರಲ್ಲಿ ಮತಭೇದ ಉಂಟಾದಾಗ ಡಾ|| ಮೂಂಜೆ ಅವರು ಡಾಕ್ಟರ್‌ಜಿ ಅವರನ್ನು ಲೋಕಮಾನ್ಯ ತಿಲಕರ ಬಳಿ ಒಂದು ಪತ್ರ ನೀಡಿ ಕಳಿಸಿದರು. ಲೋಕಮಾನ್ಯರು ಡಾಕ್ಟರ್‌ಜಿ ಅವರ ವಿಚಾರ ಸರಣಿ ಕೇಳಿ ತುಂಬ ಪ್ರಭಾವಿತರಾದರು. ಡಾಕ್ಟರ್‌ಜಿ ಅವರನ್ನು ಅವರು ಒತ್ತಾಯದಿಂದ ನಾಲ್ಕಾರು ದಿನ ತಮ್ಮೊಂದಿಗೆ ಉಳಿಸಿಕೊಂಡರು.

    ಪುಣೆಯ ಸುತ್ತಮುತ್ತಲ ಪ್ರದೇಶಗಳನ್ನೆಲ್ಲ ನೋಡಿದ ಡಾಕ್ಟರ್‌ಜಿ ಶಿವನೇರಿ ದುರ್ಗ ತಲುಪಿದರು. ಅದು ಶಿವಛತ್ರಪತಿಯ ಜನ್ಮಸ್ಥಾನ. ಆದರೆ ತುಂಬ ದುರ್ಲಕ್ಷ್ಯಕ್ಕೊಳಗಾಗಿತ್ತು. ಅದರ ಭಗ್ನಾವಶೇಷಗಳನ್ನು ನೋಡಿದ ಡಾಕ್ಟರ್‌ಜಿ ತುಂಬ ಖಿನ್ನರಾದರು. "ಮಹಾಪುರುಷನ ಜನ್ಮಭೂಮಿಗೆಂತಹ ದುರ್ದೆಶೆ? ಹಿಂದು ಸಮಾಜದ ದುಸ್ಥಿತಿಯೇ ಅದರ ಪೂಜ್ಯ ಸ್ಥಾನಗಳದ್ದೂ ಆಗಿದೆ" ಎಂಬ ವಿಚಾರ ಅವರ ಮನದಲ್ಲಿ ಸುಳಿಯಿತು.